Crime News

ವ್ಯಕ್ತಿ ಆತ್ಮಹತ್ಯೆ

          ದಿನಾಂಕ: 19-03-2020 ರಂದು ಮಡಿಕೇರಿ ತಾಲ್ಲೂಕು ಕುಂದಚೇರಿ ಗ್ರಾಮದ ನಿವಾಸಿ ಚಂದ್ರಶೇಖರ್ ರವರು ಯಾವುದೋ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಅಸ್ವಸ್ಥಗೊಂಡಿದ್ದವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 21-03-2020 ರಂದು ಮೃತಪಟ್ಟಿದ್ದು ಈ ಬಗ್ಗೆ ಮೃತರ ಮಗ ಚೇತನ್ ಎಂಬುವವರು ನೀಡಿದ ದೂರಿನ ಮೇರೆ ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಚಿಕಿತ್ಸೆ ನೆಪದಲ್ಲಿ ಲಕ್ಷಾಂತರ ಹಣ ಪಡೆದು ವಂಚನೆ

          ಮಡಿಕೇರಿ ನಗರದ ದೇಚೂರು ನಿವಾಸಿ ಟಿ.ಸಿ ತಮ್ಮಯ್ಯ ರವರಿಗೆ ಅನಾರೋಗ್ಯವಾಗಿದ್ದು ಹುಬ್ಬಳ್ಳಿ ಮೂಲದ ರಮೇಶ್ ಮತ್ತು ಭರತ್ ಎಂಬುವವರು ದಿನಾಂಕ: 27-12-2019 ರಂದು ತಮ್ಮಯ್ಯರವರ ಮನೆಗೆ ಬಂದು ಅವರ ಪತ್ನಿ ಹಾಗೂ ಬಾವನಿಗೆ ಆಯುರ್ವೇದ ಚಿಕಿತ್ಸೆಗೆ ಔಷಧ ವೆಚ್ಚ 8,76.000 ರೂ ಹಣ ಖರ್ಚಾಗುತ್ತದೆ ಎಂಬುದಾಗಿ ತಿಳಿಸಿ ಚೆಕ್ ಮುಖಾಂತರ ಪೂರ್ಣ ಹಣವನ್ನು ಪಡೆದುಕೊಂಡಿದ್ದರು. ನಂತರ ಔಷಧಿಯನ್ನು ಪಡೆದುಕೊಂಡು ತಮ್ಮಯ್ಯರವರಿಗೆ ಚಿಕಿತ್ಸೆ ನೀಡಿದಾಗ ಗುಣಮುಖರಾಗಿರುವುದು ಕಂಡುಬಂದಿರುವುದಿಲ್ಲ. ಮೋಸದಿಂದ ಹೆಚ್ಚು ಹಣ ಗಳಿಸುವ ಉದ್ದೇಶದಿಂದ ನಕಲಿ ಔಷಧ ನೀಡಿ ಲಕ್ಷಾಂತರ ಹಣ ಪಡೆದು ವಂಚನೆ ಮಾಡಿರುವುದಾಗಿ ನೀಡಿದ ಪುಕಾರಿನ ಮೇರೆ ಮಡಿಕೇರಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

          ದಿನಾಂಕ: 20-03-2020 ರಂದು ಮಡಿಕೇರಿ ತಾಲ್ಲೂಕು ತಣ್ಣಿಮಾನಿ ಗ್ರಾಮದ ನಿವಾಸಿ ಬಿ.ಜಿ ಮೋಹನ್ ಎಂಬುವವರು ಅವರ ಆಟೋರಿಕ್ಷಾದಲ್ಲಿ ಮನೆಗೆ ಹೋಗುತ್ತಿರುವಾಗ ದೇಶಕೋಡಿ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಒಂದು ಕೆ-12-ಬಿ-5334 ರ ಕಾರನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿಕೊಂಡಿದ್ದರು. ಆಟೋ ರಸ್ತೆ ದಾಟಲು ದಾರಿ ಬಿಡುವಂತೆ ಕೇಳಿದಾಗ ಕಾರಿನಲ್ಲಿದ್ದ ತೊತ್ತಿಯಂಡ ಉಲ್ಲಾಶ್ ಹಾಗೂಇತರ 6 ಜನರು ಅವಾಚ್ಯಪದಗಳಿಂದ ಬೈದು ಹಲ್ಲೆ ಮಾಡಿ ನೋವುಪಡಿಸಿರುವುದಾಗಿ ನೀಡಿದ ಪುಕಾರಿನ ಮೇರೆ ಭಾಗಮಂಡಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಎಟಿಎಂ ಕಾರ್ಡ್ ನಂಬರ್ ಪಡೆದು ವಂಚನೆ

