Crime News

ಕಳವು ಪ್ರಕರಣ

ಮಡಿಕೇರಿ ಬಳಿಯ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದ ಕಾರ್ಮಿಕ ವಸತಿ ಗೃಹಗಳ ಪೈಕಿ ಎಂ-10 ಸಂಖ್ಯೆ ವಸತಿ ಗೃಹದ ಸ್ನಾನ ಗೃಹದ ಬಾಗಿಲನ್ನು ದಿನಾಂಕ 20/04/2020 ರಿಂದ 29/04/2020ರ ನಡುವೆ ಯಾರೋ ಕಳ್ಳರು ಪ್ರವೇಶಿಸಿ ಬಿಸಿ ನೀರು ಕಾಯಿಸಲು ಅಳವಡಿಸಿದ್ದ ಸುಮಾರು ರೂ. 5,000/- ಮೌಲ್ಯದ ಹಿತ್ತಾಳೆಯ ಹಂಡೆಯನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕಳವು ಪ್ರಕರಣ

ಪೊನ್ನಂಪೇಟೆ ಬಳಿಯ ಕಿರುಗೂರು ನಿವಾಸಿ ಚೂರೀರ ಅಪ್ಪಯ್ಯ ಎಂಬವರ ಅಣ್ಣನ ಮಗ ಉತ್ತಯ್ಯನವರು ಬೆಂಗಳೂರು ನಿವಾಸಿಯಾಗಿದ್ದು ಕಿರುಗೂರಿನಲ್ಲಿರುವ ಅವರ ತೋಟದ ಮನೆಗೆ ದಿನಾಂಕ 01/05/2020 ರಿಂದ 02/05/2020ರ ನಡುವಿನ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಹೆಂಚು ತೆಗೆದು ಒಳ ನುಗ್ಗಿ ಮನೆಯ ಮನೆಯ ಬೀರುವಿನಲ್ಲಿದ್ದ ರೂ 1,600/- ನಗದು ಹಾಗೂ ಸುಮಾರು ರೂ.10,000/- ಮೌಲ್ಯದ 35 ಕೆ.ಜಿ.ಕರಿಮೆಣಸನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಆತ್ಮಹತ್ಯೆ

ದಿನಾಂಕ 02/05/2020ರಂದು ಶ್ರೀಮಂಗಲ ಬಳಿಯ ಹೈಸೊಡ್ಲೂರು ನಿವಾಸಿ ಬಯವಂಡ ತಾರ ಎಂಬ 71 ವರ್ಷದ ಮಹಿಳೆ ಮನೆಯಲ್ಲಿ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಪತಿ ಲಕ್ಷ್ಮಣರವರು ಎರಡು ಬರ್ಷಗಳ ಹಿಂದೆ ಮೃತರಾಗಿದ್ದು ಈ ಬಗ್ಗೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೊಲೆ ಬೆದರಿಕೆ ಪ್ರಕರಣ

ಸೋಮವಾರಪೇಟೆ ಪಟ್ಟಣದ ಬಾಣಾವರ ರಸ್ತೆ ನಿವಾಸಿ ವಸಂತ ಎಂಬವರಿಗೂ ಅದೇ ರಸ್ತೆಯ ನಿವಾಸಿ ಗಂಗಾಧರ ಎಂಬವರಿಗೆ ಜಾಗದ ವ್ಯಾಜ್ಯವಿದ್ದು ದಿನಾಂಕ 01/05/2020ರಂದು ಗಂಗಾಧರ್‌ರವರು ವಸಂತರವರೊಂದಿಗೆ ಜಗಳವಾಡಿ ಅಶ್ಲೀಲವಾಗಿ ನಿಂದಿಸಿದ್ದು ಈ ಸಂದರ್ಭ ಗಂಗಾಧರ್‌ರವರ ಮಗ ನಿತಿನ್ ಎಂಬಾತನು ಕತ್ತಿಯನ್ನು ತೆಗೆದುಕೊಂಡು ಬಂದು ಕಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ 02/05/2020ರಂದು ಸೋಮವಾರಪೇಟೆ ಬಳಿಯ ಗಣಗೂರು ನಿವಾಸಿ ಟಿ.ಸಿ.ಲಕ್ಷಿತ್ ಎಂಬವರೊಂದಿಗೆ ಅದೇ ಗ್ರಾಮದ ನಿವಾಸಿಗಳಾದ ಅನಿಲ್ ಮತ್ತು ಸುನಿಲ್ ಎಂಬವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ದೊಣ್ಣೆಯಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸುಲಿಗೆ ಪ್ರಕರಣ

