Crime News

ಹಾವು ಕಡಿದು ವ್ಯಕ್ತಿ ಸಾವು

ದಿನಾಂಕ 29/08/2018ರಂದು ಸಂಪಾಜೆ ಬಳಿಯ ಯು.ಚೆಂಬು ಗ್ರಾಮದ ನಿವಾಸಿ ಮೋನಪ್ಪ ಎಂಬವರು ಅವರ ತೋಟದಲ್ಲಿ ಕೆಲಸ ಮಾಡುತ್ತಿರುವಾಗ ಯಾವುದೋ ಹಾವು ಕಡಿದು ವಿಷವೇರಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 06/09/2018ರಂದು ಮೋನಪ್ಪನವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ

ದಿನಾಂಕ 06/09/2018ರಂದು ಮರಗೋಡು ನಿವಾಸಿ ಕೆ.ಆಶಾ ಎಂಬ ಮಹಿಳೆಯು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತೆ ಆಶಾರವರು ಮರಗೋಡಿನ ಧರ್ಮಸ್ಥಳ ಸಂಘದಿಂದ ಸಾಲ ಪಡೆದಿದ್ದು ಸಾಲದ ಹಣವನ್ನು ಮರು ಪಾವತಿಸಲು ಹಣ ಹೊಂದಿಸಲು ಸಾಧ್ಯವಾಗದೆ  ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ನೀಡಲಾಗಿದೆ. ಘಟನೆ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಜೀಪು ಡಿಕ್ಕಿ; ಪಾದಚಾರಿ ಸಾವು

 ದಿನಾಂಕ 06/09/2018ರಂದು ಮಡಿಕೇರಿ ನಗರದ ದೇಚೂರು ಬಳಿ ಪಶ್ಚಿಮ ಬಂಗಾಳದ ಮೇದನಿಪುರದ ನಿವಾಸಿ ತೂಫಾನ್ ಬುಯ್ಯ ಎಂಬವರು ದೇಚೂರು ರಾಮ ಮಂದಿರದ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಈರಪ್ಪ ಎಂಬವರು ಕೆಎ-12-ಎಂ-5815ರ ಜೀಪನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ತೂಫಾನ್‌ ಬುಯ್ಯರವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರು ಸಾವಿಗೀಡಾಗಿದ್ದು ಜೀಪನಲ್ಲಿದ್ದ ಸುಮಾರು 7 ಜನರಿಗೂ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮೊಬೈಲ್ ಕಳವು ಪ್ರಕರಣ

ದಿನಾಂಕ 06/09/2018ರಂದು ವಿರಾಜಪೇಟೆ ಬಳಿಯ ಕಾವಾಡಿ ನಿವಾಸಿ ರೆಕ್ನೇಸ್ ಎಂಬವರು ವಿರಾಜಪೇಟೆ ನಗರದ ಪಂಜರಪೇಟೆಯ ಬಸ್ ತಂಗುದಾಣದಲ್ಲಿ ಅವರ ಸ್ನೇಹಿತ ಸುರೇಶ್ ಎಂಬವರೊಂದಿಗೆ ಮಾತನಾಡುತ್ತಿದ್ದಾಗ ಅವರ ಮೊಬೈಲ್ ಫೋನನ್ನು ಪಕ್ಕದಲ್ಲಿಟ್ಟಿದ್ದು ಅದನ್ನು ಕಲ್ಲುಬಾಣೆ ನಿವಾಸಿ ನೌಷದ್ ಎಂಬಾತನು ಎತ್ತಿಕೊಂಡು ಓಡಿ ಹೋಗಿದ್ದು ಸುಮಾರು ರೂ.12,000/- ಮೌಲ್ಯದ ಮೊಬೈಲ್ ಫೋನನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಹಲ್ಲೆ  ಪ್ರಕರಣ

ದಿನಾಂಕ 06/09/2018ರಂದು ಕುಟ್ಟ ಬಳಿಯ ಕೋತೂರು ನಿವಾಸಿ ಕೆ.ಆರ್.ಸುರೇಶ್ ಎಂಬವರು ಅವರ ಮನೆಯ ಬಳಿ ಸ್ನೇಹಿತನೊಂದಿಗೆ ಮಾತನಾಡಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾನೂರು ಕಡೆಯಿಂದ ಕುಟ್ಟ ಕಡೆಗೆ ಪೊನ್ನಂಪೇಟೆಯ ಸಾಯಿ ಶಂಕರ ಶಾಲೆಯ ಬಸ್ಸನ್ನು ಚಾಲಿಸುತ್ತಿದ್ದ ಕಳಕಂಡ ಭರತ್ ಎಂಬವರು ಬಸ್ ನಿಲ್ಲಿಸಿ ಕೆಳಗೆ ಇಳಿದು ಕ್ಷುಲ್ಲಕ ಕಾರಣಕ್ಕೆ ಕೆ.ಆರ್.ಸುರೇಶ್‌ರವರೊಂದಿಗೆ ಜಗಳವಾಡಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.