Crime News
ಕಳವು ಪ್ರಕರಣ, ಆರೋಪಿಗಳ ಬಂಧನ, ಚಿನ್ನಾಭರಣ ನಗದು ವಶ:
ಸಾರ್ವಜನಿಕರ ನಡುವೆಯೇ ಓಡಾಡಿಕೊಂಡು ಯಾರೂ ಇಲ್ಲದ ಮನೆಗಳನ್ನು ಪತ್ತೆ ಮಾಡಿ ಹಗಲು ಹಾಗೂ ರಾತ್ರಿ ವೇಳೆಯಲ್ಲಿ ಕಳವು ಮಾಡುತ್ತಿದ್ದ ಶನಿವಾರಸಂತೆ ಮೂಲದ ಆರೋಪಿಯನ್ನು ಬಂಧಿಸುವಲ್ಲಿ ಶನಿವಾರಸಂತೆ ಪೊಲೀಸರು ಯಶಸ್ವಿಯಾಗಿದ್ದಾರೆ. ಶನಿವಾರಸಂತೆ ಠಾಣಾ ಸರಹದ್ದಿನ ಗ್ರಾಮಗಳಲ್ಲಿ ಬೀಗ ಹಾಕಿದ ಮನೆಗಳನ್ನು ಆರೋಪಿತನು ಹೊಂಚು ಹಾಕಿ ನೋಡಿಕೊಂಡು ಬೀಗದ ಕೀ ಇಟ್ಟ ಜಾಗವನ್ನು ಗುರುತಿಸಿಕೊಂಡು ಮನೆಗಳಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯಲ್ಲಿಟ್ಟಿದ್ದ ನಗದು ಮತ್ತು ಚಿನ್ನಾಭರಣಗಳನ್ನು ಕಳುವು ಮಾಡುತ್ತಿದ್ದು, ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಅನೇಕ ಕಳುವು ಪ್ರಕರಣಗಳು ದಾಖಲಾಗಿದ್ದು, ಸದರಿ ಪ್ರಕರಣಗಳನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಹಾಗೂ ಮಾನ್ಯ ಪೊಲೀಸ್ ಉಪಾಧೀಕ್ಷಕರು, ಸೋಮವಾರಪೇಟೆ ಉಪ ವಿಭಾಗ ರವರು ಸಿಪಿಐ ಸೋಮವಾರಪೇಟೆ ರವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು. ವೈಜ್ಞಾನಿಕ ತಂತ್ರಜ್ಞಾನವನ್ನು ಬಳಸಿ ಆರೋಪಿಯ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸ್ ತಂಡ ಆರೋಪಿಯ ಚಲನವಲನಗಳನ್ನು ಗಮನಿಸಿ ಆತನನ್ನು ಸೋಮವಾರಪೇಟೆಯಲ್ಲಿ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆತ ನೀಡಿದ ಮಾಹಿತಿಯ ಮೇರೆಗೆ ಆರೋಪಿ ಕಳವು ಮಾಡಿದ ಮಾಲನ್ನು ಸ್ವೀಕರಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸಹ ಬಂದಿಸಲಾಗಿದೆ.
ದಸ್ತಗಿರಿ ಮಾಡಿದ ಆರೋಪಿಗಳ ವಿವರ:- 1) ಸಣ್ಣಪ್ಪ ಕೆ.ಎನ್. @ ಡೀಲಾಕ್ಷ @ ಮಧು, ತಂದೆ ನಾಗಯ್ಯ, ಪ್ರ್ರಾಯ 45 ವರ್ಷ, ಕೂಲಿ ಕೆಲಸ, ವಾಸ ಕಣಗಲ್ ನಾಕಲಗೂಡು ಗ್ರಾಮ, ಹಂಡ್ಲಿ ಅಂಚೆ, ಕೊಡ್ಲಿಪೇಟೆ ಹೋಬಳಿ. 2) ಕುಶಾಲ್ ತಂದೆ ಮುದ್ದ, ಪ್ರಾಯ 47 ವರ್ಷ, ಕೂಲಿ ಕೆಲಸ, ಅವರೆದಾಳು ಗ್ರಾಮ, ಕೊಡ್ಲಿಪೇಟೆ ಹೋಬಳಿ, 3) ಗಣೇಶ್ ಪ್ರಸಾದ್ ಎಂ.ಎಸ್., ತಂದೆ ಮುರುಗೇಶ್, ಪ್ರಾಯ 28 ವರ್ಷ, ಸೋಮವಾರಪೇಟೆ ಕಾರ್ಪೊರೇಶನ್ ಬ್ಯಾಂಕ್ ನಲ್ಲಿ ಅಟೆಂಡರ್ ಕೆಲಸ, ವಾಸ ರೇಂಜರ್ ಬ್ಲಾಕ್, ಸೋಮವಾರಪೇಟೆ
ಆರೋಪಿಗಳಿಂದ ವಶಪಡಿಸಿಕೊಂಡ ಕಳುವು ಮಾಲಿನ ವಿವರ: (1). 61.29 ಗ್ರಾಂ. ತೂಕದ ಚಿನ್ನಾಭರಣ ಬೆಲೆ ಸುಮಾರು ರೂ 1,80,000/- .(2). ನಗದು ಹಣ ರೂ 27,000/-. (3). 135.78 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಬೆಲೆ ಸುಮಾರು ರೂ 3,000/-. (4). ಕೃತ್ಯಕ್ಕೆ ಬಳಸಿದ ಒಂದು ಮೊಬೈಲ್ ಮತ್ತು ಸ್ಕ್ರೂ ಡ್ರೈವರನ್ನು ವಶಪಡಿಸಿಕೊಳ್ಳಲಾಗಿದೆ.