ದಿನಾಂಕ 02/05/2020ರಂದು ಸುಂಟಿಕೊಪ್ಪ ಬಳಿಯ ಹರದೂರು ತೋಟದ ರೈಟರ್ ಆಗಿರುವ ವಿಜಯ ಕುಮಾರ್‌ರವರು ತೋಟದ ಕಾರ್ಮಿಕರಿಗೆ ವಾರದ ವೇತನ ಬಟವಾಡೆ ಮಾಡಲು ಸುಮಾರು ರೂ.5,18,000/- ಹಣವನ್ನು ಸುಂಟಿಕೊಪ್ಪದ ಬ್ಯಾಂಕಿನಿಂದ ತೆಗೆದುಕೊಂಡು ಸ್ಕೂಟರಿನಲ್ಲಿ ಹೋಗುತ್ತಿರುವಾಗ ಎಸ್ಟೇಟಿನ ಗೇಟಿನ ಬಳಿ ಸ್ಕೂಟರ್ ನಿಲ್ಲಿಸಿ ಗೇಟನ್ನು ತೆಗೆಯುತ್ತಿರುವಾಗ ಇಬ್ಬರು ಅಪರಿಚಿತರು ಬೈಕಿನಲ್ಲಿ ಬಂದು ಕರ್ನಲ್‌ರವರ ಮನೆಗೆ ದಾರಿ ಕೇಳುವ ನೆಪದಲ್ಲಿ ಬಳಿ ಬಂದು ವಿಜಯ ಕುಮಾರ್‌ರವರನ್ನು ತೋಟದೊಳಗೆ ಎಳೆದುಕೊಂಡು ಹೋಗಿ ಹಲ್ಲೆ ಮಾಡಿ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿಹಾಕಿ ಸ್ಕೂಟರಿನಲ್ಲಿದ್ದ ಹಣದ ಬ್ಯಾಗ್ ಮತ್ತು ಪಾಸ್‌ ಪುಸ್ತಕವನ್ನು ತೆಗೆದುಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 01/05/2020ರಂದು ಕುಶಾಲನಗರದ ಬೈಚನಹಳ್ಳಿ ನಿವಾಸಿ ಜೆ. ಕೃಷ್ಣ ಎಂಬವರು ಅವರ ಸ್ನೇಹಿತ ಪಾಂಡಿ ಎಂಬವರೊಡನೆ ಕೆಎ-12-ಎಂಎ-5845ರ ಮಾರುತಿ ಓಮಿನಿ ವ್ಯಾನಿನಲ್ಲಿ ಮಾದಾಪುರದಿಂದ ಕುಶಾಲನಗರದ ಕಡೆಗೆ ಹೋಗುತ್ತಿರುವಾಗ ಆನೆಕಾಡು ಬಳೀಯ ಇಳಿಜಾರು ರಸ್ತೆಯಲ್ಲಿ ಚಾಲಕ ಪಾಂಡಿಯವರು ವ್ಯಾನನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಜೊತೆಗೆ ಪ್ರಯಾಣಿಸುತ್ತಿದ್ದ ಕೃಷ್ಣರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ

ದಿನಾಂಕ 02/05/2020ರಂದು ಶನಿವಾರಸಂತೆ ಬಳಿಯ ಶಾಂತಪುರ ಗ್ರಾಮದ ಹೇಮಾವತಿ ನದಿಯ ಹಿನ್ನೀರಿನಲ್ಲಿ ಹಲವರು ಅಕ್ರಮವಾಗಿ ಜೂಜಾಟವಾಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಶನಿವಾರಸಂತೆ ಠಾಣೆಯ ಪಿಎಸ್‌ಐ ಕೃಷ್ಣ ನಾಯಕ್‌ರವರು  ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಅಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಶಾಂತಪುರ ಗ್ರಾಮದ ಷಣ್ಮುಖ, ಖಲೀಂ ಅಹಮದ್, ಉಮೇಶ, ಪ್ರೇಂ ಕುಮಾರ, ಗಣೇಶ, ಕರೀಂ, ಚಂದ್ರ ಮತ್ತು ನಾಗೇಂದ್ರ ಎಂಬವರನ್ನು ಬಂಧಿಸಿ ಜೂಜಾಡಲು ಪಣಕ್ಕಿಟ್ಟಿದ್ದ ರೂ. 910/- ಹಣವನ್ನು ವಶಪಡಿಸಿಕೊಂಡು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.