Crime News

ಕಳ್ಳತನ ಮತ್ತು ಸುಲಿಗೆ ಪ್ರಕರಣ ಪತ್ತೆ:

     ಕುಶಾಲನಗರ ಪಟ್ಟಣದಲ್ಲಿ ರಾತ್ರಿಯ ವೇಳೆ ಸುಲಿಗೆ ಮತ್ತು ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಇವರು ಕುಶಾಲನಗರದಲ್ಲಿ ತಂಡಗಳನ್ನು ರಚಿಸಿ ವಿಶೇಷ ರಾತ್ರಿ ಗಸ್ತು ನಡೆಸುವ ಬಗ್ಗೆ ಈ ತಂಡಗಳಿಗೆ ತಿಳುವಳಿಕೆಯನ್ನು ನೀಡಿದ್ದು, ದಿನಾಂಕ: 10.04.2018  ರಂದು ರಾತ್ರಿ ಕುಶಾಲನಗರ ಟೌನ್ ಠಾಣೆಯ ಪಿಎಸ್ಐ ಶ್ರೀ. ಜಗದೀಶ್ ಪಿ. ರವರು ಸಿಬ್ಬಂದಿಯವರುಗಳ ಜೊತೆಯಲ್ಲಿ ಕುಶಾಲನಗರ ಪಟ್ಟಣದಲ್ಲಿ ವಿಶೇಷ ರಾತ್ರಿ ಗಸ್ತಿನಲ್ಲಿರುವಾಗ್ಗೆ, 10/11.04.2018 ರ 02.30 ಎ.ಎಂ.ಗೆ ಕುಶಾಲನಗರ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಇಬ್ಬರು ವ್ಯಕ್ತಿಗಳು ಒಂದು ನೋಂದಣಿ ಸಂಖ್ಯೆ ಇಲ್ಲದ ಮೋಟಾರ್ ಸೈಕಲ್ನ್ನು ನಿಲ್ಲಿಸಿಕೊಂಡು ಇದ್ದು, ಸದರಿಯವರುಗಳು ಪೊಲೀಸರನ್ನು ನೋಡಿ ಪರಾರಿಯಾಗಲು ಯತ್ನಿಸಿದವರನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಸದರಿಯವರ ಹೆಸರುಗಳು ಈ ಕೆಳಕಂಡಂತೆ ಇರುತ್ತದೆ.

1.  ನವೀನ್ ಎನ್.ಎಲ್. @ ಅಪ್ಪುಣು, ತಂದೆ: ಲಕ್ಷ್ಮಣ @ ಚಾಮಿ, ಪ್ರಾಯ: 20 ವರ್ಷ, ಹಂದಿ ಸಾಕಾಣಿಕೆ, ವಾಸ: ಗೊಂದಿಬಸನವನಹಳ್ಳಿ ಗ್ರಾಮ, ಕುಶಾಲನಗರ.

2.  ಸುಬ್ರಮಣಿ @ ಸುಬ್ಬು, ತಂದೆ: ಲಕ್ಷ್ಮಣ @ ಚಾಮಿ, ಪ್ರಾಯ: 25 ವರ್ಷ, ಸೈನಿಕ, ವಾಸ: ಗೊಂದಿಬಸನವನಹಳ್ಳಿ ಗ್ರಾಮ, ಕುಶಾಲನಗರ.

     ಸದರಿ ಆರೋಪಿಗಳು ವಿಚಾರಣಾ ವೇಳೆಯಲ್ಲಿ ಕುಶಾಲನಗರ ಪಟ್ಟಣದಲ್ಲಿ 1 ಸುಲಿಗೆ ಮತ್ತು 1 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ಕುಶಾಲನಗರ ಟೌನ್ ಠಾಣೆ ಮೊ.ಸಂ. 68/2018 ಕಲಂ 379 ಐ.ಪಿ.ಸಿ. ಮತ್ತು  ಕುಶಾಲನಗರ ಟೌನ್ ಠಾಣೆ ಮೊ.ಸಂ. 75/2018 ಕಲಂ 392 ಐ.ಪಿ.ಸಿ. ಪ್ರಕರಣಗಳು ದಾಖಲಾಗಿರುತ್ತದೆ.

