Crime News

ಕ್ರೆಡಿಟ್ ಕಾರ್ಡ್‍ ಬಳಿಸಿ ವಂಚನೆ

ಮಡಿಕೇರಿ ತಾಲೋಕು ಮೇಕೇರಿ ಗ್ರಾಮದಲ್ಲಿರುವ ಪಾಲ್ ರೆಸಾರ್ಟ್‍ ಮತ್ತು ಹೋಟೇಲ್‍ ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡಿಕೊಂಡಿದ್ದು  ಸದರಿ ರೆಸಾರ್ಟ್‍ನಲ್ಲಿ ದಿನಾಂಕ 27-9-2019 ರಿಂದ 29-9-2019ರವರೆಗೆ ಬೆಂಗಳೂರಿನ ಅರುಣ್ ಕುಮಾರ್‍ ಹಾಗು ಮೇಘ ಭಾಸ್ಕರ್‍ ಎಂಬವರು ಕೊಠಡಿಗಳನ್ನು ಪಡೆದುಕೊಂಡು ದಿನಾಂಕ 28-9-2019 ರಂದು ಕೊಠಡಿಯನ್ನು ಖಾಲಿ ಮಾಡಿ ಕ್ರೆಡಿಟ್‍ ಕಾರ್ಡ್ ಮೂಲಕ ಹಣವನ್ನು ಬ್ಯಾಂಕ್ ಖಾತೆಗೆ ಹಾಕಿರುತ್ತಾರೆ.  ಆದರೆ ಸದರಿ ವ್ಯಕ್ತಿಗಳು ಬೇರೆಯವರ  ಕ್ರೆಡಿಟ್‍ ಕಾರ್ಡ್ ನ್ನು ಬಳಸಿ ಹಣವನ್ನು ಸಂದಾಯಮಾಡಿದ್ದು, ಬಳಿಕ ಸದರಿ ಹಣವು ರೆಸಾರ್ಟ್ ಖಾತೆಯಿಂದ ವಾಪಾಸು ಹೋಗಿದ್ದು,   ಅರುಣ್ ಕುಮಾರ್‍ ಹಾಗು ಮೇಘ ಭಾಸ್ಕರ್‍ ಬೇರೆಯವರ ಕ್ರೆಡಿಟ್‍ ಕಾರ್ಡ್‍ ಮೂಲಕ ಹಣವನ್ನು ಸಂದಾಯಮಾಡಿ ವಂಚಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಮಡಿಕೇರಿ  ಸೆನ್‍ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಷ ಸೇವಿಸಿ ವಿದ್ಯಾರ್ಥಿ ಆತ್ಮಹತ್ಯೆ

ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮದೆ ಗ್ರಾಮದ ನಿವಾಸಿ ಕಾರ್ತಿಕ್‍ ಎಂಬುವವರು ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿ.ಕಾಂ ವಿದ್ಯಾಭ್ಯಾಸ ಮಾಡುತ್ತಿದ್ದು ವ್ಯಾಸಂಗ ಮಾಡಲು ಇಷ್ಟವಿಲ್ಲದೇ ಬೇಸರ ಮಾಡಿಕೊಂಡು ದಿನಾಂಕ: 03-11-2019 ರಂದು ವಿಷ ಸೇವಿಸಿ ಅಸ್ವಸ್ಥಗೊಂಡವನನ್ನು ಚಿಕಿತ್ಸೆಗಾಗಿ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 05-11-2019 ರಂದು ಮರತಪಟ್ಟಿದ್ದು ಈ ಬಗ್ಗೆ ಮೃತನ ತಂದೆ ಮಾಣಿಕ್ಯಂ ಎಂಬುವವರು ನೀಡಿದ ದೂರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಮಹಿಳೆ ಮೇಲೆ ದೌರ್ಜನ್ಯ

ಸಿದ್ದಾಪುರ ಠಾಣಾ ಸರಹದ್ದಿನ ನೆಲ್ಲಿಹುದಿಕೇರಿ ಗ್ರಾಮದ ನಿವಾಸಿ ಶ್ರೀಮತಿ ಶಾಹಿದ್‍ ರವರಿಗೆ ಆಕೆಯ ಗಂಡ ಶೌಕತ್ ಮತ್ತು ಮನೆಯವರು ಸೇರಿ ಹಣಕ್ಕಾಗಿ ಮಾನಸಿಕ ಹಾಗು ದೈಹಿಕ ಕಿರುಕುಳ ಕೊಡುತ್ತಿದ್ದು, ದಿನಾಂಕ 4-11-2019 ರಂದು ಶ್ರೀಮತಿ ಶಾಹಿದ್‍ರವರ ಗಂಡ ಶೌಕತ್‍ ಜಗಳ ತೆಗೆದು ತಾನು ಬೇರೆ ಮದುವೆಯಾಗುವುದಾಗಿ ಹೇಳಿ ಮನೆಯಿಂದ ಪತ್ನಿಯನ್ನು ಹೋರಗೆ ಹೋಗುವಂತೆ ಹೇಳಿ ಹಲ್ಲೆಯನ್ನು ನಡೆಸಿದ್ದು ಅಲ್ಲದೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪಾದಚಾರಿಗೆ ಕಾರು ಡಿಕ್ಕಿ

