Crime News

ನಂಬಿಕೆ ದ್ರೋಹ, ಪ್ರಕರಣ ದಾಖಲು:

ಮಡಿಕೇರಿ ತಾಲೋಕು ನಾಪೋಕ್ಲು ಗ್ರಾಮದ ನಿವಾಸಿ ಕಂಗಾಂಡ ಜಿ. ಮುದ್ದಯ್ಯ ಎಂಬವರ ಸ್ನೇಹಿತ ಚಂಗಚಂಡ ಲಿಖಿತ್ ತಮ್ಮಯ್ಯ ಎಂಬ ವ್ಯಕ್ತಿ ಮೈಸೂರಿಗೆ ಹೋಗಿ ಬರಲು ಕಂಗಾಂಡ ಜಿ. ಮುದ್ದಯ್ಯ ರವರ ಬಾಪ್ತು ರೂ.1,83,000/- ಬೆಲೆಬಾಳುವ ಕೆಎ-12-ಎಲ್‍-9117ರ ಕೆಟಿಎಂ. ಡ್ಯೂಕ್ ಮೋಟಾರ್ ಸೈಕಲನ್ನು ಮತ್ತು ಅದಕ್ಕೆ ಸಂಬಂಧಿಸಿದ ಆರ್‍.ಸಿ. ಪುಸ್ತಕವನ್ನು ಪಡೆದುಕೊಂಡು  ಮೋಟಾರ್ ಸೈಕಲನ್ನು ಸರ್ವಿಸ್ ಮಾಡಿ ವಾಪಾಸು ನೀಡುವುದಾಗಿ ತಿಳಿಸಿ ವಾಪಾಸು ನೀಡದೇ 2018ನೇ ಜೂನ್ ತಿಂಗಳಲ್ಲಿ ಕಂಗಾಂಡ ಜಿ. ಮುದ್ದಯ್ಯರವರ ನಕಲಿ ಸಹಿಯನ್ನು ಮಾಡಿ ದಾಖಲೆ ಸೃಷ್ಠಿಸಿ ವಿರಾಜಪೇಟೆಯ ನಿವಾಸಿ ಮಾಳೇಟಿರ ಬೋಪಣ್ಣನವರ ಮಗ ಹೃತಿಕ್ ಮುತ್ತಣ್ಣನವರ ಹೆಸರಿಗೆ ವರ್ಗಾಯಿಸಿ ಮಾರಾಟ ಮಾಡಿ ನಂಬಿಕೆ ದ್ರೋಹ ಬಗೆದಿರುತ್ತಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಾಹನ ಅಪಘಾತ:

ನಾಪೋಕ್ಲು ನಗರದ ಇಂದಿರಾನಗರದಲ್ಲಿ ವಾಸವಾಗಿರುವ ಟಿ.ಆರ್. ರಾಜಪ್ಪ ಎಂಬವರು ದಿನಾಂಕ 17-5-2019 ರಂದು ರಾತ್ರಿ ತಮ್ಮ ಮನೆಯ ಮುಂದುಗಡೆ ರಸ್ತೆಯಲ್ಲಿ ತಮ್ಮ ಬಾಪ್ತು ನಿಲ್ಲಿಸಿದ್ದ ವಾಹನಕ್ಕೆ ಕೆಎ-12ಎಂ1369ರ ಜೀಪು ಡಿಕ್ಕಿಯಾಗಿ ವಾಹನ ಜಖಂಗೊಂಡಿದ್ದು ಇದನ್ನು ಕೇಳಿದ ಕಾರಣಕ್ಕೆ ಜೀಪು ಚಾಲಕ ಸುಬ್ರಮಣಿ @ ತಂಬಿ, ಬಿ.ಎಸ್. ವಿನಾಯಕ ಮತ್ತು ಬಿ.ಎಸ್. ವಿಕ್ರಂ ರವರುಗಳು ಸೇರಿ  ಟಿ.ಆರ್. ರಾಜಪ್ಪರವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಯೊಳಗೆ ಪ್ರವೇಶ ಮಾಡಿ ಹಲ್ಲೆಗೆ ಯತ್ನಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

ಗೋಣಿಕೊಪ್ಪ ಠಾಣಾ ಸರಹದ್ದಿನ ಪಟೇಲ್ ನಗರದ 2ನೇ ವಿಭಾಗ, ಗೋಣಿಕೊಪ್ಪದಲ್ಲಿ ವಾಸವಾಗಿರುವ ಎಂ.ಇ. ಬಷೀರ್ ಎಂಬವರ ಮಗ ಅಪ್ರೋಜ್ ಎಂಬವರು ಜೀವನದಲ್ಲಿ ಜುಗುಪ್ಸೆಗೊಂಡ ದಿನಾಂಕ 18-5-2019 ರಂದು ಯಾವುದೋ ಕ್ರಿಮಿನಾಶಕ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜುರುಗಿಸಿದ್ದಾರೆ.

