Crime News

ಆಭರಣ ಮಳಿಗೆಯಲ್ಲಿ ಕಳವು, ಆರೋಪಿ ಬಂಧನ:

ದಿನಾಂಕ: 05-01-2020 ರಂದು ಗೋಣಿಕೊಪ್ಪ ನಗರದ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಠಿತ ಮುಳಿಯ ಜ್ಯುವೆಲ್ಲರಿ ಮಳಿಗೆಯಿಂದ ಹಾಡುಹಗಲೇ ಅಲ್ಲಿನ ಸಿಬ್ಬಂದಿಯವರ ಕಣ್ಣುತಪ್ಪಿಸಿ ಚಿನ್ನದ ಉಂಗುರವನ್ನು ಕಳವು ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಗೋಣಿಕೊಪ್ಪ ಪೊಲೀಸರು  ಯಶಸ್ವಿಯಾಗಿರುತ್ತಾರೆ.

          ದಿನಾಂಕ 05-01-2020 ರಂದು ಮಧ್ಯಾಹ್ನ 01-00 ಗಂಟೆಗೆ ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿರುವ  ಮುಳಿಯ ಜ್ಯುವೆಲ್ಲರಿ ಶಾಪ್ ಗೆ ಚಿನ್ನ ಖರೀದಿಸುವ ನೆಪದಲ್ಲಿ ಆಗಮಿಸಿದ್ದ ಅಪರಿಚಿತ ವ್ಯಕ್ತಿಯೊಬ್ಬ ಅಲ್ಲಿನ ಸಿಬ್ಬಂದಿಯವರ ಗಮನವನ್ನು ಬೇರೆಡೆ ತಿರುಗಿಸಿ ಅವರುಗಳ ಕಣ್ಣುತಪ್ಪಿಸಿ ರೂ.22,000/- ಮೌಲ್ಯದ 6 ಗ್ರಾಂ ತೂಕದ ಚಿನ್ನದ ಉಂಗುರವನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಮುಳಿಯ ಜ್ಯುವೆಲ್ಸ್ ವ್ಯವಸ್ಥಾಪಕರಾದ ಅಶೋಕ್ ಡಿ.ಬಂಗೇರವರು ನೀಡಿದ ಪುಕಾರಿಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯನ್ನು ಕೈಗೊಳ್ಳಲಾಗಿತ್ತು.

          ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರವರ ಸೂಚನೆ ಮೇರೆಗೆ ಪಿಎಸ್ಐ ಗೋಣಿಕೊಪ್ಪ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರ ತಂಡ ದಿನಾಂಕ:09-03-2020 ರಂದು ಆರೋಪಿಯನ್ನು ವಿರಾಜಪೇಟೆ ನಗರದಲ್ಲಿ ಬಂಧಿಸಿ ರೂ.22,000/- ಮೌಲ್ಯದ 6.00 ಗ್ರಾಂ ತೂಕದ ಚಿನ್ನದ ಉಂಗುರವನ್ನು ವಶಪಡಿಸಿಕೊಂಡಿರುತ್ತಾರೆ. ಈತನು ಇನ್ನು ಹಲವು ಕಡೆ ನಕಲಿ ಉಂಗುರವನ್ನು ಇಟ್ಟು ಅಸಲಿ ಚಿನ್ನದ ಉಂಗುರವನ್ನು  ಕಳ್ಳತನ ಮಾಡುವ ಚಾಳಿಯುಳ್ಳವನಾಗಿರುತ್ತಾನೆ. ದಸ್ತಗಿರಿ ಮಾಡಲಾದ ಆರೋಪಿತನ ವಿವರ:- ತನ್ವೀರ್ ಪಾಷಾ ತಂದೆ:ಅಬ್ದುಲ್ ಬಾವ ಪ್ರಾಯ 58 ವರ್ಷ, ರೇಸ್ಕೋಸರ್್ನಲ್ಲಿ ಲಿಪಿಕ ಕೆಲಸ, 94/8, 3ನೇ ಕ್ರಾಸ್, ಗೌಸಿಯಾ ನಗರ, ಮೈಸೂರು.

          ಮೇಲಾಧಿಕಾರಿಯವರ  ಮಾರ್ಗದರ್ಶನದಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಶ್ರೀ ಎನ್.ಎನ್.ರಾಮರೆಡ್ಡಿ, ಗೋಣಿಕೊಪ್ಪ ಠಾಣಾ ಪಿಎಸ್ಐ ಶ್ರೀ.ಸುರೇಶ್ ಬೋಪಣ್ಣ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಸ್.ಮಣಿಕಂಠ, ಕೃಷ್ಣಮೂರ್ತಿ ರವರ ತಂಡ ಆರೋಪಿತನನ್ನು ಪತ್ತೆ ಹಚ್ಚಿರುತ್ತಾರೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವೈಖರಿಯನ್ನು ಶ್ಲಾಘಿಸಲಾಗಿದೆ.

