Crime News

ಮನೆ ಕೆಲಸದಾಕೆಯಿಂದ ಚಿನ್ನಾಭರಣ ಕಳವು:

ಮಡಿಕೇರಿ ನಗರದ ರಾಣಿಪೇಟೆ ನಿವಾಸಿ ಕೆ.ಟಿ. ಸುಬ್ಬಯ್ಯನವರ ಮನೆಯಲ್ಲಿ ಶ್ರೀಮತಿ ಯಶೋಧ ಎಂಬ ಮಹಿಳೆ ಮನೆ ಕೆಲಸಕ್ಕೆ ಬರುತ್ತಿದ್ದು, ದಿನಾಂಕ 31-10-2018 ರಂದು ಶ್ರೀಮತಿ ಯಶೋಧರವರು 12-30 ಗಂಟೆಯಿಂದ 2-30 ಗಂಟೆಯವರೆಗೆ ಕೆಲಸ ಮಾಡಿದ್ದು ಮನೆಯ ಸ್ಟೀಲ್ ಕೆಬಿನೆಟ್‍ನಲ್ಲಿಟ್ಟಿದ್ದ ಸುಮಾರು 30 ಪವನ್ ಚಿನ್ನಾಭರಣ ಮತ್ತು 3 ಲಕ್ಷ ಬೆಲೆಬಾಳುವ ವಜ್ರದ ಆಭರಣಗಳನ್ನು ಸದರಿ ಯಶೋಧರವರು ಕಳ್ಳತನ ಮಾಡಿಕೊಂಡು ಹೋಗುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗಂಡನಿಂದ ಪತ್ನಿಗೆ ಕಿರುಕುಳ:

ವಿರಾಜಪೇಟೆ ತಾಲೋಕು ಕೊಂಡಂಗೇರಿ ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಬೀಬಿ ಗೌಸಿಯಾ ರವರು 26-11-2017 ರಂದು ಕೆ.ಆರ್. ನಗರದ ನಿವಾಸಿ ಕಲೀಂ ಬಾಷಾರವರೊಂದಿಗೆ ಮದುವೆಯಾಗಿ ಕೆಲವು ತಿಂಗಳುಗಳ ನಂತರ ಸದರಿ ಕಲೀಂ ಬಾಷಾ ಅವರ ಸಹೋದರ ಸಿರಾಜ್ ಬಾಷಾ ಮತ್ತು ಅತ್ತೆ ಫಾಮಿದ ಸೇರಿಕೊಂಡು ಮಾನಸಿಕ ಹಿಂಸೆ ನೀಡುತ್ತಿದ್ದುದರಿಂದ ಸಿದ್ದಾಪುರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಅವರನ್ನು ಕರೆಸಿ ತಿಳುವಳಿಕೆ ನೀಡಿ ಕಳುಹಿಸಿದ್ದು ಕೆಲವು ಸಮಯಗಳ ನಂತರ ಪುನ: ಸದರಿ ಕಲೀಂ ಬಾಷಾ ಮತ್ತು ಮನೆಯವರು ಕಿರುಕುಳ ನೀಡಲು ಆರಂಭಿಸಿದ್ದು, ದಿನಾಂಕ 8-10-2018 ರಂದು ಸದರಿ ಕಲೀಂ ಬಾಷಾ ರವರು ಪತ್ನಿ ಶ್ರೀಮತಿ ಬೀಬಿ ಗೌಸಿಯಾರವರ ತಂದೆ ಮನೆಗೆ ಬಂದು ಗೌಸಿಯಾರವರ 19 ಗ್ರಾಮ ತೂಕದ ಚಿನ್ನದ ಮಂಗಳ ಸೂತ್ರವನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಶ್ರೀಮತಿ ಬೀಬಿ ಗೌಸಿಯಾರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ನಾಪೋಕ್ಲು ಪೊಲೀಸ್ ಠಾಣಾ ಸರಹದ್ದಿನ ನರಿಯಂದಡ ಗ್ರಾಮದ ನಿವಾಸಿ ಶ್ರೀಮತಿ ಪಣಿಎರವರ ಚಿಟ್ಟೆ ಎಂಬವರ ಪತಿ ಮಣಿ ದಿನಾಂಕ 31-10-2018 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಪತಿಯ ಕಿರುಕುಳ ಪತ್ನಿ ಆತ್ಮಹತ್ಯೆ:

ಹೆಚ್.ಆರ್. ಮಣಿ ಎಂಬವರು ವಿರಾಜಪೇಟೆ ತಾಲೋಕು ಮಾಯಮುಡಿ ಗ್ರಾಮದಲ್ಲಿ ವಾಸವಾಗಿದ್ದು ಅವರ ಮಗಳಾದ ಅನಿತಾ ಎಂಬವರನ್ನು ಗೋಣಿಕೊಪ್ಪದ ಕಿರಣ ಎಂಬವರೊಂದಿಗೆ ಮದುವೆ ಮಾಡಿಕೊಟ್ಟಿದ್ದು ಇತ್ತೀಚೆಗೆ ಆತ ಪತ್ನಿ ಅನಿತಾಳಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದು ಇದರಿಂದ ನಮನೊಂದ ಅನಿತಾ ದಿನಾಂಕ 31-10-2018 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಹೆಚ್‍.ಆರ್. ಮಣಿಯವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೈಕ್ ಅಪಾಘಾತ:

ಮೈಸೂರಿನ ವಿಜಯನಗರದಲ್ಲಿ ವಾಸವಾಗಿರುವ ಹೇಮಚಂದ್ರ ಎಂಬವರು ದಿನಾಂಕ 31-10-2018 ರಂದು ಸ್ನೇಹಿತರಾದ ದ್ರುವ ಮತ್ತು ರೋಷನ್‍ರವರೊಂದಿಗೆ ಮೋಟಾರ್ ಸೈಕಲಿನಲ್ಲಿ ಕುಶಾಲನಗರದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದಾಗ ಬೈಕನ್ನು ಸವಾರಿ ಮಾಡುತ್ತಿದ್ದ ರೋಷನ್‍ರವರು ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಾಲನೆ ಮಾಡಿದ ಪರಿಣಾಮ ಮೋಟಾರ್ ಸೈಕಲ್ ನಿಯಂತ್ರಣ ಕಳೆದುಕೊಂಡು ರಸ್ತೆಮೇಲೆ ಬಿದ್ದು, ಬೈಕಿನಲ್ಲಿದ್ದ ಮೂವರಿಗೂ ಗಾಯಗಳಾಗಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್-ಸ್ಕೂಟರ್ ಮುಖಾಮುಖಿ ದಿಕ್ಕಿ:

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮಲ್ಲೇನಹಳ್ಳಿ ಗ್ರಾಮದ ನಿವಾಸಿ ಅಬ್ದುಲ್ ರಜಾಕ್ ರವರು ದಿನಾಂಕ 1-11-2018 ರಂದು ತನ್ನ ಸ್ನೇಹಿತ ಸೂಫಿಯಾನ್ ನೊಂದಿಗೆ ಮೋಟಾರ್ ಸೈಕಲಿನಲ್ಲಿ ಕುಶಾಲನಗರದಿಂದ ಕೂಡಿಗೆ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಸ್ಕೂಟರನ್ನು ಅದರ ಸವಾರ ವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದವರು ಹಾಗು ಸ್ಕೂಟರಿನ್ನು ಚಲಾಯಿಸಿಕೊಂಡು ಬಂದ ವೀರಭದ್ರಪ್ಪನವರಿಗೂ ಗಾಯಗಳಾಗಿದ್ದು, ಈ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.