ಒಂದನೇ ಆರೋಪಿತನ ಮೇಲೆ ಬೆಂಗಳೂರು, ಯಸಳೂರು, ಸಕಲೇಶಪುರ ಹಾಗೂ ಶನಿವಾರಸಂತೆ ಪೊಲೀಸ್ ಠಾಣೆಗಳಲ್ಲಿ 34 ಕಳುವು ಪ್ರಕರಣ ದಾಖಲಾಗಿ ಶನಿವಾರಸಂತೆ ಠಾಣೆಯ 9 ಕಳುವು ಪ್ರಕರಣಗಳಲ್ಲಿ ಆರೋಪಿತನಿಗೆ ಸೋಮವಾರಪೇಟೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿದ್ದು, ಇನ್ನು ಹಲವು ಕಳುವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ. ಕಳವು ಪ್ರಕರಣಗಳಲ್ಲಿ ಆರೋಪಿತನು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಈತನ ಮೇಲೆ ಸುಮಾರು 13 ದಸ್ತಗಿರಿ ವಾರೆಂಟ್ ಕೂಡ ಆಗಿರುತ್ತದೆ. ಆರೋಪಿತನು ಕಳುವು ಮಾಡಿದ ಚಿನ್ನಾಭರಣಗಳನ್ನು 3ನೇ ಆರೋಪಿತನಿಗೆ ಮಾರಾಟ ಮಾಡಿದ್ದು, 3ನೇ ಆರೋಪಿಯಿಂದ ಮಾಲನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಆರೋಪಿಯಿಂದ ಕಳವು ಮಾಲನ್ನು ಸ್ವೀಕರಿಸಿದ ಗಣೇಶ್ ಹಾಗೂ ಕುಶಾಲ್ ರವರ ವಿರುದ್ಧ ಕೂಡ ಪ್ರಕರಣಗಳು ದಾಖಲಾಗಿದ್ದು, ಅಪರಿಚಿತರಿಂದ ಹಾಗೂ ಸ್ನೇಹಿತರಿಂದ ಬೆಲೆಬಾಳುವ ಆಭರಣಗಳನ್ನು ಅಡಮಾನವಿಟ್ಟುಕೊಳ್ಳುವ ಹಾಗೂ ಖರೀದಿಸುವ ವೇಳೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾಗಿರುತ್ತದೆ.
ಮೇಲ್ಕಂಡ ಆರೋಪಿತರನ್ನು ದಸ್ತಗಿರಿ ಮಾಡಿ ಶನಿವಾರಸಂತೆ ಹಾಗೂ ಸೋಮವಾರಪೇಟೆ ಪೊಲೀಸ್ ಠಾಣೆಗೆ ಸಂಬಂಧಪಟ್ಟಂತೆ 8 ಕಳುವು ಪ್ರಕರಣಗಳನ್ನು ಭೇದಿಸಲಾಗಿರುತ್ತದೆ. ಒಂದನೇ ಆರೋಪಿತನ ಮೇಲೆ ಈವರೆಗೆ ಒಟ್ಟು 34 ಕಳುವು ಪ್ರಕರಣಗಳು ದಾಖಲಾಗಿರುತ್ತದೆ.

