Crime News

ಹಾವು ಕಚ್ಚಿ ಮಹಿಳೆ ಸಾವು:

ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಹಾವು ಕಚ್ಚಿ ಸಾವನಪ್ಪಿದ ಘಟನೆ ಪೊನ್ನಂಪೇಟೆ ಠಾಣಾ ಸರಹದ್ದಿನ ಭದ್ರಗೊಳ ಗ್ರಾಮದಲ್ಲಿ ನಡೆದಿದೆ. ಭದ್ರಗೊಳ ಗ್ರಾಮದ ನಿವಾಸಿ ರುಕ್ಮಯ್ಯ ಎಂಬವರ ಪತ್ನಿ ಶ್ರೀಮತಿ ಕಮಲ ಎಂಬವರು ದಿನಾಂಕ 21-9-2018 ರಂದು ತೋಟದಲ್ಲಿ ಕೆಲಸ ಮಾಡುತ್ತಿದ್ದಾದ ಹಾವೊಂದು ಕಚ್ಚಿದ್ದು ಅವರನ್ನು ಚಿಕಿತ್ಸೆಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಸದರಿಯವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 1-10-2018 ರಂದು ಮೃತಪಟ್ಟಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಸೋಮವಾರಪೇಟೆ ತಾಲೋಕು ಅತೂರು ಗ್ರಾಮದಲ್ಲಿ ವಾಸವಾಗಿರುವ ಯು.ಸಿ. ಮನೋಜ್ ಎಂಬವರ ತಂದೆ ಯು.ಎಸ್. ಚಂಗಪ್ಪ ನವರು ಮಡಿಕೇರಿ ತಾಲೋಕಿನ ಮದೆನಾಡು ಗ್ರಾಮದಲ್ಲಿ ವಾಸವಾಗಿದ್ದು ಸದರಿಯವರು ದಿನಾಂಕ 1-10-2018 ರಂದು ಮಡಿಕೇರಿ ಕೂರ್ಗ್ ರೀಜೆನ್ಸಿ ಹೊಟೇಲಿನ ಕೊಠಡಿಯಲ್ಲಿ ಮೃತಪಟ್ಟಿರುವುದು ಕಂಡುಬಂದಿದ್ದು ಇವರ ಜೊತೆಯಲ್ಲಿ ವಾಸವಾಗಿರುವ ಸಹೋದರ ಶ್ಯಾಮ್ ಸುಂದರ್ ಮತ್ತು ಅವರ ಪತ್ನಿ ರಾಜೇಶ್ವರಿ ರವರು ಕೊಲೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಯು.ಎಸ್. ಚಂಗಪ್ಪನವರು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ  ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಹಿಳೆಗೆ ಪತಿಯಿಂದ ಕಿರುಕುಳ:

ಗೋಣಿಕೊಪ್ಪ ಠಾಣಾ ಸರಹದ್ದಿನ ಅರುವತ್ತೋಕ್ಲು ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಶರೀನಾ ರವರು 26-5-2013 ರಲ್ಲಿ ಅಶ್ರಫ್ ಎಂಬವರನ್ನು ಮದುವೆಯಾಗಿದ್ದು ಮದುವೆ ಸಂದರ್ಭದಲ್ಲಿ ಅಶ್ರಫ್ ನವರು ವರದಕ್ಷಿಣೆ ರೂಪದಲ್ಲಿ ಚಿನ್ನಾಭರಣ ಮತ್ತು ಒಂದು ಲಕ್ಷ ನಗದನ್ನು ಪಡೆದುಕೊಂಡಿದ್ದು ನಂತರದ ದಿನಗಳಲ್ಲಿ ಗಂಡ ಅಶ್ರಫ್ ಹಾಗು ಅವರ ತಾಯಿ, ತಮ್ಮ ರಜಾಕ್, ಅಕ್ಕ ಮೈಮೂನಾ ರವರುಗಳು ಸೇರಿ ಹೆಚ್ಚಿನ ಹಣವನ್ನು ತರುವಂತೆ ಪೀಡಿಸಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದು, ದಿನಾಂಕ 18-9-2018 ರಂದು ಶ್ರೀಮತಿ ಶರೀನಾರವರಿಗೆ ತನ್ನ ತವರು ಮನೆಯಿಂದ 5 ಲಕ್ಷ ರೂ. ಗಳನ್ನು ತರುವಂತೆ ಒತ್ತಾಯಿಸಿದ್ದು ಅದನ್ನು ನಿರಾಕರಿಸಿದಾಗ  ಆಕೆಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾರಿಗೆ ಪಿಕ್‍ಅಪ್ ವಾಹನ ಡಿಕ್ಕಿ:

ಸುಂಟಿಕೊಪ್ಪ ನಗರದ ಗುಡ್ಡಪ್ಪರೈ ಬಡಾವಣೆಯಲ್ಲಿ ವಾಸವಾಗಿರುವ ಎಸ್. ವಿಜೇತ್ ಎಂಬವರು ದಿನಾಂಕ 30-9-2018 ರಂದು ತಮ್ಮ ಕಾರಿನಲ್ಲಿ ಗದ್ದೆಹಳ್ಳದಿಂದ ಸುಂಟಿಕೊಪ್ಪದ ಕಡೆಗೆ ಹೋಗುತ್ತಿದ್ದಾಗ ಎದುಗುಗಡೆಯಿಂದ ಬಂದ ಪಿಕ್ ಅಪ್ ವಾಹನವನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಎಸ್. ವಿಜೇತ್ ರವರು ಚಲಾಯಿಸುತ್ತಿದ್ದ ಮಾರುತಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡು ವಿಜೇತ್ ರವರು ಗಾಯಗೊಂಡಿದ್ದು, ಈ ಸಂಬಂಧ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಂಡುಹಾರಿಸಿ ವ್ಯಕ್ತಿಯ ಕೊಲೆ:

ಮಡಿಕೇರಿ ತಾಲೋಕಿನ ಮರಗೋಡು ಗ್ರಾಮದ ನಿವಾಸಿ ಕಾನಡ್ಕ ತಿಲಕ ಎಂಬವವರು ದಿನಾಂಕ 1-10-208 ರಂದು ಸಂಜೆ ಮರಗೊಡು ಗ್ರಾಮದಲ್ಲಿರುವ ಕಾಂಗೀರ ಸತೀಶ್ ಎಂಬವರ ಹೊಟೇಲಿನ ಬಳಿಗೆ ಬಂದಿದ್ದು ಅಲ್ಲೆ ಇದ್ದ ಅದೇ ಗ್ರಾಮದ ಮುಂದೋಡಿ ನಾಣಯ್ಯ @ ನಂದ ಎಂಬವರು  ಹಳೇ ದ್ವೇಷವನ್ನಿಟ್ಟುಕೊಂಡು ತನ್ನ ಬಳಿ ಇದ್ದ ರಿವಾಲ್ವರ್ ಮೂಲಕ ಕಾನಡ್ಕ ತಿಲಕ್ ನವರ ಮೇಲೆ ಗುಂಟು ಹಾರಿಸಿ ಕೊಲೆ ಮಾಡಿದ್ದು, ಈ ಸಂಬಂಧ ಹೊಸ್ಕೇರಿ ಗ್ರಾಮದ ಎಂ.ಚಿದಂಬರ ಎಂಬವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಕೆ ಕೈಗೊಂಡಿದ್ದಾರೆ.