Crime News

ಅಂತರಾಷ್ಟೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ:

          ದಿನಾಂಕ 26-06-2019 ರಂದು ಅಂತರಾಷ್ಟೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಮೂರು ಉಪ ವಿಭಾಗಗಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಚರಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಡಾ. ಸುಮನ್ ಡಿ.ಪಿ, ಐ.ಪಿ.ಎಸ್. ರವರು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ. ಎಂ ಕಾರ್ಯಪ್ಪ ಕಾಲೇಜಿನಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾದಕ ದ್ರವ್ಯ ಸೇವನೆಯಿಂದ ವಿದ್ಯಾರ್ಥಿಗಳಲ್ಲಿ ಹಾಗೂ ಯುವಕರಲ್ಲಿ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಶ್ರೀಮತಿ ನೂರುನ್ನೀಸ ಹಾಗು ಪೊಲೀಸ್ ಅಧಿಕಾರಿಗಳು ಹಾಜರಿದ್ದರು.  ಹಾಗೆಯೇ ಜಿಲ್ಲೆಯ ವಿವಿಧ ಪೊಲೀಸ್ ಉಪ ವಿಭಾಗಗಳ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ ಶಾಲಾ ಕಾಲೇಜುಗಳಲ್ಲಿ ಅಂತರಾಷ್ಟೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಪ್ರಯತ್ನ ನಡೆಸಲಾಯಿತು.

ವ್ಯಕ್ತಿಯ ಆತ್ಮಹತ್ಯೆ:

       ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರಸಂತೆಯಲ್ಲಿ ವರದಿಯಾಗಿದೆ. ಶನಿವಾರಸಂತೆಯ ಸುಳುಗಳಲೆ ಕಾಲೋನಿಯ ನಿವಾಸಿ ಲಕ್ಷ್ಮಣ ಎಂಬುವವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 24-06-2019 ರಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮರಳು ಸಂಗ್ರಹ:

      ದಿನಾಂಕ 25-06-2019 ರಂದು ಶನಿವಾರಸಂತೆ ಪೊಲೀಸ್ ಠಾಣೆಯ ಎ.ಎಸ್.ಐ ಗೋವಿಂದರವರಿಗೆ ಅಕ್ರಮವಾಗಿ ಬಡುಬನಹಳ್ಳಿಯ ತೋಡಿನಿಂದ ದರ್ಶನ್ ಎಂಬುವವರು ಮರಳನ್ನು ತೆಗೆಯುತ್ತಿರುವುದಾಗಿ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ತೆರಳಿ ದಾಳಿ ಮಾಡಿ ಅಕ್ರಮವಾಗಿ ಟ್ರ್ಯಾಕ್ಟರ್ ನಲ್ಲಿ ಸಾಗಿಸುತ್ತಿದ್ದ ಮರಳನ್ನು ವಶಪಡಿಸಿಕೊಂಡಿದ್ದು,  ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಲಾರಿಯ ಬ್ಯಾಟರಿ ಕಳವು

           ಕುಶಾಲನಗರದ ಬೈಚನಹಳ್ಳಿಯ ನಿವಾಸಿಯಾದ ಬಾಬಾ ಎಂಬುವವರಿಗೆ ಸೇರಿದ ಲಾರಿಯನ್ನು ದಿನಾಂಕ 24-06-2019 ರಂದು ಚಾಲಕ ಮೊಯಿದೀನ್ ಎಂಬವರು ಎಂದಿನಂತೆ ಬೈಚನಹಳ್ಳಿ ಗ್ರಾಮದ ರಾಮಮಿಲ್ ನ ಮುಂಭಾಗದ ಖಾಲಿ ಜಾಗದಲ್ಲಿ ನಿಲ್ಲಿಸಿದ್ದು ಸದರಿ ಲಾರಿಯಿಂದ ಎರಡು ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಹಾಗೂ ಕರಿಯಪ್ಪ ಬಡಾವಣೆಯ ನಿವಾಸಿ ಸುರೇಶ್ ರವರ ಬಾಪ್ತು ಲಾರಿಯಿಂದ  ಬ್ಯಾಟರಿಯನ್ನು ಕಳವು ಮಾಡಿದ್ದು  ಈ ಬಗ್ಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ಗಳನ್ನು ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ:

          ದಿನಾಂಕ 22-06-2019 ರಂದು ಹೆಬ್ಬೆಟ್ಟಗೇರಿ ಗ್ರಾಮದಲ್ಲಿರುವ ಮೆಡಿಕಲ್ ಕಾಲೇಜ್ ಕಟ್ಟಡದ ಕಾಮಗಾರಿಗೆಂದು ಉಗ್ರಾಣದಲ್ಲಿ ಇರಿಸಲಾಗಿದ್ದ ನಾಲ್ಕು ಬಂಡಲ್ ಕಾಪರ್ ವಯರ್ ಗಳನ್ನು ಯಾರೋ ಕಳ್ಳರು ಕಳವು ಮಾಡಿದ್ದು, ಈ ಬಗ್ಗೆ ವಿಶ್ವನಾಥ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬಂಧೂಕು ಕಳವು, ಆರೋಪಿ ಪತ್ತೆ:

          ದಿನಾಂಕ 25-06-2019 ರಂದು ಮಡಿಕೇರಿ ಗ್ರಾಮಾಂತರ ವೃತ್ತದ ವೃತ್ತ ನೀರೀಖ್ಷಕರು ಮತ್ತು ಅಪರಾಧ ಪತ್ತೆ ದಳದ ಸಿಬ್ಬಂದಿಯವರು ಕಡಗದಾಳು ಗ್ರಾಮದಲ್ಲಿ ಗಸ್ತು ಮಾಡುತ್ತಿರುವಾಗ ಕಡಗದಾಳು ಗ್ರಾಮದ ನಿವಾಸಿ ಹರೀಶ ಎಂಬುವವರು ಬಂದೂಕಿನೊಂದಿಗೆ ಇರುವುದು ಕಂಡು ಬಂದು ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಸುಮಾರು 10 ದಿನಗಳ ಹಿಂದೆ ಮರಗೋಡು ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮನೆಯಿಂದ ಕಳ್ಳತನ ಮಾಡಿರುವುದಾಗಿ ಗೊತ್ತಾದ ಹಿನ್ನಲೆಯಲ್ಲಿ ಆತನನ್ನು ಬಂದೂಕು ಸಮೇತವಾಗಿ ಬಂಧಿಸಿ, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.