Crime News

ಪೊಲೀ‍ಸ್ ನೇಮಕಾತಿ ತರಬೇತಿ ಕಾರ್ಯಾಗಾರ:

            ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ದಿನಾಂಕ 28-6-2019, 29-6-2019 ಮತ್ತು 30-6-2019 ರಂದು ಮೂರು ದಿವಗಳ ಕಾಲ ಪರಿಶಿಷ್ಟ ಜನಾಂಗದವರಿಗೆ ಪೊಲೀಸ್ ನೇಮಕಾತಿಗೊಳ್ಳಲು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದ್ದು, ಸದರಿ ಕಾರ್ಯಾಗಾರವನ್ನು ದಿನಾಂಕ 28-6-2019 ರಂದು ಬೆಳಗ್ಗೆ 10-00 ಗಂಟೆಗೆ ವಿರಾಜಪೇಟೆ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಶ್ರೀ ನಾಗಪ್ಪರವರು ಉದ್ಘಾಟಿಸಲಿದ್ದು, ಈ ಕಾರ್ಯಾಗಾರದಲ್ಲಿ ಪೊಲೀಸ್ ಇಲಾಖೆಗೆ ಸೇರಲಿಚ್ಚಿಸುವ ಪರಿಶಿಷ್ಟ ಪಂಗಡದ ವಿದ್ಯಾವಂತ ಯುವಕ ಯುವತಿಯರಿಗೆ ಪೊಲೀಸ್ ಇಲಾಖಾ ಲಿಖಿತ ಪರೀಕ್ಷೆಗೆ ಸಾಮಾನ್ಯ ಜ್ಞಾನ, ಮಾನಸಿಕ ಸಾಮರ್ಥ್ಯ, ಭೂಗೋಳ ಶಾಸ್ತ್ರ, ಇತಿಹಾಸ ಮತ್ತು ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಆಯಾ ವಿಷಯ ತಜ್ಞರಿಂದ 2 ದಿವಸಗಳ ಕಾಲ ತರಬೇತಿ ಹಾಗು ದಿನಾಂಕ 30-6-2019 ರಂದು ದೈಹಿಕ ಪರೀಕ್ಷೆ ಹಾಗು ಸಹಿಷ್ಣುತೆ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ನೀಡಲಾಗುವುದು.  ಹಾಗು ಅಂದು ಸಮಾರೋಪ ಸಮಾರಂಭವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಸುಮನ್ ಡಿ. ಪೆನ್ನೇಕರ್, ಐಪಿಎಸ್, ರವರ  ಅಧ್ಯಕ್ಷತೆಯಲ್ಲಿ ನಡೆಲಿದೆ. 

ಜಾಗೃತಿ ಕಾರ್ಯಕ್ರಮಗಳು

ಸರಕು ಸಾಗಣೆ ವಾಹನದಲ್ಲಿ ಕಾರ್ಮಿಕ / ವಿದ್ಯಾರ್ಥಿಗಳ ಕಾನೂನು ಬಾಹಿರ ಸಾಗಾಟ – ಅರಿವು ಕಾರ್ಯಕ್ರಮ

ಜಿಲ್ಲೆಯ ವಿವಿದೆಡೆ ಸರಕು ಸಾಗಣೆ ವಾಹನಗಳಲ್ಲಿ ಕಾನೂನು ಬಾಹಿರವಾಗಿ ಕಾರ್ಮಿಕರನ್ನು ಸಾಗಿಸುವುದು, ಶಾಲಾ ವಾಹನಗಳಲ್ಲಿ, ಆಟೋ ರಿಕ್ಷಾಗಳಲ್ಲಿ ಮಿತಿಗಿಂತ ಅಧಿಕ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಸಾಗಿಸದಂತೆ ಜಾಗೃತಿ ಕಾರ್ಯಕ್ರಮಗಳನ್ನು ಕೊಡಗು ಜಿಲ್ಲಾ ಪೊಲೀಸ್‌, ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 25/06/2019 ರಿಂದ 08/07/2019ರ ವರೆಗೆ ಜಿಲ್ಲೆಯಾದ್ಯಂತ ನಡೆಯಲಿದೆ.

