Crime News

ಅಪಘಾತ ಪ್ರಕರಣ

             ದಿನಾಂಕ 04-01-2019 ರಂದು ಬೆಂಗಳೂರಿನ ನಿವಾಸಿಯಾದ ಸಾಯಿ ನರೇಶ್ ಎಂಬುವವರು ತನ್ನ ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಕೊಡಗಿಗೆ ಪ್ರವಾಸಕ್ಕೆಂದು ಕಾರಿನಲ್ಲಿ ಬಂದಿದ್ದು, ಸಿದ್ದಾಪುರದಿಂದ ಮಡಿಕೇರಿಗೆ ಬರುತ್ತಿರುವಾಗ ಕಡಗದಾಳು ಎಂಬಲ್ಲಿಗೆ ತಲುಪುವಾಗ ಚಾಲಕ ಉದಯ್ ರವರು ಅಜಾಗರೂಕತೆಯಿಂದ ಚಾಲನೆ ಮಾಡಿ ಮರಕ್ಕೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

           ಮಡಿಕೇರಿ ತಾಲೋಕಿನ ಕರಿಕೆ ಗ್ರಾಮದ ನಿವಾಸಿಯಾದ ನಂಜುಂಡ ಎಂಬುವವರು ತಮ್ಮ ಮನೆಯ ಪಕ್ಕದ ಮನೆಯಲ್ಲಿ ಅಡಿಕೆ ಮತ್ತು ಒಳ್ಳೆಮೆಣಸನ್ನು ದಾಸ್ತಾನು ಮಾಡಿಟ್ಟಿದ್ದಲ್ಲಿಂದ ದಿನಾಂಕ 19-12-2018 ರಂದು ಮತ್ತು 30-12-2018 ರಂದು ಹಂಚು ತೆಗೆದು ಒಳನುಗ್ಗಿ 45 ಕೆ ಜಿ ಅಡಿಕೆ ಮತ್ತು 38 ಕೆ ಜಿ ಒಳ್ಳೆಮೆಣಸನ್ನು ಕಳವು ಆಗಿರುವುದು ಕಂಡು ಬಂದು ನೀಡಿದ ದೂರಿನ ಮೇರೆಗೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬೈಕಿಗೆ ಕಾರು ಡಿಕ್ಕಿ

           ದಿನಾಂಕ 04-01-2019 ರಂದು ಮೈಸೂರು ಜಿಲ್ಲೆಯ ಬೈಲುಕೊಪ್ಪಲುವಿನ ನಿವಾಸಿ ಮಹಮ್ಮದ್ ಮುಷೀರ್ ಎಂಬುವವರು ತನ್ನ ಸ್ನೇಹಿತ ರಫಿಕ್ ರವರೊಂದಿಗೆ ಮಡಿಕೇರಿಗೆ ಹೋಗುತ್ತಿರವಾಗ ಸುಂಟಿಕೊಪ್ಪದ ಬಾಳೆಕಾಡು ಎಸ್ಟೇಟ್ ಬಳಿ ತಲುಪುವಾಗ ಎದುರುಡೆಯಿಂದ ಬರುತ್ತಿದ್ದ ಕಾರನ್ನು ಅದರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಡಿಕ್ಕಿಪಡಿಸಿದ ಪರಿಣಾಮ ಬೈಕಿನಲ್ಲಿದ್ದ ಇಬ್ಬರಿಗೂ ಗಾಯವಾಗಿದ್ದು ಈ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಪಘಾತ ಪ್ರಕರಣ

           ದಿನಾಂಕ 04-01-2019 ರಂದು ಸೋಮವಾರಪೇಟೆ ತಾಲೋಕಿನ ಚೌಡ್ಲು ಗ್ರಾಮದ ನಿವಾಸಿಯಾದ ಯೋಗೇಶ್ ಎಂಬುವವರು ಮೋಟಾರು ಸೈಕಲಿನಲ್ಲಿ ಸೋಮವಾರಪೇಟೆ ಮಡಿಕೇರಿ ರಸ್ತೆಯ ಹೊಸತೋಟ ಗ್ರಾಮದ ಗರಗಂದೂರು ಕಡೆಗೆ ಹೋಗುವ ರಸ್ತೆಯ ಹತ್ತಿರ ಹೋಗುತ್ತಿರುವಾಗ ಎದುರಿನಿಂದ ಬಂದ ಕಾರನ್ನು ಚಾಲಕ ಅಚಾಗರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿ ನಿಲ್ಲಿಸದೇ ಹೊರಟು ಹೋಗಿದ್ದು, ಗಾಯಗೊಂಡ ಯೋಗೇಶ್ ರವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

