Crime News

ಹಲ್ಲೆ ಪ್ರಕರಣ

ದಿನಾಂಕ 26/09/2019ರಂದು ನಾಫೋಕ್ಲು ನಿವಾಸಿ ಮನು ಅಯ್ಯಪ್ಪ ಎಂಬವರು ಅವರ ಪತ್ನಿಯೊಂದಿಗೆ ಅವರ ಕಾಂಪ್ಲೆಕ್ಸಿನ ಬಳಿ ನಿಂತಿರುವಾಗ ಅವರ ಕಟ್ಟಡದಲ್ಲಿ ಬಾಡಿಗೆಗೆ ಇದ್ದ ಕೆ.ಆರ್.ಸುರೇಶ್‌ ಎಂಬವರನ್ನು ಕೋಣೆಯ ಬಣ್ಣ ಬಳಿಯುವಂತೆ ಕೇಳಿದ ಕಾರಣಕ್ಕೆ ಸುರೇಶ್‌ರವರು ಮನು ಅಯ್ಯಪ್ಪರವರ ಮುಖದ ಮೇಲೆ ಗುದ್ದಿ ಗಾಯಗೊಳಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ಪ್ರಸಕ್ತ ವರ್ಷದ ಆಗಸ್ಟ್ ತಿಂಗಳಿನಲ್ಲಿ ಬಂದ ಅತಿಯಾದ ಮಳೆಯ ಕಾರಣ ನಾಫೋಕ್ಲು ನಿವಾಸಿ ವಿ.ಜೆ.ಮ್ಯಾಥ್ಯೂ ಎಂಬವರ ತೋಟದ ಬೇಲಿಯ ಬಳಿ ಇದ್ದ ಒಂದು ಸಿಲ್ವರ್ ಓಕ್ ಮರವು ಬೇರೆಯವರ ತೋಟಕ್ಕೆ ಬಾಗಿ ನಿಂತಿದ್ದು ಇತ್ತೀಚೆಗೆ ಯಾರೋ ಕಳ್ಳರು ಸುಮಾರು ರೂ.25,000/- ಬೆಲೆ ಬಾಳುವ ಸದ್ರಿ ಮರದ ದಿಮ್ಮಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೊಲೆ ಯತ್ನ ಪ್ರಕರಣ

ದಿನಾಂಕ 28/09/2019ರಂದು ವಿರಾಜಪೇಟೆ ಬಳಿಯ ಹೆಮ್ಮಾಡು ನಿವಾಸಿ ತೋರೆರ ಭೀಮಯ್ಯ ಎಂಬವರು ಅದೇ ಗ್ರಾಮದ ನಿವಾಸಿ ಸುಬ್ಬಯ್ಯ ಎಂಬವರ ಮೇಲೆ ವೈಯುಕ್ತಿಕ ದ್ವೇಷದಿಂದ ಕೋವಿಯಿಂದ ಗುಂಡು ಹಾರಿಸಿ ಕೊಲೆ ಮಾಡಲು ಯತ್ನಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಂಚನೆ ಪ್ರಕರಣ

ಸೋಮವಾರಪೇಟೆ ಬಳಿಯ ಹಾನಗಲ್ಲು ಗ್ರಾಮದ ನಿವಾಸಿ ಹೆಚ್‌.ಆರ್.ಮಾದಪ್ಪ ಎಂಬವರ ತಂದೆಗೆ ಸೇರಿದ ಸುಮಾರು 38 ಸೆಂಟು ಆಸ್ತಿಯನ್ನು ಅಣ್ನ ಧರ್ಮಪ್ಪ ಎಂಬವರು  ಕುಟುಂಬದೊಳಗೆ ಯಾವುದೇ ಪಾಲು ಮಾಡಿಕೊಳ್ಳದೆ ಹೆಚ್‌.ಆರ್.ಮಾದಪ್ಪರವರ ಸಹಿಯನ್ನು ನಕಲು ಮಾಡಿ ಸಮಾನ್ಯ ಅಧಿಕಾರ ಪತ್ರವನ್ನು ತಯಾರಿಸಿ ಎಲ್ಲಾ ಆಸ್ತಿಯನ್ನು ಮಾರಾಟ ಮಾಡಿ ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 27/09/2019ರಂದು ತಮಿಳುನಾಡಿನ ಪ್ರದೀಪ್‌ ಕುಮಾರ್ ಎಂಬವರು ಅವರ ಸ್ನೇಹಿತ ಹರ್ಷ ಎಂಬವರೊಂದಿಗೆ ಕೆಎ-03-ಎಡಿ-8251ರ ಕಾರಿನಲ್ಲಿ ಕೊಡಗು ಜಿಲ್ಲೆಗೆ ಪ್ರವಾಸಕ್ಕೆಂದು ಬರುತ್ತಿರುವಾಗ ಸುಂಟಿಕೊಪ್ಪ ಬಳಿಯ ಕೆದಕಲ್ ಗ್ರಾಮದ ತಿರುವಿನಲ್ಲಿ ಚಾಲಕ ಹರ್ಷರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆ ಬದಿಯ ಚರಂಡಿಗೆ ಮಗುಚಿಕೊಂಡು ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 28/09/2019ರಂದು ಕುಶಾಲನಗರ ಬಳಿಯ ಹಳೇ ಕೂಡಿಗೆ ನಿವಾಸಿ ನಿತೀಶ್‌ ವಿ.ಎನ್. ಎಂಬವರು ಅವರ ಬೈಕಿನಲ್ಲಿ ಕುಶಾಲನಗರ ಕಡೆಗೆ ಹೋಗುತ್ತಿರುವಾಗ ಮುಳ್ಳುಸೋಗೆ ಬಳಿ ಎಡ ಬದಿಯಿಂದ ಒಂದು ಸ್ಕೂಟರನ್ನು ಅದರ ಸವಾರ ಏಕಾ ಏಕಿ ಯಾವುದೇ ಸೂಚನೆ ನೀಡದೆ ರಸ್ತೆಗೆ ಚಾಲಿಸಿ ನಿತೀಶ್‌ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ನಿತೀಶ್‌ರವರಿಗೆ ಹಾಗೂ ಸ್ಕೂಟರಿನ ಚಾಲಕನಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.