Crime News

ಚಿನ್ನಾಭರಣ ಸುಲಿಗೆ, ವ್ಯಕ್ತಿ ಬಂಧನ

    ಒಂಟಿ ಮಹಿಳೆಯಿದ್ದ ಮನೆಗೆ ತೆಂಗಿನಕಾಯಿ ಕೀಳುವ ನೆಪದಲ್ಲಿ ಬಂದು ಮಹಿಳೆಯ ಕೊರಳಿನಲ್ಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಗೋಣಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.

ದಿನಾಂಕ 10-10-2019 ರಂದು ಮನೆಯಪಂಡ ಸೀತಮ್ಮ ಎಂಬವರು ಒಬ್ಬರೇ ಮನೆಯಲ್ಲಿದ್ದಾಗ ಸಮಯ ಸುಮಾರು ಸಂಜೆ 4-00 ಗಂಟೆಗೆ ಒಬ್ಬ ಅಪರಿಚಿತ ಯುವಕ ಅವರ ಮನೆಯ ಬಳಿ ಬಂದು ತೆಂಗಿನಕಾಯಿ ಕೊಯ್ಯುವ ಕೆಲಸವಿದೆಯೇ ಎಂದು ಕೇಳಿದ್ದು, ಕೆಲಸವಿಲ್ಲವೆಂದು ಹೇಳಿದ್ದರಿಂದ ವಾಪಾಸ್ಸು ಹೋಗಿರುತ್ತಾನೆ.  ನಂತರ ದಿನಾಂಕ 11/10/2019 ರಂದು ಮನೆಯಪಂಡ ಸೀತಮ್ಮರವರು  ಒಬ್ಬಳೆ ಮನೆಯಲ್ಲಿದ್ದಾಗ ಹಿಂದಿನ ದಿನ ಬಂದಿದ್ದ ಅದೇ ಅಪರಿಚಿತ ಯುವಕ ಸಮಯ ಸುಮಾರು ಸಂಜೆ 4-30 ರ ವೇಳೆಯಲ್ಲಿ ಪುನಃ ಅವರ ಮನೆಯ ಬಳಿ ಬಂದು ಕುಡಿಯಲು ನೀರು ಬೇಕೆಂದು ಕೇಳಿದ್ದು , ಸೀತಮ್ಮರವರು ನೀರು ತರಲು ಮನೆಯೊಳಗೆ ಹೋದಾಗ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಅವರ ಕೊರಳಿನಲ್ಲಿದ್ದ ರೂ 70,000/- ರೂ ಮೌಲ್ಯದ  ಅಂದಾಜು 30 ಗ್ರಾಂ ನ ಚಿನ್ನದ ಸರ ಹಾಗೂ ಪೆಂಡೆಂಟನ್ನು ಕಸಿದುಕೊಂಡು ಪರಾರಿಯಾಗಿರುತ್ತಾನೆ. ಕೃತ್ಯದ ಸಂಬಂಧ ನೀಡಿದ ಪುಕಾರನ್ನು ಹೊಂದಿಕೊಂಡು ಪೊನ್ನಂಪೇಟೆ ಪೊಲೀಸ್ ಠಾಣಾ ಮೊ.ಸಂ.118/2019 ಕಲಂ 392 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.

    ಪ್ರಕರಣದ ತನಿಖಯನ್ನು ಕೈಗೊಂಡ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಎಂ.ಎನ್. ರಾಮರೆಡ್ಡಿ ಮತ್ತು ಅವರ ತಂಡವು ಪ್ರಕರಣದ ಆರೋಪಿಯಾದ  ಮಲೆಯಾಳಿ ಮನು, ತಂದೆ ಪೌತಿ ಚಾಮಿ ಪ್ರಾಯ 44 ವರ್ಷ, ಕೂಲಿ ಕೆಲಸ, ಸ್ವಂತ, ದೇವರಕಾಡು ಪೈಸಾರಿ, ಭದ್ರಗೊಳ ಗ್ರಾಮ, ಹಾಲಿ ವಾಸ ಅಜ್ಜಮಾಡ ದರ್ಶನ್ ರವರಲ್ಲಿ ಚಾಲಕ ಮತ್ತು ರೈಟರ್ ಕೆಲಸ, ಬೀರುಗ ಗ್ರಾಮ ಈತನನ್ನು  ದಿನಾಂಕ 25-10-2019 ರಂದು ದಸ್ತಗಿರಿ ಮಾಡಿದ್ದು ಈತನು   ಕಸಿದುಕೊಂಡು ಹೋದ  19.220 ಗ್ರಾಂ ನ ಚಿನ್ನದ  ಚಿನ್ನದ ಸರವನ್ನು  ಚೈನ್  ಅನ್ನು ವಶಪಡಿಸಿಕೊಳ್ಳಲಾಯಿತು.

