Crime News

ವಿಪತ್ತಿನ ಸಮಯದಲ್ಲಿ ಸಮಯ ಪ್ರಜ್ಞೆ ಅತ್ಯವಶ್ಯಕ
– ಜಿಲ್ಲಾಧಿಕಾರಿ, ಕೊಡಗು

ವಿಪತ್ತಿನ ಸಮಯದಲ್ಲಿ ಸಮಯ ಪ್ರಜ್ಞೆ ಮತ್ತು ಸಮಯ ಸ್ಪೂರ್ತಿ ಅತ್ಯವಶ್ಯಕ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್ ರವರು ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಪೊಲೀಸ್‌ ಘಟಕದ ವತಿಯಿಂದ ಜಿಲ್ಲಾ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಏರ್ಪಡಿಸಲಾದ ಒಂದು ವಾರದ ವಿಪತ್ತು ನಿರ್ವಹಣಾ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಚಂಡಮಾರುತ, ಭೂಕಂಪಗಳನ್ನು ಮುಂಚಿತವಾಗಿಯೇ ವೈಜ್ಞಾನಿಕವಾಗಿ ಅರಿಯಬಹುದು ಆದರೆ ನೈಸರ್ಗಿಕ ವಿಕೋಪಗಳಾದ ಪ್ರವಾಹ, ಭೂಕುಸಿತಗಳನ್ನು ಮುಂಚಿತವಾಗಿ ಅರಿಯಲು ಕೆಲವೊಮ್ಮೆ ಕಷ್ಟವಾಗುತ್ತದೆ. ಕಳೆದ ವರ್ಷವೂ ಅನಿರೀಕ್ಷಿತವಾಗಿ ಕೊಡಗಿನಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದು ಈ ಬಾರಿ ಅಂತಹ ವಿಪತ್ತು ಸಂಭವಿಸಿದರೆ ಎದುರಿಸಲು ಮೇ ತಿಂಗಳಿನಲ್ಲಿಯೇ ತಯಾರಿ ನಡೆಸಲಾಗುತ್ತಿದೆ ಎಂದು ಹೇಳಿದ ಅವರು ಭೂವಿಜ್ಞಾನ ಇಲಾಖೆ ಮತ್ತು ಇನ್ನಿತರ ಇಲಾಖೆಗಳ ಸಹಕಾರದೊಂದಿಗೆ ಈಗಾಗಲೇ ಕೊಡಗಿನಲ್ಲಿ ಹಲವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ ಪೆನ್ನೇಕರ್‌ರವರು, ಕಳೆದ ವರ್ಷದ ಪ್ರಾಕೃತಿಕ ವಿಕೋಪದ ಅನುಭವವನ್ನು ಪಾಠವಾಗಿಟ್ಟುಕೊಂಡು ಈ ಬಾರಿ ಏನಾದರೂ ಪ್ರಕೃತಿ ವಿಕೋಪ ಸಂಭವಿಸಿದರೆ ಹೊರಗಿನ ಸಹಾಯ ಬರುವ ಮೊದಲೇ ಜನ, ಜಾನುವಾರು ಜೀವ ರಕ್ಷಣೆಗೆ ಕಾರ್ಯೋನ್ಮುಖವಾಗುವ ನಿಟ್ಟಿನಲ್ಲಿ ಪ್ರತಿ ಉಪ ವಿಭಾಗಕ್ಕೆ  ತಲಾ 15 ಜನ ಪೊಲೀಸ್‌ ಸಿಬ್ಬಂದಿಗಳ ತಂಡದಂತೆ ಒಟ್ಟು ಮೂರು ವಿಪತ್ತು ನಿರ್ವಹಣಾ ತಂಡಗಳು ಹಾಗೂ ಡಿಎಆರ್‌ ನ ಒಂದು ತಂಡ ಸೇರಿದಂತೆ ಒಟ್ಟು 60 ಜನ ಸಿಬ್ಬಂದಿಗಳ ನಾಲ್ಕು ತಂಡಗಳನ್ನು ರಚಿಸಲಾಗಿದ್ದು ಮುಂದಿನ ಮಳೆಗಾಲದಲ್ಲಿ ಹಾಗೂ ಭವಿಷ್ಯದಲ್ಲಿನ ಪ್ರಕೃತಿ ವಿಕೋಪವನ್ನೆದುರಿಸಲು ಸನ್ನದ್ದವಾಗಿರಲಿವೆ ಎಂದರು. ಈ ಸಂಬಂಧ ಕಳೆದ ಬಾರಿಯ ಪ್ರಕೃತಿ ವಿಕೋಪದ ಸಮಯದಲ್ಲಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸಿ ಅನುಭವವಿರುವ ಬೆಂಗಳೂರಿನ ಟೀಂ ಸೃಷ್ಟಿ ಅಡ್ವೆಂಚರ್ಸ್ ಸಂಸ್ಥೆಯ ತಜ್ಞರಾದ ಸಂತೋಷ್‌, ಅಕ್ಷಿತಾ ಮತ್ತು ಅನಘಾ ಹಾಗೂ ಪೂನಾದ ಆರ್‌.ಟಿ. ಜಿಯೋ ಅಂಡ್ ಎನ್‌ವಿರಾನ್ಮೆಂಟ್ ಕನ್ಸಲ್ಟೆನ್ಸಿ ಸಂಸ್ಥೆಯ ಭೂವಿಜ್ಞಾನಿ ರೆನಿ ಥಾಮಸ್ ಮುಂತಾದ ತಜ್ಞರಿಂದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು. ಈ ತರಬೇತಿಯು ದಿನಾಂಕ 08/05/2019 ರಿಂದ 13/05/2019ರ ವರೆಗೆ ನಡೆಯಲಿದ್ದು ಜಿಲ್ಲಾ ಪೊಲೀಸ್‌ ವತಿಯಿಂದ ಪರಿಣತ ಪ್ರಕೃತಿ ವಿಪತ್ತು ನಿರ್ವಹಣಾ ತಂಡಗಳನ್ನು ರಚಿಸಲಾಗುವುದು ಎಂದರು.

