Crime News

ಕಾರು – ಲಾರಿ ನಡುವೆ ಅಪಘಾತ ವ್ಯಕ್ತಿಯ ಸಾವು:

ದಿನಾಂಕ 4-6-2019 ರಂದು ಅರಕಲಗೂಡು ತಾಲೋಕು ಹುಲ್ಲಂಗಾಲ ಗ್ರಾಮದ ಹೆಚ್.ಕೆ. ಪ್ರಕಾಶ ಎಂಬವರು ತನ್ನ ಲಾರಿಯನ್ನು ಚಾಲನೆ ಮಾಡಿಕೊಂಡು ಕುಶಾಲನಗರದಿಂದ ತೊರೆನೂರು ಕಡೆಗೆ ಹೋಗುತ್ತಿದ್ದಾಗ ಕೋಣನೂರು ಕಡೆಯಿಂದ ಬರುತ್ತಿದ್ದ  ಸ್ವಿಫ್ಟ್ ಕಾರನ್ನು ಅದರ ಚಾಲಕ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತೊರೆನೂರು ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ  ಹೆಚ್.ಕೆ. ಪ್ರಕಾಶ ರವರು ಚಾಲನೆ ಮಾಡುತ್ತಿದ್ದ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ತೀವ್ರವಾಗಿ ಜಖಂಗೊಂಡು ಕಾರಿನ ಚಾಲಕ ಅಪ್ಪಯ್ಯ ಎಂಬವರು ಸ್ಥಳದಲ್ಲಿಯೇ ಮೃತಪಟ್ಟು, ಅವರ ಜೊತೆಯಲ್ಲಿದ್ದ  ಮೀನಾಲ್ಷಿಯವರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪತಿಯ ಕಿರುಕುಳ ಪತ್ನಿಯ ಆತ್ಮಹತ್ಯೆ:

ಸೋಮವಾರಪೇಟೆ ತಾಲೋಕು ಹಾನಗಲ್ಲು ಗ್ರಾಮದ ನಿವಾಸಿ ವಾಸು ಎಂಬವರ ಪತ್ನಿ ಶ್ರೀಮತಿ ಪವಿತ್ರ ಎಂಬವರಿಗೆ ಆಕೆಯ ಗಂಡ ವಾಸು ಮಾನಸಿಕ ಹಾಗು ದೈಹಿಕ ಕಿರುಕುಳ ನೀಡುತ್ತಿದ್ದುದರ ಹಿನ್ನೆಲೆಯಲ್ಲಿ ಸದರಿ ಪವಿತ್ರರವರು ದಿನಾಂಕ 4-6-2019 ರಂದು ತಮ್ಮ ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಮೃತರ ಅಣ್ಣ ವಿ.ಸಿ. ಚೆನ್ನಪ್ಪನವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕ್ಲಬ್ ನಿಂದ ಸಿಸಿ ಕ್ಯಾಮೆರಾ ಕಳವು:

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಚೆಂಬೆಬೆಳ್ಳೂರು ಗ್ರಾಮದಲ್ಲಿರುವ ಕೊಡವ ಅಸೋಷಿಯೇಶನ್ ಕ್ಲಬ್ ನಲ್ಲಿ ಚಾರಿಮಂಡ ಬೋಪಣ್ಣ ಎಂಬವರು ಕೆಲಸ ಮಾಡಿಕೊಂಡಿದ್ದು ಸದರಿ ಕ್ಲಬ್ ನಲ್ಲಿ ಸಿ.ಸಿ. ಕ್ಯಾಮೆರಾವನ್ನು ಅಳವಡಿಸಿದ್ದು, ದಿನಾಂಕ 3-6-2019 ರ ರಾತ್ರಿ ಯಾರೋ ಕಳ್ಳರು ಸದರಿ ಕ್ಲಬ್ ಗೆ ನುಗ್ಗಿ ಕ್ಲಬ್ ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ, ಮೋನಿಟರ್ ಮತ್ತು ಡಿವಿಆರ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಚಾರಿಮಂಡ ಬೋಪಣ್ಣನವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.