ಅಲ್ಲದೆ ಸದರಿ ಆರೋಪಿ ಮಲೆಯಾಳಿ ಮನುವು  ಗೋಣಿಕೊಪ್ಪ ಪೊಲೀಸ್ ಠಾಣಾ ಮೊ.ಸಂ.90/2019 ಕಲಂ 457,380 ಐ.ಪಿ.ಸಿ.,  ಪೊನ್ನಂಪೇಟೆ ಪೊಲೀಸ್ ಠಾಣಾ ಮೊ.ಸಂ.120/2019 ಕಲಂ 454, 380 ಐ.ಪಿ.ಸಿ. ಮತ್ತು  ಕುಟ್ಟ ಪೊಲೀಸ್ ಠಾಣಾ ಮೊ.ಸಂ.13/2019 ಕಲಂ 454, 457,380 ಐ.ಪಿ.ಸಿ. ಪ್ರಕರಣಗಳಲ್ಲಿ ಸಹಾ  ಕೃತ್ಯವೆಸಗಿರುವುದಾಗಿ ಒಪ್ಪಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾನೆ.

      ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪೆನ್ನೇಕರ್, ಮತ್ತು  ವಿರಾಜಪೇಟೆ ಉಪ ವಿಭಾಗದ ಪೊಲೀಸ್‌ ಉಪ ಅಧೀಕ್ಷಕರಾದ ಜಯಕುಮಾರ್ ರವರ ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಎನ್.ಎನ್.ರಾಮರೆಡ್ಡಿ ರವರ ತಂಡದ ಕಾರ್ಯಾಚರಣೆಯಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಡಿ.ಕುಮಾರ್, ಪ್ರೊಬೆಷನರಿ ಪಿ.ಎಸ್.ಐ ಮೋಹನ್ ರಾಜ್  ಹಾಗೂ ಸಿಬ್ಬಂದಿಗಳಾದ ಮನು ಎಂ.ಡಿ., ಕೆ.ಎ.ಅಬ್ದುಲ್ ಮಜೀದ್, ಹರೀಶ್ ಕುಮಾರ್ ರವರುಗಳು ಪಾಲ್ಗೊಂಡಿದ್ದು ತನಿಖಾ ತಂಡದ ಕಾರ್ಯ ವೈಖರಿಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 26/10/2019ರಂದು ಸಿದ್ದಾಪುರ ಬಳಿಯ ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ನಾಗೇಶ ಎಂಬವರು ಮನೆಯ ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ನಾಗೇಶರವರು ಸುಮಾರು ನಾಲ್ಕು ವರ್ಷಗಳಿಂದ ಬೆನ್ನು ನೋವಿನಿಂದ ನರಳುತ್ತಿದ್ದು ವಾಸಿಯಾಗದ ಕಾರಣ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಣ ದುರುಪಯೋಗ ಪ್ರಕರಣ

ಚೇರಂಬಾಣೆಯ ಅಂಚೆ ಶಾಖೆಯ ಪೋಸ್ಟ್‌ ಮಾಸ್ಟರ್ ಆಗಿರುವ ಸೋನಿ. ಕೆ.ಕೆ. ಎಂಬವರು 2015 ರಿಂದ 2017ನೇ ಅವಧಿಯಲ್ಲಿ ಅಂಚೆ ಕಚೇರಿಯ ಖಾತೆದಾರರು ಅಂಚೆ ಇಲಾಖೆಯ ಅವರ ಖಾತೆಗಳಿಗೆ ಜಮಾ ಮಾಡಿದ ಸುಮಾರು ರೂ.2,89,600/- ರಷ್ಟು ಹಣವನ್ನು ಖಾತೆದಾರರ ಖಾತೆಗಳಿಗೆ ಜಮಾ ಮಾಡದೆ ಸ್ವಂತಕ್ಕೆ ಉಪಯೋಗಿಸಿಕೊಂಡು ದುರುಪಯೋಗಪಡಿಸಿಕೊಂಡಿರುವುದು ಅಂಚೆ ಇಲಾಖೆಯ ತಪಾಸಣೆಯ ಸಮಯದಲ್ಲಿ ತಿಳಿದು ಬಂದಿರುವುದಾಗಿ ಮಡಿಕೇರಿಯ ಅಂಚೆ ಕಚೇರಿಯ ಅಂಚೆ ನಿರೀಕ್ಷಕ ಅಮಲೇಶ್‌ ಪ್ರಸಾದ್‌ರವರು ನೀಡಿದ ದೂರಿನ ಮೇರೆಗೆ ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮರದ ಕೊಂಬೆ ಬಿದ್ದು ವ್ಯಕ್ತಿ ಸಾವು

