Crime News

ವ್ಯಕ್ತಿ ಆತ್ಮಹತ್ಯೆ

ದಿನಾಂಕ 02/11/2018ರಂದು ಕುಶಾಲನಗರ ಬಳಿಯ ಗೋಪಾಲ ಸರ್ಕಲ್ ನಿವಾಸಿ ಪ್ರಕಾಶ್‌ ಎಂಬವರು ಯಾವುದೋ ಕ್ರಿಮಿನಾಶಕ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ. ಮೃತ ಪ್ರಕಾಶ್‌ರವರು ಕೆಲವು ಗ್ಯಾಸ್ಟ್ರಿಕ್ ಕಾಯಿಲೆಯಿಂದ ಬಳಲುತ್ತಿದ್ದು ವಿಪರೀತ ಹೊಟ್ಟೆನೋವಿನ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವಂಚನೆ ಪ್ರಕರಣ

ದಿನಾಂಕ 03/11/2018ರಂದು ಬೆಂಗಳೂರಿನ ಬನಶಂಕರಿ ನಿವಾಸಿ ಶಿವಲಿಂಗಯ್ಯ ಎಂಬವರು ಕುಶಾಲನಗರ ಬಳಿಯ ಕೂಡ್ಲೂರಿನಲ್ಲಿರುವ ಅವರ ನಿವೇಶನದ ನವೀಕರಣಕ್ಕಾಗಿ ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದಿದ್ದ ಸಮಯದಲ್ಲಿ ಓರ್ವ ಗಿರೀಶ್‌ ಎಂಬಾತನು ತಾನೇ ನಿವೇಶನ ನವೀಕರಣ ಅಧಿಕಾರಿ ಎಂಬುದಾಗಿ ನಂಬಿಸಿ ಅಸ್ಲಾಂ ಭಾಯ್ ಎಂಬಾತನ ಸಹಕಾರದೊಂದಿಗೆ ನಿವೇಶನದ ಮಂಜೂರಾತಿ ಶುಲ್ಕ ಎಂಬುದಾಗಿ ಶಿವಲಿಂಗಯ್ಯನವರ ಬಳಿಯಿಂದ ರೂ.1,01,000/- ಹಣವನ್ನು ಪಡೆದುಕೊಂಡಿದ್ದು ನಂತರ ಶಿವಲಿಂಗಯ್ಯನವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಚಾರಿಸಿದಾಗ ಆ ಹೆಸರಿನ ಯಾವುದೇ ನೌಕರರು ಇಲ್ಲವೆಂದು ತಿಳಿದು ಬಂದಿದ್ದು ಗಿರೀಶ್‌ ಮತ್ತು ಅಸ್ಲಾಂ ಭಾಯ್ ಎಂಬವರು ತನಗೆ ಹಣ ಪಡೆದುಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬಂದೂಕು ಕಳವು ಪ್ರಕರಣ

ಗೋಣಿಕೊಪ್ಪಲು ನಿವಾಸಿ ಕೊಟ್ಟಂಗಡ ವಿಜು ದೇವಯ್ಯ ಎಂಬವರಿಗೆ ಸೇರಿದ ಕುಟ್ಟ ಬಳಿಯ ಕೋತೂರಿನಲ್ಲಿರುವ ಮನೆಗೆ ದಿನಾಂಕ 28/10/2018 ರಿಂದ 03/11/2018ರ ನಡುವೆ ಯಾರೋ ಕಳ್ಳರು ಮನೆಯ ಬಾಗಿಲನ್ನು ಮೀಟಿ ಪ್ರವೇಶಿಸಿ ಮನೆಯೊಳಗಿದ್ದ ಸುಮಾರು ರೂ.16,000/- ಮೌಲ್ಯದ ಒಂದು ಎಸ್‌ಬಿಬಿಎಲ್ ಬಂದೂಕು ಹಾಗೂ ಎರಡು ತೋಟಾಗಳನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಟ್ಟ ಪೊಲೀಸರು ಪ್ರಕರಣದ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