Crime News

ಜಾಗದ ವಿಚಾರ ವ್ಯಕ್ತಿ ಮೇಲೆ ಹಲ್ಲೆ:

ದಿನಾಂಕ 7-9-2018 ರಂದು ಮಡಿಕೇರಿ ತಾಲೋಕು ಕೆ.ನಿಡುಗಣೆ ಗ್ರಾಮದ ಸಿದ್ದಿಕಾಡು ಎಂಬಲ್ಲಿ ವಾಸವಾಗಿರುವ ಹೆಚ್.ಪಿ. ವಿನೋದ್ ಎಂಬವರ ಮೇಲೆ ಅವರ ದೊಡ್ಡಪ್ಪ ಸಣ್ಣಯ್ಯ, ದೊಡ್ಡಪ್ಪನ ಮಗ ಸುಬ್ಬಯ್ಯ ಮತ್ತು ರಾಜೇಶ್ ರವರುಗಳು ಸೇರಿ ಜಾಗದ ವಿಚಾರದಲ್ಲಿ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ ಬಗ್ಗೆ ಹೆಚ್.ಪಿ. ವಿನೋದ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಮಡಿಕೇರಿ ತಾಲೋಕು ಮುಕ್ಕೋಡ್ಲು ಗ್ರಾಮದ ಓಡಿಯಂಡ ಅಯ್ಯಪ್ಪ ಎಂಬವರ ದೊಡ್ಡಪ್ಪ ಓಡಿಯಂಡ ಪೂವಯ್ಯ ಎಂಬವರು ದಿನಾಂಕ 31-8-2018 ರಂದು ಮಡಿಕೇರಿನಗರದಲ್ಲಿ ಕಾಳಚಂಡ ಪಳಂಗಪ್ಪ ಎಂಬವರ ಮೇಲಿನ ದ್ವೇಷದ ಹಿನ್ನಲೆಯಲ್ಲಿ ಪಳಂಗಪ್ಪನವರ ಮೇಲೆ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ್ದು ಇದೇ ವಿಚಾರದಲ್ಲಿ ಸದರಿ ಓಡಿಯಂಡ ಪೂವಯ್ಯನವರು ಮನನೊಂದು ದಿನಾಂಕ 6-9-2018 ರಂದು ಯಾವುದೋ ವಿಷವನ್ನು ಸೇವಿಸಿ ಅಸ್ವಸ್ಥಗೊಂಡಿದ್ದು, ಅವರನ್ನು ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿ ಮೇಲೆ ಹಲ್ಲೆ, ಕೊಲೆ ಬೆದರಿಕೆ:

ಸೋಮವಾರಪೇಟೆ ಠಾಣಾ ಸರಹದ್ದಿನ ಕುಂಬೂರು ಗ್ರಾಮದ ನಿವಾಸಿ ಕೆ.ಜಿ. ಮಂಜು ಎಂಬವರ ತಮ್ಮ ವಿನು ಎಂಬವರು ದಿನಾಂಕ 6-9-2018 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಮಾದಾಪುರದಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಪ್ರಸನ್ನ, ನಂದ, ವಿಕ್ರಮ್ ಹಾಗು ಶಂಭು ಎಂಬವರು ರಾಜಕೀಯ ಉದ್ದೇಶವಾಗಿ ಹಲ್ಲೆ ನಡೆಸಿದ್ದು ನಂತರ ಸಂಜೆ 6.30 ಗಂಟೆಗೆ ಕೆ.ಜಿ. ಮಂಜುರವರು ಕುಂಬೂರು ಜಂಕ್ಷನ್‍ನಲ್ಲಿ ನಿಂತುಕೊಂಡಿರುವಾಗ ಅಲ್ಲಿಗೆ ಬಂದ ಪ್ರಸನ್ನ, ನಂದ, ವಿಕ್ರಮ್ ಹಾಗು ಶಂಭು ರವರುಗಳು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುವುದಾಗಿ ಹಾಗು ಅಂದು ರಾತ್ರಿ 8-00 ಗಂಟೆ ಸಮಯದಲ್ಲಿ ಸದರಿ ಪ್ರಸನ್ನ, ನಂದ, ವಿಕ್ರಮ್ ಹಾಗು ಶಂಭು ರವರುಗಳು ಪಿಸ್ತೂಲ್, ಕೋವಿ ಹಾಗು ಕತ್ತಿಯನ್ನು ಹಿಡಿದುಕೊಂಡು ಕೊಲೆ ಮಾಡುವ ಉದ್ದೇಶವನ್ನಿಟ್ಟುಕೊಂಡು ಕೆ.ಜಿ.ಮಂಜುರವರ ಮನೆಗೆ ಬಂದಾಗ ಅವರಿಂದ ತಪ್ಪಿಸಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾನೂನು ಬಾಹಿರವಾಗಿ ಮರದ ದಿಮ್ಮಿಗಳ ಸಾಗಾಟ:

ಕುಶಾಲನಗರ ಹೋಬಳಿಯ ಕಂದಾಯ ಪರಿವೀಕ್ಷಕರಾದ ಮಧುಸೂದನ್ ಎಂಬವರು ದಿನಾಂಕ 07.09.2018 ರಂದು ಸಮಯ ಸಾಯಂಕಾಲ 5.00 ಗಂಟೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕೂಡಿಗೆಯ ಗ್ರಾಮದ ಸರ್ಕಲ್ ನಲ್ಲಿ ಕೆಎ-46-0746 ರ ಲಾರಿಯಲ್ಲಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದು ಪತ್ತೆಹಚ್ಚಿ ವಾಹನ ವನ್ನು ವಶಕ್ಕೆ ಪಡೆದುಕೊಂಡು ಆರೋಪಿ ಲಾರಿ ಚಾಲಕನ ವಿರುದ್ಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ಆತ್ಮಹತ್ಯೆ:

ಕುಶಾಲನಗರದ ಜನತಾ ಕಾಲೋನಿಯಲ್ಲಿ ವಾಸವಾಗಿರುವ ಶ್ರೀಮತಿ ಶೋಭ ಎಂಬವರ ಮಗ ಚಂದ್ರು ಎಂಬಾತ ದಿನಾಂಕ 7-9-2018 ರಂದು ಅವರ ಮನೆಯ ಮುಂಭಾಗದ ಹಾಲ್‍ನಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಶ್ರೀಮತಿ ಶೋಭಾರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.