Crime News

ತಾಯಿ ಮತ್ತು ಮಗಳ ಕೊಲೆ, ಆರೋಪಿ ಬಂಧನ

ಕಾಫಿ ತೋಟದ ಕೆಲಸಕ್ಕಾಗಿ ಕುಟುಂಬದೊಂದಿಗೆ ಕೊಡಗು ಜಿಲ್ಲೆಗೆ ಬಂದು ತನ್ನ ಪತ್ನಿ ಮತ್ತು ಮಗಳನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಅಸ್ಸಾಂ ಮೂಲದ ವ್ಯಕ್ತಿಯನ್ನು ಬಂದಿಸುವಲ್ಲಿ ವಿರಾಜಪೇಟೆ ವೃತ್ತ ನಿರೀಕ್ಷಕರ ನೇತೃತ್ವದ ತಂಡ ಯಶಸ್ವಿಯಾಗಿದೆ.

            ವಿರಾಜಪೇಟೆ ತಾಲ್ಲೂಕು ಬೈಗೋಡು ಗ್ರಾಮದ ಮುಕ್ಕಾಟಿರ ದೇವಯ್ಯ ಎಂಬುವವರ ಕಾಫಿ ತೋಟದಲ್ಲಿ ಅಸ್ಸಾಂ ಮೂಲದ ಆಲಿ ಎಂಬುವವರು ಕೂಲಿ ಕೆಲಸ ಮಾಡಿಕೊಂಡು ತನ್ನ ಕುಟುಂಬದೊಂದಿಗೆ ಲೈನ್ ಮನೆಯಲ್ಲಿ ವಾಸವಿದ್ದರು. ದಿನಾಂಕ: 20-01-2020 ರಂದು ಆಲಿಯ ಪತ್ನಿ ಮತ್ತು ಮಗಳು ಗೋಣಿಕೊಪ್ಪ ಸಂತೆಗೆ ಹೋಗುವುದಾಗಿ ದೇವಯ್ಯ ರವರಿಗೆ ಹೇಳಿ ಹೋಗಿದ್ದರು. ದಿನಾಂಕ: 21-01-2020 ರಂದು ಆಲಿ ರವರು ದೇವಯ್ಯ ರವರ ಮನೆಯ ಬಳಿ ಹೋಗಿ ಪತ್ನಿ ಮತ್ತು ಮಗಳು ವಾಪಸ್ಸು ಮನೆಗೆ ಬಂದಿರುವುದಿಲ್ಲ ಅವರನ್ನು ಕರೆದುಕೊಂಡು ಬರುವುದಾಗಿ ಹೇಳಿ ಹೋದವನು ವಾಪಾಸ್ಸು ಬಂದಿರದಿಲ್ಲ. ದಿನಾಂಕ: 23-01-2020 ರಂದು ತೋಟದ ಬಾವಿಯಲ್ಲಿ ಆಲಿಯವರ ಪತ್ನಿ ಹಾಗೂ ಮಗಳ ಮೃತದೇಹಗಳು ಕಂಡುಬಂದಿದ್ದು, ಆಲಿ ತನ್ನ ಪತ್ನಿ ಮತ್ತು ಮಗಳನ್ನು ಕೊಲೆ ಮಾಡಿ ಮೃತದೇಹವನ್ನು ಬಾವಿಗೆ ಎಸೆದು ಪರಾರಿಯಾಗಿರುವ ಬಗ್ಗೆ ದೇವಯ್ಯ ರವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು.