   ಆರೋಪಿ ಸುಬ್ರಮಣಿ @ ಸುಬ್ಬು ಈತನು ಭಾರತೀಯ ಸೈನ್ಯದಲ್ಲಿ ಕಳೆದ 4 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು, 2017 ನೇ ಸಾಲಿನ ಡಿಸೆಂಬರ್ ತಿಂಗಳಿನಲ್ಲಿ ರಜೆಯಲ್ಲಿ ಊರಿಗೆ ಬಂದವನು ವಾಪಾಸ್ಸು ಕರ್ತವ್ಯಕ್ಕೆ ತೆರಳಿರುವುದಿಲ್ಲ ಎಂದು ತಿಳಿದುಬಂದಿರುತ್ತದೆ.

     ಈ ಪ್ರಕರಣದಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಶ್ರೀನಿವಾಸಮೂರ್ತಿ ಬಿ.ಎಲ್., ಡಿವೈಎಸ್ಪಿ ಸೋಮವಾರಪೇಟೆ ಉಪವಿಭಾಗ ಇವರ ನೇತೃತ್ವದಲ್ಲಿ, ಕ್ಯಾತೇಗೌಡ, ಸಿಪಿಐ ಕುಶಾಲನಗರ,  ಜಗದೀಶ್ ಪಿ., ಪಿಎಸ್ಐ,  ಕುಶಾಲನಗರ ನಗರ ಪೊಲೀಸ್ ಠಾಣೆ, ನವೀನ್ಗೌಡ, ಪಿಎಸ್ಐ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಕುಶಾಲನಗರದ ವಿಶೇಷ ಅಪರಾಧ ಪತ್ತೆ ತಂಡದ ಸುರೇಶ್ ಪಿ.ಬಿ., ಮುಸ್ತಾಫ ಪಿ.ಎಂ.,  ಸುಧೀಶ್ ಕುಮಾರ್ ಕೆ.ಎಸ್.,  ಉದಯಕುಮಾರ್,  ಸಂಪತ್ ರೈ,  ದಯಾನಂದ,  ಜೋಸೆಫ್,  ಲೋಕೇಶ್, ಚಾಲಕರಾದ  ಪ್ರವೀಣ್ ಮತ್ತು  ಗಣೇಶ್ ಹಾಗೂ ಸೈಬರ್ ಸೆಲ್ ನ  ರಾಜೇಶ್ ಹಾಗೂ  ಗಿರೀಶ್ ರವರು ಸದರಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿರುತ್ತಾರೆ.
ಸದರಿ ಆರೋಪಿಗಳಿಂದ ರೂ. 4,50,000/- ಬೆಲೆಯ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ವಿವರ ಈ ಕೆಳಕಂಡಂತಿರುತ್ತದೆ.
1) 130 ಗ್ರಾಂ ಚಿನ್ನಾಭರಣ ಅಂದಾಜು ಮೌಲ್ಯ ರೂ. 3,90,000/-
2) 2 ಮೊಬೈಲ್ ಫೋನ್ಗಳು ಅಂದಾಜು ವೌಲ್ಯ ರೂ 20,000/-
3) ಒಂದು ಮೋಟಾರ್ ಸೈಕಲ್, ಅಂದಾಜು ಮೌಲ್ಯ ರೂ. 40,000/-
ಮೇಲ್ಕಂಡ ಆರೋಪಿಗಳನ್ನು ಪತ್ತೆಹಚ್ಚಿ ಸುಲಿಗೆ ಮತ್ತು ಕಳವು ಪ್ರಕರಣಗಳನ್ನು ಪತ್ತೆಹಚ್ಚಿದ ಮೇಲ್ಕಂಡ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.

ಮನುಷ್ಯ ಕಾಣೆ

ವಿರಾಜಪೇಟೆ ತಾಲೂಕಿನ ಬಿಳುಗುಂದ ಗ್ರಾಮದ ನಿವಾಸಿಯಾದ ಕುಟ್ಟಪ್ಪ ಎಂಬುವವರು ದಿನಾಂಕ 6-4-2018 ರಂದು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಗೆ ಕೆಲಸಕ್ಕೆ  ಸೇರಲು ಹೋಗುತ್ತಿರುವುದಾಗಿ ಮನೆಯಲ್ಲಿ ತಿಳಿಸಿ ಹೋದವರು ಕಾಣೆಯಾಗಿದ್ದು ಈ ಬಗ್ಗೆ ಕುಟ್ಟಪ್ಪನವರ ಅಣ್ಣ ಬಿದ್ದಪ್ಪನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವೃದ್ದ ವ್ಯಕ್ತಿಯ ಸಾವು

