Crime News

ಕಳ್ಳತನ ಮತ್ತು ಸುಲಿಗೆ ಪ್ರಕರಣ ಪತ್ತೆ:

     ಕುಶಾಲನಗರ ಪಟ್ಟಣದಲ್ಲಿ ರಾತ್ರಿಯ ವೇಳೆ ಸುಲಿಗೆ ಮತ್ತು ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಇವರು ಕುಶಾಲನಗರದಲ್ಲಿ ತಂಡಗಳನ್ನು ರಚಿಸಿ ವಿಶೇಷ ರಾತ್ರಿ ಗಸ್ತು ನಡೆಸುವ ಬಗ್ಗೆ ಈ ತಂಡಗಳಿಗೆ ತಿಳುವಳಿಕೆಯನ್ನು ನೀಡಿದ್ದು, ದಿನಾಂಕ: 10.04.2018  ರಂದು ರಾತ್ರಿ ಕುಶಾಲನಗರ ಟೌನ್ ಠಾಣೆಯ ಪಿಎಸ್ಐ ಶ್ರೀ. ಜಗದೀಶ್ ಪಿ. ರವರು ಸಿಬ್ಬಂದಿಯವರುಗಳ ಜೊತೆಯಲ್ಲಿ ಕುಶಾಲನಗರ ಪಟ್ಟಣದಲ್ಲಿ ವಿಶೇಷ ರಾತ್ರಿ ಗಸ್ತಿನಲ್ಲಿರುವಾಗ್ಗೆ, 10/11.04.2018 ರ 02.30 ಎ.ಎಂ.ಗೆ ಕುಶಾಲನಗರ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಇಬ್ಬರು ವ್ಯಕ್ತಿಗಳು ಒಂದು ನೋಂದಣಿ ಸಂಖ್ಯೆ ಇಲ್ಲದ ಮೋಟಾರ್ ಸೈಕಲ್ನ್ನು ನಿಲ್ಲಿಸಿಕೊಂಡು ಇದ್ದು, ಸದರಿಯವರುಗಳು ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದವರನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಸದರಿಯವರ ಹೆಸರುಗಳು ಈ ಕೆಳಕಂಡಂತೆ ಇರುತ್ತದೆ.

1.  ನವೀನ್ ಎನ್.ಎಲ್. @ ಅಪ್ಪುಣು, ತಂದೆ: ಲಕ್ಷ್ಮಣ @ ಚಾಮಿ, ಪ್ರಾಯ: 20 ವರ್ಷ, ಹಂದಿ ಸಾಕಾಣಿಕೆ, ವಾಸ: ಗೊಂದಿಬಸನವನಹಳ್ಳಿ ಗ್ರಾಮ, ಕುಶಾಲನಗರ.

2.  ಸುಬ್ರಮಣಿ @ ಸುಬ್ಬು, ತಂದೆ: ಲಕ್ಷ್ಮಣ @ ಚಾಮಿ, ಪ್ರಾಯ: 25 ವರ್ಷ, ಸೈನಿಕ, ವಾಸ: ಗೊಂದಿಬಸನವನಹಳ್ಳಿ ಗ್ರಾಮ, ಕುಶಾಲನಗರ.

     ಸದರಿ ಆರೋಪಿಗಳು ವಿಚಾರಣಾ ವೇಳೆಯಲ್ಲಿ ಕುಶಾಲನಗರ ಪಟ್ಟಣದಲ್ಲಿ 1 ಸುಲಿಗೆ ಮತ್ತು 1 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ಕುಶಾಲನಗರ ಟೌನ್ ಠಾಣೆ ಮೊ.ಸಂ. 68/2018 ಕಲಂ 379 ಐ.ಪಿ.ಸಿ. ಮತ್ತು  ಕುಶಾಲನಗರ ಟೌನ್ ಠಾಣೆ ಮೊ.ಸಂ. 75/2018 ಕಲಂ 392 ಐ.ಪಿ.ಸಿ. ಪ್ರಕರಣಗಳು ದಾಖಲಾಗಿರುತ್ತದೆ.

   ಆರೋಪಿ ಸುಬ್ರಮಣಿ @ ಸುಬ್ಬು ಈತನು ಭಾರತೀಯ ಸೈನ್ಯದಲ್ಲಿ ಕಳೆದ 4 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, 2017 ನೇ ಸಾಲಿನ ಡಿಸೆಂಬರ್ ತಿಂಗಳಿನಲ್ಲಿ ರಜೆಯಲ್ಲಿ ಊರಿಗೆ ಬಂದವನು ವಾಪಾಸ್ಸು ಕರ್ತವ್ಯಕ್ಕೆ ತೆರಳಿರುವುದಿಲ್ಲ ಎಂದು ತಿಳಿದುಬಂದಿರುತ್ತದೆ.

     ಈ ಪ್ರಕರಣದಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀನಿವಾಸಮೂರ್ತಿ ಬಿ.ಎಲ್., ಡಿವೈಎಸ್ಪಿ ಸೋಮವಾರಪೇಟೆ ಉಪವಿಭಾಗ ಇವರ ನೇತೃತ್ವದಲ್ಲಿ, ಕ್ಯಾತೇಗೌಡ, ಸಿಪಿಐ ಕುಶಾಲನಗರ,  ಜಗದೀಶ್ ಪಿ., ಪಿಎಸ್ಐ,  ಕುಶಾಲನಗರ ನಗರ ಪೊಲೀಸ್ ಠಾಣೆ, ನವೀನ್ಗೌಡ, ಪಿಎಸ್ಐ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಕುಶಾಲನಗರದ ವಿಶೇಷ ಅಪರಾಧ ಪತ್ತೆ ತಂಡದ ಸುರೇಶ್ ಪಿ.ಬಿ., ಮುಸ್ತಾಫ ಪಿ.ಎಂ.,  ಸುಧೀಶ್ ಕುಮಾರ್ ಕೆ.ಎಸ್.,  ಉದಯಕುಮಾರ್,  ಸಂಪತ್ ರೈ,  ದಯಾನಂದ,  ಜೋಸೆಫ್,  ಲೋಕೇಶ್, ಚಾಲಕರಾದ  ಪ್ರವೀಣ್ ಮತ್ತು  ಗಣೇಶ್ ಹಾಗೂ ಸೈಬರ್ ಸೆಲ್ ನ  ರಾಜೇಶ್ ಹಾಗೂ  ಗಿರೀಶ್ ರವರು ಸದರಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.
ಸದರಿ ಆರೋಪಿಗಳಿಂದ ರೂ. 4,50,000/- ಬೆಲೆಯ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ವಿವರ ಈ ಕೆಳಕಂಡಂತಿರುತ್ತದೆ.
1) 130 ಗ್ರಾಂ ಚಿನ್ನಾಭರಣ ಅಂದಾಜು ಮೌಲ್ಯ ರೂ. 3,90,000/-
2) 2 ಮೊಬೈಲ್ ಫೋನ್ಗಳು ಅಂದಾಜು ವೌಲ್ಯ ರೂ 20,000/-
3) ಒಂದು ಮೋಟಾರ್ ಸೈಕಲ್, ಅಂದಾಜು ಮೌಲ್ಯ ರೂ. 40,000/-
ಮೇಲ್ಕಂಡ ಆರೋಪಿಗಳನ್ನು ಪತ್ತೆಹಚ್ಚಿ ಸುಲಿಗೆ ಮತ್ತು ಕಳವು ಪ್ರಕರಣಗಳನ್ನು ಪತ್ತೆಹಚ್ಚಿದ ಮೇಲ್ಕಂಡ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ಮನುಷ್ಯ ಕಾಣೆ

