Crime News

ಕಾರಿಗೆ ಬಸ್‍ ಡಿಕ್ಕಿ

ಸಿದ್ದಾಪುರ ಠಾಣಾ ಸರಹದ್ದಿನ  ಅಂಬೇಡ್ಕರ್‍ ನಗರದ ಇಮ್ರಾನ್‍ ಅಹಮ್ಮದ್ ಎಂಬವರು ದಿನಾಂಕ 30-6-2019 ರಂದು ತಮ್ಮ ಬಾಪ್ತು ಕಾರಿನಲ್ಲಿ ಸಿದ್ದಾಪುರ ಕಡೆಯಿಂದ ವಿರಾಜಪೇಟೆ ಕಡೆಗೆ ಹೋಗುತ್ತಿದ್ದಾಗ ಸಿದ್ದಾಪುರದ ಅಂಬೇಡ್ಕರ್‍ ನಗರದ ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಬಸ್‍ವೊಂದು ಇಮ್ರಾನ್‍ ಅಹಮ್ಮದ್ ರವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರು ಜಖಂಗೊಂಡಿದ್ದು ಅಲ್ಲದೆ ಇಮ್ರಾನ್‍ ಅಹಮ್ಮದ್‍ನವರು ಗಾಯಗೊಂಡಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರಿಗೆ ಬೈಕ್‍ಡಿಕ್ಕಿ:

ಬೆಂಗಳೂರಿನ ಬೃಂದಾವನದ ನಿವಾಸಿ ಎಸ್‍.ಸತೀಶ್‍ ಎಂಬವರು ದಿನಾಂಕ 28-6-2019 ರಂದು ಬೆಂಗಳೂರಿನಿಂದ ವಿರಾಜಪೇಟೆ ಕಡೆಗೆ ಬರುತ್ತಿದ್ದಾಗ ಬಿಟ್ಟಂಗಾಲದ ಜಂಕ್ಷನ್‍ ನಲ್ಲಿ ತಲುಪುವಾಗ್ಗೆ ಎದುರುಗಡೆಯಿಂದ ಬೆಳ್ಳಿಯಪ್ಪ ಎಂಬವರು  ಮೋಟಾರ್‍ ಸೈಕಲನ್ನು ಅತೀ ವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸತೀಶ್‍ ರವರು ಚಲಾಯಿಸುತ್ತಿದ್ದ  ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್‍ ಸವಾರ ತೀವ್ರವಾಗಿ ಗಾಯಗೊಂಡು ಆತನನ್ನು ಬೆಂಗಳುರಿನ ಕಮಾಂಡೋ ಆಸ್ಪತ್ರೆಗೆ ದಾಖಲಿಸಿದ್ದು, ಈ ಸಂಬಂಧ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದುಷ್ಕರ್ಮಿಗಳಿಂದ ಜೀಪಿಗೆ ಹಾನಿ:

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಅಭ್ಯತ್‍ಮಂಗಲ ಗ್ರಾಮದ ಡಿ.ಟಿ. ಬಾಲಸುಬ್ರಮಣಿ ಎಂಬವರ ಮಗ ಯಶೋಧರ ತನ್ನ ಬಾಪ್ತು ಬೊಲೆರೋ ಜೀಪನ್ನು ಚಲಾಯಿಸಿಕೊಂಡು ಹೋಗಿದ್ದು, ಸದರಿ ಜೀಪನ್ನು ಯಾರೋ ದುಷ್ಕರ್ಮಿಗಳು ಅಭ್ಯತ್‍ ಮಂಗಲ ಗ್ರಾಮದಲ್ಲಿ ಪೂರ್ತಿಯಾಗಿ ಹಾನಿಗೊಳಿಸಿ ಸುಮಾರು 3,00,000/- ರೂ./ ನಷ್ಟಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

ವಿರಾಜಪೇಟೆ ತಾಲೋಕು ಹಳ್ಳಿಗಟ್ಟು ಗ್ರಾಮದ ಸಿ.ಎಂ. ಇಬ್ರಾಹಿಂ ಎಂಬವರ ತಂದೆ ಸಿ.ಪಿ. ಮೊಯಿದುರವರು ದಿನಾಂಕ 29-6-2019 ರಂದು ರಾತ್ರಿ ಮನೆಯಿಂದ ಹೋದವರು ದಿನಾಂಕ 30-6-2019 ರಂದು ಹಳ್ಳಿಗಟ್ಟು ಗ್ರಾಮದ ಪೋಕಚಂಡ ಮಾದಪ್ಪ ರವರ ಗದ್ದೆಯ ಪಕ್ಕದಲ್ಲಿರು ವ ಕಾಡುಮರದ ಕೊಂಬೆಗೆ ತಂದೆಯವರು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮೋಟಾರ್‍ ಸೈಕಲಿಗೆ ಕಾರು ಡಿಕ್ಕಿ ಇಬ್ಬರಿಗೆ ಗಾಯ:

ವಿರಾಜಪೇಟೆ ತಾಲೋಕು ಹಾತೂರು ಗ್ರಾಮದ ನಿವಾಸಿ ಪಿ.ಜೆ. ಬಾಬು ಎಂಬವರು ದಿನಾಂಕ 30-6-2019 ರಂದು ತನ್ನ ಸ್ನೇಹಿತ ರಾಜುರವರ ಮೋಟಾರ್‍ ಸೈಕಲಿನಲ್ಲಿ ಗೋಣಿಕೊಪ್ಪದಿಂದ ಹಾತೂರು ಕಡೆಗೆ ಹೋಗುತ್ತಿದ್ದಾಗ ವಿರಾಜಪೇಟೆ ಕಡೆಯಿಂದ ಬಂದ ಕಾರೊಂದು ಮೋಟಾರ್‍ ಸೈಕಲಿಗೆ ಡಿಕ್ಕಿಯಾದ ಪರಿಣಾಮವಾಗಿ ಮೋಟಾರ್‍ ಸೈಕಲಿನಲ್ಲಿ ಹೋಗುತ್ತಿದ್ದ ಪಿ.ಜೆ. ಬಾಬು ಹಾಗು ರಾಜುರವರು ಗಾಯಗೊಂಡಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.