Crime News

ಗುಂಪು ಹಲ್ಲೆ ಪ್ರಕರಣ

ವಿರಾಜಪೇಟೆ ಬಳಿಯ ಬೇಟೋಳಿ ಗ್ರಾಮದ ಗುಂಡಿಗೆರೆ ನಿವಾಸಿ ಮೂಸಾ ಎಂಬವರು ದಿನಾಂಕ 07/04/2020 ರಿಂದ ಕಾಣೆಯಾಗಿದ್ದು ಅವರನ್ನು ದಿನಾಂಕ 10/04/2020ರಂದು ಊರಿನ ಗಫೂರ್ ಮತ್ತು ಇತರರು ಕಾಣೆಯಾದ ಮೂಸಾ ಮತ್ತು ಸುಹೇಲ್‌ ಎಂಬವರನ್ನು ಹುಡುಕುತ್ತಿರುವಾಗ  ಬಾಳುಗೋಡು ಗ್ರಾಮದ ಬಿಟ್ಟಂಗಾಲ ಪೆರುಂಬಾಡಿ ರಸ್ತೆಯ ಬಳಿ ಸುಹೇಲ್‌ ಮತ್ತು ಇನ್ನೊಬ್ಬರನ್ನು ಸುಮಾರು ಹತ್ತು ಹದಿನೈದು ಜನರ ತಂಡವು ಕಟ್ಟಿ ಹಾಕಿದ್ದುದನ್ನು ಗಮನಿಸಿ ವಿಚಾರವನ್ನು ಗಪೂರ್‌ರವರು ಬೇಟೋಳಿ ಪಂಚಾಯಿತಿ ಸದಸ್ಯ ಉಮರ್ ಫಾರೂಕ್‌ರವರಿಗೆ ತಿಳಿಸಿದ್ದು ಉಮರ್ ಫಾರೂಕ್‌ರವರು ವಿರಾಜಪೇಟೆ ನಗರ ಠಾಣೆಯ ಪಿಎಸ್‌ಐರವರಿಗೆ ಮಾಹಿತಿ ನೀಡಿ ತಾಜುದ್ದೀನ್‌ ಎಂಬವರ ಕಾರಿನಲ್ಲಿ ಸ್ಥಳಕ್ಕೆ ಹೋದಾಗ ಅಲ್ಲಿ ಸೇರಿದ್ದ ಸುಮಾರು ಹತ್ತು ಹದಿನೈದು ಜನರು ಉಮರ್ ಫಾರೂಕ್‌ರವರ ಮೇಲೆ ದೊಣ್ಣೆ ಹಾಗೂ ಕಬ್ಬಿಣದ ರಾಡಿನಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಗುಂಪು ಹಲ್ಲೆ ಪ್ರಕರಣ

ದಿನಾಂಕ 10/04/2020ರಂದು ಬಾಳುಗೋಡು ಗ್ರಾಮದ ಯುವಕರು ಗ್ರಾಮದ ರಸ್ತೆಯ ಬಳಿ ಸ್ವಚ್ಛತಾ ಕೆಲಸ ಮಾಡುತ್ತಿರುವಾಗ ಕೆಎ-12-ಎ-3836 ರ ಜೀಪಿನಲ್ಲಿ ಸುಮಾರು 6-7 ಜನರು ಬಂದು ಸಂಶಯಾಸ್ಪದವಾಗಿ ತಿರುಗಾಡಿಕೊಂಡಿದ್ದುದನ್ನು ಊರಿನ ಯುವಕರು ಪ್ರಶ್ನಿಸಿದಾಗ ಜೀಪಿನಲ್ಲಿದ್ದವರು ಅಚಾನಕ್ಕಾಗಿ ಊರಿನ ಕೆಲವು ಯುವಕರನ್ನು ಜೀಪಿನಿಂದ ಗುದ್ದಿ ಗಾಯಗೊಳಿಸಿ ದೊಣ್ಣೆಯಿಂದ ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನಿಷೇಧಾಜ್ಞೆ ಉಲ್ಲಂಘನೆ ಪ್ರಕರಣ

ರಾಜ್ಯದಲ್ಲಿ ಕೊರೋನಾ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಗಟ್ಟಲು ಹೇರಿದ್ದ ಲಾಕ್‌ಡೌನ್‌ ಮತ್ತು ನಿಷೇಧಾಜ್ಞೆಯ ಸಂಬಂಧ ಗೋಣಿಕೊಪ್ಪ ಠಾಣೆಯ ಪಿಎಸ್‌ಐ ಸುರೇಶ್‌ ಬೋಪಣ್ಣರವರು ಕರ್ತವ್ಯದಲ್ಲಿರುವಾಗ ದಿನಾಂಕ 10/04/2020ರಂದು ಗೋಣಿಕೊಪ್ಪ ನಗರದಲ್ಲಿ ನವ ದೆಹಲಿಯ ತ್ರಿಡೀಬ್‌ ನಂದಿ ಮತ್ತು ಅನಿಲ್ ಬತೇಜ ಎಂಬವರು ಯಾವುದೇ ಅನುಮತಿ ಪತ್ರವಿಲ್ಲದೆ ನಗರದಲ್ಲಿ ತಿರುಗಾಡುತ್ತಾ ಲಾಕ್‌ಡೌನ್ ಆದೇಶವನ್ನು ಉಲ್ಲಂಘಿಸಿರುವುದಾಗಿ ಅವರಿಬ್ಬರನ್ನು ಬಂಧಿಸಿ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಹಣ ವಂಚನೆ ಪ್ರಕರಣ

ದಿನಾಂಕ 09/04/2020ರಂದು ಪಾಲಿಬೆಟ್ಟ ಬಳಿಯ ಚೆನ್ನಯ್ಯನಕೋಟೆ ನಿವಾಶಿ ಹೆಚ್‌.ಎಂ.ಸಿದ್ದು ಎಂಬವರಿಗೆ ಓರ್ವ ವ್ಯಕ್ತಿಯು ತಾನು ಬೆಂಗಳೂರಿನ ವಿಜಯಾ ಬ್ಯಾಂಕ್ ಅಧಿಕಾರಿ ಎಂಬುದಾಗಿ ಪರಿಚಯಿಸಿಕೊಂಡು ಕರೆಮಾಡಿ ಸಿದ್ದುರವರ ಬ್ಯಾಂಕ್ ಖಾತೆಗೆ ಆಯುಷ್ಮಾನ್ ಭಾರತ ಯೋಜನೆಯ ಹಣ ರೂ, 2000/-ವನ್ನು ಜಮಾ ಮಾಡುವುದಾಗಿಯೂ ಸಿದ್ದುರವರ ಮೊಬೈಲಿಗೆ ಬರುವ ಓಟಿಪಿ ಸಂಖ್ಯೆಯನ್ನು ನೀಡ ಬೇಕೆಂದು ಕೇಳಿ ಪಡೆದು ಸಿದ್ದುರವರ ಖಾತೆಯಿಂದ ಸುಮಾರು ರೂ. 14,000/- ವನ್ನು ಅವರ ಖಾತೆ ಜಮಾ ಮಾಡಿಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.