Crime News

 ಇಲಾಖೆಗೆಳ ಸಮನ್ವಯತೆಯಿಂದ ಮಹಿಳಾ ಮತ್ತು 

ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಬಹುದ -ಲಕ್ಷ್ಮಿಪ್ರಿಯಾ,ಸಿಇಓ

ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿದರೆ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟಬಹುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ಲಕ್ಷ್ಮಿ ಪ್ರಿಯಾರವರು ಅಭಿಪ್ರಾಯ ಪಟ್ಟರು. 

                     ಅವರು ಮಡಿಕೇರಿ ನಗರದ ಜಿಲ್ಲಾ ಪೊಲೀಸ್ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯ ವತಿಯಿಂದ  ಮಹಿಳೆಯರ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ಬಾಲ್ಯ ವಿವಾಹ, ಬಾಲ ಕಾರ್ಮಿಕರ ಕಾಯ್ದೆ, ಆಂತರಿಕ ದೂರು ಸಮಿತಿ, ಕೌಟುಂಬಿಕ ಆಪ್ತ ಸಮಾಲೋಚನೆ ಮುಂತಾದ ವಿಷಯಗಳ ಬಗ್ಗೆ ಜಿಲ್ಲಾ ಪೊಲೀಸ್ ಸಿಬ್ಬಂದಿಗಳಿಗೆ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಎಲ್ಲಾ ರೀತಿಯ ಶಿಕ್ಷಣ, ಜಾಗೃತಿ, ಕಾನೂನುಗಳು ಇದ್ದರೂ ಕೂಡ ಇನ್ನೂ ಸಹ ಕೆಲವೆಡೆ ಬಾಲ್ಯ ವಿವಾಹ ನಡೆಯುತ್ತಿರುವುದು ವಿಷಾದಕರ ಎಂದ ಅವರು ಇಂತಹ ಸಾಮಾಜಿಕ ಪಿಡುಗುಗಳನ್ನು ತಡೆಗಟ್ಟಲು ಎಲ್ಲಾ ಇಲಾಖೆಗಳು ಬೇರೆಯವರ ಮೇಲೆ ಜವಾಬ್ದಾರಿಯನ್ನು ಹೊರಿಸುವ ಬದಲು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ಕರೆ ನೀಡಿದರು.

                  ಕಾರ್ಯಾಗಾರದ ಪ್ರಾಸ್ತಾವಿಕ ಭಾಷಣ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪೆನ್ನೇಕರ್‌ ರವರು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ವಿವಿಧ ಇಲಾಖೆಗಳು ಹೇಗೆ ಸಮನ್ವಯೆತೆಯಿಂದ ಕಾರ್ಯ ನಿರ್ವಹಿಸಬೇಕು, ಇಂತಹ ಸಾಮಾಜಿಕ ಪಿಡುಗುಗಳಿಗೆ ಸಂಬಂಧಿಸಿದಂತೆ ಕಾನೂನಿನ ಬಗ್ಗೆ ಅವುಗಳ ಹೊಸ ತಿದ್ದುಪಡಿಗಳ ಬಗ್ಗೆ ಪೊಲೀಸ್‌ ಸಿಬ್ಬಂದಿಗಳಿಗೆ ಸಂಪೂರ್ಣ ಮಾಹಿತಿ ನೀಡುವ ಸಲುವಾಗಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದ್ದು ಇದರ ಮೂಲಕ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪರಿಣಾಮಕಾರಿಯಾದ ಕಾರ್ಯ ವಿಧಾನವನ್ನು ಕಂಡುಕೊಳ್ಳುವ ಆಶಯವನ್ನು ವ್ಯಕ್ತಪಡಿಸಿದರು.

                  ಕಾರ್ಯಾಗಾರದ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ನೂರುನ್ನೀಸಾರವರು ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಹಾಗೂ ಮಹಿಳೆಯರ ಮತ್ತು ಮಕ್ಕಳ ಮೇಲಿನ ಅಪರಾಧ ಕುರಿತಂತೆ ದಂಡ ವಿಧಿ (ತಿದ್ದುಪಡಿ) ಅಧಿನಿಯಮ ಸುಗ್ರೀವಾಜ್ಞೆ – 2018ರ ಬಗ್ಗೆ ವಿಶೇಷ ಉಪನ್ಯಾಸ ನೀಡುತ್ತಾ ಮಹಿಳೆಯರ ಮತ್ತು ಮಕ್ಕಳ ಮೇಲಿನ ಯಾವುದೇ ಅಪರಾಧ ಕೃತ್ಯಗಳು ದಾಖಲಾದಲ್ಲಿ ಪ್ರಥಮ ವರ್ತಮಾನ ವರದಿ ದಾಖಲಿಸುವಲ್ಲಿಂದ ಹಿಡಿದು ಪ್ರಕರಣವು ನ್ಯಾಯಾಯಲಯದಲ್ಲಿ ಇತ್ಯರ್ಥವಾಗುವವರೆಗೆ ಪೊಲೀಸ್ ಇಲಾಖೆಯ ಪಾತ್ರ ಅತ್ಯಂತ ಪ್ರಮುಖವಾಗಿರುತ್ತದೆ ಎಂದರಲ್ಲದೆ ವಿವಿಧ ಪ್ರಕರಣಗಳ ಸಂತ್ರಸ್ತ ಮಹಿಳೆಯರಿಗೆ ಸಿಗಬೇಕಾದ ಪರಿಹಾರ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿದರು.