          ಸರಕು ಸಾಗಣೆ ವಾಹನಗಳಲ್ಲಿ ಮಿತಿಗಿಂತ ಅಧಿಕವಾಗಿ ಅಪಾಯಕಾರಿ ರೀತಿಯಲ್ಲಿ ಕಾರ್ಮಿಕರನ್ನು ಸಾಗಿಸುವುದು, ಶಾಲಾ ವಾಹನಗಳಲ್ಲಿ, ಖಾಸಗಿ ವಾಹನಗಳಲ್ಲಿ, ಆಟೋ ರಿಕ್ಷಾಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಮಿತಿ ಮೀರಿದ ಸಂಖ್ಯೆಯಲ್ಲಿ ತುಂಬಿಸಿಕೊಂಡು ಅಪಾಯಕಾರಿ ರೀತಿಯಲ್ಲಿ ಕಾನೂನು ಬಾಹಿರವಾಗಿ ಸಾಗಿಸುವುದರಿಂದ ರಸ್ತೆ ಅಪಘಾತಗಳು ನಡೆದು ಜೀವ ಹಾನಿಯಾಗುವ ಅನೇಕ ಘಟನೆಗಳು ನಡೆದಿದ್ದು ಈ ನಿಟ್ಟಿನಲ್ಲಿ ಸರಕು ಸಾಗಣೆ ವಾಹನಗಳ ಮಾಲೀಕರು, ರಿಕ್ಷಾ ಮಾಲೀಕರು, ಖಾಸಗಿ ವಾಹನ ಮಾಲೀಕರು, ಶಾಲಾ ಬಸ್‌ ಮಾಲೀಕರು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಬಗ್ಗೆ ಜಿಲ್ಲಾ ಪೊಲೀಸ್‌ ವತಿಯಿಂದ ಜಿಲ್ಲೆಯ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

          ಈ ಸಂಬಂಧ ರಿಕ್ಷಾ, ಸರಕು ಸಾಗಣೆ ವಾಹನ, ಶಾಲಾ ಮತ್ತು ಖಾಸಗಿ ವಾಹನ ಮಾಲೀಕರು ಮತ್ತು ಚಾಲಕರುಗಳ ಸಭೆಯನ್ನು ನಡೆಸಿ ಮಿತಿ ಮೀರಿದ ಸಂಖ್ಯೆಯಲ್ಲಿ ಮಕ್ಕಳು ಅಥವಾ ಕಾರ್ಮಿಕರನ್ನು ಅಪಾಯಕಾರಿ ರೀತಿಯಲ್ಲಿ ಸಾಗಿಸುವುದರ ಬಗ್ಗೆ ಸಭೆ ನಡೆಸಿ ಸೂಕ್ತ ತಿಳುವಳಿಕೆಯನ್ನು ನೀಡುವುದು.

          ಶಾಲಾ ಮಕ್ಕಳಿಗೆ ಈ ಬಗ್ಗೆ ವಿವಿಧ ಸ್ಪರ್ದೆಗಳನ್ನು ಏರ್ಪಡಿಸುವುದು, ಜಾಥಾ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಅರಿವು ಮೂಡಿಸುವುದು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

          ಅಲ್ಲದೆ ಕಾನೂನು ಬಾಹಿರವಾಗಿ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಮತ್ತು ಸರಕು ಸಾಗಣೆ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಿಸುವ ವಾಹನ ಚಾಲಕರ ವಿರುದ್ದ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಪ್ರಕರಣಗಳನ್ನು ಸಹಾ ದಾಖಲಿಸಲಾಗುವುದು.

ಸೋಮವಾರಪೇಟೆ ಠಾಣೆಗೆ ಉನ್ನತ ಶ್ರೇಣಿ:

            ರಾಷ್ಟ್ರಮಟ್ಟದಲ್ಲಿ ಪೊಲೀಸ್ ಠಾಣೆಗಳ ಪೈಕಿ ಮೂಲ ಸೌಕರ್ಯ, ನಾಗರಿಕ ಪ್ರತಿಕ್ರಿಯೆ, ಪ್ರಕರಣಗಳ ಇತ್ಯರ್ಥ ಮುಂತಾಗಿ ಅತ್ಯುತ್ತಮ ಕಾರ್ಯ ನಿರ್ವಹಿಸಿರುವ ಪೊಲೀಸ್ ಠಾಣೆಗಳ ಶ್ರೇಣಿಯನ್ನು ಕೇಂದ್ರ ಗೃಹ ಸಚಿವಾಲಯ ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ಪೊಲೀಸ್ ಠಾಣೆ ಸ್ಥಾನವನ್ನು ಪಡೆದಿದೆ. 