ವಿರಾಜಪೇಟೆ ತಾಲೂಕಿನ ಬಿಳುಗುಂದ ಗ್ರಾಮದ ನಿವಾಸಿಯಾದ ಕುಟ್ಟಪ್ಪ ಎಂಬುವವರು ದಿನಾಂಕ 6-4-2018 ರಂದು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಗೆ ಕೆಲಸಕ್ಕೆ  ಸೇರಲು ಹೋಗುತ್ತಿರುವುದಾಗಿ ಮನೆಯಲ್ಲಿ ತಿಳಿಸಿ ಹೋದವರು ಕಾಣೆಯಾಗಿದ್ದು ಈ ಬಗ್ಗೆ ಕುಟ್ಟಪ್ಪನವರ ಅಣ್ಣ ಬಿದ್ದಪ್ಪನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವೃದ್ದ ವ್ಯಕ್ತಿಯ ಸಾವು

ವಿರಾಜಪೇಟೆ ನಗರದ ದೊಡ್ಡಟ್ಟಿ ಚೌಕಿಯಲ್ಲಿರುವ ಬಸ್ಸು ತಂಗುದಾಣದಲ್ಲಿ  ಸುಮಾರು 70 ಪ್ರಾಯದ ಸುಂದರ ಎಂಬುವವರು ಅನಾರೋಗ್ಯದಂದ ಮಲಗಿದ್ದವರು ದಿನಾಂಕ 10-4-2018 ರಂದು ಮೃತಪಟ್ಟಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೈಕಿಗೆ ಪಿಕ್ಅಪ್ ಜೀಪು ಡಿಕ್ಕಿ

ಬೈಕಿಗೆ ಪಿಕ್ಅಪ್ ಜೀಪು ಡಿಕ್ಕಿಯಾಗಿ ಬೈಕಿನಲ್ಲಿದ್ದವರಿಗೆ ಗಾಯವಾದ ಘಟನೆ ಸೋಮವಾರಪೇಟೆ ತಾಲೂಕಿನ ಶಿವಪುರ ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 10-4-2018 ರಂದು ಮನೋಜ್ ಕುಮಾರ್ ಎಂಬುವವರು ತನ್ನ ಮಗ ಅಭಿಷೇಕ್ ನೊಂದಿಗೆ ಮೋಟಾರು ಸೈಕಲಿನಲ್ಲಿ ಸೋಮವಾರಪೇಟೆ ನಗರಕ್ಕೆ ಹೋಗುತ್ತಿರುವಾಗ ಶಿವಪುರ ಗ್ರಾಮದ ಕಾವಾಡಿಕಟ್ಟೆ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಪಿಕ್ ಅಪ್ ಜೀಪನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಇಬ್ಬರು ಕೆಳಗೆ ಬಿದ್ದು ಗಾಯಗಳಾಗಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಮೇಲೆ ಹಲ್ಲೆಗೆ ಯತ್ನ

ದಿನಾಂಕ 10-4-2018 ರಂದು ತಾಳತ್ ಮನೆಯ ನಿವಾಸಿ ಅಜಿತ್ ಕುಮಾರ್ ಎಂಬುವವರು ಮಡಿಕೇರಿ ನಗರದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪ್ರಮೋದ್ ಮತ್ತು ಇತರರು ದಾರಿ ತಡೆದು ಹಲ್ಲೆ ಮಾಡಲು ಪ್ರಯತ್ನಿಸಿದ್ದು ಈ ಬಗ್ಗೆ ಅಜಿತ್ ಕುಮಾರ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

ದಿನಾಂಕ 8-4-2018 ರಂದು ಸುಳ್ಯ ತಾಲೂಕಿನ ಕೂತುಕುಂಜ ಗ್ರಾಮದ ನಿವಾಸಿಯಾದ ದೇವಪ್ಪನಾಯ್ಕ ಎಂಬುವವರು ಬೆಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಸುಳ್ಯಕ್ಕೆ ಕಾರಿನಲ್ಲಿ ಸಂಸಾರದವರೊಂದಿಗೆ ಹೋಗುತ್ತಿರುವಾಗ ಸಂಪಾಜೆ ಗ್ರಾಮದ ದೇವರಕೊಲ್ಲಿ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಬರುತ್ತಿದ್ದ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ದೇವಪ್ಪನಾಯ್ಕ, ಅವರ ಪತ್ನಿ ಮತ್ತು ಮಗನಿಗೆ ಗಾಯವಾಗಿದ್ದು, ಸದರಿಯವರು ಮಂಗಳೂರಿನ  ಎ. ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Crime News