ಸದರಿ ಪ್ರಕರಣವನ್ನು ಡಾ|| ಸುಮನ್.ಡಿ.ಪಿ., ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಹಾಗೂ ಶ್ರೀ ಹೆಚ್.ಎಂ. ಶೈಲೇಂದ್ರ, ಪೊಲೀಸ್ ಉಪಾಧೀಕ್ಷಕರು, ಸೋಮವಾರಪೇಟೆ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ಶ್ರೀ ನಂಜುಂಡೇಗೌಡ, ಹಾಗೂ ಕುಶಾಲನಗರ ವೃತ್ತ ನಿರೀಕ್ಷಕರಾದ ಶ್ರೀ ಎಂ. ಮಹೇಶ, ರವರ ನೇತೃತ್ವದಲ್ಲಿ ಶನಿವಾರಸಂತೆ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಕೃಷ್ಣ ನಾಯಕ್, ಸಿಬ್ಬಂದಿಯವರಾದ ಎಂ.ಎಸ್. ಬೋಪಣ್ಣ ಎಸ್.ಸಿ. ಲೋಕೇಶ್, ಬಿ.ಡಿ. ಮುರಳಿ, ವಿನಯ್ ಕುಮಾರ್ ಮತ್ತು ಕುಶಾಲನಗರ ಉಪ ವಿಭಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಗಳಾದ ಎಂ.ಎ. ಗೋಪಾಲ್, ಬಿ.ಎಸ್. ದಯಾನಂದ, ಟಿ.ಎಸ್. ಸಜಿ, ಸಿಪಿಐ ಕಚೇರಿಯ ಸಿಬ್ಬಂದಿ ಅನಂತ ಕುಮಾರ್, ಮಂಜುನಾಥ್ ಮತ್ತು ಕುಮಾರಸ್ವಾಮಿ ಹಾಗೂ ಕೊಡಗು ಜಿಲ್ಲಾ ಬೆರಳು ಮುದ್ರಾ ಘಟಕದ ಸಂತೋಷ್ ಹಾಗೂ ಮಡಿಕೇರಿ ಸಿ.ಡಿ.ಆರ್. ಸೆಲ್ ನ ಸಿಬ್ಬಂದಿಗಳಾದ ರಾಜೇಶ್ ಮತ್ತು ಗಿರೀಶ್ ರವರ ಪರಿಶ್ರಮದಿಂದ ಪ್ರಕರಣಗಳನ್ನು ಬೇಧಿಸಿದ್ದು ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ. ಕೊಡಗು ಜಿಲ್ಲೆಯ ಸಾರ್ವಜನಿಕರು ಬೇರೆ ಊರುಗಳಿಗೆ ತೆರಳುವ ಸಂಧರ್ಭದಲ್ಲಿ ಮನೆಯಲ್ಲಿ ಯಾವುದೇ ನಗದು ಹಾಗೂ ಬೆಲೆಬಾಳುವ ಚಿನ್ನಾಭರಣಗಳನ್ನು ಮನೆಯಲ್ಲಿ ಇಡದೇ ಬ್ಯಾಂಕ್ ಲಾಕರ್ ನಲ್ಲಿ ಇಡುವಂತೆ ಮತ್ತು ಬೇರೆ ಊರುಗಳಿಗೆ ತೆರಳುವ ಅನಿವಾರ್ಯತೆಯ ಸಂದರ್ಭ ಬಂದಲ್ಲಿ ತಮ್ಮ ಮನೆಗಳಲ್ಲಿ ಪರಿಚಯಸ್ಥರನ್ನು ಉಳಿದುಕೊಳ್ಳುವ ಬಗ್ಗೆ ನೋಡಿಕೊಂಡು ಇಂತಹ ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಕೋರಿಕೆ.
ಕೊಲೆ ಆರೋಪ ಸಾಬೀತು, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ:
ದಿನಾಂಕ 06-11-2012 ರಂದು ಬೆಳಿಗ್ಗೆ 08.00 ಗಂಟೆಗೆ ಕೆ. ಗೋವಿಂದ ರಾಜು ತಂದೆ ಪೌತಿ ಕೃಷ್ಣಪ್ಪ ಪ್ರಾಯ 57 ವರ್ಷ, ವಾಸ ಪಿ. ಹೊಸಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾಲೂಕು. ಮಂಡ್ಯ ಜಿಲ್ಲೆ ರವರು ಅವರ ಗದ್ದೆ ಜಮೀನಿನ ಬಳಿ ಹೋದಾಗ ಜನರು ಪಾಲಹಳ್ಳಿ-ಪಿ- ಹೊಸಹಳ್ಳಿ ಮದ್ಯೆ ಬರುವ ವಚ್ಚಿ ತೋಕು ಬಳಿ ದೇವರಾಜ ನೀರಾವರಿ ನಾಲೆಯ ಬಳಿ ಜನರು