ವಿರಾಜಪೇಟೆ ನಗರದ ದೊಡ್ಡಟ್ಟಿ ಚೌಕಿಯಲ್ಲಿರುವ ಬಸ್ಸು ತಂಗುದಾಣದಲ್ಲಿ  ಸುಮಾರು 70 ಪ್ರಾಯದ ಸುಂದರ ಎಂಬುವವರು ಅನಾರೋಗ್ಯದಂದ ಮಲಗಿದ್ದವರು ದಿನಾಂಕ 10-4-2018 ರಂದು ಮೃತಪಟ್ಟಿದ್ದು ಈ ಬಗ್ಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೈಕಿಗೆ ಪಿಕ್ಅಪ್ ಜೀಪು ಡಿಕ್ಕಿ

ಬೈಕಿಗೆ ಪಿಕ್ಅಪ್ ಜೀಪು ಡಿಕ್ಕಿಯಾಗಿ ಬೈಕಿನಲ್ಲಿದ್ದವರಿಗೆ ಗಾಯವಾದ ಘಟನೆ ಸೋಮವಾರಪೇಟೆ ತಾಲೂಕಿನ ಶಿವಪುರ ಗ್ರಾಮದಲ್ಲಿ ವರದಿಯಾಗಿದೆ. ದಿನಾಂಕ 10-4-2018 ರಂದು ಮನೋಜ್ ಕುಮಾರ್ ಎಂಬುವವರು ತನ್ನ ಮಗ ಅಭಿಷೇಕ್ ನೊಂದಿಗೆ ಮೋಟಾರು ಸೈಕಲಿನಲ್ಲಿ ಸೋಮವಾರಪೇಟೆ ನಗರಕ್ಕೆ ಹೋಗುತ್ತಿರುವಾಗ ಶಿವಪುರ ಗ್ರಾಮದ ಕಾವಾಡಿಕಟ್ಟೆ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಪಿಕ್ ಅಪ್ ಜೀಪನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಇಬ್ಬರು ಕೆಳಗೆ ಬಿದ್ದು ಗಾಯಗಳಾಗಿದ್ದು ಈ ಬಗ್ಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಮೇಲೆ ಹಲ್ಲೆಗೆ ಯತ್ನ

ದಿನಾಂಕ 10-4-2018 ರಂದು ತಾಳತ್ ಮನೆಯ ನಿವಾಸಿ ಅಜಿತ್ ಕುಮಾರ್ ಎಂಬುವವರು ಮಡಿಕೇರಿ ನಗರದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಪ್ರಮೋದ್ ಮತ್ತು ಇತರರು ದಾರಿ ತಡೆದು ಹಲ್ಲೆ ಮಾಡಲು ಪ್ರಯತ್ನಿಸಿದ್ದು ಈ ಬಗ್ಗೆ ಅಜಿತ್ ಕುಮಾರ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

ದಿನಾಂಕ 8-4-2018 ರಂದು ಸುಳ್ಯ ತಾಲೂಕಿನ ಕೂತುಕುಂಜ ಗ್ರಾಮದ ನಿವಾಸಿಯಾದ ದೇವಪ್ಪನಾಯ್ಕ ಎಂಬುವವರು ಬೆಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಸುಳ್ಯಕ್ಕೆ ಕಾರಿನಲ್ಲಿ ಸಂಸಾರದವರೊಂದಿಗೆ ಹೋಗುತ್ತಿರುವಾಗ ಸಂಪಾಜೆ ಗ್ರಾಮದ ದೇವರಕೊಲ್ಲಿ ಎಂಬಲ್ಲಿಗೆ ತಲುಪುವಾಗ ಎದುರುಗಡೆಯಿಂದ ಬರುತ್ತಿದ್ದ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ದೇವಪ್ಪನಾಯ್ಕ, ಅವರ ಪತ್ನಿ ಮತ್ತು ಮಗನಿಗೆ ಗಾಯವಾಗಿದ್ದು, ಸದರಿಯವರು ಮಂಗಳೂರಿನ  ಎ. ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published.