ಅಕ್ರಮ ಮರಳು ಸಾಗಾಟ ಪತ್ತೆ

ದಿನಾಂಕ 09/04/2018ರಂದು ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಹೆಚ್‌.ಎನ್.ಸಿದ್ದಯ್ಯನವರು ನಾಪೋಕ್ಲು ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಚೆರಿಯಪರಂಬು ಬಳಿ ಕಾವೇರಿ ನದಿಯಿಂದ ಅಕ್ರಮವಾಗಿ ಮರಳನ್ನು ತೆಗೆಯುತ್ತಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದಾಗ ಅಲ್ಲಿ ಸುಮಾರು 4-5 ಜನರು ಕಾವೇರಿ ನದಿಯಿಂದ ಮರಳನ್ನು ತೆಗೆದು ಕೆಎಲ್‌-12-ಸಿ-7200ರ ಲಾರಿಗೆ ತುಂಬಿಸುತ್ತಿದ್ದುದು ಕಂಡು ಬಂದಿದ್ದು ಪೊಲೀಸರನ್ನು ಕಂಡ ಕೂಡಲೇ ನಾಲ್ವರೂ ಅಲ್ಲಿಂದ ಓಡಿ ಹೋಗಿದ್ದು ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 08/04/2018ರಂದು ಸಿದ್ದಾಪುರ ಬಳಿಯ ಟಾಟಾ ಕಾಫಿ ತೋಟದ ಎಮ್ಮೆಗುಂಡಿ ವಿಭಾಗದ ತೋಟದಲ್ಲಿ ಕಾರ್ಮಿಕ ಬಾಬು ಲಾಲ್ ಬಸು ಎಂಬವರು ಮನೆಯಲ್ಲಿದ್ದಾಗ ನೆರೆಮನೆಯ ಸಂಜಯ್ ಹಲ್‌ದಾರ್ ಎಂಬವರೊಡನೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಸಂಜಯ್‌ ಹಲ್‌ದಾರರು ಬಾಬು ಲಾಲ್ ಬಸುರವರ ಮೇಲೆ ದೊಣ್ಣೆಯಿಂದ ಹೊಡೆದು ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿ ಸ್ವಾಮಿಗೌಡ ಎಂಬವರು ಹಾಸನ ಜಿಲ್ಲೆಯ ಹಾಲುಮತ ಕುರುಬ ಜನಾಂಗಕ್ಕೆ ಸೇರಿದ್ದು ಆದರೆ ಅವರು ಕೊಡಗು ಜಿಲ್ಲೆಯ ಪರಿಶಿಷ್ಟ ಪಂಗಡದ ಕುರುಬ ಜನಾಂಗಕ್ಕೆ ಸೇರಿರುವ ಬಗ್ಗೆ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಕೊಡಗು ಜಿಲ್ಲೆಯ ಜಿಲ್ಲಾ ಪಂಚಾಯತ್ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಉದ್ಯೋಗವನ್ನು ಪಡೆದುಕೊಂಡು ಸರ್ಕಾರಕ್ಕೆ ವಂಚಿಸಿರುವುದಾಗಿ ನೀಡಲಾದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಿಕ್ಷಾಕ್ಕೆ ಬೆಂಕಿ

ದಿನಾಂಕ 08/04/2018ರಂದು ಚೆಟ್ಟಳ್ಳಿ ಬಳಿಯ ಚೇರಳ ಶ್ರೀಮಂಗಲ ನಿವಾಸಿ ಮಹಮದ್ ಅಶೀಫ್ ಎಂಬವರ ಕೆಎ-12-ಎ-8682ಕ್ಕೆ ರಾತ್ರಿ ವೇಳೆ ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೊಲೆ ಬೆದರಿಕೆ ಪ್ರಕರಣ

ದಿನಾಂಕ 09/04/2018ರಂದು ನಾಪೋಕ್ಲು ಬಳಿಯ ನರಿಯಂದಡ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಚೇನಂಡ ಗಿರೀಶ್‌ ಪೂಣಚ್ಚ ಎಂಬವರು ಮದ್ಯಾಹ್ನದ ಬಳಿಕ ಕೆಲಸದ ನಿಮಿತ್ತ ಶಾಲೆಗೆ ಹೋದಾಗ ಶಾಲೆಯ ಗುಮಾಸ್ತರಾದ ಜೀತು ಕುಮಾರ್ ಎಂಬವರು ಗಿರೀಶ್‌ ಪೂಣಚ್ಚನವರನ್ನು ತಡೆದು ನಿಲ್ಲಿಸಿ ಅಶ್ಲೀಲವಾಗಿ ಬೈದು ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಲಾಗಿದ್ದು.ಅದೇ ರೀತಿ   ಗಿರೀಶ್‌ ಪೂಣಚ್ಚ ಹಾಗೂ ಸುರೇಶ್‌ ನಾಣಯ್ಯ ಎಂಬವರಿಬ್ಬರು ಸೇರಿಕೊಂಡು ಶಾಲೆಯ ಗುಮಾಸ್ತ ಜೀತು ಕುಮಾರ್ ಮತ್ತು ಮುಖ್ಯೋಪಾಧ್ಯಾಯ ಮಾನೋಹರ ನಾಯ್ಕ್ ಎಂಬವರಿಗೆ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿರುವುದಾಗಿ ನೀಡಲಾದ ಎರಡು ಪ್ರತ್ಯೇಕ ದೂರುಗಳು ಸೇರಿದಂತೆ ಒಟ್ಟು ಮೂರು ದೂರುಗಳನ್ನು ನಾಪೋಕ್ಲು ಪೊಲೀಸರು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 09/04/2018ರಂದು ಸೋಮವಾರಪೇಟೆ ಬಳಿಯ ಮಸಗೋಡು ನಿವಾಸಿ ಜಯಮ್ಮ ಎಂಬವರಿಗೆ ಅವರ ಪತಿ ಶಿವರಾಜ್ ಎಂಬವರು ಕ್ಷುಲ್ಲಕ ಕಾರಣಕ್ಕೆ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೀರಿಗೆ ಬಿದ್ದು ಯುವಕ ಸಾವು

ದಿನಾಂಕ 09/04/2018ರಂದು ಸೋಮವಾರಪೇಟೆ ಬಳಿಯ ಕೂಗೆಕೋಡಿ ನಿವಾಸಿಗಳಾದ ಕಿರಣ್ ಕುಮಾರ್, ಸಂತೋಷ್, ಅವಿನಾಶ್, ಸಂದರ್ಶ್‌, ಅಭಿಷೇಕ್ ಮುಂತಾದವರು ಮಲ್ಲಳ್ಳಿ ಜಲಪಾತಕ್ಕೆ ತೆರಳಿದ್ದು ಅಲ್ಲಿ ನೀರಿನಲ್ಲಿ ಆಟವಾಡುತ್ತಿದ್ದಾಗ ಅಭಿಷೇಕ್ ಎಂಬಾತನು ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಾಹನ ಅಪಘಾತ

