Crime News

ಕೋವಿಡ್-19 ಸಂಬಂದ ಹೋಂ ಕ್ವಾರಂಟೈನ್ ಆದೇಶ ಉಲ್ಲಂಘಿಸಿದ ವ್ಯಕ್ತಿಯ ಮೇಲೆ ಪ್ರಕರಣ ದಾಖಲು

ಮಡಿಕೇರಿ ನಗರದ ಗಣಪತಿ ಬೀದಿಯ ನಿವಾಸಿ ಸುಮಾರು 30 ವರ್ಷದ ಪ್ರಾಯದ ವ್ಯಕ್ತಿಯೊಬ್ಬರು ದಿನಾಂಕ 12-02 -2020 ರಂದು ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ತನ್ನ ಸ್ವಂತ ಊರಾದ ಮಡಿಕೇರಿಗೆ ಬಂದಿದ್ದರು. ಇವರಿಗೆ 14 ದಿನಗಳ ಕಾಲ ಮನೆಯಿಂದ ಹೊರ ಬಾರದಂತೆ ಹೋಂ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿತ್ತು. ಆದರೆ ಇವರು ಇವರಿಗೆ ನೀಡಿದ್ದ ನಿರ್ದೇಶನಗಳನ್ನು ಉಲ್ಲಂಘಿಸಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸುತ್ತಾಡುತ್ತಿದ್ದದ್ದು ಕಂಡುಬಂದಿರುತ್ತದೆ. ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ ಹಾಗೂ ಮಾನ್ಯ ಕೊಡಗು ಜಿಲ್ಲಾಧಿಕಾರಿಗಳು ಮಾಡಿರುವ ಆದೇಶಗಳನ್ನು ಉಲ್ಲಂಘಿಸಿ ತಾನು ಹೊರದೇಶದಿಂದ  ಹಾಗೂ ವೈರಾಣು ಸೋಂಕಿನ ಬಾಧಿತ ದೇಶದಿಂದ ಬಂದಿದ್ದು, ತಾನು ಸಾರ್ವಜನಿಕವಾಗಿ ಓಡಾಡಿದರೆ ವೈರಾಣುವಿನ ಸೋಂಕು ಸಾರ್ವಜನಿಕರಿಗೆ ಹರಡಬಹುದು ಎಂಬ ಮಾಹಿತಿಯ ಅರಿವಿದ್ದರೂ ಕೂಡ ಸಾರ್ವಜನಿಕ ಪ್ರದೇಶಗಳಲ್ಲಿ ಓಡಾಡಿ ಸಾರ್ವಜನಿಕರೊಂದಿಗೆ ಬೆರೆತು ನೀಡಿರುವ ಆದೇಶಗಳನ್ನು ಉಲ್ಲಂಘನೆ ಮಾಡಿರುತ್ತಾರೆ. ಈ ಕಾರಣದಿಂದಾಗಿ ಇವರನ್ನು ದಿನಾಂಕ 24 3 2020 ರಂದು ರಾತ್ರಿ 10.30 ಗಂಟೆಗೆ ಮಡಿಕೇರಿಯ ಜಿಲ್ಲಾ ಕ್ವಾರಂಟೈನ್ ವ್ಯವಸ್ಥೆಯಲ್ಲಿ (District Quarantine Facility) ದಾಖಲಿಸಿ ಇವರ  ಮೇಲೆ ಮಡಿಕೇರಿ ನಗರ ಪೊಲೀಸ್ ಠಾಣೆ  ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವ್ಯಕ್ತಿ ಆತ್ಮಹತ್ಯೆ

                ದಿನಾಂಕ: 23-03-2020 ರಂದು ಸೋಮವಾರಪೇಟೆ ತಾಲ್ಲೂಕು 6ನೇ ಹೊಸಕೋಟೆ ಗ್ರಾಮದ ನಿವಾಸಿ ಸಂತೋಷ್ ಎಂಬುವವರು ವಯಕ್ತಿಕ ವಿಚಾರದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ವಿಷ ಸೇವಿಸಿ ಅಸ್ವಸ್ಥಗೊಂಡಿದ್ದವನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 25-03.-2020 ರಂದು ಮೃತಪಟ್ಟಿದ್ದು ಈ ಬಗ್ಗೆ ಮೃತರ ಸಹೋದರ ನೀಡಿದ ಪುಕಾರಿನ ಮೇರೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಯುವಕ ಸಾವು

                ದಿನಾಂಕ: 24-03-2020 ರಂದು ವಿರಾಜಪೇಟೆ ತಾಲ್ಲೂಕು ಚಿಕ್ಕಮಂಡೂರು ಗ್ರಾಮದ ನಿವಾಸಿ ಕಾವೇರಪ್ಪ ಎಂಬುವವರು ಅವರ ಸ್ನೇಹಿತರೊಂದಿಗೆ ಬಿ,ಶೆಟ್ಟಿಗೇರಿ ಗ್ರಾಮದ ಕೊಂಗಣ ಹೊಳೆಗೆ ಹೋಗಿ ಸ್ನಾನ ಮಾಡುತ್ತಿರುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು ಈ ಬಗ್ಗೆ ಮೃತರ ತಂದೆ ನೀಡಿದ ದೂರಿನ ಮೇರೆ ಗೋಣಿಕೊಪ್ಪ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.