Crime News

ವಿಪರೀತ ಮದ್ಯ ಸೇವನೆಯಿಂದ ವ್ಯಕ್ತಿ ಸಾವು:

ವಿಪರೀತವಾಗಿ ಮದ್ಯ ಸೇವಿಸಿದ ವ್ಯಕ್ತಿಯೋರ್ವ ನಿತ್ರಾಣಗೊಂಡು ಸಾವನಪ್ಪಿದ ಘಟನೆ ವಿರಾಜಪೇಟೆ ನಗರದಲ್ಲಿ ನಡೆದಿದೆ. ಪಣಿಎರವರ ಮಂಜು ಎಂಬ ವ್ಯಕ್ತಿ ದಿನಾಂಕ 2-9-2018 ರಂದು ವಿರಾಜಪೇಟೆ ನಗರಕ್ಕೆ ಹೋಗಿ ವಿಪರೀತ ಮದ್ಯ ಸೇವನೆಯನ್ನು ಮಾಡಿ ನಿತ್ರಾಣಗೊಂಡು ನಗರದ ಖಾಸಗಿ ಬಸ್ಸ್ ನಿಲ್ದಾಣದ ಹತ್ತಿರ ವಿರುವ ಶೌಚಾಲಯಕ್ಕೆ ಹೋಗುವ ದಾರಿಯಲ್ಲಿ ಬಿದ್ದು ಸಾವನಪ್ಪಿದ್ದು, ಈ ಸಂಬಂಧ ಅವರ ಸಂಬಂಧಿಕರಾದ ವೈ.ಎಸ್. ಯೋಗೀಶ್ ಎಂಬವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಿಚಿತ ವ್ಯಕ್ತಿಯಿಂದ ಹಲ್ಲೆ:

ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ವ್ಯಕ್ತಿಯೋರ್ವ ಅವರನ್ನು ತಡೆದು ಹಲ್ಲೆ ನಡೆಸಿದ ಘಟನೆ ವಿರಾಜಪೇಟೆ ತಾಲೋಕು ಬಿಳುಗುಂದ ಗ್ರಾಮದಲ್ಲಿ ನಡೆದಿದೆ.  ಬಿಳುಗುಂದ ಗ್ರಾಮದ ನಿವಾಸಿ ತೇಜ @ ತಂಗಮ್ಮ ಎಂಬವರು ಸುಂಟಿಕೊಪ್ಪದಲ್ಲಿರುವ ಸ್ವಸ್ಥ ಟ್ರಸ್ಟ್ ‍ನಲ್ಲಿ ಅಕೌಂಟೆಂಟ್ ಆಗಿ ಕೆಲಸ ನಿರ್ವಹಿಸಿಕೊಂಡಿದ್ದು ದಿನಾಂಕ 1-9-2018 ರಂದು ಸುಂಟಿಕೊಪ್ಪದಿಂದ ವಿರಾಜಪೇಟೆಗೆ ಹೋಗಿ  ಅಲ್ಲಿಂದ ಬಿಳುಗುಂದಲ್ಲಿರುವ ತಮ್ಮ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ್ಗೆ ಮೋಟಾರ್ ಸೈಕಲಿನಲ್ಲಿ ಬಂದ ವ್ಯಕ್ತಿಯೋರ್ವ ಮುಂದಕ್ಕೆ ಹೋಗಿ  ಬೈಕನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು ಫಿರ್ಯಾದಿಯವರು ಅಲ್ಲಿಗೆ ತಲುಪುವಾಗ ಸದರಿ ಅಪರಿಚಿತ ವ್ಯಕ್ತಿ ಏಕಾಏಕಿ ತೇಜ @ ತಂಗಮ್ಮನವರ ತಲೆ ಕೂದಲನ್ನು ಎಳೆದು ಕಲ್ಲಿನಿಂದ ತಲೆಗೆ ಹಲ್ಲೆ ನಡೆಸಿ ಗಾಯಪಡಿಸಿದ್ದು ಈ ವಿಚಾರವಾಗಿ  ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಿಯಮ ಮೀರಿ ಮರದ ದಿಮ್ಮಿಗಳ ಸಾಗಾಟ:

ಕೊಡಗು ಜಿಲ್ಲೆಯಾದ್ಯಂತ ಮರಳು ಮತ್ತು ಮರದ ದಿಮ್ಮಿಗಳ ಸಾಗಾಟಕ್ಕೆ ಜಿಲ್ಲಾಧಿಕಾರಿಯವರು ನಿಷೇಧಿಸಿ ಆದೇಶವನ್ನು ಹೋರಡಿಸಿದ್ದು, ದಿನಾಂಕ 2-9-2018 ರಂದು ಸಿದ್ದಾಪುರ ಠಾಣಾ ಸರಹದ್ದಿನ ಬಾಡಗಬಾಣಂಗಾಲ ಹುಂಡಿಯ ಕಾಫಿ ಮಿಲ್ಲಿನ ಪಕ್ಕದ ರಸ್ತೆಯಲ್ಲಿ ಕೆಎ-41-ಬಿ-1169 ಲಾರಿಯ ಚಾಲಕ ಲಾರಿಯಲ್ಲಿ ನಿಯಮ ಮೀರಿ ಹೆಚ್ಚಿನ ಬಾರದ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಸಿದ್ದಾಪುರ ಠಾಣಾ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಕ್ಷುಲ್ಲಕ ಕಾರಣ, ಹಲ್ಲೆ:

ದಿನಾಂಕ 1-9-2018 ರಂದು ಮಡಿಕೇರಿ ತಾಲೋಕು ಮಕ್ಕಂದೂರು ಗ್ರಾಮದ ಉಕ್ಕೇರಿಯಂಡ ಸುಬ್ಬಯ್ಯ ರವರು ತನ್ನ ಪತ್ನಿಯೊಂದಿಗೆ ಮಕ್ಕಂದೂರು ಗ್ರಾಮದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ರಸ್ತೆಯಲ್ಲಿ ನೆರೆ ಸಂತ್ರಸ್ಥರಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸುತ್ತಿದ್ದು   ಸಾಮಾಗ್ರಿಗಳನ್ನು ವಿತರಿಸುವ  ಬಗ್ಗೆ ಮಾತನಾಡಿದ ವಿಚಾರದಲ್ಲಿ ವಿಕಾಸ್, ಕಾವೇರಪ್ಪ ಮತ್ತು ವಿನಯ್ ಎಂಬವರುಗಳು ಉಕ್ಕೇರಿಯಂಡ ಸುಬ್ಬಯ್ಯ ಹಾಗು ಅವರ ಪತ್ನಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರುತಿ ವ್ಯಾನ್ ಅಪಘಾತ:

ದಿನಾಂಕ 2-9-2018 ರಂದು ಕಾರುಗುಂದ ಗ್ರಾಮದ ನಿವಾಸಿ ಟಿ.ಎನ್.ಜಯಂತ್ ಹಾಗು ಅವರ ಅಣ್ಣ ಡಿಸಂತ ಎಂಬವರು ಮಡಿಕೇರಿಯಿಂದ ಕಾರುಗುಂದದ ಕಡೆಗೆ ಮಾರುತಿ ವ್ಯಾನಿನಲ್ಲಿ ಹೋಗುತ್ತಿದ್ದಾಗ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಅಪ್ಪಂಗಳ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ ಚಾಲಕ ಡಿಸಂತರವರು ವ್ಯಾನನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ವ್ಯಾನ್ ಅಪಘಾತಕ್ಕೀಡಾಗಿ ವ್ಯಾನಿನಲ್ಲಿದ್ದ ಟಿ.ಎನ್. ಜಯಂತ್ ರವರು ಗಾಯಗೊಂಡಿದ್ದು ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರಿಗೆ ಬಿದ್ದು ಮಹಿಳೆ ಸಾವು:

ಸೋಮವಾರಪೇಟೆ ಠಾಣಾ ಸರಹದ್ದಿನ ಮಾದಾಪುರದ ಜಂಬೂರು ನಿವಾಸಿ ಶ್ರೀನ ಎಂಬವರ ಪತ್ನಿ ಭಾಗ್ಯ ಎಂಬವರು ದಿನಾಂಕ 31-8-2018 ರಂದು ಮಾದಾಪುರ ಹೊಳೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ಆಕಸ್ಮಿಕ ಕಾಲು ಜಾರಿ ನೀರಿಗೆ ಬಿದ್ದು ಸಾವನಪ್ಪಿದ್ದು, ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.