ಸೇರಿದ್ದು ಅಲ್ಲಿಗೆ ನಾನು ಹೋಗಿ ನೋಡಲಾಗಿ ಸುಮಾರು 24-28 ವರ್ಷದ ಗಂಡಸಿನ ಮೃತ ದೇಹವು ನಾಲೆಯ ನೀರಿನಲ್ಲಿ ಬೋರಲಾಗಿ ಬಿದ್ದಿದ್ದು, ಸದರಿ ಮೃತ ದೇಹದ ಎರಡು ಕೈಗಳನ್ನು ಬುಜದ ಭಾಗದವರೆಗೆ ಕತ್ತಿರಿಸಿ ಹಾಕಿದ್ದು, ಕಾಲುಗಳನ್ನು ಮೊಣಕಾಲಿನಿಂದ ಸ್ವಲ್ಪ ಕೆಳಭಾಗಕ್ಕೆ ಕತ್ತರಿಸಿ ಹಾಕಿದ್ದು, ತಲೆಯನ್ನು ಸಹ ಕತ್ತರಿಸಿ ಎಲ್ಲಿಯೋ ಬಿಸಾಕಿದ್ದು ಮೃತ ದೇಹವು ಮಾತ್ರ ಬೋರಲಾಗಿ ನೀರಿನಲ್ಲಿ ಬೆಳೆದಿರುವ ಗಿಡಗಳಿಗೆ ತಾಗಿಕೊಂಡು ಅಲ್ಲಿ ಇರುತ್ತೆ. ಮೃತ ದೇಹವು ಗಂಡಸಿನದಾಗಿದ್ದು ಗೋದಿ ಬಣ್ಣದಾಗಿದ್ದು ದೇಹದ ಮೇಲೆ ಕಾಫಿ ಕಲರಿನ ಒಂದು ಕಾಚ ಇರುತ್ತೆ, ಉಳಿದಂತೆ ಮೈಮೇಲೆ ಯಾವುದೇ ಬಟ್ಟೆಗಳು ಇರುವುದಿಲ್ಲ. ಬೆನ್ನಿನ ಭಾಗದಲ್ಲಿ 4-5 ಕಡೆ ಚಾಕುವಿನಿಂದ ತಿವಿದ ಗುರುತುಗಳು ಇರುತ್ತದೆ. ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕಾಗಿ ಈ ಯುವಕನನ್ನು ಕೊಲೆ ಮಾಡಿ ಕೊಲೆಯನ್ನು ಮರೆ ಮಾಚಲು ಕೈಗಳನ್ನು ಕಾಲುಗಳು ಹಾಗೂ ತಲೆಯನ್ನು ಕತ್ತರಿಸಿ ನೀರಿಗೆ ಹಾಕಿ ದೇವರಾಜ ನೀರಾವರಿ ನಾಲೆಗೆ ಹಾಕಿರುವುದು ಕಂಡು ಬರುತ್ತದೆ. ಕೊಲೆಯಾಗಿರುವ ಮೃತ ದೇಹದ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಪಿರ್ಯಾದಿಗೆ ಶ್ರೀರಂಗಪಟ್ಟಣ ಪೊಲೀಸ್ ಠಾಣಾ ಮೊ.ಸಂ.621/2012 ಕಲಂ.302, 201, 120(ಬಿ) ಐಪಿಸಿ ರೀತಿ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿರುತ್ತಾರೆ.
ನಂತರ ತನಿಖೆಯ ಕಾಲದಲ್ಲಿ ತನಿಖಾಧಿಕಾರಿ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಆರ್ ಪ್ರಸಾದ್ ರವರು ಆರೋಪಿಗಳಾದ 1) ಕೆ.ಸಿ.ಗೋಪಾಲ ಕೃಷ್ಣ @ ಗಿರೀಶ ತಂದೆ ಚಿಣ್ಣಪ್ಪ ಪ್ರಾಯ 51 ವರ್ಷ, ಆಟೋ ಚಾಲಕ, ವಾಸ ಕೆ. ಬೋಯಿಕೇರಿ ಗ್ರಾಮ, ವಿರಾಜಪೇಟೆ ತಾಲೂಕು. 2) ಮದೂಸೂಧನ್ @ ಮಧು ತಂದೆ ಪೌತಿ ಟಿ.ಎಂ. ಶಂಕರಪ್ಪ, ಪ್ರಾಯ 33 ವರ್ಷ, ಚಿನ್ನ ಬೆಳ್ಳಿ ಪಾಲಿಸ್ ಕೆಲಸ, ವಾಸ ಮೀನುಪೇಟೆ, ವಿರಾಜಪೇಟೆ ನಗರ. 3) ಶ್ರೀಮತಿ ಶಶಿಕಲಾ ಗಂಡ ಪೌತಿ ರಂಗಸ್ವಾಮಿ @ ಯೋಗಾನಂದ ಪ್ರಾಯ 31 ವರ್ಷ, ವಾಸ ವಿನಾಯಕ ನಗರ, ಐಮಂಗಲ ಗ್ರಾಮ. ಇವರುಗಳನ್ನು ದಸ್ತಗಿರಿ ಮಾಡಿ ವಿಚಾರಿಸಿದಾಗ ಆರೋಪಿಗಳು ಸೇರಿಕೊಂಡು ದಿನಾಂಕ 04-11-2012 ರಂದು 3ನೇ ಆರೋಪಿಯ ಗಂಡ ಯೋಗಾನಂದ @ ರಂಗಸ್ವಾಮಿ ಎಂಬುವವರನ್ನು 1 ಮತ್ತು 