ಈ ಪ್ರಕರಣದಲ್ಲಿ  ಮೃತರ ಹೆಸರು ಮತ್ತು ಆರೋಪಿಯ ಹೆಸರು ವಿಳಾಸವಾಗಲೀ ದೊರಕದೇ ಇದ್ದರೂ ಸಹಾ ವೈಜ್ಞಾನಿಕವಾಗಿ, ಸಿ.ಡಿ.ಆರ್ ಮಾಹಿತಿಯನ್ನು ಪಡೆದುಕೊಂಡು  ಪ್ರಕರಣದ ತನಿಖೆ ಕೈಗೊಂಡು  ಮೃತರನ್ನು ಮುರ್ಷಿದಾ ಕತೂನ್ , 40 ವರ್ಷ ಹಾಗೂ 16 ವರ್ಷದ ಮಗಳನ್ನು ಗುರುತಿಸಲಾಗಿದೆ ಹಾಗೂ ಪ್ರಕರಣದ ಆರೋಪಿಯಾದ ಗಫೂರ್ ಆಲಿ @ ಆಲಿ, ತಂದೆ ಲೇಟ್ ಹಲೀಮುದ್ದೀನ್,  ಪ್ರಾಯ 38 ವರ್ಷ, ಕೂಲಿ ಕೆಲಸ, ವಾಸ ಮುಕ್ಕಾಟೀರ ದೇವಯ್ಯರವರ ಲೈನು ಮನೆ, ಕೊಳ್ತೋಡು ಬೈಗೋಡು ಗ್ರಾಮ ಸ್ವಂತ ಊರು ನಿಜ್ ದಲೇಗಾಂವ್, ದಲ್‍ ಗಾಂವ್ ಪಿ.ಎಸ್ , ಮಂಗಳದೇಯಿ  ಜಿಲ್ಲೆ- ದರಾಂಗ್, ಅಸ್ಸಾಂ ರಾಜ್ಯ.  ಇವರನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿ  ದಸ್ತಗಿರಿ ಮಾಡಿದ್ದು, ಈತ ಹಣದ ವಿಚಾರವಾಗಿ ಪತ್ನಿ ಮುರ್ಷಿದಾ ಕತೂನ್  ಹಾಗೂ ಮಗಳನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ನಂತರ ಬಾವಿಗೆ ಹಾಕಿರುವುದಾಗಿ ತಿಳಿಸಿರುತ್ತಾನೆ.

      ಈ ಪ್ರಕರಣದ ಆರೋಪಿಗಳ ಪತ್ತೆಯ ಬಗ್ಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಸುಮನ್ ಡಿ.ಪಿ, ಐ.ಪಿ.ಎಸ್, ಹಾಗೂ ವಿರಾಜಪೇಟೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಜಯಕುಮಾರ್  ಮಾರ್ಗದರ್ಶನದಲ್ಲಿ ವಿರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಕ್ಯಾತೇಗೌಡ ರವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಹೆಚ್.ಎಂ ಮರಿಸ್ವಾಮಿ, ಎ.ಎಸ್.ಐ ಶ್ರೀಧರ್, ಸಿಬ್ಬಂಧಿಯವರಾದ ಬಿ.ಎಂ ರಾಮಪ್ಪ, ಹೆಚ್.ಎಸ್ ಶ್ರೀನಿವಾಸ, ಮುಸ್ತಾಫ, ಮುನೀರ್, ಟಿ.ಎಸ್ ಗಿರೀಶ, ಶ್ರೀಮತಿ ಶಿಲ್ಪ, ಸುಕುಮಾರ, ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ಸಿ.ಡಿ.ಆರ್ ಘಟಕದ  ರಾಜೇಶ್ ಮತ್ತು ಗಿರೀಶ್ ಪಾಲ್ಗೊಂಡಿದ್ದರು.

