Crime News

ಕಳವು ಪ್ರಕರಣ

ಮಡಿಕೇರಿ ಬಳಿಯ ಜೋಡುಪಾಲ ನಿವಾಸಿ ಭರತ್ ಕುಮಾರ್ ಎಂಬವರು ದಿನಾಂಕ 13/08/2018ರಂದು ಮಡಿಕೇರಿಗೆ ಕುಟುಂಬ ಸಮೇತ ಬಂದಿದ್ದು ನಂತರ ಮರಳಿ ಮನೆಗೆ ಹೋಗುವಾಗ ಭಾರೀ ಮಳೆಯ ಕಾರಣ ಗುಡ್ಡ ಜರಿದು ಬಿದ್ದು ಮನೆಗೆ ಹೋಗಲು ಸಾಧ್ಯವಾಗದೆ ಮಡಿಕೇರಿಯಲ್ಲಿಯೇ ಇದ್ದು ನಂತರ ದಿನಾಂಕ 10/09/2018ರಂದು ಮನೆಗೆ ಹೋಗಿ ನೋಡುವಾಗ ಯಾರೋ ಕಳ್ಳರು ಮನೆಯ ಬೀಗ ಮುರಿದು ಒಳ ಪ್ರವೇಶಿಸಿ ಮನೆಯೊಳಗಿದ್ದ ಸುಮಾರು ರೂ.75,000/- ಮೌಲ್ಯದ ಚಿನ್ನಾಭರಣ ಹಾಗೂ ನಗದು ರೂ.23,500/-ನ್ನು ಕಳವು ಮಾಡಿರುವುದು ಕಂಡು ಬಂದಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕರ್ತವ್ಯಕ್ಕೆ ಅಡ್ಡಿ ಪ್ರಕರಣ

ದಿನಾಂಕ 15/09/2018ರಂದು ಮರಗೋಡಿನ ಬಳಿ ಯಾರೋ ಅಕ್ರಮವಾಗಿ ಮರಳನ್ನು ತೆಗೆಯುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಮಡಿಕೇರಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿಜ್ಞಾನಿ ಕೆ.ಎಸ್.ನಾಗೇಂದ್ರಪ್ಪ ಎಂಬವರು ಸ್ಥಳಕ್ಕೆ ತೆರಳಿದಾಗ ಅಲ್ಲಿ ಹಾಕತ್ತೂರಿನ ನಿವಾಸಿ ಸುನಿಲ್ ಎಂಬವರು ಇನ್ನಿಬ್ಬರೊಂದಿಗೆ ಅಕ್ರಮವಾಗಿ ಮರಳು ತೆಗೆದು ಪಿಕ್‌ಅಪ್ ವಾಹನಕ್ಕೆ ತುಂಬಿಸುತ್ತಿರುವುದು ಕಂಡು ಬಂದಿದ್ದು ಮರಳು ಮತ್ತು ಜೀಪಿನ ಸಮೇತ ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆ ತರುವಾಗ ಸುನಿಲ್‌ರವರು ನಾಗೇಂದ್ರಪ್ಪನವರನ್ನು ತಳ್ಳಿ ಹಾಕಿ ಜೀಪಿನೊಂದಿಗೆ ಪರಾರಿಯಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ರಸ್ತೆ ಅಪಘಾತ

ದಿನಾಂಕ 17/09/2018ರಂದು ಮಡಿಕೇರಿ ಬಳಿಯ ಮೇಕೇರಿ ನಿವಾಸಿ ಯಶೋದ ಎಂಬವರು ಅವರ ಭಾವ ಬಾಲಕೃಷ್ಣ ಎಂಬವರೊಂದಿಗೆ ಸ್ಕೂಟರಿನಲ್ಲಿ ಮೇಕೇರಿಯ ಅವರ ಮನೆಗೆ ಹೋಗುತ್ತಿರುವಾಗ ಮೇಕೇರಿ ಬಳಿ ಹಿಂದಿನಿಂದ ಒಂದು ಕಾರನ್ನು ಅದರ ಚಾಲಕಿ ಕಾಂತೂರು ನೂರ್ನಾಡಿನ ಶೃತಿ ನಾಣಯ್ಯ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಯಶೋದರವರು ಹೋಗುತ್ತಿದ್ದ ಸ್ಕೂಟರಿಗೆ ಡಿಕ್ಕಿಪಡಿಸಿದ ಪರಿಣಾಮ ಯಶೋದರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 ಹಳೆ ದ್ವೇಷ, ಸ್ಕೂಟರಿಗೆ ಹಾನಿ 

