Crime News

ವೇಶ್ಯಾವಾಟಿಕೆ ಪ್ರಕರಣ ಪತ್ತೆ

ತನ್ನ ವಾಸದ ಮನೆಯಲ್ಲಿಯೇ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಯೊಬ್ಬರನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಧಾಳಿ ಮಾಡಿ ಬಂಧಿಸಿದ್ದಾರೆ.  ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ  ಚಿಕ್ಕತ್ತೂರು ಗ್ರಾಮದ ನಿವಾಸಿ ಗೀತಾ ಎಂಬವರು ತನ್ನ ಮನೆಯಲ್ಲಿಯೇ ಬೇರೆ ಬೇರೆ ಕಡೆಗಳಿಂದ ಅಕ್ರಮವಾಗಿ ಹೆಂಗಸರನ್ನು ಕರೆಯಿಸಿಕೊಂಡು  ಹಣಕ್ಕಾಗಿ ವೇಶ್ಯಾವಾಟಿಕೆಯನ್ನು ನಡೆಸುತ್ತಿರುವ ಕುರಿತು  ದೊರೆತ ಮಾಹಿತಿ ಆಧಾರದ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿ ವಿರುದ್ಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

          ಈ ಕಾರ್ಯಾಚರಣೆಯನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಡಾ: ಸುಮನ್ ಡಿ. ಪೆನ್ನೇಕರ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ದಿನಕರ ಶೆಟ್ಟಿ ಹಾಗೂ ಕುಶಾಲನಗರ ವೃತ್ತ ನಿರೀಕ್ಷಕರಾದ ಬಿ.ಎಸ್.ದಿನೇಶ್ ಕುಮಾರ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರಿಯಕುಮಾರ್, ಕೆ.ಸಿ. ಸವಿತಾ , ಸುದೀಶ್ ಕುಮಾರ್, ಸಂಪತ್ ರೈ ರವರು ದಾಳಿಯಲ್ಲಿ ಭಾಗವಹಿಸಿದ್ದು, ಪೊಲೀಸ್ ವರಿಷ್ಠಾಧಿಕಾರಿಯವರು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಪ್ರಶಂಸಿಸಿದ್ದಾರೆ.

ಅಕ್ರಮ ಗಾಂಜಾ ಬೆಳೆ ಪತ್ತೆ

ಕೊಡಗು ಜಿಲ್ಲೆಯ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಂಜರಾಯಪಟ್ಟಣ ಗ್ರಾಮದ ನಾಲ್ಕು ಜನ ವ್ಯಕ್ತಿಗಳು ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವುದನ್ನು ಪತ್ತೆ ಹಚ್ಚಿದ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

          ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ನಂಜರಾಯಪಟ್ಟಣದಲ್ಲಿ ವ್ಯಕ್ತಿಗಳು ತಮ್ಮ ಕೃಷಿ ಭೂಮಿಯಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿರುವ ಬಗ್ಗೆ ಖಚಿತ ವರ್ತಮಾನದ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಪಿ.ಎಸ್‍.ಐ ನಂದೀಶ್ ಕುಮಾರ್ ರವರು ಸಿಬ್ಬಂದಿಗಳೊಂದಿಗೆ  ದಿನಾಂಕ 25-4-2019 ರಂದು  ನಂಜರಾಯಪಟ್ಟಣದ ನಿವಾಸಿಗಳಾದ (1) ಯದು @ ಯಶವಂತ, (2) ಜಗದೀಶ್, (3) ರಕ್ಷಿತ್ ಹಾಗು (4) ವಾಸು ರವರುಗಳ ಜಾಗದಲ್ಲಿ ದಾಳಿ ನಡೆಸಿ ಸದರಿಯವರುಗಳು ತಮ್ಮ ಕೃಷಿ ಭೂಮಿಯಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆಸಿರುವುದನ್ನು ಪತ್ತೆ ಹೆಚ್ಚಿ ಅಂದಾಜು 35,000/- ರೂ. ಬೆಲೆಬಾಳುವ  6.900 ಕೆ.ಜಿ. ತೂಕದ  8 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿ ಅವರುಗಳ ವಿರುದ್ಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

          ಈ ಕಾರ್ಯಾಚರಣೆಯನ್ನು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಡಾ: ಸುಮನ್ ಡಿ. ಪೆನ್ನೇಕರ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ನಂದೀಶ್ ಕುಮಾರ್‍ ಹಾಗೂ ಸಿಬ್ಬಂದಿಯವರು  ನಡೆಸಿದ್ದು ಪೊಲೀಸ್ ವರಿಷ್ಠಾಧಿಕಾರಿಯವರು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಪ್ರಶಂಸಿಸಿದ್ದಾರೆ.