ದಿನಾಂಕ 09/04/2018ರಂದು ಹಾಸನದ ರಾಮನಾಥಪುರ ನಿವಾಸಿ ಚೇತನ್ ಎಂಬಾತನು ಸ್ನೇಹಿತ ಗಂಗಾಧರ ಎಂಬವರೊಂದಿಗೆ ಕೆಎ-12-ಆರ್-0831ರ ಬೈಕಿನಲ್ಲಿ ಕುಶಾಲನಗರದಿಂದ ಹಾಸನಕ್ಕೆ ಹೋಗುತ್ತಿರುವಾಗ ಕುಶಾಲನಗರದ ಕುಶಾಲ್ ಲಾಡ್ಜ್ ಬಳಿ ಎದುರಿನಿಂದ ಕೆಎಲ್‌-05-ಎಎಲ್-7761 ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಚೇತನ್‌ರವರು ಪ್ರಯಾಣಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಚೇತನ್ ಹಾಗೂ ಅವರ ಸ್ನೇಹಿತ ಗಂಗಾಧರ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Crime News

ನಿಶಾಮತ್ತ ವ್ಯಕ್ತಿ ಸಾವು:
ಮಡಿಕೇರಿ ತಾಲೋಕು ಮದೆನಾಡು ಗ್ರಾಮದ ನಿವಾಸಿ ಕಾಸ್ಪಾಡಿ ಟಿ. ರವೀಂದ್ರ ಎಂಬವರ ತಮ್ಮ 55 ವರ್ಷ ಪ್ರಾಯದ ಗಿರಿಯಪ್ಪ ಎಂಬವರು ಸುಮಾರು 10 ವರ್ಷಗಳಿಂದ ಸರಿಯಾಗಿ ಮನೆಗೆ ಹೋಗದೆ ವಿಪರೀತ ಮದ್ಯಪಾನ ಮಾಡುತ್ತಿದ್ದು ದಿನಾಂಕ 6-4-2018 ರಂದು ಮಡಿಕೇರಿ ನಗರಕ್ಕೆ ಬಂದಿದ್ದು ನಂತರ ಮನೆಗೆ ಹೋಗದೇ ದಿನಾಂಕ 7-4-2018 ರಂದು ಮಡಿಕೇರಿ ನಗರದ ಖಾಸಗಿ ಬಸ್ಸು ನಿಲ್ದಾಣದಲ್ಲಿ ವಿಪರೀತ ಮದ್ಯಪಾನ ಮಾಡಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು 108 ಆ್ಯಂಬುಲೆನ್ಸ್ ನಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗಿ ಸದರಿ ವ್ಯಕ್ತಿ ದಿನಾಂಕ 7-4-2018 ರಂದು ಮದ್ಯರಾತ್ರಿ ಮೃತಪಟ್ಟಿದ್ದು, ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರುಗಳ ಮುಖಾಮುಖಿ ಡಿಕ್ಕಿ:
ದಿನಾಂಕ 8-4-2018 ರಂದು ಬೆಂಗಳೂರಿನ ವಿಜಯನಗರದ ನಿವಾಸಿಯಾದ ಡಾ: ವಿಶ್ವನಾಥ್ ಶರ್ಮಾ ರವರು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕೆಎ-04 ಎಂಜೆ-2458 ರ ಕಾರಿನಲ್ಲಿ ಪುತ್ತೂರಿನಿಂದ ಮಡಿಕೇರಿ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತಿದ್ದಾಗ ಮಡಿಕೇರಿ ಬಳಿ ಮಂಗಳುರು ರಸ್ತೆಯ ಕಾವೇರಿ ಹೋಂಸ್ಟೇ ಬಳಿ ಸಮಯ 5-20 ಪಿ.ಎಂ. ಗೆ ತಲುಪಿದಾಗ ಮಡಿಕೇರಿ ನಗರದ ಕಡೆಯಿಂದ ಕೆಎಲ್-14-ಟಿ1404ರ ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲಸಿಕೊಂಡು ಬಂದು ಫಿರ್ಯಾದಿ ಡಾಳ ವಿಶ್ವನಾಥ್ ರವರು ಚಾಲನೆ ಮಾಡುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ವಿಶ್ವನಾಥ ಹಾಗು ಅವರ ಪತ್ನಿಗೆ ರಕ್ತ ಗಾಯಗಳಾಗಿದ್ದು ಎರಡೂ ಕಾರುಗಳು ಜಖಂ ಗೊಂಡಿದ್ದು, ಈ ಸಂಬಂಧ ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಹೃಧಯಾಘಾತದಿಂದ ರಿಕ್ಷಾ ಚಾಲಕನ ಸಾವು:
ಕುಶಾಲನಗರದ ಗೊಂದಿಬಸವನಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಮೀನಾಕ್ಷಿ ಎಂಬವರ ಪತಿ 40 ವರ್ಷ ಪ್ರಾಯದ ಪ್ರಕಾಶ ರವರು ಆಟೋ ರಿಕ್ಷಾ ಇಟ್ಟುಕೊಂಡು ಜೀವನಸಾಗಿಸುತ್ತಿದ್ದು ದಿನಾಂಕ 7-4-2018 ರಂದು ಸದರಿಯವರು ಕುಶಾಲನಗರದ ಎ.ಪಿ.ಸಿ.ಎಂ.ಎಸ್ . ಬಳಿ ಆಟೋ ರಿಕ್ಷಾದಲ್ಲಿ ಹೃಧಯಾಘಾತದಿಂದ ಮೃತಪಟ್ಟಿದ್ದು, ಈ ಸಂಬಂಧ ಶ್ರೀಮತಿ ಮೀನಾಕ್ಷಿರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Crime News