                    ಕಾರ್ಯಾಗಾರದಲ್ಲಿ ಜಿಲ್ಲಾ ಆಂತರಿಕ ದೂರು ಸಮಿತಿ ಅಧ್ಯಕ್ಷರು ಹಾಗೂ ವಕೀಲರಾದ ಕೆ.ಎಂ.ಮೀನಾಕುಮಾರಿ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯ ಅಬ್ದುಲ್ ಲತೀಫ್, ವಿಶ್ವಸಂಸ್ಥೆಯ ಯುನಿಸೆಫ್ ವಿಭಾಗದ ಜಿಲ್ಲಾ ಸಮಾಲೋಚಕರಾದ ಪ್ರಭಾತ್ ಕಲ್‌ಕುರ, ಜಿಲ್ಲಾ ಆಸ್ಪತ್ರೆಯ ಮನಃಶಾಸ್ತ್ರಜ್ಞರಾದ ಡಾ. ರಮೇಶ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಮಮ್ತಾಜ್, ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕ ನವೀನ್‌ ಗೌಡ, ಜಿಲ್ಲಾ ಕಾರ್ಮಿಕ ಯೋಜನಾ ನಿರ್ದೇಶಕರಾದ ಸಿರಾಜ್‌ ಅಹಮದ್ ಹಾಗೂ ಸುಂಟಿಕೊಪ್ಪ ಠಾಣೆಯ ಪಿಎಸ್‌ಐ ಎಸ್‌.ಎನ್.ಜಯರಾಂರವರು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.

 

ಹಲ್ಲೆ ಪ್ರಕರಣ

ದಿನಾಂಕ 03/12/2018ರಂದು ಕೆಎಸ್‌ಆರ್‌ಟಿಸಿ ಸಂಸ್ಥೆಯ ಮಡಿಕೇರಿ ಘಟಕದ ಬಸ್‌ ನಿರ್ವಾಹಕರಾದ ಯೋಗೇಂದ್ರ ಕಾಳಪ್ಪ ಬಡಿಗೇರಿ ಎಂಬವರು ಅವರಿಗೆ ನಿಗದಿಪಡಿಸಲಾದ ಬಸ್ಸಿನ ಚಾಲಕರೊಂದಿಗೆ ಕುಶಾಲನಗರದಿಂದ ಮಡಿಕೇರಿಗೆ ಹೋಗುತ್ತಿರುವಾಗ ಗುಡ್ಡೆಹೊಸೂರಿನಲ್ಲಿ ಮಡಿಕೇರಿಯ ಅಬ್ದುಲ್ ರಹಮಾನ್ ಮತ್ತು ಪ್ರಮೋದ್ ಎಂಬವರು ಬಸ್ಸನ್ನೇರಿದ್ದು ಇಬ್ಬರೂ ಅತೀವ ಪಾನಮತ್ತರಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ತೊಂದರೆ ನೀಡುತ್ತಿದ್ದು ಇದನ್ನು ಆಕ್ಷೇಪಿಸಿದ ಯೋಗೇಂದ್ರ ಕಾಳಪ್ಪರವರಿಗೆ ಅಶ್ಲೀಲ ಶಬ್ದಗಳಿಂದ ಬೈದಿದ್ದು ಮಡಿಕೇರಿ ನಗರದ ಆಸ್ಪತ್ರೆ ಬಳಿ ಬಸ್ಸನ್ನು ನಿಲ್ಲಿಸಿದಾಗ ಅಬ್ದುಲ್ ರಹಮಾನ್ ಮತ್ತು ಪ್ರಮೋದ್‌ರವರು ಬಸ್ಸಿನಿಂದ ಕೆಳಗೆ ಇಳಿದು ಕಲ್ಲಿನಿಂದ ಬಸ್ಸಿನ ಗಾಜಿಗೆ ಎಸೆದ ಪರಿಣಾಮ ಬಸ್ಸಿನಲ್ಲಿದ್ದ ಮಹದೇವ ಎಂಬ ಪ್ರಯಾಣಿಕರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 03/12/2018ರಂದು ಮಕ್ಕಂದೂರು ನಿವಾಸಿ ಕೆ.ಬಿ.ಮೋಹನ್ ಎಂಬವರು ಅವರ ಸ್ನೇಹಿತರೊಂದಿಗೆ ಮಡಿಕೇರಿ ನಗರದ ಬಸ್‌ ನಿಲ್ದಾಣ ಬಳಿಯ ಮಾರುತಿ ಬಾರಿನಲ್ಲಿ ಊಟ ಮಾಡುತ್ತಿರುವಾಗ ಅಲ್ಲಿಗೆ ಬಂದ ದೇಶಿಕ್, ಕುಶ ಮತ್ತು ಇತರರು ಸೇರಿಕೊಂಡು ಮೋಹನ್‌ರವರ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.