ಟ್ರ್ಯಾಕ್ಟರ್ ಮಗುಚಿ ವ್ಯಕ್ತಿ ಸಾವು

ದಿನಾಂಕ 25/04/2019ರಂದು ಸೋಮವಾರಪೇಟೆ ಬಳಿಯ ಹುದುಗೂರು ನಿವಾಸಿ ರಾಜು ಎಂಬವರು ಮಹದೇವ ಎಂಬವರೊಂದಿಗೆ ಮಕ್ಕಂದೂರಿನಿಂದ ಟ್ರ್ಯಾಕ್ಟರಿನಲ್ಲಿ ಗೊಬ್ಬರವನ್ನು ತುಂಬಿಸಿಕೊಂಡು ಸೋಮವಾರಪೇಟೆ ಕಡೆಗೆ ಬರುತ್ತಿದ್ದಾಗ ಕಾರೆಕೊಪ್ಪ ಬಳಿ ಟ್ರ್ಯಾಕ್ಟರ್ ಚಾಲಕ ತಂಗವೇಲು ಎಂಬವರು ಟ್ರ್ಯಾಕ್ಟರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿ ರಸ್ತೆಯ ತಿರುವಿನಲ್ಲಿ ಏಕಾ ಏಕಿ ಟ್ರ್ಯಾಕ್ಟರನ್ನು ತಿರುಗಿಸಿದ ಪರಿಣಾಮ ಟ್ರ್ಯಾಕ್ಟರ್ ರಸ್ತೆಯಲ್ಲಿ ಮಗುಚಿಕೊಂಡು ಟ್ರ್ಯಾಕ್ಟರಿನಲ್ಲಿದ್ದ ರಾಜುರವರು ಕೆಳಗೆ ಬಿದ್ದು ಅವರ ಮೇಲೆ ಟ್ರ್ಯಾಕ್ಟರಿನ ಟ್ರೈಲರ್ ಬಿದ್ದು ರಾಜುರವರು ಸ್ಥಳದಲ್ಲಿಯೇ ಮೃತರಾಗಿದ್ದು ಮಹದೇವರವರಿಗೆ ತೀವ್ರವಾದ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 25/04/2019ರಂದು ಶ್ರೀಮಂಗಲ ಬಳಿಯ ಹೈಸೊಡ್ಲೂರು ಗ್ರಾಮದ ನಿವಾಸಿ ತೀತೀರ ಮಾದಪ್ಪ ಹಾಗೂ ಅವರ ಅಣ್ಣನ ಪತ್ನಿ ಝಾನ್ಸಿ ಎಂಬವರ ಮೇಲೆ  ಕೊಂಗಣ ಹೊಳೆಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿರುವುದನ್ನು ಪ್ರಶ್ನಿಸಿದ ವಿಚಾರಕ್ಕೆ ಪೋರಂಗಡ ಚೇತನ್ ಹಾಗೂ ಪೋರಂಗಡ ಕಾರ್ಯಪ್ಪ ಎಂಬವರು ಸೇರಿಕೊಂಡು ಮಾದಪ್ಪ ಹಾಗೂ ಝಾನ್ಸಿರವರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿ ಕೋವಿಯಿಂದ ಗುಂಡು ಹೊಡೆದು ಕೊಲೆ ಮಾಡುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮರಳು ಸಂಗ್ರಹ ಪತ್ತೆ