2ನೇ ಆರೋಪಿಗಳು ಸೇರಿಕೊಂಡು ವಿರಾಜಪೇಟೆಯಲ್ಲಿ ಮದ್ಯಪಾನ ಮಾಡಿಸಿ ಕಾರಿನಲ್ಲಿ ರಾತ್ರಿ ಸಮಯ ಸುಮಾರು 9.00 ಗಂಟೆಗೆ ಚೆಂಬೆಬೆಳ್ಳೂರು ಗ್ರಾಮದಲ್ಲಿರುವ ಭದ್ರಕಾಳಿ ದೇವರ ಉತ್ಸವ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಚಾಕುವಿನಿಂದ ಪಕ್ಕೆಗೆ,ಬೆನ್ನಿಗೆ ತಿವಿದು ಕೊಲೆ ಮಾಡಿ ನಂತರ ಆತನ ತಲೆ, ಕೈಗಳು, ಹಾಗೂ ಕಾಲುಗಳನ್ನು ಕತ್ತಿಯಿಂದ ಕತ್ತರಿಸಿ ತುಂಡುಮಾಡಿ ರುಂಡ, ಕೈಗಳು ಹಾಗೂ ಕಾಲುಗಳನ್ನು ಬಟ್ಟೆ ಸಮೇತ ಒಂದು ಚೀಲದಲ್ಲಿ ಹಾಕಿ,ಮುಂಡವನ್ನು ಮತ್ತೊಂದು ಚೀಲದಲ್ಲಿ ಹಾಕಿಕೊಂಡು 1ನೇ ಆರೋಪಿಗೆ ಸೇರಿದ ಕಾರಿನಲ್ಲಿತುಂಬಿಸಿಕೊಂಡು ಹೋಗಿ ಕೈ,ಕಾಲು, ತಲೆ ಹಾಗೂ ಬಟ್ಟೆಗಳಿದ್ದ ಚೀಲವನ್ನು ಹುಣಸೂರಿನ ಹತ್ತಿರ ನದಿಗೆ ಎಸೆದು ದೇಹದ ಬಾಗವನ್ನು ಕೆ.ಆರ್.ಎಸ್.ರಸ್ತೆಯಲ್ಲಿ ನಾಲೆಗೆ ಎಸೆದಿರುವುದಾಗಿ ಹೇಳಿಕೆಯನ್ನು ನೀಡಿರುತ್ತಾರೆ. ಸದರಿ ಪ್ರಕರಣದ ಕೃತ್ಯ ಸ್ಥಳವು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ಒಳಪಟ್ಟಿರುವುದರಿಂದ ಠಾಣಾ ವ್ಯಾಪ್ತಿಯ ಆಧಾರದ ಮೇರೆ ಮುಂದಿನ ತನಿಖೆಯ ಬಗ್ಗೆ ಪ್ರಕರಣದ ಸಂಪೂರ್ಣ ಕಡತವನ್ನು ದಿನಾಂಕ 11-01-2013 ರಂದು ಕಳುಹಿಸಿಕೊಟ್ಟ ಮೇರೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಮೊ.ಸಂ.04/2013 ಕಲಂ:302, 201, 120(ಬಿ) ಐಪಿಸಿ ರೀತಿ ಪ್ರಕರಣ ದಾಖಲಿಸಿಕೊಳ್ಳಲಾಯಿತು.
ನಂತರ ಪ್ರಕರಣದಲ್ಲಿ ತನಿಖಾ ಕಾರ್ಯ ಕೈಗೊಂಡು ತನಿಖೆ ಪೂರೈಸಿ ಆರೋಪಿಗಳಾದ ಎ1 ಕೆ.ಸಿ.ಗೋಪಾಲಕೃಷ್ಣ @ ಗಿರೀಶ, ಎ2 ಮದುಸೂದನ್ @ ಮಧು , ಎ3 ಶ್ರೀಮತಿ ಶಶಿಕಲಾ ಇವರುಗಳ ವಿರುದ್ದ ದೊಷಾರೋಪಣ ಪತ್ರ ಸಲ್ಲಿಸಿದ್ದು ವಿರಾಜಪೇಟೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಎಸ್.ಸಿ.ನಂಬರ್ 5012/2019 ರಲ್ಲಿ ವಿಚಾರಣೆ ನಡೆದು ಘನ ನ್ಯಾಯಾಲಯವು ಆರೋಪಿಗಳ ವಿರುದ್ದ ಆರೋಪವು ಸಾಬೀತಾಗಿರುತ್ತದೆಂದು ತೀರ್ಪು ನೀಡಿದೆ.
1) ಕೆ.ಸಿ ಗೋಪಾಲಕೃಷ್ಣ @ ಗಿರೀಶ, ತಂದೆ ಚಿಣ್ಣಪ್ಪ.ಪ್ರಾಯ 51ವರ್ಷ, ಮಾಜಿ ಸೈನಿಕ ಹಾಗೂ ಆಟೋ ಚಾಲಕ, ವಾಸ ಕೆ.ಬೋಯಿಕೇರಿ ಗ್ರಾಮ, ವಿರಾಜಪೇಟೆ ತಾಲೋಕು.
2) ಮದುಸೂದನ್ @ ಮಧು, ತಂದೆ ಪೌತಿ ಟಿ.ಎಂ. ಶಂಕರಪ್ಪ, ಪ್ರಾಯ 33 ವರ್ಷ, ಚಿನ್ನ,ಬೆಳ್ಳಿ ಪಾಲೀಷ್ ಕೆಲಸ , ವಾಸ : ಮೀನುಪೇಟೆ, ವಿರಾಜಪೇಟೆ ನಗರ.