ದಿನಾಂಕ 5-11-2019 ರಂದು ಮಡಿಕೇರಿ ನಗರದ ಮಂಗಳೂರು ರಸ್ತೆಯ ಟೂರಿಸ್ಟ್  ಲಾಡ್ಜ್ ಮುಂಭಾಗ ರಸ್ತೆಯಲ್ಲಿ ಕೆ.ಎಲ್.58-ಡಬ್ಲ್ಯು-9880 ರ ಕಾರಿನ ಚಾಲಕ ರುಫೈದ್‍ ಎಂಬವರು ಮದ್ಯಪಾನ ಮಾಡಿ ವಾಹನವನ್ನು ದುಡುಕಿನಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಜಯನಾಯಕ್ ಎಂಬವರಿಗೆ ಡಿಕ್ಕಿಪಡಿಸಿ ಗಾಯಗೊಳಿಸಿದ್ದು, ಈ ಸಂಬಂಧ ಮಡಿಕೇರಿ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ವ್ಯಾನ್‍ ಡಿಕ್ಕಿಯಾಗಿ ವ್ಯಕ್ತಿ ಸಾವು

ಪೊನ್ನಂಪೇಟೆ ನಿವಾಸಿ ಬೋಪಣ್ಣ ಎಂಬವರ ಅಣ್ಣ ಮಾದಯ್ಯ ಎಂಬವರು ದಿನಾಂಕ 4-11-2019 ರಂದು ಸಂಜೆ ಬಸ್ಸಿನಲ್ಲಿ ಬಂದು ಹುದಿಕೇರಿ ಗ್ರಾಮದ ಅವರ ಮನೆಗೆ ಹೋಗಲು  ಹುದಿಕೇರಿ ಜಂಕ್ಷನ್‍ನಲ್ಲಿ ಬಸ್ಸಿನಿಂದಿ ಇಳಿದಾಗ ಪೊನ್ನಂಪೇಟೆ ಕಡೆಗೆ ಹೋಗುತ್ತಿದ್ದ ಮಾರುತಿ ವ್ಯಾನ್‍ ಅವರಿಗೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಅವರನ್ನು ಮೈಸೂರಿನ ಬೃಂದಾವನ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ಮೃತಪಟ್ಟಿದ್ದು ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು

ಗೋಣಿಕೊಪ್ಪ ಠಾಣಾ ಸರಹದ್ದಿನ ದೇವರಪುರ ನಿವಾಸಿ ಶ್ರೀಮತಿ ಜೇನುಕುರುಬರ ಕಮಲ ಎಂಬವರ ಪತಿ ರಾಜು ರವರು ದಿನಾಂಕ 3-11-2019 ರಂದು ಮದ್ಯಸೇವಿಸಿ ಅವರು ವಾಸವಾಗಿರುವ ಮನೆಯ ಹತ್ತಿರವಿರುವ ಕೆರೆಗೆ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣುಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಪೊನ್ನಂಪೇಟೆಯ ನಿಸರ್ಗ ನಗರದಲ್ಲಿ ವಾಸವಾಗಿರುವ ಬಿ.ಎಸ್. ಶಯನ್ ಎಂಬವರ ತಂದೆ ಬಿ.ಆರ್‍.ಸೋಮಪ್ಪನವರು ದಿನಾಂಕ 4-11-2019 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣ, ವ್ಯಕ್ತಿಗೆ ಕೊಲೆ ಬೆದರಿಕೆ

ಕುಶಾಲನಗರದ ಕರಿಯಪ್ಪ ಬಡಾವಣೆ ನಿವಾಸಿ ಬಿ.ಪಿ. ಹರೀಶ್ ಎಂಬವರಿಗೆ  ಮುಳ್ಳುಸೋಗೆ ಗ್ರಾಮದ ನಿವಾಸಿ ಸಾಗರ್‍ ಎಂಬವರು ದಿನಾಂಕ 5-11-2019 ರಂದು ಹಳೆಯ ದ್ವೇಷದಿಂದ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

ವಿರಾಜಪೇಟೆ ನಗರದ ಸುಂಕದಕಟ್ಟೆ ನಿವಾಸಿ ಹೆಚ್‍.ಎಸ್‍. ನಿತೀಶ್ ಎಂಬವರ ತಂದೆ ಸುಬ್ರಮಣಿ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು ಇದೇ ಕಾರಣಕ್ಕೆ ಜಿಗುಪ್ಸೆಗೊಂಡು ದಿನಾಂಕ 5-11-2019 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.