Crime News

ಓಮ್ನಿ – ಬಸ್ಸು ಮುಖಾಮುಖಿ:

ಓಮ್ನಿ ವ್ಯಾನಿಗೆ ಬಸ್ಸು ಡಿಕ್ಕಿಯಾಗಿ ಇಬ್ಬರು ವ್ಯಕ್ತಿಗಳು ಗಾಯಗೊಂಡ ಘಟನೆ ವಿರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದಲ್ಲಿ ನಡೆದಿದೆ. ದಿನಾಂಕ 18-11-2018 ರಂದು ಕೆದಮುಳ್ಳೂರು ಗ್ರಾಮದ ಹೆಚ್.ಬಿ. ಯೋಗೇಶ್‍ರವರು ತಮ್ಮ ಸ್ನೇಹಿತನೊಂದಿಗೆ ಹೆಗ್ಗಳ ಗ್ರಾಮದ ಕಡೆಗೆ ವ್ಯಾನಿನಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಬಸ್ಸನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಓಮ್ನಿ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ಓಮ್ನಿ ವ್ಯಾನಿನಲ್ಲಿದ್ದ ಹೆಚ್‍.ಬಿ. ಯೋಗೇಶ್ ಹಾಗು ಮನು ಎಂಬವರು ಗಾಯಗೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯ ದಾರಿ ತಡೆದು ಕೊಲೆಗೆ ಯತ್ನ:

ದಿನಾಂಕ 17-11-2018 ರಂದು ರಾತ್ರಿ 9-00 ಗಂಟೆಗೆ ಮಡಿಕೇರಿ ತಾಲೋಕು ಬೇಂಗೂರು ಗ್ರಾಮದ ನಿವಾಸಿ ಅಜೀತ್ ಪೆಮ್ಮಯ್ಯ ಎಂಬವರು ತನ್ನ ಮೋಟಾರ್‍ ಸೈಕಲ್‍ನಲ್ಲಿ ತಮ್ಮ ಮನೆಯ ಕಡೆಗೆ ಹೋಗುತ್ತಿದ್ದಾಗ ಬೇಂಗೂರು ಗ್ರಾಮದ ಪೊಡನೋಳಂಡ ಚಿಣ್ಣಪ್ಪ ಎಂಬವರ ತೋಟದ ಬಳಿ ತಲುಪುವಾಗ್ಗೆ ಯಾರೋ ಹಿಂದಿನಿಂದ ದೊಣ್ಣೆಯಿಂದ ತಲೆಗೆ ಹೊಡೆದಂತಾಗಿ ಅವರು ಕೆಳಗೆ ಬಿದ್ದು ಹೋಗಿದ್ದು ಆ ಸಮಯದಲ್ಲಿ ಮಲೆಯಾಳಂ ಭಾಷೆಯಲ್ಲಿ ಅವರನ್ನು ಹಿಡಿದುಕೊಳ್ಳಿ ಎಂದು ಹೇಳುತ್ತಿರುವುದು ಕೇಳಿಸಿದ್ದು, ಇಬ್ಬರು ವ್ಯಕ್ತಿಗಳು ಅಜಿತ್ ಪೆಮ್ಮಯ್ಯನವರನ್ನು ಹಿಡಿದುಕೊಂಡು ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ನಡೆಸಿ ಚಾಪಾ ಕಾಗದಕ್ಕೆ ಸಹಿ ಹಾಕುವಂತೆ ಬೆದರಿಸಿರುವುದಾಗಿ ಮತ್ತು ಪಿಸ್ತೂಲಿನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸ್ಕೂಟರಿಗೆ ಜೀಪು ಡಿಕ್ಕಿ:

ದಿನಾಂಕ 17-11-2018 ರಂದು ಕಡಗದಾಳು ಗ್ರಾಮದ ನಿವಾಸಿ ನಿಶಾಂತ್ ಎ. ಎಂಬವರು ಸ್ಕೂಟರಿನಲ್ಲಿ ಮಡಿಕೇರಿಯಿಂದ ಕಡಗದಾಳು ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಮಡಿಕೇರಿ ನಗರದ ಅಶೋಕಪುರ ಬಳಿ ರಸ್ತೆಯಲ್ಲಿ ಕೆಎ-12-ಜಿ-726 ಜೀಪಿನ ಚಾಲಕ ಜೀಪನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನಿಶಾಂತ್ ರವರು ಚಾಲನೆಮಾಡುತ್ತಿದ್ದ ಸ್ಕೂಟರಿನ ಹಿಂಬದಿಗೆ ಡಿಕ್ಕಿಪಡಿಸಿ ಪರಿಣಾಮವಾಗಿ ನಿಶಾಂತ್ ರವರು ಗಾಯಗೊಂಡು ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಈ ಸಂಬಂಧ ಮಡಿಕೇರಿ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ಸುಂಟಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಕಾಂಡನಕೊಲ್ಲಿ ಗ್ರಾಮದ ನಿವಾಸಿ ನಾರಾಯಣ ಎಂಬವರು ಜೀವನಲ್ಲಿ ಜಿಗುಪ್ಸೆಗೊಂಡು ದಿನಾಂಕ 18-11-2018 ರಂದು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ಮಗ ಪಿ.ಎನ್. ಬಾಲಕೃಷ್ಣರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.