ದಿನಾಂಕ 25/10/2019ರಂದು ವಿಪರೀತ ಗಾಳಿ ಮಳೆಯ ಕಾರಣ ಶ್ರೀಮಂಗಲ ಬಳಿಯ ಪರಕಟಗೇರಿ ನಿವಾಸಿ ಕುಪ್ಪಣಮಾಡ ಪೂಣಚ್ಚ ಎಂಬವರ ತೋಟದ ಬಳಿ ಇದ್ದ ಒಣಗಿದ ಮರದ ಕೊಂಬೆಯೊಂದು ಪೂಣಚ್ಚನವರ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಯ ಸಲುವಾಗಿ ಮೈಸೂರಿನ ಆಸ್ಪತ್ರೆಗೆ ಸಾಗಿಸುವಾಗ ಸಂಜೆ ವೇಳೆ ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 23/10/2019ರಿಂದ 26/10/2019ರ ನಡುವೆ ಗೋಣಿಕೊಪ್ಪ ನಗರದ ಕಾವೇರಿ ಹಿಲ್ಸ್ ನಿವಾಸಿ ಸುಧಾಕರ ಕೆ. ಎಂಬವರು ಅವರ ಮನೆಯಲ್ಲಿ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಸುಧಾಕರ್‌ರವರು ವಿಪರೀತ ಮದ್ಯ ವ್ಯಸನಿಯಾಗಿದ್ದು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಯಾವುದೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಡಕಾಯಿತಿ ಪ್ರಕರಣ

ದಿನಾಂಕ 25/10/2019ರಂದು ಕುಶಾಲನಗರ ಬಳಿಯ ಸುಂದರನಗರ ನಿವಾಸಿ ಕುಮಾರ ಎಂಬವರು ಕುಶಾಲನಗರ ಪಟ್ಟಣದ ಬಾಲ ಲಾಡ್ಜಿನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡಿಕೊಂಡಿರುವಾಗ ಸಂಜೆ ವೇಳೆಗೆ ಅಲ್ಲಿಗೆ ರವಿ ಮತ್ತು ಶಿವಣ್ನ ಎಂಬ ಹೆಸರಿನ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ಕೊಠಡಿ ಕೇಳಿದ್ದು ಕುಮಾರರವರು ಲಾಡ್ಜಿನ ಕೊಠಡಿ ಸಂಖ್ಯೆ ಮೂರಕ್ಕೆ ಕರೆದುಕೊಂಡು ಹೋಗಿ ಕೊಠಡಿಯನ್ನು ತೋರಿಸಿದಾಗ ಕೊಠಡಿಯಲ್ಲಿ ಅವರಿಬ್ಬರೂ ಕುಮಾರರವರನ್ನು ಕೊಠಡಿಯಲ್ಲಿ ಕೂಡಿಹಾಕಿ ಚಾಕು ತೋರಿಸಿ ಬಲಾತ್ಕಾರವಾಗಿ ಕುಮಾರರವರ ಪ್ಯಾಂಟಿನ ಜೇಬಿನಲ್ಲಿದ್ದ ಲಾಕರ್‌ ಕೀ, ಮೊಬೈಲ್ ಹಾಗೂ ರೂ.8,000/-ಗಳನ್ನು ಕಿತ್ತುಕೊಂಡು ನಂತರ ಲಾಕರಿನಲ್ಲಿದ್ದ ಹಣ ರೂ.35,000/- ಹಣವನ್ನೂ ಸಹ ತೆಗೆದುಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.