ದಾರಿ ತಡೆದು ವ್ಯಕ್ತಿಗಳ ಮೇಲೆ ಹಲ್ಲೆ:

ದಿನಾಂಕ: 17-05-2019 ರಂದು ಕೋತೂರು ಗ್ರಾಮದ ನಿವಾಸಿ ಪಣಿಎರವರ ಸುಬ್ರಮಣಿ ಎಂಬವರು ಕಾನೂರು ಗ್ರಾಮಕ್ಕೆ ಹೋಗಿದ್ದಾಗ ಅವರಿಗೆ ಪರಿಚಿತ ವ್ಯಕ್ತಿ  ಸೋಮ ಎಂಬವರು ಕಾಡು ಮಾವಿನ ಹಣ್ಣನ್ನು ಒಂದು ಬ್ಯಾಗ್ ನಲ್ಲಿ ತುಂಬಿಸಿಕೊಂಡು ಬಂದು ಪಣಿಎರವರ ಸುಬ್ರಮಣಿಯನ್ನು ಕಂಡು ಜೊತೆಯಲ್ಲಿ ನಡೆದುಕೊಂಡು  ಬಾರ್ ನ ಮುಂಭಾಗ ಹೋಗುತ್ತಿದ್ದಾಗ ಅವರನ್ನು ಬಾರ್ ನ ಮುಂದೆ ಇದ್ದ ಮುಳ್ಳಂಗಡ  ರತ್ತು, ಮತ್ತು ಪೋರಂಗಡ ಗಗನ್ ರವರು ಅಡ್ಡಗಟ್ಟಿ ಮಾವಿನ ಹಣ್ಣಿನ ವಿಚಾರದಲ್ಲಿ  ಜಗಳ ಮಾಡಿ ಜಾತಿ ನಿಂದನೆ ಮಾಡಿ ಕೈಯಿಂದ  ಹೊಡೆದು,  ಕಾಲಿನಿಂದ  ಒದ್ದು ನೋವನ್ನುಂಟು ಮಾಡಿ ಕೊಲೆ ಬೆದರಿಕೆ ಹಾಕಿರುವ  ಬಗ್ಗೆ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಲಾರಿ ಅಪಘಾತ, ವ್ಯಕ್ತಿ ದುರ್ಮರಣ:

ದಿನಾಂಕ 18-5-2019 ರಂದು ಸೋಮವಾರಪೇಟೆ ದೊಡ್ಡತೊಳೂರು ಗ್ರಾಮದಲ್ಲಿ ಯಶ್ವಂತ್ ಎಂಬವರಿಗೆ ಸೇರಿದ ತೋಟಲ್ಲಿ  ಹೊಸದಾಗಿ ನಿರ್ಮಿಸುತ್ತಿರುವ ಮನೆಗೆ ಕಾಂಕ್ರೀಟ್ ಹಾಕುವ ಸಲುವಾಗಿ ರಾಘವೇಂದ್ರ ಎಂಬವರ ಲಾರಿಯಲ್ಲಿ  ಕಾಂಕ್ರೀಟ್ ಮಿಕ್ಸ್ ಮಾಡುವ ಯಂತ್ರವನ್ನು ಹಾಕಿಕೊಂಡು ಜೊತೆಯಲ್ಲಿ ಕಾರ್ಮಿಕರನ್ನು ಸಹ ತುಂಬಿಸಿಕೊಂಡು ಹೋಗುತ್ತಿದ್ದಾಗ ಕಿರುದಾದ ರಸ್ತೆಯಲ್ಲಿ ಲಾರಿ ಮುಂದೆ ಸಾಗದೆ ಒಮ್ಮಲೆ ಹಿಂದಕ್ಕೆ ಬಂದ ಸoದರ್ಭದಲ್ಲಿ ಲಾರಿಯಲ್ಲಿದ್ದ ಕಾಂಕ್ರಿಟ್ ಮಿಕ್ಸ್ ಮಾಡುವ ಯಂತ್ರವು ಹಿಂದೆ ಕುಳಿತಿದ್ದ ಕೂಡಿಗೆ ಗ್ರಾಮದ ಮಹದೇವ ರವರ ಮೇಲೆ ಬಿದ್ದು ಅವರು ಸ್ಥಳದಲ್ಲೇ ಸಾವನಪ್ಪಿದ್ದು, ಉಳಿದಂತೆ ಎಸ್.ಜೆ. ರವಿ, ಕೃಷ್ಣ, ನಾಗರಾಜ ಮತ್ತು ಮಹೇಶ ರವರುಗಳು ಗಾಯಗೊಂಡಿದ್ದು ಈ ಸಂಬಂಧ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಮತ್ತು ಮಕ್ಕಳು ಕಾಣೆ:

ದಿನಾಂಕ 12-5-2019 ರಂದು ಸಕಲೇಶಪುರ ತಾಲೋಕು, ಕುಂಬ್ರಳ್ಳಿ ಗ್ರಾಮದವರಾದ  ಶ್ರೀಮತಿ ಕೆ.ಕೆ. ಗಗನ ಎಂಬವರು ತಮ್ಮ ತಂಗಿ ಗಂಧನ ಹಾಗು ಅವರ ತಂಗಿ ಮಕ್ಕಳಾದ  7 ವರ್ಷ ಪ್ರಾಯದ ನೇಹ,  ಮತ್ತು 2  ವರ್ಷದ ಸಾನ್ವಿ ಯೊಂದಿಗೆ  ಚಿಕಿತ್ಸೆಗಾಗಿ  ಕೊಡ್ಲಿಪೇಟೆ ಸರಕಾರಿ ಆಸ್ಪತ್ರೆಗೆ ಹೋಗಿದ್ದು ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದ ಕಾರಣ ಶ್ರೀಮತಿ ಕೆ.ಕೆ. ಗಗನರವರು  ತಂಗಿ ಗಂಧನ ಮತ್ತು ಮಕ್ಕಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದು ಸಂಜೆಯಾದರೂ ಅವರುಗಳು ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತಲೆಮರೆಸಿಕೊಂಡ ಶಿಕ್ಷೆಗೊಳದಾಗ ವ್ಯಕ್ತಿಯ ಬಂಧನ:

ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಆನೆಕಾಡು ಬಳಿ 2004ನೇ ಸಾಲಿನಲ್ಲಿ ಸೋಮವಾರಪೇಟೆ ತಾಲೋಕಿನ ಗರ್ವಾಲೆ ಗ್ರಾಮದ ನಿವಾಸಿಯಾದ  ಆರೋಪಿತ ದೊಡ್ಡೇರ ವಸಂತ @ ಪುಟ್ಟ ತಂದೆ ಪೌತಿ ತಿಮ್ಮಯ್ಯ, ಪ್ರಾಯ 45 ವರ್ಷ ಈತನು ಹಾಗು ಈತನ ಸಂಗಡಿಗರು ಸೇರಿಕೊಂಡು ಕುಶಾಲನಗರ  ಪಟ್ಟಣದ ನಿವಾಸಿಯಾದ ಶ್ರೀ ಪುಂಡರಿಕಾಕ್ಷ ರವರು ಮಡಿಕೇರಿ ಕಡೆಯಿಂದ ಕುಶಾಲನಗರದ ಕಡೆಗೆ ತಮ್ಮ ವಾಹನದಲ್ಲಿ ಬರುತ್ತಿರುವಾಗ್ಗೆ, ಆನೆಕಾಡು ಬಳಿ ವಾಹನವನ್ನು ತಡೆದು ನಿಲ್ಲಿಸಿ  ಮಾರಣಾಂತಿಕ  ಹಲ್ಲೆ ನಡೆಸಿ ಅವರ ಬಳಿ ಇದ್ದ 1,35,000/- ರೂ. ಹಣವನ್ನು ಸುಲಿಗೆ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸದರಿ ಪ್ರಕರಣದಲ್ಲಿ ಕೊಡಗು ಜಿಲ್ಲಾ ಸತ್ರ ನ್ಯಾಯಾಲಯದ ಎಸ್.ಸಿ ನಂ.28/2004ರಲ್ಲಿ ವಿಚಾರಣೆ ನಡೆದು ಆರೋಪಿತನ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತನಿಗೆ ಶಿಕ್ಷೆ ಯಾಗಿ, ಸದರಿ ಆರೋಪಿ ದೊಡ್ಡೇರ ವಸಂತ ತಲೆಮರೆಸಿಕೊಂಡಿದ್ದು, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಸುಮನ್ ಡಿ.ಪೆನ್ನೇಕರ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್‍ಪಿ  ದಿನಕರಶೆಟ್ಟಿ ಮತ್ತು   ವೃತ್ತ ನಿರೀಕ್ಷರಾದ ದಿನೇಶ್ ಕುಮಾರ್ ರವರ ನೇತೃತ್ವದಲ್ಲಿ  ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ನಂದೀಶ್ ಕುಮಾರ್ ಮತ್ತು ಸಿಬ್ಬಂದಿಗಳು ಆರೋಪಿಯ ಪತ್ತೆಯ ಬಗ್ಗೆ ಮಾಹಿತಿ ಕಲೆ ಹಾಕಿ ಆತನನ್ನು ದಿನಾಂಕ 18-5-2019 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.  ಈ ಕಾರ್ಯಾಚರಣೆಯನ್ನು ನಿರ್ವಹಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ  ಕರ್ತವ್ಯವನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.