ಲಾರಿಗೆ ಕಾರು ಡಿಕ್ಕಿ 
                 ಲಾರಿಗೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದವರಿಗೆ ಗಾಯವಾದ ಘಟನೆ ಮಡಿಕೇರಿ ನಗರದಲ್ಲಿ ವರದಿಯಾಗಿದೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ನಿಂಗಪ್ಪ ಎಂಬುವವರು ದಿನಾಂಕ 7-4-2018 ರಂದು ಲಾರಿಯನ್ನು ಚಾಲನೆ ಮಾಡಿಕೊಂಡು ಮಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಶಿರಾಗೆ ಹೋಗುತ್ತಿರುವಾಗ ಮಡಿಕೇರಿ ನಗರದ ಹತ್ತಿರ ತಲುಪುವಾಗ ಎದುರುಗಡೆಯಿಂದ ಕಾರನ್ನು ಅದರ ಚಾಲಕ ಗಣೇಶ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯವಾಗಿದ್ದು, ಈ ಬಗ್ಗೆ ಲಾರಿ ಚಾಲಕ ನಿಂಗಪ್ಪನವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ 
                ದಿನಾಂಕ 7-4-2018 ರಂದು ವಿರಾಜಪೇಟೆ ತಾಲೂಕಿನ ಬಿ ಶೆಟ್ಟಿಗೇರಿ ಗ್ರಾಮದ ನಿವಾಸಿಯಾದ ಕಾವ್ಯರವರು ತನ್ನ ತಂದೆಯೊಂದಿಗೆ ಗೋಣಿಕೊಪ್ಪ ನಗರದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪೊನ್ನಂಪೇಟೆಯ ನಿವಾಸಿಯಾದ ದೀಪು ಎಂಬುವವರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಹಲ್ಲೆ ಮಾಡಿದ್ದು, ಈ ಬಗ್ಗೆ ಕಾವ್ಯರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
 
ಪಾದಚಾರಿಗೆ ವಾಹನ ಡಿಕ್ಕಿ 
           ದಿನಾಂಕ 7-4-2018 ರಂದು ಸೋಮವಾರಪೇಟೆ ನಗರದ ನಿವಾಸಿ ಕಣ್ಣಮ್ಮ ಎಂಬುವವರು ಮನೆಯಿಂದ ನಡೆದುಕೊಂಡು ರಸ್ತೆಯ ಬದಿಯಲ್ಲಿ ಹೋಗುತ್ತಿರುವಾಗ ಅಜಿತ್ ಎಂಬುವವರು ಪಿಕ್ ಅಪ್ ಜೀಪನ್ನು ಅಜಾಗರೂಕತೆಯಿಂದ ಹಿಂದಕ್ಕೆ ಚಾಲನೆ ಮಾಡಿ ನಡೆದುಕೊಂಡು ಹೋಗುತ್ತಿದ್ದ ಕಣ್ಣಮ್ಮನವರಿಗೆ ಡಿಕ್ಕಿಪಡಿಸಿದ ಪರಿಣಾಮ ಕಣ್ಣಮ್ಮನವರ ಕಾಲಿಗೆ, ಭುಜಕ್ಕೆ ಮತ್ತು ತಲೆಗೆ ಗಾಯವಾಗಿದ್ದು ಈ ಬಗ್ಗೆ ಕಣ್ಣಮ್ಮನವರ ಮಗಳು ಲಕ್ಷ್ಮಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Crime News

ವಾಹನ ಅಪಘಾತ

ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಚಾಲಕ ಗಾಯಗೊಂಡ ಘಟನೆ ಕುಶಾಲನಗರದ ಆನೆಕಾಡು ಎಂಬಲ್ಲಿ ವರದಿಯಾಗಿದೆ. ದಿನಾಂಕ 05-04-2018 ರಂದು ಕೆದಕಲ್ ಗ್ರಾಮದ ನಿವಾಸಿಯಾದ ಕಿರಣರವರು ಮೋಟಾರು ಸೈಕಲಿನಲ್ಲಿ ಹೋಗುತ್ತಿರುವಾಗ ಯಾವುದೋ  ವಾಹನ ಡಿಕ್ಕಿಯಾಗಿ ಕಿರಣರವರ ತಲೆಗೆ ತೀವ್ರ ತರಹದ ಗಾಯವಾಗಿ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಬಗ್ಗೆ ಕಮಲಾಸನ್ ಎಂಬುವವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಟ್ರ್ಯಾಕ್ಟರ್ ಗೆ ಆಟೋ ರಿಕ್ಷಾ ಡಿಕ್ಕಿ

ಟ್ರ್ಯಾಕ್ಟರ್ ಗೆ ಆಟೋ ರಿಕ್ಷಾ ಡಿಕ್ಕಿಯಾಗಿ ಆಟೋದಲ್ಲಿದ್ದವರು ಗಾಯಗೊಂಡ ಘಟನೆ ಕುಶಾಲನಗರದ ಕೂಡುಮಂಗಳೂರು ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 06-04-2018 ರಂದು ಅರಕಲಗೋಡು ಗ್ರಾಮದ ಜವರೇಗೌಡ ಎಂಬುವವರು ಟ್ರ್ಯಾಕ್ಟರನ್ನು ಚಾಲನೆ ಮಾಡಿಕೊಂಡು ಕೂಡುಮಂಗಳೂರು ಗ್ರಾಮದ ವಿಜಯನಗರದ ಕಡೆಗೆ ಹೋಗುತ್ತಿರುವಾಗ ಹಿಂದಿನಿಂದ ಬಂದ ಆಟೋವನ್ನು ಚಾಲಕ  ಅಜಾಗರೂಕತೆಯಿಂದ ಚಾಲನೆಮಾಡಿಕೊಂಡು ಹೋಗಿ ಟ್ರ್ಯಾಕ್ಟರಿನ ಹಿಂಭಾಗಕ್ಕೆ ಡಿಕ್ಕಿಪಡಿಸಿದ ಪರಿಣಾಮ ಆಟೋದಲ್ಲಿದ್ದ ಪಾರ್ವತಮ್ಮನವರಿಗೆ ಗಾಯವಾಗಿದ್ದು ಈ ಬಗ್ಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮಹತ್ಯೆ

ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಕೂರು ಶಿರಂಗಾಲ ಗ್ರಾಮದಲ್ಲಿ ವರದಿಯಾಗಿದೆ. ನಾಕೂರ ಶಿರಂಗಾಲ ಗ್ರಾಮದ ನಿವಾಸಿಯಾದ ರಾಜುರವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 05-04-2018 ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಶುಂಟಿಕೊಪ್ಪ  ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ.

