Crime News

ಮಹಿಳೆ ಆತ್ಮಹತ್ಯೆ ಪ್ರಕರಣ

ದಿನಾಂಕ 02/09/2018ರಂದು ಪೊನ್ನಂಪೇಟೆ ಬಳಿಯ ಕೃಷ್ಣ ಕಾಲೋನಿ ನಿವಾಸಿ ಪಣಿ ಎರವರ ಕಾವೇರಿ ಎಂಬ ಮಹಿಳೆಯು ಮನೆಯಲ್ಲಿ ನೆಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತೆ ಕಾವೇರಿಯ ಕಿರಿ ಮಗ ಸುಬ್ರಮಣಿ ಎಂಬಾತನು ಮನೆ ಬಿಟ್ಟು ಹೋಗಿರುವ ಕಾರಣಕ್ಕೆ ಮನ ನೊಂದು ಕಾವೇರಿಯು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ದೂರು ನೀಡಲಾಗಿದೆ. ಘಟನೆ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಅಪರಿಚಿತ ವ್ಯಕ್ತಿ ಆತ್ಮಹತ್ಯೆ

ಗೋಣಿಕೊಪ್ಪ ಬಳಿಯ ಅತ್ತೂರಿನ ತೊಟವೊಂದರಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಾಯಮುಡಿ ನಿವಾಸಿ ಕೊಂಗಂಡ ಸಾಗರ್ ಎಂಬವರ ಪತ್ನಿಯ ಅಕ್ಕ ಸರಸ್ವತಿ ಎಂಬವರಿಗೆ ಸೇರಿದ ತೋಟದಲ್ಲಿ ಅಪರಿಚಿತಿ ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದಿನಾಂಕ 03/09/2018ರಂದು ಸಾಗರ್‌ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 03/09/2018ರಂದು ಶ್ರೀಮಂಗಲ ಬಳಿಯ ಟಿ.ಶೆಟ್ಟಿಗೇರಿ ನಿವಾಸಿ ಕೆ.ಎಂ.ಅಪ್ಪಯ್ಯ ಎಂಬವರು ಟಿ.ಶೆಟ್ಟಿಗೇರಿ ಪಟ್ಟಣಕ್ಕೆ ಹೋಗುತ್ತಿರುವಾಗ ಕಟ್ಟೇರ ಜೀವನ್ ಎಂಬವರು ದಾರಿ ತಡೆದು ಕ್ಷುಲ್ಲಕ ಕಾರಣಕ್ಕೆ ಅಪ್ಪಯ್ಯನವರ ಮೇಲೆ ಹಲ್ಲೆ ನಡೆಸಿದ್ದು ತಡೆಯಲು ಬಂದ ಬಾಲ ಎಂಬವರಿಗೂ ಸಹ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 02/09/2018ರ ಸಂಜೆ ವೇಳೆ ಸುಂಟಿಕೊಪ್ಪ ಬಳಿಯ ಕಂಬಿಬಾಣೆಯ ಗಿರಿಜನ ಕಾಲೋನಿ ನಿವಾಸಿ ಮಧು ಎಂಬವರೊಂದಿಗೆ ನೆರೆಯ ನಾಗರಾಜು ಮತ್ತು ಪುಟ್ಟ ಎಂಬವರು ಜಗಳವಾಡುತ್ತಿದ್ದು ಇದನ್ನು ವಿಚಾರಿಸಿದ ಮಧುರವರ ತಾಯಿ ಜೇನುಕುರುಬರ ಗಂಗಮ್ಮ ಎಂಬವರ ಮೇಲೆ ನಾಗರಾಜು ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 02/09/2018ರಂದು ಕುಶಾಲನಗರ ಬಳಿಯ ಕಣಿವೆಯ ಭುವನಗಿರಿ ಗ್ರಾಮದ ನಿವಾಸಿ ಶಿವರುದ್ರ ಎಂಬವರಿಗೆ ಅವರ ತಂದೆ ದೊಡ್ಡಯ್ಯ ಎಂಬವರು ಸಾಲದ ವಿಚಾರದಲ್ಲಿ ಕತ್ತಿಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ ಪ್ರಕರಣ

ಮಡಿಕೇರಿ ನಗರದ ಮಂಗಳಾದೇವಿನಗರದ ನಿವಾಸಿ ಹೆಚ್‌.ಟಿ.ಕೃಷ್ಣ ಎಂಬವರು ದಿನಾಂಕ 28/08/2018ರಂದು ರಾತ್ರಿ ಮನೆಯಿಂದ ಹೋದವರು ಇನ್ನೂ ಮನೆಗೆ ಬಾರದೆ ಕಾಣೆಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