Crime News

ಮನೆಗೆ ನುಗ್ಗಿ ನಗದು ಕಳವು:

ವಿರಾಜಪೇಟೆ ನಗರದ ಪಂಜರಪೇಟೆಯಲ್ಲಿ ವಾಸವಾಗಿರುವ ಶಾಹುಲ್ ಮನ್ನಾರವರು ತಮ್ಮ ಕುಟುಂಬದವರೊಂದಿಗೆ ದಿನಾಂಕ 21-12-2018 ರಂದು ತಮ್ಮ ಸಂಬಂಧಿಕರ ಮದುವೆಗೆ ಬೆಂಗಳೂರಿಗೆ ಹೋಗಿದ್ದು ಇದೇ ಸಂದರ್ಭದಲ್ಲಿ ದಿನಾಂಕ 22-12-2018 ರ ಅಪರಾಹ್ನ 3-30 ಗಂಟೆಯಿಂದ 23-12-2018ರ ರಾತ್ರಿ 11-00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಮನೆಯೊಳಗೆ ನುಗ್ಗಿ ಗಾಡ್ರೇಜ್ ನ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಅದರಿಂದ ರೂ.17,000/- ಗಳನ್ನು ಹಾಗು ಇನ್ನೊಂದು ಕೋಣೆಯ ಗಾಡ್ರೇಜ್ನಲ್ಲಿಟ್ಟಿದ್ದ 7,000/- ರೂ. ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಶಾಹುಲ್ ಮನ್ನಾರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜು, ಪ್ರಕರಣ ದಾಖಲು:

ದಿನಾಂಕ 24-12-2018 ರಂದು ರಾತ್ರಿ 8-00 ಗಂಟೆಯ ಸಮಯದಲ್ಲಿ ವಿರಾಜಪೇಟೆ ನಗರ ಠಾಣಾ ವ್ಯಾಪ್ತಿಯ ತೆಲುಗರ ಬೀದಿಯಲ್ಲಿರುವ ಪುಷ್ಪರಾಜ್ ಎಂಬವರಿಗೆ ಸೇರಿದ ಕಟ್ಟಡದಲ್ಲಿರುವ ಮಂಡ್ಯ ಮೆಸ್ನ ಹಿಂದಿನ ಜಾಗದಲ್ಲಿ ಕೆಲವು ಜನರು ಅಕ್ರಮವಾಗಿ ಹಣವನ್ನು ಪಣವನ್ನಾಗಿಟ್ಟು ಜೂಜಾಟವಾಡುತ್ತಿದ್ದುದನ್ನು ವಿರಾಜಪೇಟೆ ನಗರ ಠಾಣಾಧಿಕಾರಿ ಆರ್. ಸಂತೋಷ್ ಕಶ್ಯಪ್ ರವರು ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

ಮೋಟಾರ್ ಸೈಕಲಿಗೆ ವ್ಯಾನ್ ಡಿಕ್ಕಿ:

ದಿನಾಂಕ 23-12-2018 ರಂದು ತಾರಿಕಟ್ಟೆ ಕಳ್ಳಬೇಟೆ ಶಿಭಿರದಲ್ಲಿ ವಾಚರ್ ಆಗಿ ಕೆಲಸ ನಿರ್ವಹಿಸುತ್ತಿರುವ ರಾಜೇಶ್ರ ಮತ್ತು ಕಿಶೋರ್ ಎಂಬವರು ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ವಾಪಾಸು ಶಿಭಿರಕ್ಕೆ ಹೋಗುತ್ತಿದ್ದಾಗ ದೇವರಪುರ ಕಲ್ಲಳ್ಳ ಜಂಕ್ಷನ್ ಬಳಿ ತಲುಪಿದಾಗ ಎದುರುಗಡೆಯಿಂದ ಕೆಎ-04-ಎಂಡಿ-0523ರ ಮಾರುತಿ ವ್ಯಾನನ್ನು ಅದರ ಚಾಲಕ ಅತೀ ವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ್ ಸೈಕಲಿಗೆ ಡಿಕ್ಕಿಪಡಿಸಿದ ಪರಿಣಾಮ ಮೋಟಾರ್ ಸೈಕಲ್ಲಿದ್ದ ರಾಜೇಶ್ ಮತ್ತು ಕಿಶೋರ್ ರವರಿಗೆ ಗಾಯಗಳಾಗಿದ್ದು, ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಫಿ ತೋಟಕ್ಕೆ ಅಕ್ರಮ ಪ್ರವೇಶ:

ಶ್ರೀಮಂಗಲ ಪೊಲೀಸ್ ಠಾಣಾ ಸರಹದ್ದಿನ ಹರಿಹರ ಗ್ರಾಮದ ನಿವಾಸಿ ಬಾಚೀರ ಎಂ. ಉತ್ತಯ್ಯ ಎಂಬವರಿಗೆ ಸೇರಿದ ಕಾಫಿ ತೋಟಕ್ಕೆ ದಿನಾಂಕ 22-12-2018 ರಂದು ಅದೇ ಊರಿನ ತೀತೀರ ಉತ್ತಯ್ಯ ಮತ್ತು ಲಿಲ್ಲಿ ಎಂಬವರು ಅಕ್ರಮ ಪ್ರವೇಶ ಮಾಡಿದ್ದು ಅಲ್ಲದೆ ಸುಮಾರು 30 ಹಸಿ ಕಾಫಿಯನ್ನು ಕುಯ್ದು ಸಾಗಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ:

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕೂಡುಮಂಗಳೂರು ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಪ್ರೀತಿ ಡಿ.ಪಿ. ರವರ ಪತಿ ಷಣ್ಮುಖಯ್ಯ ಎಂಬವರು ದಿನಾಂಕ 30-8-2018 ರಂದು ಮನೆಯಿಂದ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದಾರೆಂದು ಅವರ ಪತ್ನಿ ಶ್ರೀಮತಿ ಪ್ರೀತಿರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.