ಆಕಸ್ಮಿಕವಾಗಿ ನೀರಿಗೆ ಬಿದ್ದು ಮಹಿಳೆಯ ಸಾವು

ಹೊಳೆಗೆ ಕಾಲುಜಾರಿ ಬಿದ್ದು ಮಹಿಳೆ ಮೃತಪಟ್ಟ ಘಟನೆ ಮಡಿಕೇರಿ ತಾಲೂಕಿನ ಕೊಳಕೇರಿ ಗ್ರಾಮದಲ್ಲಿ ವರದಿಯಾಗಿದೆ. ಕೊಳಕೇರಿ ಗ್ರಾಮದ ಕರುಂಬಯ್ಯ ಎಂಬುವವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಹನುಮಂತ ಎಂಬುವವರ ಪತ್ನಿ ಜಯಮ್ಮ ಎಂಬುವವರು ದಿನಾಂಕ 04-04-2018 ರಂದು ಮನೆಯಿಂದ ಅಂಗಡಿಗೆ ಹೋಗಿದ್ದವರು ವಾಪಾಸ್ಸು ಮನೆಗೆ ಹೋಗುವಾಗ ಕಾಲುಜಾರಿ ಹೊಳೆಗೆ ಬಿದ್ದು ಮೃತಪಟ್ಟವರ ಮೃತದೇಹ ದಿನಾಂಕ 06-04-2018 ರಂದು ಪತ್ತೆಯಾಗಿದ್ದು, ಈ ಬಗ್ಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Crime News

ಕಾರು ಅಪಘಾತ, ವ್ಯಕ್ತಿ ಸಾವು

ದಿನಾಂಕ 29/03/2018ರಂದು ಪೊನ್ನಂಪೇಟೆ ನಗರದಲ್ಲಿ ಸಂಭವಿಸಿದ್ದ ಕಾರು ಮತ್ತು ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಗಾಯಾಳು ಬೈಕ್ ಸವಾರ ಪೊನ್ನಂಪೇಟೆ ನಿವಾಸಿ ಎಂ.ಆರ್.ಸುರೇಶ್‌ ದಿನಾಂಕ 05/04/2018ರಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ದೊರೆತ ಮಾಃಇತಿಯ ಮೇರೆಗೆ ಪೊನ್ನಂಪೇಟೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ04/04/2018ರಂದು ಸಿದ್ದಾಪುರ ಬಳಿಯ ಹಚ್ಚಿನಾಡು ನಿವಾಸಿ ರವಿ ಎಂಬಾತನು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಘಟನೆಯ ಬಗ್ಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ

ದಿನಾಂಕ 05/04/2018ರಂದು ಬೆಳಗಿನ ಜಾವ ಮಂಗಳೂರಿನಿಂದ ಗ್ಯಾಸ್ ಸಿಲಿಂಡರ್‌ಗಳನ್ನು ತೆಗೆದುಕೊಂಡು ಮಡಿಕೇರಿ ಮಾರ್ಗವಾಗಿ ಟಿ.ನರಸೀಪುರಕ್ಕೆ ಕೆಎ-19-ಡಿ-6045ರ ಲಾರಿಯನ್ನು ಚಾಲಿಸಿಕೊಂಡು ಹೋಗುತ್ತಿದ್ದ ಚಾಲಕ ಬಾಲಕೃಷ್ಣ ಎಂಬವರು ಬೋಯಿಕೇರಿ ಬಳಿ ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಲಾರಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Crime News

ಅಕ್ರಮ ಮರಳು ಸಾಗಾಟ:

ಅಕ್ರಮವಾಗಿ ಸ್ವರಾಜ್ ಮಜ್ದಾ ಲಾರಿಯಲ್ಲಿ ಮರಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ. ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ಕಳತ್ತೋಡು ದೇವರಪುರ ಗ್ರಾಮದಲ್ಲಿ ಸ್ವರಾಜ್ ಮಜ್ದಾ ಲಾರಿ ಸಂಖ್ಯೆ ಕೆಎ 12 ಎ 4216 ರಲ್ಲಿ ಅಕ್ರಮವಾಗಿ ಮರಳನ್ನು ಸಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿನ ಪೊನ್ನಂಪೇಟೆ ಪೊಲೀಸ್ ಠಾಣಾಧಿಕಾರಿ ಬಿ.ಜಿ. ಮಹೇಶ್ ಹಾಗು ಸಿಬ್ಬಂದಿಗಳು ಮರಳು ತುಂಬಿದ ಲಾರಿಯನ್ನು ಹಾಗು ಕೆ.ಎ.-12-ಎನ್-3847 ಕಾರನ್ನು ವಶಕ್ಕೆ ಪಡೆದು ಆರೋಪಿ ಕಾರ್ತಿಕ್ ರವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ದ್ವೇಷದ ಹಿನ್ನಲೆ ವ್ಯಕ್ತಿ ಮೇಲೆ ಹಲ್ಲೆ:

ವಿರಾಜಪೇಟೆ ನಗರದ ಕೊಡವ ಸಮಾಜ ಹತ್ತಿರ ವಾಸವಾಗಿರುವ ಮಂಡೇಡ ಎಂ.ಮುತ್ತಣ್ಣ @ ಚೇತನ್ ಎಂಬವರು ನಲ್ವತ್ತೊಕ್ಲು ಗ್ರಾಮದ ತಮ್ಮ ಐನ್ ಮನೆಯಲ್ಲಿ ತಿಥಿ ಕಾರ್ಯಕ್ರಮ ವಿದ್ದುದರಿಂದ ಸದರಿ ಕಾರ್ಯಕ್ರಮಕ್ಕೆ ಹೋಗಿ ಅಲ್ಲಿಂದ ಸಂಜೆ ನಲ್ವತ್ತೊಕ್ಲು ಗ್ರಾಮದಕ್ಕೆ ಹೋಗಿ ಸಂಜೆ 4-00 ಗಂಟೆ ಸಮಯದಲ್ಲಿ ಐನ್ ಮನೆಯ ಕಡೆಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ನಾಚಪ್ಪ, ಬಿದ್ದು ಹಾಗು ಮಧು ಮತ್ತು ಪೂವಣ್ಣ ರವರುಗಳು ಇದ್ದು ಅವರೊಂದಿಗೆ ಮಾತನಾಡಲು ಹೋದ ವೇಳೆಯಲ್ಲಿ ಸದರಿ ವ್ಯಕ್ತಿಗಳು ಮುತ್ತಣ್ಣರವರೊಂದಿಗೆ ಜಗಳ ಮಾಡಿ ಹಲ್ಲೆ ನಡೆಸಿ ನೋವುಪಡಿಸಿದ್ದು ಈ ಸಂಬಂಧ ಎಂ. ಮುತ್ತಣ್ಣನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Crime News