            ದೇಶದ ಪೊಲೀಸ್ ಠಾಣೆಗಳಲ್ಲಿ ಅಪರಾಧ ಪತ್ತೆಹಚ್ಚುವಿಕೆ, ಜನಸ್ನೇಹಿ ಪೊಲೀಸ್ ಕಾರ್ಯಕ್ರಮಗಳು, ಕಾನೂನು ಸುವ್ಯವಸ್ಥೆ ಪರಿಪಾಲನೆ ಮುಂತಾದ  ಕಾರ್ಯಗಳಲ್ಲಿ ಉತ್ತಮ ಕಾರ್ಯಗಳನ್ನು ದಕ್ಷತೆಯಿಂದ ನಿರ್ವಹಿಸಿದ್ದು ಈ ಕಾರಣಕ್ಕೆ ಸೋಮವಾರಪೇಟೆ ಪೊಲೀಸ್ ಠಾಣೆಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ಪೊಲೀಸ್ ಠಾಣೆ ಎಂಬ ಹೆಗ್ಗಳಿಕೆ ದೊರೆತಿದೆ.

ಪಾದಚಾರಿಗೆ ಬೈಕ್ ಡಿಕ್ಕಿ:

ಕುಶಾಲನಗರದ ಭುವನಗಿರಿಯಲ್ಲಿ ವಾಸವಾಗಿರುವ ಲಕ್ಕಯ್ಯ ಎಂಬವರು ದಿನಾಂಕ 26-6-2019 ರಂದು ಕಣಿವೆ ಶ್ರೀ ರಾಮ ದೇವಸ್ಥಾನದ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಹೆಬ್ಬಾಲೆ ಕಡೆಯಿಂದ ಅಜಯ್ ಕುಮಾರ್ ಎಂಬವರು ತಮ್ಮ ಬಾಪ್ತು ಮೋಟಾರ್‍ ಸೈಕಲನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಲಕ್ಕಯ್ಯನವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರ ಕಣ್ಣಿನ ಭಾಗಕ್ಕೆ ಗಾಯವಾಗಿದ್ದು, ಈ ಸಂಬಂಧ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಸ್ತೆಯ ವಿಚಾರದಲ್ಲಿ ಜಗಳ, ಹಲ್ಲೆ:

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಚೇರಳಶ್ರೀಮಂಗಲ ಗ್ರಾಮದ ಪುತ್ತರಿರ ಎಂ.ಬಿದ್ದಪ್ಪ ಎಂವರಿಗೆ ಸೇರಿದ ಜಾಗದಲ್ಲಿ ಅವರ ಕುಟುಂಬದವರಾದ ಮಂದಣ್ಣ ಹಾಗು ಶ್ರೀಮತಿ ಪ್ರಮಿಳರವರು ಜೆ.ಸಿ.ಬಿ ಮೂಲಕ ರಸ್ತೆಯನ್ನು ನಿರ್ಮಿಸುತ್ತಿದ್ದು ಅದನ್ನು ವಿಚಾರಿಸಿದ ಕಾರಣಕ್ಕೆ ಸದರಿ ಯವರುಗಳು ಎಂ.ಬಿದ್ದಪ್ಪನವರ ಮೇಲೆ ಹಲ್ಲೆ ನಡೆಸಿದ್ದು ಈ ವಿಚಾರವಾಗಿ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ:

ಕುಟ್ಟ ಪೊಲೀಸ್ ಠಾಣಾ ಸರಹದ್ದಿನ ಕುಟ್ಟ ಗ್ರಾಮದ  ಪೂಜೆ ಕಲ್ಲುವಿನ ನಿವಾಸಿ ಎ.ಎಲ್. ನೌಶದ್ ಎಂಬವರು ದಿನಾಂಕ 20-6-2019 ರಂದು ತನ್ನ ಸ್ನೇಹಿತರೊಂದಿಗೆ ಓಬೀತ್ ಎಂಬವರ ಮನೆಯ ಕಾಂಪೌಂಡ್ ಮೇಲೆ ಕುಳಿತುಕೊಂಡಿರುವಾಗ್ಗೆ ಪಕ್ಕದ ಮನೆಯವರಾದ ಮಹೇಶ್, ಮಾಧವಿ ಹಾಗು ಮಂಜು ರವರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ನೋವನ್ನುಂಟುಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಟ್ಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.