Crime News

ಅಕ್ರಮ ಜೂಜಾಟ

ಅಕ್ರಮವಾಗಿ ಜೂಜಾಟವಾಡುತ್ತಿದ್ದ ವ್ಯಕ್ತಿಗಳ ಮೇಲೆ ಮಡಿಕೇರಿ ನಗರ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಡಿಕೇರಿ ನಗರದ ಅಬ್ಬೀಫಾಲ್ಸ್ ರಸ್ತೆಯ ಎ.ವಿ. ಶಾಲೆಯ ಹಿಂದಿನ ಜಾಗದಲ್ಲಿ ಕೇರಳ ರಾಜ್ಯದ ಲಾಟರಿ ಫಲಿತಾಂಶವನ್ನು ಆಧರಿಸಿ ಜೂಜಾಟ ನಡೆಸುತ್ತಿದ್ದವರ ಮೇಲೆ ಮಡಿಕೇರಿ ನಗರ ಪೊಲೀಸ್ ಠಾಣಾಧಿಕಾರಿ ಎಂ. ಷಣ್ಮುಗಂ ರವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಅಕ್ರಮವಾಗಿ ಜೂಜಾಡುತ್ತಿದ್ದ ಆರೋಪಿಗಳನ್ನುಗಳನ್ನು ವಶಕ್ಕೆ ಪಡೆದು ಸದರಿ ಆರೋಪಿಗಳಿಂದ ಜೂಜಾಟಕ್ಕೆ ಬಳಸಿದ ಹಣ ರೂ.5180/- ಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಜರುಗಿಸಿದ್ದಾರೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ:

ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಸುಂದರನಗರದ ನಿವಾಸಿ ರವಿ ಕುಮಾರ್ ಎಂಬವರು ದಿನಾಂಕ 07.08.2018 ರಂದು ಸಮಯ ಸುಮಾರು ರಾತ್ರಿ 9.00 ಗಂಟೆಗೆ ರಸ್ತೆಯಲ್ಲಿ   ನಡೆದುಕೊಂಡು ಬರುತ್ತಿರುವಾಗ ಎದುರುಗಡೆಯಿಂದ ಬಂದ ವಿಜಯ, ವಿನಯ, ಜಾನ್ಸನ್, ಗಿರೀಶ, ಡಿಲಾಕ್ಷ ಮತ್ತು ರಮೇಶ್ ಎಂಬವರು  ರವಿ ಕುಮಾರ್ ರವರನ್ನು ತಡೆದು ನಿಲ್ಲಿಸಿ ಅವ್ಯಾಚ್ಯಶಬ್ದಗಳಿಂದ ಬೈಯ್ದು, ಕೈಯಿಂದ ಹಲ್ಲೆನಡೆಸಿ ಕತ್ತಿಯಿಂದ ತಲೆ ಬಲಭಾಗಕ್ಕೆ ಕಡಿದು ಜಗಳ ಬಿಡಿಸಲು ಬಂದ ರವಿಕುಮಾರ್‍ರವರ ಸ್ನೇಹಿತರಾದ ಮಾರಿ ಮುತ್ತು ಮತ್ತು ಬನ್ನಾರಿ ರಾಜರವರಿಗೆ ಆರೋಪಿಗಳು ದೊಣ್ಣೆಯಿಂದ ಹಲ್ಲೆ ಮಾಡಿ ನೋವನ್ನುಂಟುಮಾಡಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸ್ಕೂಟಿಗೆ ಜೀಪು ಡಿಕ್ಕಿ:

ಹೋಗುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಬಂದ ಜೋಪೊಂದು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಾಯಗೊಂಡ ಘಟನೆ ಕುಶಾಲನಗರ ಸಮೀಪದ ಆನೆಕಾಡು ಎಂಬಲ್ಲಿ ನಡೆದಿದೆ. ದಿನಾಂಕ 8-8-2018 ರಂದು ಸೋಮವಾರಪೇಟೆ ತಾಲೋಕು ಕಲ್ಲೂರು ಗ್ರಾಮದ ರಾಜಗೋಪಾಲ ಎಂಬವರು ತಮ್ಮ ಸ್ಕೂಟಿಯಲ್ಲಿ ಕುಶಾಲನಗರದ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಕೆಎ-01, ಜೆಡ್-4139ರ ಮಹೇಂದ್ರ ಜೀಪಿನ ಚಾಲಕ ಸದರಿ ಜೀಪನ್ನು ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಸ್ಕೂಟಿಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟಿ ಕೆಳಗೆ ಬಿದ್ದು ರಾಜಗೋಪಾಲನವರ ಗಾಯಗೊಂಡು ಸದರಿಯವರನ್ನು ಚಿಕಿತ್ಸೆಗೆ ಮಡಿಕೇರಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಅಪಘಾತ ಇಬ್ಬರಿಗೆ ಗಾಯ:

ದಿನಾಂಕ 7-8-18 ರಂದು ಹಾಸನದ ಅರಕಲಗೂಡುವಿನ ಹರೀಶ್ ಎಂಬವರು ತಮ್ಮ ಪಿಕ್‍ಅಪ್ ವಾಹನದಲ್ಲಿ ಕೋಣನೂರಿನಿಂದ ಹೆಬ್ಬಾಲೆ ಕಡೆಗೆ ಹೋಗುತ್ತಿದ್ದು, ಕುಶಾಲನಗರದ ನಿವಾಸಿಯಾದ ಕೆ.ಪಿ. ಶತರ್ ರವರು ತಮ್ಮ ಕಾರನ್ನು ಹೆಬ್ಬಾಲೆ ಕಡೆಯಿಂದ ಕುಶಾಲನಗರದ ಕಡೆಗೆ ಬರುತ್ತಿದ್ದಾಗ ಪಿಕ್ ಅಪ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಕಾರಿನಲ್ಲಿದ್ದ ಶರತ್ ಮತ್ತು ಶಿವಮೂರ್ತಿರವರು ಗಾಯಗೊಂಡು ಎರಡೂ ವಾಹನಗಳು ಜಖಂಗೊಂಡಿದ್ದು, ಗಾಯಾಳು ಶರತ್ ಮತ್ತು ಶಿವಮೂರ್ತಿರವರು ಮೈಸೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿರುತ್ತಾರೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ ಉಭಯ ಕಡೆಯವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕೆಲಸ ಕೊಡಿಸುವುದಾಗಿ ವಂಚನೆ.

ವಿರಾಜಪೇಟೆ ತಾಲೋಕು ಕುಟ್ಟಂದಿ ಗ್ರಾಮದ ಬಿ.ಕೆ. ಲೋಕೇಶ್ ರವರ ಅಕ್ಕ ಮುತ್ತಮ್ಮ ಎಂಬವರಿಗೆ ಅವರಿಗೆ ಪರಿಚಿತ ವ್ಯಕ್ತಿ ಬೆಂಗಳೂರಿನ ಕಾಮರಾಜ್ @ ರೋಷನ್ ಎಂಬವರು ಹೊರದೇಶದಲ್ಲಿ ನರ್ಸ್ ಕೆಲಸವನ್ನು ಕೊಡಿಸುವುದಾಗಿ 1,50,000/- ರೂ. ಗಳನ್ನು ಪಡೆದುಕೊಂಡು ತದನಂತರ ಕೆಲಸವನ್ನು ಕೊಡಿಸದೆ ಹಣವನ್ನು ಹಿಂತಿರುಗಿಸದೇ ವಂಚಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.