ವ್ಯಕ್ತಿಯ ಆತ್ಮಹತ್ಯೆ

ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ  ಮಾಡಿಕೊಂಡ ಘಟನೆ ಸೋಮವಾರಪೇಟೆ ತಾಲೂಕಿನ ಹಾನಗಲ್ಲು ಗ್ರಾಮದಲ್ಲಿ ವರದಿಯಾಗಿದೆ. ಹಾನಗಲ್ಲು ಗ್ರಾಮದ ನಿವಾಸಿಯಾದ ಲೋಕೇಶ ಎಂಬುವವರು ಜೀವನದಲ್ಲಿ ಜುಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ದಿನಾಂಕ 02-04-2018 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿರುತ್ತದೆ.

  ಕಾಲೇಜಿಗೆ ನುಗ್ಗಿ ಕಳ್ಳತನಕ್ಕೆ ಯತ್ನ

ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ದಿನಾಂಕ 26-03-2018 ರಿಂದ 03-04-2018 ರ ಒಳಗೆ ಯಾರೋ ಕಾಲೇಜಿನ ಬಾಗಿಲು ಮುರಿಯಲು ಪ್ರಯತ್ನಿಸಿ, ಕಿಟಕಿಯಿಂದ ಒಳನುಗ್ಗಿ  ಕಾಗದ ಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿ ಕಳ್ಳತನಕ್ಕೆ ಪ್ರಯತ್ನಿಸಿದ್ದು ಈ ಬಗ್ಗೆ ಪ್ರಾಂಶುಪಾಲರಾದ ಹೇಮಾವತಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಚಿನ್ನಾಭರಣ ಕಳವು

ದಿನಾಂಕ 30-03-2018 ರಂದು ಬೆಂಗಳೂರಿನಲ್ಲಿ ವಾಸವಿರುವ ಸೋಮವಾರಪೇಟೆ ತಾಲೂಕಿನ ಕಾಂಡನಕೊಲ್ಲಿ ಗ್ರಾಮದವರಾದ ಮಾಚಯ್ಯ ಎಂಬುವವರು ಊರಿಗೆ ಹಬ್ಬದ ಸಂಬಂದ ಬೆಂಗಳೂರಿನಿಂದ ಮನೆಗೆ ಬರುವಾಗ ತನ್ನ ಪತ್ನಿಯ ಚಿನ್ನಾಭರಣಗಳನ್ನು ಸೂಟ್ ಕೇಸಿನಲ್ಲಿ ಇಟ್ಟುಕೊಂಡು ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಬಂದಿದ್ದು, ಬೆಳಿಗ್ಗೆ 4-00 ಗಂಟೆಯ ಸಮಯಕ್ಕೆ ಶನಿವಾರಸಂತೆಗೆ ತಲುಪುವಾಗ ತನ್ನ ಪಕ್ಕದಲ್ಲಿದ್ದ ಸೂಟ್ ಕೇಸನ್ನು ನೋಡುವಾಗ ತೆರೆದುಕೊಂಡಿದ್ದು ಅದರ ಒಳಗಡೆ ಇಟ್ಟಿದ್ದ ಅಂದಾಜು 2.5 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವುದು ಕಂಡುಬಂದಿದ್ದು, ಈ ಬಗ್ಗೆ ದಿನಾಂಕ 03-04-2018 ರಂದು ಮಾಚಯ್ಯನವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಾಹನ ಅಪಘಾತ

ದಿನಾಂಕ 03-04-2018 ರಂದು ಕುಶಾಲನಗರದ ನಿವಾಸಿ ಜಮೀರ್ ರವರು ಚೇರಂಬಾಣೆಯಲ್ಲಿ ನಡೆಯುವ ಸಂತೆಗೆ ವ್ಯಾಪಾರಕ್ಕೆ ಹೋಗಿದ್ದವರು ವಾಪಾಸ್ಸು ಮಾರುತಿ ಓಮಿನಿ ವ್ಯಾನಿನಲ್ಲಿ ಹೋಗುತ್ತಿರುವಾಗ ಮಡಿಕೇರಿ ಕುಶಾಲನಗರ ರಸ್ತೆಯಲ್ಲಿ ಕೆದಕಲ್ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಬಂದ ಇನ್ನೋವಾ ಕಾರನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ವ್ಯಾನಿನಲ್ಲಿದ್ದ ಸರ್ತಾಜ್ ಹಾಗೂ ಜಬಿತಾಜ್ ರವರಿಗೆ ಗಾಯವಾಗಿದ್ದು, ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Crime News

ಕಾರು ಡಿಕ್ಕಿ, ಯುವಕ ಸಾವು

ದಿನಾಂಕ 02/04/3018ರಂದು ವಿರಾಜಪೇಟೆ ಬಳಿಯ ನಾಲ್ಕೇರಿ ನಿವಾಸಿ ಅರೆಯಂಡ ಮಿಥುನ್ ಎಂಬ ಯುವಕನು ಕೆಎ-12-9969ರ ಬುಲೆಟ್ ಬೈಕಿನಲ್ಲಿ ಕಾಕೋಟುಪರಂಬುವಿನ ಬಳಿ ಹೋಗುತ್ತಿರುವಾಗ ಎದುರಿನಿಂದ ಕೆಎ-12-ಪಿ-4897ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಮಿಥುನ್‌ ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಮಿಥುನ್ ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. Read more

News

ಪೊಲೀಸ್ ಧ್ವಜ ದಿನಾಚರಣೆ.

ಜಿಲ್ಲೆಯ ಕರ್ತವ್ಯನಿರತ ಪೊಲೀಸರು ಸಾರ್ವಜನಿಕರ ದೂರುಗಳನ್ನು ಸರಿಯಾಗಿ ಆಲಿಸಿ ಅರ್ಥೈಸಿಕೊಂಡು ಸಾರ್ವಜನಿಕರಿಗೆ ಸೇವೆಯನ್ನು ನಿಡುವಂತೆ ನಿವೃತ್ತ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಶ್ರೀ ಕೆ.ಎಸ್. ಕುಶಾಲಪ್ಪ ಪೊಲೀಸರಿಗೆ ಕರೆ ನೀಡಿದರು.