3) ಶ್ರೀಮತಿ ಶಶಿಕಲಾ, ಗಂಡ ರಂಗಸ್ವಾಮಿ @ ಯೋಗಾನಂದ, 31 ವರ್ಷ, ವಾಸ : ವಿನಾಯಕ ನಗರ, ಐಮಂಗಲ ಗ್ರಾಮ, ವಿರಾಜಪೇಟೆ ತಾಲೋಕು. ಇವರುಗಳಿಗೆ ಘನ ನ್ಯಾಯಾಲಯವು ಈ ದಿನ ದಿನಾಂಕ 16-03-2020 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದ್ದು, ಆರೋಪಿಗಳಾದ 1 ರಿಂದ 3 ರವರುಗಳಿಗೆ ಕಲಂ: 302, ರೆ/ವಿ 120(ಬಿ) ಐ.ಪಿ.ಸಿ.ಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 50,000/- ರೂ ದಂಡ ವಿಧಿಸಿರುತ್ತಾರೆ. ದಂಡ ಕಟ್ಟಲು ತಪ್ಪಿದಲ್ಲೂ 2 ವರ್ಷ ಸಾದಾ ಜೈಲು ಶಿಕ್ಷೆ, ಹಾಗೂ 201 ಐ.ಪಿ.ಸಿ.ಗೆ 3 ವರ್ಷ ಜೈಲು ಶಿಕ್ಷೆ ಹಾಗೂ ತಲಾ 5000-00 ರೂ ದಂಡ , ತಪ್ಪಿದಲ್ಲೂ 6 ತಿಂಗಳು ಜೈಲು ಶಿಕ್ಷೆ ವಿಧಿಸಿರುತ್ತಾರೆ. ಈ ಪ್ರಕರಣವನ್ನು ಅಂದಿನ ತನಿಖಾಧಿಕಾರಿ ವಿರಾಜಪೇಟೆ ವೃತ್ತದ ವೃತ್ತದ ಪೊಲೀಸ್ ಇನ್ಸ್ ಪೆಕ್ಟರ್ ರವರಾದ ಪಿ.ಪಿ ಸಂತೋಷ್ ರವರು ತನಿಖೆ ಮಂದುವರೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದು, ಸರ್ಕಾರಿ ಅಭಿಯೋಜಕರಾದ ಶ್ರೀ. ನಾರಾಯಣರವರು ಸರ್ಕಾರದ ಪರವಾಗಿವಾದ ಮಂಡಿಸಿರುತ್ತಾರೆ.
ಹಲ್ಲೆ ಪ್ರಕರಣ
ದಿನಾಂಕ: 14-03-2020 ರಂದು ಗೂಡುಗದ್ದೆ, ಗುಹ್ಯ ಗ್ರಾಮದ ನಿವಾಸಿ ಟಿ.ಎಂ ಉಮೇಶ್ ಎಂಬುವವರ ಗದ್ದೆಯಲ್ಲಿ ಅದೇ ಗ್ರಾಮದ ನಿವಾಸಿಗಳಾದ ಸುಬ್ರಮಣಿ, ಸುಗಂಧ, ಸೋಮಯ್ಯ, ದಿವಾಕರ, ಪ್ರಸನ್ನ ಎಂಬುವವರು ಜೋರಾಗಿ ಮಾತನಾಡಿಕೊಂಡು ಪಾರ್ಟಿ ಮಾಡುತ್ತಿದ್ದುದನ್ನು ಕೇಳಿದಾಗ ಜಗಳ ಮಾಡಿ ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸಿದ್ದಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವ್ಯಕ್ತಿ ಕಾಣೆ ಪ್ರಕರಣ
ದಿನಾಂಕ: 05-03-2020 ರಂದು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ಕಾಳೇತಿಮ್ಮನಹಳ್ಳಿ ಗ್ರಾಮದ ನಿವಾಸಿ ಸುರೇಶ ಎಂಬುವವರು ಅವರ ಪತ್ನಿ ಮತ್ತು ಮಗುವನ್ನು ಮಡಿಕೇರಿ ಬಸ್ ನಿಲ್ದಾಣದಲ್ಲಿ ಹೊಳೆನರಸೀಪುರದ ಸಂಬಂಧಿಕರ ಮನೆಗೆ ಬಸ್ ಹತ್ತಿಸಿ ಕಗ್ಗೋಡ್ಲುಗೆ ಹೋಗಿಬರುವುದಾಗಿ ಹೇಳಿ ಹೋದವರು ವಾಪಾಸ್ಸು ಮನೆಗೆ ಬಂದಿರುವುದಿಲ್ಲ. ದಿನಾಂಕ: 06-03-2020 ರಂದು ದೂರವಾಣಿ ಕರೆ ಮಾಡಿ ಕುಂದಾಪುರಕ್ಕೆ ಹೋಗುತ್ತಿರುವುದಾಗಿ ಹೇಳಿದ್ದು ನಂತರ ದೂರವಾಣಿ ಕರೆ ಮಾಡಿಕಾದ ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ. ನಂತರ ಅವರನ್ನು ಹಲವು ಕಡೆ ಹುಡುಕಿದರೂ ಸಹಾ ಪತ್ತೆಯಾಗದೇ ಕಾಣೆಯಾಗಿದ್ದು ಈ ಬಗ್ಗೆ ದಿನಾಂಕ: 15-03-2020 ರಂದು ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ರಸ್ತೆ ಅಪಘಾತ ಪ್ರಕರಣ
