Crime News

ಪರಸ್ಪರ ಬೈಕ್ ಡಿಕ್ಕಿ;ಗಾಯ

ದಿನಾಂಕ 06/01/2019ರಂದು ಮಡಿಕೇರಿ ನಗರದ ಗಣಪತಿ ಬೀದಿ ನಿವಾಸಿ ಮಹಮದ್ ಕೈಫ್ ಎಂಬವರು ಇಮ್ರಾನ್ ಎಂಬವರೊಡನೆ ಒಂದು ಬೈಕಿನಲ್ಲಿ ಹಿಂಬದಿ ಸವಾರರಾಗಿ ನಗರದ ಎಫ್‌ಎಂಸಿ ಕಾಲೇಜು ಕಡೆಯಿಂದ ಮನೆಗೆ ಹೋಗುತ್ತಿರುವಾಗ ಭಗವತಿ ನಗರದ ಬಳಿ ಎದುರಿನಿಂದ ಒಂದು ಮೋಟಾರು ಬೈಕನ್ನು ಅದರ ಸವಾರ ಅಯ್ಯಪ್ಪ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಇಮ್ರಾನ್‌ರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಇಮ್ರಾನ್‌, ಅಯ್ಯಪ್ಪ ಮತ್ತು ರಾಜಪ್ಪ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ ಪ್ರಕರಣ

ದಿನಾಂಕ 03/01/2019ರಂದು ಕುಶಾಲನಗರದ ಮದಲಾಪುರ ಬಳಿಯ ಬ್ಯಾಡಗೊಟ್ಟ ಗ್ರಾಮದ ನಿವಾಸಿ ಸಿ.ಸಿ.ಕಿರಣ್ ಎಂಬವರು ತಾನು ಕೆಲಸ ಮಾಡುತ್ತಿದ್ದ ಸಿದ್ದಾಪುರದ ಆರೆಂಜ್ ಕೌಂಟಿ ರೆಸಾರ್ಟಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದವರು ಇನ್ನೂ ಮರಳಿ ಮನೆಗೆ ಬಂದಿರುವುದಿಲ್ಲವೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಆತ್ಮಹತ್ಯೆ

ದಿನಾಂಕ 06/01/2019ರಂದು ಅಮ್ಮತ್ತಿ ಬಳಿಯ ಮುಕ್ಕಾಟಿಕೊಪ್ಪ ನಿವಾಸಿ ಲಲಿತಾ ಎಂಬ ಮಹಿಳೆಯು ಮುಕ್ಕಾಟಿರ ರಾಜಪ್ಪ ಎಂಬವರ ತೋಟದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತೆ ಲಲಿತಾರ ಮಗಳು ಲಕ್ಷ್ಮಿ ಮೂರು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಬಂಧ ಲಲಿತಾರು ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ನೀಡಲಾಗಿದೆ. ಘಟನೆ ಸಂಬಂಧ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.