ಅವರು ಇಂದು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಗೆ ಪ್ರತಿ ವರ್ಷ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪರವರ ಸ್ಮರಣಾರ್ಥ ಅವರ ಮಕ್ಕಳಾದ ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪನವರು ನೀಡುತ್ತಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಟ್ರೋಫಿಯನ್ನು ಜಿಲ್ಲೆಯ ಗುಪ್ತದಳದ ಹೆಡ್ ಕಾನ್ಸ್ ಟೇಬಲ್ ಸಿ.ಡಿ. ಆನಂದರವರಿಗೆ ನೀಡಿ ಗೌರವಿಸಲಾಯಿತು. ಜೊತೆಗೆ ಉತ್ತಮ ಕರ್ತವ್ಯ ನಿರ್ವಹಿಸಿದ ಸುಮಾರು 9 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಸಹ  ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಳೆದ ವರ್ಷ ನಿವೃತ್ತರಾದ ಅಧಿಕಾರಿ ಹಾಗು ಸಿಬ್ಬಂದಿಗಳನ್ನು ಸನ್ಮಾನಿಸುವುದರೊಂದಿಗೆ ವೈದ್ಯಕೀಯ ವೆಚ್ಚದ ಸಹಾಯ ಧನವನ್ನು ಸಹ ವಿತರಿಸಲಾಯಿತು.

ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಮಾತನಾಡಿದ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪನವರು ಪ್ರಸಕ್ತ ಹವಾಮಾನ ವೈಪರಿತ್ಯದ ಸಮಯದಲ್ಲಿ ನೀರನ್ನು ಮಿತವಾಗಿ ಬಳಸುವಂತೆ ಕರೆ ನೀಡಿದರಲ್ಲದೆ ಮುಂಬರುವ  ವಿಧಾನ ಸಭಾ ಚುನಾವಣೆ ಸಮಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವಂತೆ ಪೊಲೀಸರಿಗೆ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಐ.ಪಿ.ಎಸ್., ರವರು ಸ್ವಾಗತಿಸಿ ನಿವೃತ್ತ ಪೊಲೀಸ್ ಅಧೀಕ್ಷಕ ಎಂ.ಎ. ಅಪ್ಪಯ್ಯನವರು ವಂದಿಸಿದರು. ಸಮಾರಂಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು ಮತ್ತು ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು

ವಿದ್ಯುತ್ ಸ್ಪರ್ಶದಿಂದ ಮಹಿಳೆ ಸಾವು:

ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಹಂಚಿಕಾಡು ಹೊಸೂರು ಬೆಟ್ಟಗೇರಿ ಗ್ರಾಮದಲ್ಲಿರುವ ಎಲಿಜಾ ಕಾಫಿ ಎಸ್ಟೇಟ್ ನಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮೊಹರ್ ಆಲಿ ಎಂಬವರ ಪತ್ನಿ ಶ್ರೀಮತಿ ಸಹರ್ ಬಾನು ಎಂಬ ಮಹಿಳೆ ದಿನಾಂಕ 1-4-2018 ರಂದು ಸೌದೆ ತರಲು ಕಾಫಿ ತೋಟಕ್ಕೆ ಹೋಗಿದ್ದು ತೋಟದ ಅಂಚಿನಲ್ಲಿದ್ದ ವಿದ್ಯುತ್ ಕಂಬದ ಕೆಳಗೆ ಸೌದೆಗಳನ್ನು ಜೋಡಿಸುತ್ತಿದ್ದ ವೇಳೆ ಕಂಬದಿಂದ ವಿದ್ಯುತ್ ಹರಿದು ಸದರಿ ಮಹಿಳೆ ಸುಟ್ಟು ಸಾವನಪ್ಪಿದ್ದು, ಈ ಸಂಬಂಧ ಮೃತರ ಪತಿ ಮೊಹರ್ ಆಲಿರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ಸಾಗಾಟ:

ದಿನಾಂಕ 31-3-2018 ರಂದು ವಿರಾಜಪೇಟೆ ನಗರ ಪೊಲೀಸ್ ಠಾಣಾ ಸಿಬ್ಬಂದಿ ಪಿ. ಮುನೀರ್ ರವರು ಪೆರುಂಬಾಡಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ಆರೋಪಿ ಕಣ್ಣೂರು ಜಿಲ್ಲೆಯ ಆನಪಂದಿ ಅಯ್ಯನ್ ಕುನ್ ಗ್ರಾಮ ದ ನಿವಾಸಿ ಸತೀಶ್ ಕುಮಾರ್ ಎಂಬವರು ತಮ್ಮ ವಾಹನದಲ್ಲಿ ಅಕ್ರಮವಾಗಿ 180 ಎಂ.ಎಲ್ ನ 18 ಟೆಟ್ರಾ ಪ್ಯಾಕೇಟ್ ಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಮದ್ಯ ಮಾರಾಟ:

ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಕೈಕೇರಿ ಗ್ರಾಮದ ಬಿ.ಹೆಚ್. ದೇವರಾಜ್ ಎಂಬವರು ತಮ್ಮ ಮನೆಯ ಮುಂದುಗಡೆ ಇರುವ ಶೆಡ್ಡಿನಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಹೆಚ್. ಸುಬ್ಬಯ್ಯ ಮತ್ತು ಸಿಬ್ಬಂದಿಗಳು ಮಾರಾಟ ಮಾಡಲು ಇಟ್ಟಿದ್ದ ರೂ.2,491/- ಬೆಲೆಬಾಳುವ 90 ಎಂ.ಎಲ್.ನ ಒಟ್ಟು 84 ಟೆಟ್ರಾ ಪ್ಯಾಕೇಟ್ ಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:
ವಿರಾಜಪೇಟೆ ತಾಲೋಕು ಹೆಗ್ಗಳ ಗ್ರಾಮದ ಎಂ.ಕೆ. ರವೀಂದ್ರನ್ ಎಂಬವರ ಮಗ ಪ್ರಾಯ 26 ವರ್ಷದ ಸಜೀತ್ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 1-4-2018 ರಂದು ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 3 4 5 6