ದಿನಾಂಕ: 15-03-2020 ರಂದು ಮಡಿಕೇರಿ ನಗರದ ಮ್ಯಾನ್ಸ್ ಕಾಂಪೌಂಡ್ ಬಳಿ ಮಡಿಕೇರಿ ಸ್ವಾಗತ್ ಕ್ಯಾಟರಿಂಗ್ ಗೆ ಸೇರಿದ ಪಿಕ್ ಅಪ್ ವಾಹನವನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಈಶ್ವರ್ ಎಂಬುವವರು ಚಾಲನೆ ಮಾಡುತ್ತಿದ್ದ ಕೆಎ-12-ಕೆ-1271 ರ ಸ್ಕೂಟರ್ ಗೆ ಡಿಕ್ಕಿಪಡಿಸಿದ ಪರಿಣಾಮ ಸ್ಕೂಟರ್ ನಲ್ಲಿದ್ದ ಈಶ್ವರ್ ರವರ ಮಗಳ ಕಾಲಿಗೆ ಗಾಯವಾಗಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಮಡಿಕೇರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ರಸ್ತೆ ಅಪಘಾತ ಪ್ರಕರಣ
ದಿನಾಂಕ: 15-03-2020 ರಂದು ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪ ಗ್ರಾಮದ ಬೈಪಾಸ್ ರಸ್ತೆಯಲ್ಲಿ ಕೆಎ-45-ಇಬಿ-8210 ರ ಬೈಕನ್ನು ಅದರ ಸವಾರ ರವಿ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದು ಈ ಬಗ್ಗೆ ಗಾಯಾಳುವಿನ ತಂದೆ ನಾಗರಾಜು ಎಂಬುವವರು ನೀಡಿದ ಪುಕಾರಿನ ಮೇರೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ
ದಿನಾಂಕ: 15-03-2020 ರಂದು ವಿರಾಜಪೇಟೆ ತಾಲ್ಲೂಕು ಬೇಟೋಳಿ ಗ್ರಾಮದ ನಿವಾಸಿ ಸುಬ್ಬಯ್ಯ ಮತ್ತು ಅವರ ಕಾರ್ಮಿಕರು ಹಾಗೂ ಅದೇ ಗ್ರಾಮದ ನಿವಾಸಿಗಳಾದ ಗಣೇಶ್ ಮತ್ತು ಬೋಪಣ್ಣ ಎಂಬುವವರು ಸುಬ್ಬಯ್ಯರವರ ಜಾಗಕ್ಕೆ ಸಿಮೆಂಟ್ ಕಂಬ ಮತ್ತು ತಂತಿ ಅಳವಡಿಸುವ ವಿಚಾರದಲ್ಲಿ ಪರಸ್ಪರ ಜಗಳ ಮಾಡಿಕೊಂಡು ಅವಾಚ್ಯ ಪದಗಳಿಂದ ಬೈದು ದೊಣ್ಣೆ, ಕತ್ತಿ ಮತ್ತು ಬಾಟಲಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ಉಭಯಕಡೆಯವರು ನೀಡಿದ ಪುಕಾರಿನ ಮೇರೆ ವಿರಾಜಪೇಟೆ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ರಸ್ತೆ ಅಪಘಾತ ಪ್ರಕರಣ
ದಿನಾಂಕ: 15-03-2020 ರಂದು ವಿರಾಜಪೇಟೆ ತಾಲ್ಲೂಕು ಹೂದೂರು ಗ್ರಾಮದ ಬಳಿ ರಸ್ತೆಯಲ್ಲಿ ಕೆಎ-01-ಪಿ-6145 ರ ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರುಗಳು ಜಖಂಗೊಂಡು ಕಾರಿನಲ್ಲಿದ್ದ ಜಯ ಮತ್ತು ಅವರ ಪತ್ನಿ ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಆನ್ ಲೈನ್ ಕಾರು ಖರೀದಿಯಲ್ಲಿ ವಂಚನೆ ಪ್ರಕರಣ
