Crime News

ಜಾಗ ಖರೀದಿಯಲ್ಲಿ ವಂಚನೆ:

       ಮಡಿಕೇರಿ ನಗರ ಠಾಣಾ ಸರಹದ್ದಿನ ಬ್ರಾಹ್ಮಣರ ಬೀದಿಯಲ್ಲಿ ವಾಸವಾಗಿರುವ ಬಿ.ಆರ್. ರವಿಪ್ರಸಾದ್ ರವರು ಅದೇ ಬೀದಿಯಲ್ಲಿ ವಾಸವಾಗಿರುವ ಚಾಮಿ ಎಂಬವರಿಗೆ 14 ಸೆಂಟ್ಸ್ ಜಾಗವನ್ನು ಮಾರಾಟ ಮಾಡುವ ಸಂಬಂಧ ಒಪ್ಪಂದ ಪತ್ರವನ್ನು ಮಾಡಿ ಜಾಗದ ಹಣಕ್ಕೆ ಮುಂಗಡವಾಗಿ 2 ಲಕ್ಷ ಹಣವನ್ನು ಪಡೆದುಕೊಂಡು ಉಳಿದ ಹಣವನ್ನು ಬಿ.ಆರ್. ರವಿಪ್ರಸಾದ್ ರವರ ಬ್ಯಾಂಕ್ ಖಾತೆಗೆ ಆನ್ಲೈನ್ ಮೂಲಕ ಜಮಾಮಾಡುವುದಾಗಿ ತಿಳಿಸಿದ್ದು, ನಂತರ ಜಮಾಮಾಡಿದ ಹಣ ತಾಂತ್ರಿಕ ದೋಷದಿಂದ ಬ್ಯಾಂಕ್ಗೆ ಸಂದಾಯವಾಗಿಲ್ಲವೆಂದು ನಂಬಿಸಿ 14 ಸೆಂಟ್ ಜಾಗದ ಬದಲಿಗೆ 25.20 ಸೆಂಟ್ ಜಾಗವನ್ನು ಜಾಮಿಯವರ ಹೆಸರಿಗೆ ಆರೋಪಿಗಳಾದ ಚೇತನ್ ಹಾಗು ವೀಣಾ ರವರು ನೋಂದಣಿ ಮಾಡಿಸಿ ನಂಬಿಕೆ ದ್ರೋಹ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಡಿಗೆ ಹೋದವ್ಯಕ್ತಿ ಗುಂಡಿಗೆ ಬಲಿ:

ಕೇರಳಾ ರಾಜ್ಯದ ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡು ನಿವಾಸಿ ಜಾರ್ಜ್ ಎಂಬವರು ದಿನಾಂಕ 11-12-2018 ರಂದು ಸಂಜೆ ಅಶೋಕು ಮತ್ತು ಚಂದ್ರು ಎಂಬವರೊಂದಿಗೆ ಮೀನಂಚೇರಿ ಮುಂಡ್ರೋಟ್ ಅರಣ್ಯಕ್ಕೆ ಹೋಗಿದ್ದು ಆ ಸಂದರ್ಭದಲ್ಲಿ ಯಾರೋ ವ್ಯಕ್ತಿಗಳು ಸಿಡಿಸಿದ ಗುಂಡಿಗೆ ಬಲಿಯಾಗಿದ್ದು, ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹೊಟೇಲ್ ನಿಂದ ಕಳ್ಳತನ:

ವಿರಾಜಪೇಟೆ ನಗರ ಠಾಣೆ ವ್ಯಾಪ್ತಿಯ ಮೀನುಪೇಟೆಯಲ್ಲಿರುವ ಖಲೀದ್ ಎಂಬವರು ನಡೆಸುತ್ತಿದ್ದ ಹೋಟೇಲ್ ಗೆ ದಿನಾಂಕ 11-12-2018 ರಂದು ರಾತ್ರಿ ಯಾರೋ ಕಳ್ಳರು ನುಗ್ಗಿ 2600 ರೂ ನಗದು ಹಾಗು 2000 ರೂ ಮೌಲ್ಯದ ಒಂದು ಉಂಗುರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಮಡಿಕೇರಿ ನಗರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ಮಹಿಳೆ ಆತ್ಮಹತ್ಯೆ:

ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕಡಂಗ ಗ್ರಾಮದ ನಿವಾಸಿ ಎ.ಕೆ. ಗಿರಿಜಾ ಎಂಬವರ ಮಗಳು 37 ವರ್ಷದ ಈಶ್ವರಿ ಎಂಬವರು ದಿನಾಂಕ 11-12-2018 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವಾಲಯಕ್ಕೆ ನುಗ್ಗಿ ಬಂಡಾರ ಕಳವು:

ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕುಂಜಿಲಗೇರಿ ಗ್ರಾಮದಲ್ಲಿರುವ ಶ್ರೀ ಮಹಾ ವಿಷ್ಣು ದೇವಾಲಯಕ್ಕೆ ದಿನಾಂಕ 11-12-2018 ರಂದು ನುಗ್ಗಿದ ಕಳ್ಳರು ದೇವಾಲಯದ ಗರ್ಭಗುಡಿಯ ಬಾಗಿಲನ್ನು ಮುರಿದು ಗರ್ಭಗುಡಿಯಲ್ಲಿದ್ದ ಸ್ಟೀಲ್ ಬಂಡಾರವನ್ನು ಕಳ್ಳತನಮಾಡಿಕೊಂಡು ಹೋಗಿದ್ದು, ಅದರಲ್ಲಿ 5 ರಿಂದ 6 ಸಾವಿರ ಹಣ ಇದ್ದಿರಬಹುದೆಂದು ದೇವಸ್ಥಾನದ ಅಧ್ಯಕ್ಟರಾದ ಎಂ.ಎಸ್. ಸೋಮಣ್ಣನವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನೆಗೆ ನುಗ್ಗಿ ಚಿನ್ನಾಭರಣ ಕಳವು:

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಬಾಳುಗೋಡು ಗ್ರಾಮದ ನಿವಾಸಿ ಮಾಚೆಟ್ಟೀರ ಎಸ್.ನಾಚಪ್ಪ ಎಂಬವರ ಮನೆಯ ಸ್ನಾನದ ಕೋಣೆಯ ಮೇಲ್ಬಾಗದ ಶೀಟುಗಳನ್ನು ತೆಗೆದು ಅದರ ಮೂಲಕ ಮನೆಯಳಗೆ ನುಗ್ಗಿದ ಕಳ್ಳರು 40,000/- ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಹಿಳೆಯ ಮಾನಭಂಗಕ್ಕೆ ಯತ್ನ:

ಪೊನ್ನಂಪೇಟೆ ಠಾಣ ಸರಹದ್ದಿನ ನಿಟ್ಟೂರು ಗ್ರಾಮದ ನಿವಾಸಿ ಶ್ರೀ ಮತಿ ಪಣಿಎರವರ ಮೀನ ಎಂಬವರು ದಿನಾಂಕ 12-12-2018 ರಂದು ಕೂಲಿ ಕೆಲಸಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಸಂತೋಷ್ ಎಂಬವರು ಕಾರಿನಲ್ಲಿ ಬಂದು ಶ್ರೀಮತಿ ಪಣಿಎರವರ ಮೀನ ರವರ ಕೈಹಿಡಿದು ಪಕ್ಕದ ತೋಟಕ್ಕೆ ಎಳೆದುಕೊಂಡು ಹೋಗಿ ಮಾನಭಂಗಕ್ಕೆ ಯತ್ನಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.