         ಮೈಸೂರು ಜಿಲ್ಲೆಯ ಬೈಲುಕುಪ್ಪೆ ಗ್ರಾಮದ ನಿವಾಸಿಯಾದ ಐಶಾ ನಮ್ರಿನ್ ಎಂಬುವರು ಕುಶಾಲನಗರದ ಬ್ಯಾಂಕ್ ಆಪ್ ಇಂಡಿಯಾದಲ್ಲಿ ಖಾತೆಯನ್ನು ಹೊಂದಿದ್ದು ದಿನಾಂಕ 03-01-2019 ರಂದು ಯಾರೋ ಒಬ್ಬ ವ್ಯಕ್ತಿ ಕರೆ ಮಾಡಿ ತಾನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು, ನಿಮ್ಮ ಎ.ಟಿ.ಎಂ. ನಂ ಬ್ಲಾಕ್ ಆಗಿದ್ದು ಮೊನ್ನೆ ದಿನ ನೀವು ನಿಮ್ಮ ಖಾತೆಗೆ ಹಣ ಜಮೆ ಮಾಡಿದ್ದೀರ, ಎ.ಟಿ.ಎಂ ನಂ ಬ್ಲಾಕ್ ಆಗಿರುವುದರಿಂದ ನಿಮ್ಮ ಮೊಬೈಲ್ ಗೆ ಒ.ಟಿ.ಪಿ ನಂಬರ್ ಬರುತ್ತದೆ ಅದನ್ನು ತಿಳಿಸುವಂತೆ ತಿಳಿಸಿದ ಮೇರೆಗೆ ತಿಳಿಸಿದ್ದು, ಸ್ವಲ್ಪ ಸಮಯದ ನಂತರ ಮೂರು ಸಲ ಹಣ ಡ್ರಾ ಆಗಿದ್ದು, ಒಟ್ಟು 22,887 ರೂ ಆಗಿರುತ್ತದೆ. ಈ ಬಗ್ಗೆ  ಐಶಾ ನಮ್ರಿನ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿಯ CEN ವಿಶೇಷ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಸಿಬಿಐ ಅಧಿಕಾರಿಗಳೆಂದು ನಂಬಿಸಿ ವಂಚನೆ, ಆರೋಪಿಗಳ ಬಂಧನ

             ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ವಂಚಿಸುತ್ತಿದ್ದ ನಾಲ್ವರನ್ನು ಕೊಡಗು ಜಿಲ್ಲಾ ಅಪರಾಧ ದಳದ ಪೊಲೀಸರು ಬಂದಿಸಿರುತ್ತಾರೆ. ಕುಶಾಲನಗರದ ಸಮ್ಮದ್, ಅನೀಸ್, ಸುಂಟಿಕೊಪ್ಪದ ರಾಶಿದ್, ದಕ್ಷಿಣ ಕನ್ನಡ ಜಿಲ್ಲೆ ಉಲ್ಲಾಳದ ಅಸ್ಕರ್ ಬಂಧಿತ ರೋಪಿಗಳು. ಆರೋಪಿಗಳಿಂದ 77,500 ರೂ ನಗದು ಹಾಗೂ 6.77 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

            ವಂಚನೆಗೊಳಗಾಗಿದ್ದ ವ್ಯಕ್ತಿ ಕಂಬಿಬಾಣೆಯ ನಿವಾಸಿ ಸಫ್ ವಾನ್ ಎಂಬುವವರು 2018 ನೇ ಅಕ್ಟೋಬರ್ ತಿಂಗಳಿನಲ್ಲಿ ರಾಶಿದ್ ಬಳಿ ಸಾಲ ಕೇಳಿದಾಗ 3,000 ರೂ ಹಣಕ್ಕೆ 10,000 ರೂ ಹಣ ಕೊಡಿಸುವುದಾಗಿ ಹೇಳಿದ ಮೇರೆಗೆ ದಿನಾಂಕ 24-10-2018 ರಂದು 30,000 ರೂ ಹಣ ಹೊಂದಿಸಿಕೊಂಡು ರಾಶಿದ್ ನನ್ನು ನಿಸರ್ಗ ಧಾಮದ ಬಳಿ ಭೇಟಿ ಮಾಡಿದಾಗ ಹಣ ಕೊಡುವವರು ಗುಡ್ಡೆಹೊಸೂರು ಹಾರಂಗಿ ರಸ್ತೆಯಲ್ಲಿ ಇದ್ದು ಅಲ್ಲಿಗೆ ಹೋಗುವಂತೆ ತಿಳಿಸಿದ ಮೇರೆಗೆ  ಸಫ್ ವಾನ್ ರವರು ಹೋದಾಗ ರಸ್ತೆಯ ಬದಿ ನಿಂತಿದ್ದ ವ್ಯಕ್ತಿಯು ಮೋಟಾರು ಸೈಕಲನ್ನು ನಿಲ್ಲಿಸುವಂತೆ ತಿಳಿಸಿದಾಗ ಕಾರಿನಲ್ಲಿ ಬಂದವರು ಸಫ್ ವಾನ್ ರವರನ್ನು ಕಾರಿಗೆ ಭಲವಂತವಾಗಿ ಹತ್ತಿಸಿಕೊಂಡು ಆನೆಕಾಡು ಬಳಿ ಕರೆದುಕೊಂಡು ಹೋಗಿ ನಾವು ಸಿಬಿಐ ಪೊಲೀಸ್ ನವರು, ಬ್ಲಾಕ್ ಮತ್ತು ವೈಟ್ ಮನಿ ವ್ಯವಹಾರ ಮಾಡುತ್ತಿದ್ದೀರ ಎಂದು ಬೆದರಿಸಿ 35 ಸಾವಿರ ರೂ ಹಣವನ್ನು ತೆಗೆದುಕೊಂಡು ನಂತರ ಸೆಟ್ಲ್ ಮೆಂಟ್ ಮಾಡುವುದಾಗಿ ಹೇಳಿದ ರಾಶಿದ್ ರವರು 2 ಲಕ್ಷ ರೂ ಗೆ ಪ್ರಕರಣ ಕ್ಲೋಸ್ ಮಾಡುವಂತೆ ಮಾತುಕತೆ ಮಾಡಿ ಸಫ್ ವಾನ್ ನಿಂದ ಒಟ್ಟು 80 ಸಾವಿರ ರೂ ಹಣವನ್ನು ಪಡೆದುಕೊಂಡಿದ್ದು, ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.