ಸಾಮಾಜಿಕ ಜಾಲತಾಣ ಫೇಸ್ ಬುಕ್ ಜಾಹೀರಾತು ನೋಡಿ ಕಾರು ಖರೀದಿಸಲು ಪ್ರಯತ್ನಿಸಿದ ವ್ಯಕ್ತಿಯೊಬ್ಬರು ವಂಚನೆಗೆ ಒಳಗಾದ ಪ್ರಕರಣ ನಡೆದಿದೆ. ವಿರಾಜಪೇಟೆ ತಾಲ್ಲೂಕು ಬೆಟ್ಟತ್ತಾಡಿ, ಕುಟ್ಟ ಗ್ರಾಮದ ನಿವಾಸಿ ಸುನಿಲ್ ಕುಮಾರ್ ಎಂಬುವವರು ಫೇಸ್ ಬುಕ್ ನಲ್ಲಿ ಸ್ವಿಫ್ಟ್ ಕಾರು ಜಾಹೀರಾತು ನೋಡಿ ಖರೀದಿಸಲು ನಿರ್ಧರಿಸಿ ಅದರಲ್ಲಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದಾಗ ಲೋಕೇಶ್ ಎಂಬ ವ್ಯಕ್ತಿಪರಿಚಯಿಸಿಕೊಂಡು ಎರಡು ಪ್ರತ್ಯೇಕ ಬ್ಯಾಂಕ್ ಖಾತೆಗಳನ್ನು ನೀಡಿ ಒಟ್ಟು 1,83,767 ರೂ ಹಣವನ್ನು ಜಮಾ ಮಾಡಿಸಿಕೊಂಡು ಕಾರನ್ನು ನೀಡದೇ ವಂಚನೆ ಮಾಡಿದ್ದು ಈ ಬಗ್ಗೆ ದಿನಾಂಕ: 13-03-2020 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಆನ್ ಲೈನ್ ಖರೀದಿಯ ನಂತರ ವಂಚನೆ ಪ್ರಕರಣ
ಸೋಮವಾರಪೇಟೆ ಪಟ್ಟಣದ ನಿವಾಸಿ ಮಹಿಳೆಯೊಬ್ಬರು ಲೈಮ್ ರೋಡ್ ಅಪ್ಲಿಕೇಶನ್ ಮೂಲಕ ಕೆಲವು ವಸ್ತಗಳನ್ನು ಖರೀದಿಸಿದ್ದು ವಸ್ತುಗಳು ಜಾಹೀರಾತು ನೋಡಿದ ರೀತಿಯಲ್ಲಿ ಇಲ್ಲದೇ ಇದ್ದುದರಿಂದ ಖರೀದಿಸಿದ ವಸ್ತಗಳ ಆರ್ಡರನ್ನು ರದ್ದುಗೊಳಿಸಲು +918046801387 ಗೆ ಕರೆ ಮಾಡಿದಾಗ ಮಾತನಾಡಿದ ವ್ಯಕ್ತಿಯು ಕಸ್ಟಮರ್ ಕೇರ್ ಗೆ ಕರೆ ಮಾಡಲು ತಿಳಿಸಿರುತ್ತಾನೆ. ನಂತರ ಗೂಗಲ್ ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಿ +918144712979 ಕ್ಕೆ ಕರೆ ಮಾಡಿದಾಗ ವ್ಯಕ್ತಿಯು ಲಿಂಕ್ ಕಳುಹಿಸುವುದಾಗಿ ತಿಳಿಸಿರುತ್ತಾನೆ. ಆತನು ಕಳುಹಿಸಿದ ಲಿಂಕ್ ಗೆ ಗೂಗಲ್ ಪೇ ನಂಬರ್ ನಮೂದಿಸಿದಾಗ ಮಹಿಳೆಯ ಬ್ಯಾಂಕ್ ಖಾತೆಯಿಂದ 90,000 ರೂ ಹಣ ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆಗೊಂಡಿರುತ್ತದೆ. ಆನ್ ಲೈನ್ ವಸ್ತು ಖರೀದಿ ವೇಳೆ ವಂಚನೆಗೊಳಗಾದ ಬಗ್ಗೆ ದಿನಾಂಕ: 13-03-2020 ರಂದು ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಸಾರ್ವಜನಿಕರು ವಾಹನಗಳನ್ನು ಆನ್ ಲೈನ್ ಮೂಲಕ ಖರೀದಿ ಮಾಡುವ ವೇಳೆ ಎಚ್ಚರ ವಹಿಸಿ ವಾಹನಗಳನ್ನು ಹಾಗೂ ದಾಖಲಾತಿಗಳನ್ನು ಖುದ್ದು ಪರಿಶೀಲಿಸಿ ಖರೀದಿಸುವುದು. ಅಪರಿಚಿತ ವ್ಯಕ್ತಿಗಳಿಗೆ ಖರೀದಿಗೆ ಮುಂಚಿತವಾಗಿ ಹಣ ಪಾವತಿಸಿ ವಂಚನೆಗೊಳಗಾಗದಂತೆ ಹಾಗೂ ತಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು, ಆಧಾರ್ ನಂಬರ್ ಹಾಗೂ ಒಟಿಪಿ ಇತ್ಯಾದಿ ಗುಪ್ತ ಮಾಹಿತಿಗಳನ್ನು ಅನ್ಯ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳದಂತೆ ಸೂಚಿಸಲಾಗಿದೆ.