ಕಾರು ಡಿಕ್ಕಿಯಾಗಿ ಮಗು ಸಾವು:

          ದಿನಾಂಕ: 11-03-2020 ರಂದು ಸೋಮವಾರಪೇಟೆ ತಾಲ್ಲೂಕು ಕೊಡ್ಲಿಪೇಟೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಕಾರು ಡಿಕ್ಕಿಯಾಗಿ 2 ವರ್ಷ ಪ್ರಾಯದ ಮಗು ಮೃತಪಟ್ಟಿರುವ ಘಟನೆ ನಡೆದಿದೆ. ಕೆಎ-04-ಎಎ-4660 ರ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾರೂಗತೆಯಿಂದ ಚಾಲನೆ ಮಾಡಿಕೊಂಡು ಹೋಗಿ ತನ್ನ ತಾತನೊಂದಿಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಗುವಿಗೆ ಡಿಕ್ಕಿಪಡಿಸಿ ಕಾರನ್ನು ನಿಲ್ಲಿಸದೇ ಹೋಗಿರುತ್ತಾನೆ. ಗಾಯಗೊಂಡಿದ್ದ ಮಗುವನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 12-03-2020 ರಂದು ಮಗು ಮೃತಪಟ್ಟಿದ್ದು ಈ ಬಗ್ಗೆ ಅಶ್ರಫ್ ಎಂಬುವವರು ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

          ದಿನಾಂಕ: 10-03-2020 ರಂದು ಸೋಮವಾರಪೇಟೆ ತಾಲ್ಲೂಕು ಗೊಂದಿಬಸವನಹಳ್ಳಿ ಗ್ರಾಮದ ನಿವಾಸಿ ಕೆ.ಬಿ ಬಷೀರ್ ಎಂಬುವವರು ಅವರ ಮನೆಯ ಬಳಿ ಚರಂಡಿ ಕೆಲಸ ಮಾಡುತ್ತಿರುವಾಗ ಪಕ್ಕದ ಮನೆಯ ವಾಸಿಗಳಾದ ಬಾಷಾ, ಸಾದಿಕ್, ರಫೀಕ್ ಮತ್ತು ಅಜೀಜ್ ಎಂಬುವವರು ಚರಂಡಿ ಕೆಲಸದ ಬಗ್ಗೆ ವಿನಾ ಕಾರಣ ಜಗಳಮಾಡಿ ಅವಾಚ್ಯ ಪದಗಳಿಂದ ಬೈದು ಹಲ್ಲೆ ಮಾಡಿ ನೋವುಪಡಿಸಿದ್ದು ಈ ಬಗ್ಗೆ ದಿನಾಂಕ: 12-03-2020 ರಂದು ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್ ಕಳವು ಪ್ರಕರಣ

          ದಿನಾಂಕ: 01-03-2020 ರಂದು ಮಡಿಕೇರಿ ತಾಲ್ಲೂಕು ಮೂರ್ನಾಡು ಗ್ರಾಮದ ನಿವಾಸಿ ಸಜೀರ್ ಎಂಬುವವರು ಅವರ ಮನೆಯ ಬಳಿ ನಿಲ್ಲಿಸಿದ್ದ ಕೆಎ-09-ಕೆ-0209 ರ ಯಮಹಾ ಆರ್ ಎಕ್ಸ್ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ: 12-03-2020 ರಂದು ನೀಡಿದ ಪುಕಾರಿನ ಮೇರೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ

          ದಿನಾಂಕ: 12-03-2020 ರಂದು ವಿರಾಜಪೇಟೆ ತಾಲ್ಲೂಕು ಹುದಿಕೇರಿ ಗ್ರಾಮದ ನಿವಾಸಿ ಮಂಜುನಾಥ ಎಂಬುವವರು ಅವರ ಆಟೋರಿಕ್ಷಾದಲ್ಲಿ ಗೋಣಿಕೊಪ್ಪ ಗ್ರಾಮದ ಮುಖ್ಯ ರಸ್ತೆಯಲ್ಲಿ ನಿಂತಿದ್ದ ಕಾರಿನ ಪಕ್ಕದಲ್ಲಿ ಹೋಗುತ್ತಿರುವಾಗ ಕಾರಿನ ಚಾಲಕ ಕಾನೂರು ಗ್ರಾಮದ ರಾಕೇಶ್ ಎಂಬುವವರು ಕ್ಷುಲ್ಲಕ ಕಾರಣಕ್ಕೆ ಆಟೋರಿಕ್ಷಾ ತಡೆದು ಮಂಜುನಾಥರವರನ್ನು ಹೊರಗೆ ಎಳೆದು ಕೈಯಿಂದ ಹಲ್ಲೆ ಮಾಡಿ ನೋವುಪಡಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ

          ದಿನಾಂಕ: 12-03-2020 ರಂದು ಗೋಣಿಕೊಪ್ಪ ಠಾಣೆ ಪಿ.ಎಸ್.ಐ ಸುರೇಶ್ ಬೋಪಣ್ಣ ಮತ್ತು ಸಿಬ್ಬಂದಿಯವರು ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ಅಮ್ಮತ್ತಿಗೆ ಹೋಗುವ ಸಾರ್ವಜನಿಕ ರಸ್ತೆಯ ಬದಿಯ ಸ್ಥಳದಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದ ಸುರೇಶ್, ನಾಗರಾಜು, ಶಿವಕುಮಾರ್, ಇರ್ಫಾನ್, ಮೂರ್ತಿ, ಶಿಬಿ ಎಂಬುವವರನ್ನು ವಶಕ್ಕೆ ಪಡೆದು ಜೂಜಾಟಕ್ಕೆ ಉಪಯೋಗಿಸಿದ್ದ ವಸ್ತುಗಳೊಂದಿಗೆ 18,790 ರೂ ನಗದನ್ನು ಅಮಾನತ್ತು ಪಡಿಸಿಕೊಂಡು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.