ಶ್ರೀಮಂಗಲ ಬಳಿಯ ಹೈಸೊಡ್ಲೂರು ಗ್ರಾಮದ ನಿವಾಸಿ ಪೋರಂಗಡ ಕಟ್ಟಿ ಕಾರ್ಯಪ್ಪ ಹಾಗೂ ಅವರ ಮಗ ಚೇತನ್ ಎಂಬವರು ಕೊಂಗಣ ಹೊಳೆಯಿಂದ ಅಕ್ರಮವಾಗಿ ಮರಳನ್ನು ಶೇಖರಿಸಿ ಮಾರಾಟ ಮಾಡುವ ಸಲುವಾಗಿ ಪಿಕ್‌ಅಪ್ ವಾಹನವೊಂದರಲ್ಲಿ ಸಂಗ್ರಹಿಸಿ ಅವರ ಮನೆಯ ಬಳಿ ಇಟ್ಟಿದ್ದುದನ್ನು ಶ್ರೀಮಂಗಲ ಠಾಣೆಯ ಎಎಸ್‌ಐ ಟಿ.ಎಂ. ಸಾಬು ದಿನಾಂಕ 25/04/2019ರಂದು ರವರು ಪತ್ತೆ ಹಚ್ಚಿ ಸುಮಾರು ರೂ.9,000/- ಮೌಲ್ಯದ ಮರಳನ್ನು ವಶಪಡಿಸಿಕೊಂಡು ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 25/04/2019ರಂದು ಶ್ರೀಮಂಗಲ ಬಳಿಯ ಬಾಡಗರಕೇರಿ ನಿವಾಸಿ ಬಲ್ಯಮೀದೇರಿರ ಸೋಮಯ್ಯ ಎಂಬವರು ಧರ್ಮ ಎಂಬವರೊಡನೆ ಧರ್ಮರವರ ಬೈಕಿನಲ್ಲಿ ಪೊನ್ನಂಪೇಟೆ ಕಡೆಗೆ ಹೋಗುತ್ತಿರುವಾಗ ದಾರಿಯಲ್ಲಿ ಬಾಡಗರಕೇರಿ ಬಳಿ ಕಾಯಪಂಡ ಸ್ಟಾಲಿನ್ ಎಂಬವರ ತೋಟದ ರಸ್ತೆಯ ಬಳಿ ಸೋಮಯ್ಯನವರ ಅಣ್ಣನ ಮಗ ಶರತ್ ಎಂಬಾತನು ದಾರಿ ತಡೆದು ರಸ್ತೆಯ ವಿಚಾರವಾಗಿ ಜಗಳವಾಡಿ ಕತ್ತಿಯಿಂದ ಕಡಿದು ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 25/04/2019ರಂದು ಗೋಣಿಕೊಪ್ಪ ನಗರದ ಎರಡನೇ ವಿಭಾಗದ ನಿವಾಸಿ ಪ್ರೇಮ ಎಂಬವರಿಗೆ ನೆರೆಮನೆಯ ಪಾರ್ವತಿ ಎಂಬವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕತ್ತಿಯಿಂದ ಕಡಿದು ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಜಗಳ ; ಶಾಂತಿ ಭಂಗ

ದಿನಾಂಕ 25/04/2019ರಂದು ಪೊನ್ನಂಪೇಟೆ ಠಾನೆಯ ಪಿಎಸ್‌ಐ ಬಿ.ಜಿ.ಮಹೇಶ್‌ರವರು ಗಸ್ತು ಕರ್ತ್ಯದಲ್ಲಿರುವಾಗ ಕಾನೂರು ಗ್ರಾಮದಲ್ಲಿ ಕೋತೂರು ನಿವಾಸಿಗಳಾದ ಕೆ.ಬಿ.ಅಭಿ ಹಾಗೂ ವಿ.ಎ.ಪ್ರಶಾಂತ್ ಎಂಬವರು ಸಾರ್ವಜನಿಕ ರಸ್ತೆಯಲ್ಲಿ ಪರಸ್ಪರ ಅಶ್ಲೀಲ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ, ತಳ್ಳಾಡುತ್ತಾ ಜಗಳವಾಡಿಕೊಂಡು ಸಾರ್ವಜನಿಕ ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದು ಅವರನ್ನು ಪೊನ್ನಂಪೇಟೆ ಠಾಣೆಗೆ ಕರೆದುಕೊಂಡು ಬಂದು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ರಸ್ತೆ ಅಪಘಾತ

