Crime News

ಕೊಲೆ ಪ್ರಕರಣ ಆರೋಪಿ ಬಂಧನ

ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಹಿಳೆಯ ಕೊಲೆ ಪ್ರಕರಣವೊಂದನ್ನು ಜಿಲ್ಲಾ ಅಪರಾಧ ಪತ್ತೆದಳವು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ದಿನಾಂಕ 26/01/2019ರಂದು ವಿರಾಜಪೇಟೆ ಬಳಿಯ ಅರಮೇರಿ ಗ್ರಾಮದ ಮಲ್ಲಮಟ್ಟಿ ಎಂಬಲ್ಲಿ ಮಹಿಳಯೋರ್ವಳ ಶವವು ಅರ್ದ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ  ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿತ್ತು. ಈ ಸಂಬಂಧ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವ ಸಲುವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಡಾ. ಸುಮನ್ ಡಿ ಪೆನ್ನೇಕರ್‌ರವರು ವಿರಾಜಪೇಟೆ ವೃತ್ತ ನಿರೀಕ್ಷಕರಾದ ಕುಮಾರ್‌ ಆರಾಧ್ಯ ಮತ್ತು ಜಿಲ್ಲಾ ಅಪರಾಧ ಪತ್ತೆದಳದ ನಿರೀಕ್ಷಕರಾದ ಎಂ.ಮಹೇಶ್‌ರವರ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿದ್ದರು. ಶವದ ಬಳಿ ದೊರೆತ ಸಾಕ್ಷ್ಯಗಳಿಂದ ಮೃತ ಮಹಿಳೆಯನ್ನು ಅಸ್ಸಾಂ ನಿವಾಸಿ ಮರ್ಜೀನಾ ಖಾತುನ್ ಎಂಬುದಾಗಿ ಗುರುತಿಸಿದ ಡಿಸಿಐಬಿ ಪೊಲೀಸರು ಪ್ರಕರಣದ ತನಿಖೆ ನಡೆಸಿ ಮೃತೆ ಮರ್ಜೀನಾಳ ಪತಿ ಉಸ್ಮಾನ್ ಅಲಿ ಎಂಬಾತನೇ ತನ್ನ ಪತ್ನಿಯನ್ನು ಕೊಲೆಗೈದಿರುವುದಾಗಿ ತನಿಖೆಯಲ್ಲಿ ದೃಢಪಡಿಸಿಕೊಂಡು ಆರೋಪಿ ಉಸ್ಮಾನ್‌ ಅಲಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೃತೆ ಮರ್ಜೀನಾಳು ಆರೋಪಿ ಅಸ್ಸಾಂ ರಾಜ್ಯದ ಬೋರಾಂಗ್ ಜಿಲ್ಲೆಯ ನಿವಾಸಿ ಉಸ್ಮಾನ್‌ ಅಲಿಗೆ ಎರಡನೇ ಪತ್ನಿಯಾಗಿದ್ದು ಆಕೆ ತನ್ನ ಸಣ್ಣ ಮಗುವನ್ನು ಪತಿಯೊಂದಿಗೆ ಹೆಗ್ಗಳ ಗ್ರಾಮದಲ್ಲಿ ಬಿಟ್ಟು ತಾನು ಮಲ್ಲಮಟ್ಟಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು ಉಸ್ಮಾನ್ ಅಲಿಯ ಮೊದಲನೇ ಪತ್ನಿಯನ್ನು ಬಿಟ್ಟು ಬರುವಂತೆ ಮರ್ಜೀನಾಳು ಉಸ್ಮಾನ್‌ ಅಲಿಯನ್ನು ಒತ್ತಾಯಿಸುತ್ತಿದ್ದುದೇ ಉಸ್ಮಾನ್‌ ಅಲಿ ಮರ್ಜೀನಾಳನ್ನು ಕೊಲೆ ಮಾಡಲು ಕಾರಣವೆಂದು ತನಿಖೆಯ ಮೂಲಕ ತಿಳಿದು ಬಂದಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪೆನ್ನೇಕರ್‌ ಹಾಗೂ ವಿರಾಜಪೇಟೆ ಉಪ ವಿಭಾಗದ ಡಿವೈಎಸ್‌ಪಿ ನಾಗಪ್ಪರವರ ಮಾರ್ಗದರ್ಶನದಲ್ಲಿ ನಡೆದ ಪ್ರಕರಣದ ಪತ್ತೆ ಕಾರ್ಯಾಚರಣೆಯಲ್ಲಿ ಕೊಡಗು ಡಿಸಿಐಬಿ ವಿಭಾಗದ ನಿರೀಕ್ಷಕ ಎಂ.ಮಹೇಶ್,ವಿರಾಜಪೇಟೆ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ವಿರಾಜಪೇಟೆ ಗ್ರಾಮಾಂತರ ಠಾಣೆಯ ಪಿಎಸ್‌ಐ ಸುರೇಶ್‌ ಬೋಪಣ್ಣ ಹಾಗೂ ಸಿಬ್ಬಂದಿಗಳಾದ ಕೆ.ವೈ.ಹಮೀದ್, ಬಿ.ಎಲ್.ಯೋಗೇಶ್‌ ಕುಮಾರ್, ಎಂ.ಎನ್.ನಿರಂಜನ್, ಕೆ.ಎಸ್.ಅನಿಲ್‌ ಕುಮಾರ್, ವಿ.ಜಿ.ವೆಂಕಟೇಶ್, ಕೆ.ಆರ್.ವಸಂತ, ಪಿ.ಬೆಳ್ಳಿಯಪ್ಪ, ಎಂ.ಎ.ಗಿರೀಶ್, ಸಿ.ಕೆ. ರಾಜೇಶ್ ಹಾಗೂ ಚಾಲಕರಾದ ಶಶಿಕುಮಾರ್, ಗೋಪಿನಾಥ್ ಮುಂತಾದವರು ಪಾಲ್ಗೊಂಡಿದ್ದರು. ಪ್ರಕರಣವನ್ನು ಕ್ಷಿಪ್ರವಾಗಿ ಪತ್ತೆ ಹಚ್ಚಿದ  ಎರಡೂ ತಂಡಗಳ ಕಾರ್ಯ ವೈಖರಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.

ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಅಸ್ಸಾಂ ಮತ್ತು ಇತರೆ ಹೊರ ರಾಜ್ಯಗಳಿಂದ ಕಾರ್ಮಿಕರು ಬರುತ್ತಿದ್ದು ತೋಟದ ಮಾಲೀಕರು ತಮ್ಮ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಮಾಹಿತಿಯನ್ನು ಕಡ್ಡಾಯವಾಗಿ ವ್ಯಾಫ್ತಿಯ ಪೊಲೀಸ್‌ ಠಾಣೆಗಳಿಗೆ ಒದಗಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸುಮನ್ ಡಿ ಪೆನ್ನೇಕರ್‌ರವರು ಕೋರಿದ್ದಾರೆ.

ವ್ಯಕ್ತಿ ಸಾವು ಪ್ರಕರಣ

ದಿನಾಂಕ 28/01/2019ರ ರಾತ್ರಿ ವೇಳೆ ಗೋಣಿಕೊಪ್ಪ ಬಳಿಯ ಅರುವತೊಕ್ಲು ನಿವಾಸಿ ಪ್ರೇಮ್‌ ಬಹದ್ದೂರ್ ಎಂಬವರು ಮೂಟೆ ಹೊರುವ ಕೆಲಸ ಮಾಡಿ ಮನೆಗೆ ಬಂದು ಮದ್ಯಪಾನ ಮಾಡಿ ಮಲಗಿದ್ದವರು ಬೆಳಿಗ್ಗೆ ನೋಡುವಾಗ ಮಲಗಿದ್ದಲ್ಲೇ ಮೃತರಾಗಿರುವುದಾಗಿ ಕೆ.ಕಾರ್ತಿಕ್‌ ಎಂಬವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪತ್ತೆ

ದಿನಾಂಕ 29/01/2019ರಂದು ಗೋಣಿಕೊಪ್ಪ ಬಳಿಯ ಅತ್ತೂರು ನಿವಾಸಿ ತಮಿಳರ ಗಾಂಧಿ ಎಂಬಾತನು ಸ್ಕೂಟರಿನ ಸೀಟಿನ ಕೆಳಭಾಗದಲ್ಲಿ ಅಕ್ರಮವಾಗಿ ಮದ್ಯವನ್ನು ದಾಸ್ತಾನಿರಿಸಿ ಮಾರಾಟ ಮಾಡುತ್ತಿರುವುದನ್ನು ಗೋಣಿಕೊಪ್ಪ ಪಿಎಸ್‌ಐ ಬಿ.ಎಸ್.ಶ್ರೀಧರ್‌ರವರು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.