ದಿನಾಂಕ 14/09/2018ರಂದು ಕಿರುಂದಾಡು ನಿವಾಸಿ ಎ.ಬಿ.ಮುದ್ದಪ್ಪ ಎಂಬವರು ಅವರ ಊರಿನ ಬಿಟ್ಟಿರ ಮಂದಣ್ಣ ಎಂಬವರ ಪತ್ನಿಯ ತಿಥಿ ಕಾರ್ಯಕ್ಕೆ ಅವರ ಸ್ಕೂಟರಿನಲ್ಲಿ ಹೋಗಿದ್ದು ಸ್ಕೂಟರನ್ನು ಮಂದಣ್ಣನವರ ಮನೆಯ ಕಾಂಪೌಂಡ್ ಬಳಿ ನಿಲ್ಲಿಸಿದ್ದ ಸಮಯದಲ್ಲಿ ಅವರ ಗ್ರಾಮದವರೇ ಆದ ಚೆರುಮಂದಂಡ ವಿವೇಕ್ ಎಂಬವರು ಹಳೆ ದ್ವೇಷದಿಂದ ಮುದ್ದಪ್ಪನವರ ಸ್ಕೂಟರನ್ನು ತಳ್ಳಿಕೊಂಡು ಹೋಗಿ ಪಕ್ಕದ ಅಡಿಕೆ ತೋಟದ ಬಳಿಯ ಗುಂಡಿಯೊಂದಕ್ಕೆ ತಳ್ಳಿ ಹಾಕಿ ಹಾನಿಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೆರೆಗೆ ಬಿದ್ದು ವ್ಯಕ್ತಿ ಸಾವು

ದಿನಾಂಕ 17/09/2018ರಂದು ಸುಂಟಿಕೊಪ್ಪ ಬಳಿಯ ಏಳನೇ ಮೈಲಿನ ಶ್ರೀ ದೇವಿ ಎಸ್ಟೇಟಿನ ನಿವಾಸಿ ಬಿ.ಡಿ.ವಾಸು ಎಂಬವರು ಆಕಸ್ಮಿಕವಾಗಿ ತೋಟದ ಕೆರೆಗೆ ಕಾಲು ಜಾರಿ ಬಿದ್ದು ಸಾವಿಗೀಡಾಗಿರುವುದಾಗಿ ವರದಿಯಾಗಿದೆ. ಘಟನೆ ಸಂಬಂಧ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಂಗಡಿ ಕಳ್ಳತನ

ದಿನಾಂಕ 16/09/2018ರ ರಾತ್ರಿ ವೇಳೆ ಪೊನ್ನಂಪೇಟೆ ಬಳಿಯ ಬೆಸಗೂರು ನಿವಾಸಿ ನಟೇಶ ಎಂಬವರಿಗೆ ಸೇರಿದ ದಿನಸಿ ಅಂಗಡಿಯ ಮೇಲ್ಛಾವಣಿಯ ಮೂಲಕ ಒಳ ಪ್ರವೇಶಿಸಿದ ಯಾರೋ ಕಳ್ಳರು ಅಂಗಡಿಯೊಳಗಿದ್ದ ಸುಮಾರು ರೂ.1000/- ನಗದಿನೊಂದಿಗೆ ಬೀಡಿ ಹಾಗೂ ಇನ್ನಿತರೆ ವಸ್ತುಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.