Crime News

ಹಲ್ಲೆ ಪ್ರಕರಣ

ದಿನಾಂಕ 28/04/2019ರಂದು ವಿರಾಜಪೇಟೆ ನಗರದ ಟಿ.ಕೆ.ತರಿಕುಟ್ಟಿ ಎಂಬವರ ಕಟ್ಟಡದ ಕಾಮಗಾರಿ ಮಾಡುತ್ತಿದ್ದ ಕೆಲಸಗಾರರನ್ನು ವಿರಾಜಪೇಟೆ ನಗರದ ನಿವಾಸಿಗಳಾದ ಜಲೀಲ್‌, ಷರೀಫ್, ಹನೀಫ್ ಮತ್ತು ಸುಭಾಷ್ ಎಂಬವರು ಅಶ್ಲೀಲ ಶಬ್ದಗಳಿಂದ ಬೈದು ಕಾಮಗಾರಿಗೆ ತಡೆ ಮಾಡಿ ಸುಮಾರು ರೂ.ಒಂದು ಲಕ್ಷದಷ್ಟು ನಷ್ಟ ಉಂಟುಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಚಿನ್ನಾಭರಣ ಕಳವು

ಮಡಿಕೇರಿಯ ವಿದ್ಯಾನಗರ ನಿವಾಸಿ ರವಿ ಕುಮಾರ್ ಎಂಬವರು ದಿನಾಂಕ 29/04/2019ರಂದು ಅವರ ವಿದ್ಯಾನಗರದ ಮನೆಗೆ ಬೀಗ ಹಾಕಿಕೊಂಡು ಕಾಲೂರಿನ ಅವರ ತೋಟದ ಮನೆಗೆ ಹೋಗಿ ಅಲ್ಲಿಯೇ ಉಳಿದುಕೊಂಡು ದಿನಾಂಕ 04/05/2019ರಂದು ಮರಳಿ ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ನಕಲಿ ಕೀ ಬಳಸಿ ಮನೆಯೊಳಗೆ ಪ್ರವೇಶಿಸಿ ಮನೆಯೊಳಗಿದ್ದ ಆಲ್ಮೆರಾದ ಬಾಗಿಲನ್ನು ಮೀಟಿ ತೆರೆದು ಅದರೊಳಗಿದ್ದ ಸುಮಾರು ರೂ. 24,000/- ಮೌಲ್ಯದ ಚಿನ್ನದ ಕಡಗವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿದ್ಯುತ್ ಪಂಪ್ ಕಳವು

ಸಿದ್ದಾಪುರ ಬಳಿಯ ಗುಹ್ಯ ಗ್ರಾಮದ ಏಂಜೆಲ್ ಫೀಲ್ಡ್ ತೋಟದ ತೆರೆದ ಬಾವಿಗೆ ಅಳವಡಿಸಿದ್ದ ಸುಮಾರು ರೂ.4,000/- ಮೌಲ್ಯದ ವಿದ್ಯುತ್ ಪಂಪನ್ನು ದಿನಾಂಕ 27/04/2019ರ ನಂತರ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ದಿನಾಂಕ 04/05/2019ರಂದು ಪಂಪ್ ಕಳವಾದ ಬಗ್ಗೆ ತಿಳಿದುಬಂದಿರುವುದಾಗಿ ತೋಟದ ಉದ್ಯೋಗೆ ಪಿ.ಸಿ.ನಾಗೇಶ್‌ರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 02/05/2019ರಂದು ಕುಶಾಲನಗರ ಬಳಿಯ ಮಣಜೂರು ಗ್ರಾಮದ ನಿವಾಸಿ ಸಾಕಮ್ಮ ಎಂಬವರ ಮೇಲೆ ಅದೇ ಗ್ರಾಮದ ನಿವಾಸಿ ಶಿವಕುಮಾರ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಕಲ್ಲಿನಿಂದ ಹಲ್ಲೆ ಮಾಡಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.