Crime News

ಮಾರುತಿ ವ್ಯಾನ್ ಕಳವು:

ಮಡಿಕೇರಿ ನಗರದ ಅಬ್ದುಲ್ ಕಲಾಂ ಲೇಔಟ್‍ ನಲ್ಲಿ ವಾಸವಾಗಿರುವ ಮಹಮ್ಮದ್ ಶರೀಫ್ ಎಂಬವರು ದಿನಾಂಕ 1-3-2019 ರಂದು ಬೆಳಗ್ಗೆ 6-00 ಗಂಟೆ ಸಮಯದಲ್ಲಿ ತಮ್ಮ ಬಾಪ್ತು ಮಾರು ಓಮ್ನಿಯನ್ನು ಮಡಿಕೇರಿ ನಗರದ ಕೆ.ಎಸ್‍.ಆರ್‍.ಟಿ.ಸಿ ಬಸ್‍ ನಿಲ್ದಾಣದಲ್ಲಿ ನಿಲ್ಲಿಸಿ ಹೋಗಿದ್ದು ಸಂಜೆ 4-00 ಗಂಟೆಗೆ ಬಂದು ನೋಡಿದಾಗ ಯಾರೋ ಕಳ್ಳರು ಸದರಿ ಓಮ್ನಿ ವ್ಯಾನನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ:

ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ  ಹೊಸೂರು ಗ್ರಾಮದಲ್ಲಿ ವಾಸವಾಗಿರುವ ಶ್ರೀಮತಿ ಪುಷ್ಪ ಎಂಬವರ ಪತಿ ಮುದ್ದ ಎಂಬವರು ದಿನಾಂಕ 1-3-2019 ರಂದು ತಾನು ವಾಸವಾಗಿರುವ ಲೈನು ಮನೆಯಲ್ಲಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾನುವಾರು ಕಳವು:

ವಿರಾಜಪೇಟೆ ನಗರದ ನೆಹರು ನಗರದ ನಿವಾಸಿ ಸಿ.ಎಂ. ಐಮದ್ ಎಂಬವರಿಗೆ ಸೇರಿದ ಹಸುಗಳನ್ನು ಮೇಯಲು ಬಿಟ್ಟಿದ್ದನ್ನು ದಿನಾಂಕ 24-2-2019 ರಂದು ಯಾರೋ ಅರಿಚಿತ ವ್ಯಕ್ತಿಗಳು ಒಂದು ಸ್ಕಾರ್ಪಿಯೋ ವಾಹನದಲ್ಲಿ ತುಂಬಿಸಿಕೊಂಡು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಸಂಬಂಧ ಸಿ.ಎಂ. ಐಮದ್ ರವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಗಕ್ಕೆ ಅಕ್ರಮ ಪ್ರವೇಶ:

ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ಸೀಗೆತೋಡು ಹೆಬ್ಬಾಲೆ ಗ್ರಾಮದಲ್ಲಿ ವಿ.ಎಲ್ ಜಯಲಕ್ಷ್ಮಿ ಎಂಬವರಿಗೆ ಜಾಗವಿದ್ದು, ಸದರಿಯವರು ದಿನಾಂಕ 21-2-2019 ರಂದು ಮೈಸೂರಿನಲ್ಲಿದ್ದ ಸಂದರ್ಭದಲ್ಲಿ ಸೀಗೆತೋಡು ಹೆಬ್ಬಾಲೆ ಗ್ರಾಮದ ವಿ.ಎ. ಚಂದ್ರಶೇಖರ್, ಶ್ರೀಮತಿ ಕುಸುಮಾವತಿ, ವಿ.ಇ. ಯಶೋಧ ಮತ್ತು ವಿ.ಇ. ಸುಮಿತ್ರ ಎಂಬವರು ಜಯಲಕ್ಷ್ಮಿಯವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಜೆ.ಸಿ.ಬಿ. ಯಿಂದ ಮರ ಗಿಡಗಳನ್ನು ಕೆಡವಿ ಒಂದು ಲಕ್ಷ ರೂ. ನಷ್ಟಪಡಿಸಿದ್ದು ಈ ಸಂಬಂಧ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಬೈಕ್‍ಗಳ ಅಪಘಾತ ಓರ್ವನ ದುರ್ಮರಣ:

ದಿನಾಂಕ: 02-03-2019 ರಂದು ಕರಡ ಗ್ರಾಮದ ಬಿ.ಎಂ. ಕಿರಣ‍್ ಎಂಬವರ ತಮ್ಮ ಕಿಶೋರ್ ರವರು ಕೆಎ-12-ಕೆ-7941 ರ ಮೋಟಾರ್ ಬೈಕಿನಲ್ಲಿ ಗೋಣಿಕೊಪ್ಪ ಕಡೆಯಿಂದ ಅವರ ಅತ್ತೆ ಮನೆ ಬೀರುಗ ಕಡೆಗೆ ಹೋಗುತ್ತಿದ್ದಾಗ ಸಮಯ 20-15 ಗಂಟೆಗೆ ಪೊನ್ನಂಪೇಟೆಯ ಬಾಲಕಿಯರ ವಿದ್ಯಾರ್ಥಿ ನಿಲಯದ ಮುಂಭಾಗದ ರಸ್ತೆ ತಲುಪುವಾಗ್ಗೆ ಬಾಲಕಿಯರ ನಿಲಯದ ಪಕ್ಕದ  ಕಿರುಗೂರು ರಸ್ತೆ ಕಡೆಯಿಂದ ನಂ. ಕೆಎ-45-ಕ್ಯೂವ್-1964 ರ ಮೋಟಾರ್ ಸೈಕಲ್ ನ್ನು ಸವಾರ ನಂಜುಂಡ ನಾಯಕರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಕಿಶೋರ್ರವರ ಮೋಟಾರ್ ಬೈಕಿಗೆ  ಢಿಕ್ಕಿಪಡಿಸಿದ ಪರಿಣಾಮ ಕಿಶೋರನ ತಲೆಗೆ ಪೆಟ್ಟಾಗಿ ರಕ್ತಗಾಯವಾಗಿದ್ದು ಅವರನ್ನು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕಿಶೋರ ಮೃತಪಟ್ಟಿದ್ದು ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.