ಸಿಬ್ಬಂದಿಗಳಿಗೆ ಪ್ರಾಯೋಗಿಕ ತರಬೇತಿ ನೀಡುತ್ತಿರುವ ತಜ್ಞರು

ತರಬೇತಿಯ ವಿವಿಧ ಹಂತಗಳ ಬಗ್ಗೆ ಬೆಂಗಳೂರಿನ ಟೀಂ ಸೃಷ್ಟಿ ಅಡ್ವೆಂಚರ್ಸ್‌ ಸಂಸ್ಥೆಯ ಸಂತೋಷ್‌ರವರು ಮಾಹಿತಿ ನೀಡಿದರು. ಮಡಿಕೇರಿ ಗ್ರಾಮಾಂತರ ಠಾಣೆಯ ಪಿಎಸ್‌ಐ ವಿ.ಚೇತನ್‌ರವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಮಡಿಕೇರಿ ಉಪ ವಿಭಾಗದ ಡಿವೈಎಸ್‌ಪಿ ಕೆ.ಎಸ್.ಸುಂದರ್‌ರಾಜ್, ಮಡಿಕೇರಿ ನಗರ ವೃತ್ತ ನಿರೀಕ್ಷಕ ನಾಗೇಗೌಡ, ಡಿಎಸ್‌ಬಿ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಡಿಸಿಆರ್‌ಬಿ ನಿರೀಕ್ಷಕ ಇರ್ಷಾದ್‌ ಅಹಮದ್, ಡಿಸಿಐಬಿ ನಿರೀಕ್ಷಕ ನಾಗೇಶ್‌ ಹಾಗೂ ಡಿಎಆರ್‌ನ ಆರ್‌ಪಿಐ ರಾಚಯ್ಯ ಮುಂತಾದವರು ಉಪಸ್ಥಿತರಿದ್ದರು.  

ಜೂಜಾಟ ಪ್ರಕರಣ

            ದಿನಾಂಕ 07-05-2019 ರಂದು ಮಡಿಕೇರಿ ನಗರದ ಕಾವೇರಿ ಲೇಔಟ್ ನ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಎಲೆಗಳಿಂದ ಜೂಜಾಟ ಆಡುತ್ತಿರುವುದಾಗಿ ಮಡಿಕೇರಿ ನಗರ ಠಾಣೆಯ ಪಿಎಸ್ಐ ರವರಿಗೆ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಆಟವಾಡುತ್ತಿದ್ದ ಈರೇಶ್, ತಿಮ್ಮಪ್ಪ ಮತ್ತು ರವಿಯವರನ್ನು ವಶಕ್ಕೆ ಪಡೆದುಕೊಂಡು ಆಟಕ್ಕೆ ಬಳಸಿದ ನಗದು ಹಣ 4040=00 ರೂ ವನ್ನು ವಶಪಡಿಸಿಕೊಂಡು ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.