          ದಿನಾಂಕ: 19-03-2020 ರಂದು ಮಡಿಕೇರಿ ತಾಲ್ಲೂಕು ಪೇರೂರು ಗ್ರಾಮದ ನಿವಾಸಿ ಶ್ರೀಮತಿ ಡಾಲಮ್ಮ ಎಂಬುವವರ ಮೊಬೈಲ್ ನಂಬರ್ ಗೆ +6289457994 ಸಂಖ್ಯೆಯಿಂದ ಕರೆ ಮಾಡಿ ಅಪರಿಚಿತ ವ್ಯಕ್ತಿಯೊಬ್ಬ ಕೆನರಾ ಬ್ಯಾಂಕ್ ಮೇನೇಜರ್ ಎಂದು ಹೇಳಿ ಎಟಿಎಂ ಕಾರ್ಡ್ ರಿನೀವಲ್ ಮಾಡುವುದಾಗಿ ಹೇಳಿ ಕಾರ್ಡ್ ನಂಬರ್ ಸಿವಿವಿ ನಂಬರ್ ಪಡೆದು ಕರೆ ಕಡಿತಗೊಳಿಸಿರುತ್ತಾನೆ. ನಂತರ ಬ್ಯಾಂಕ್ ಗೆ ಹೋಗಿ ವಿಚಾರಿಸಿದಾಗ ಖಾತೆಯಿಂದ 17,200 ರೂ ಕಡಿತಗೊಂಡಿದ್ದು ಎಟಿಎಂ ಮಾಹಿತಿ ಪಡೆದು ವಂಚನೆ ಮಾಡಿರುವ ಬಗ್ಗೆ ನೀಡಿದ ಪುಕಾರಿನ ಮೇರೆ ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ವಿಭಜಕಕ್ಕೆ ಲಾರಿ ಡಿಕ್ಕಿ

          ದಿನಾಂಕ: 20-03-2020 ರಂದು ಕುಶಾಲನಗರ ಸಂಚಾರ ಪೊಲೀಸ್ ಠಾಣೆ ಮುಂಭಾಗದ ಹೆದ್ದಾರಿ ರಸ್ತೆಯಲ್ಲಿ ಕೆಎ—12-ಎ 0825 ರ ಲಾರಿ ಚಾಲಕ  ಅಜಯ್ ಎಂಬುವವರು ಮದ್ಯಪಾನ ಮಾಡಿಕೊಂಡು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ ಮಾಡಿಕೊಂಡು ಹೋಗಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿರುತ್ತದೆ. ಈ ಬಗ್ಗೆ ಕುಶಾಲನಗರ ಸಂಚಾರ ಠಾಣೆ ಹೆಡ್ ಕಾನ್ಸ್ ಟೇಬಲ್ ಚಂದ್ರು ರವರು ಸ್ವವರದಿಯೊಂದಿಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.  

ಹೊಡೆದಾಟ ಪ್ರಕರಣ

          ದಿನಾಂಕ: 21-03-2020 ರಂದು ರಾತ್ರಿ ವಿರಾಜಪೇಟೆ ನಗರದ ಮೀನುಪೇಟೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಕೆ.ಬಿ ಶಹದೀರ್,ಮೊಹಮ್ಮದ್ ಆಸೀಪ್, ಎನ್.ಪಿ ಸಿದ್ದಿಕ್, ಮೊಹಮ್ಮದ್ ಮತ್ತು ಸಲೀಂ ಎಂಬುವವರು ಸಾರ್ವಜನಿಕ ನೆಮ್ಮದಿಗೆ ತೊಂದರೆಯಾಗುವಂತೆ ಪರಸ್ಪರ ಜಗಳ ಮಾಡುತ್ತಾ ಕೈ ಮಿಲಾಯಿಸಿ ತಳ್ಳಾಡಿಕೊಂಡು ಹೊಡೆದಾಟ ಮಾಡಿಕೊಂಡಿದ್ದು  ಈ ಬಗ್ಗೆ ವಿರಾಜಪೇಟೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕಾರು ಡಿಕ್ಕಿ, ಪಾದಚಾರಿಗಳಿಗೆ ಗಾಯ

          ದಿನಾಂಕ: 21-03-2020 ರಂದು ವಿರಾಜಪೇಟೆ ತಾಲ್ಲೂಕು ಬಾಳೆಲೆ ಗ್ರಾಮದ ಬಳಿ ಮುಖ್ಯ ರಸ್ತೆಯಲ್ಲಿ ಒಂದು ಕಾರನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆ ಬದಿಯಲ್ಲಿ ನಿಂತಿದ್ದ ರಾಜು ಮತ್ತು ಮತ್ತೊಬ್ಬರು ಮಹಿಳೆಗೆ ಡಿಕ್ಕಿಪಡಿಸಿದ್ದರಿಂದ ಗಾಯಗೊಂಡಿದ್ದು ಕಾರನ್ನು ಚಾಲಕ ನಿಲ್ಲಿಸದೇ ಹೋಗಿದ್ದ  ಬಗ್ಗೆ ರಾಜು ರವರು ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.