ದಿನಾಂಕ 23/04/2019ರಂದು ಸೋಮವಾರಪೇಟೆ ಬಳಿಯ ಕಾಜೂರು ನಿವಾಸಿ ಅನಿತಾ ಎಂಬವರ ತಮ್ಮ ಪ್ರತಾಪ್‌ ಎಂಬವರು ಮಡಿಕೇರಿ ಬಳಿಯ ಅಪ್ಪಂಗಳದಲ್ಲಿನ ತೋಟದ ಗುತ್ತಿಗೆ ಕೆಲಸ ನೋಡಲು ಬೈಕಿನಲ್ಲಿ ಹೋಗುತ್ತಿರುವಾಗ ಅಪ್ಪಂಗಳ ಗ್ರಾಮದ ಬಳಿ ರಸ್ತೆಗೆ ಅಡ್ಡಲಾಗಿ ಬಂದ ನಾಯಿಯೊಂದನ್ನು ತಪ್ಪಿಸುವಾಗ ಬೈಕು ಪ್ರತಾಪ್‌ರವರ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬಿದ್ದು ಪ್ರತಾಪ್‌ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಆತ್ಮಹತ್ಯೆ

ದಿನಾಂಕ 25/04/2019ರಂದು ಮಡಿಕೇರಿ ಬಳಿಯ ಅರುವತೊಕ್ಲು ಗ್ರಾಮದಲ್ಲಿ ವಾಸವಿರುವ ಪವಿತ್ರ ಎಂಬವರು ಯಾವುದೋ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಮೃತೆ ಪವಿತ್ರಳು ಸುಮಾರು ವರ್ಷಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ಅದು ವಾಸಿಯಾಗದ ಕಾರಣ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಗಂಡಸು ಕಾಣೆ ಪ್ರಕರಣ

ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿ ಭಗವತಿ ಹಾರ್ಡ್‌ವೇರ್‌ ಎಂಬ ಅಂಗಡಿಯನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ ಮಡಿಕೇರಿಯ ಕನ್ನಂಡ ಬಾಣೆ ನಿವಾಸಿ ಮಂಡುವಂಡ ಈಶ್ವರ್ ಎಂಬವರು ದಿನಾಂಕ 24/04/2019ರಂದು ಅಂಗಡಿಗೆಂದು ಹೋದವರು ಮನೆಗೆ ವಾಪಸಾಗದೆ ಕಾಣೆಯಾಗಿರುವುದಾಗಿ ಅವರ ಪತ್ನಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪರಸ್ಪರ ಹಲ್ಲೆ ಪ್ರಕರಣ

ದಿನಾಂಕ 25/04/2019ರಂದು ನಾಪೋಕ್ಲು ಬಳಿಯ ಚೇಲಾವರ ನಿವಾಸಿ ಪಿ.ಸಿ.ವಿಜು ಮುತ್ತಪ್ಪ ಎಂಬವರು ಅವರ ಮಾವನ ಮಗಳಾದ ಯಶೋದ ಎಂಬವರೊಡನೆ ಕಾರಿನಲ್ಲಿ ವಿರಾಜಪೇಟೆಯಿಂದ ಅವರ ಮನೆಗೆ ಬರುತ್ತಿರುವಾಗ ನರಿಯಂದಡ ಗ್ರಾಮ ಬೊವ್ವೇರಿಯಂಡ ಲೋಕೇಶ್‌ ಎಂಬವರ ಮನೆಯ ಬಳಿ ಕಡಂಗದ ನಿವಾಸಿಗಳಾದ ಕೋಡೀರ ವಿವೇಕ್‌ ಮತ್ತು ಮುತ್ತಪ್ಪ ಎಂಬವರು ಹಳೆ ವೈಷಮ್ಯದಿಂದ ವಿಜು ಮುತ್ತಪ್ಪ ಹಾಗೂ ಯಶೋದರವರ ಮೇಲೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿರುವುದಾಗಿ ದೂರು ನೀಡಿದ್ದು ಅದೇ ರೀತಿ ವಿಜು ಮುತ್ತಪ್ಪರವರು ಕೋಡೀರ ವಿವೇಕ್‌ರವರ ತಂದೆ ಕುಶಾಲಪ್ಪರವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಾಗಿ ಕುಶಾಲಪ್ಪನವರು ಪ್ರತಿ ದೂರು ನೀಡಿದ್ದು ನಾಪೋಕ್ಲು ಪೊಲೀಸರು ಎರಡೂ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.