ರಸ್ತೆ ಅಪಘಾತ

            ದಿನಾಂಕ: 23-01-2020 ರಂದು ಮಡಿಕೇರಿ ತಾಲ್ಲೂಕು ಇಬ್ನಿವಳವಾಡಿ ಗ್ರಾಮದ ಬಳಿ ಹೆದ್ದಾರಿ ರಸ್ತೆಯಲ್ಲಿ ತಿಳಿ ಬಿಳಿ ಬಣ್ಣದ ಒಂದು ಕಾರನ್ನು ಅದರ ಚಾಲಕ   ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕೆಎ-13-ಹೆಚ್-7836 ರ ಬೈಕ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಬೈಕ್ ಸವಾರ ಹಕೀಂ ಎಂಬುವವರು ಕೆಳಗೆ ಬಿದ್ದು ಗಾಯಗೊಂಡಿದ್ದು ಕಾರಿನ ಚಾಲಕ ಕಾರನ್ನು ನಿಲ್ಲಿಸದೇ ಹೋಗಿರುತ್ತಾನೆ. ಈ ಬಗ್ಗೆ ಹಕೀಂ ರವರು ನೀಡಿದ ಪುಕಾರಿನ ಮೇರ ಮಡಿಕೇರಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಪರಿಚಿತ ವ್ಯಕ್ತಿ ಅಸ್ವಾಭಾವಿಕ ಸಾವು

            ದಿನಾಂಕ: 23-01-2020 ರಂದು ಮಡಿಕೇರಿ ತಾಲ್ಲೂಕು ಚೇಲಾವರ ಗ್ರಾಮದ ಬಳಿ ರಸ್ತೆಯ ಬದಿಯಲ್ಲಿ ಸುಮಾರು 65 ರಿಂದ 70 ವರ್ಷ ಪ್ರಾಯದ ಅಪರಿಚಿತ ಗಂಡಿಸು ಮಲಗಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುತ್ತಾರೆ. ಮೃತ ವ್ಯಕ್ತಿಯು ಬಗ್ಗೆ ಸ್ಥಳೀಯರಿಗೆ ಪರಿಚಯವಿಲ್ಲದೇ ಇದ್ದು ಅನಾರೋಗ್ಯದಿಂದ ನಿತ್ರಾಣಗೊಂಡು ಮೃತಪಟ್ಟಿರುವುದಾಗಿ ಕಂಡುಬಂದಿರುವ ಬಗ್ಗೆ ಸತೀಶ ಎಂಬುವವರು ನೀಡಿದ ದೂರಿನ ಮೇರೆ ನಾಪೋಕ್ಲು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 23-01-2020 ರಂದು ಕುಶಾಲನಗರ ಪಟ್ಟಣದ ಬೈಚನಹಳ್ಳಿ ಬಳಿ ಮುಖ್ಯ ರಸ್ತೆಯಲ್ಲಿ ಕೆಎ-12-ಎ 8086 ರ ಆಟೋ ರಿಕ್ಷಾವನ್ನು ಚಾಲಕ ಪ್ರಸನ್ನ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಗೆ ಮಗುಚಿ ಬಿದ್ದ ಪರಿಣಾಮ ಆಟೋ ಚಾಲಕ ಹಾಗೂ ಪ್ರಯಾಣಿಕರಾದ ಯಶೋಮತಿ, ರಾಮಸ್ವಾಮಿ ಎಂಬುವವರು ಗಾಯಗೊಂಡಿದ್ದು  ಬಗ್ಗೆ ಕುಶಾಲನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ರಸ್ತೆ ಅಪಘಾತ ಪ್ರಕರಣ

            ದಿನಾಂಕ: 23-01-2020 ರಂದು ಕುಶಾಲನಗರ ಪಟ್ಟಣದ ಗಂಧದಕೋಟೆ ಜಂಕ್ಷನ್ ಬಳಿ ಕೆಎ-12-ಬಿ-3817 ರ  ಆಟೋ ರಿಕ್ಷಾವನ್ನು ಚಾಲಕ ರಫೀಕ್ ಎಂಬುವವರು ಅಡ್ಡರಸ್ತೆಯಿಂದ ಮುಖ್ಯರಸ್ತೆಗೆ ಅಜಾಗರೂಕತೆಯಿಂದ ಚಾಲನೆ ಮಾಡಿ ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿಪಡಿಸಿದ ಪರಿಣಾಮ ಬೈಕ್ ಸವಾರ ಪುಟ್ಟನಾಯಕ ಎಂಬುವವರು ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಕುಶಾಲನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.