Crime News

ಸುಲಿಗೆ ಪ್ರಕರಣ, ಆರೋಪಿಗಳ ಬಂಧನ

ಕೊಡಗು ಜಿಲ್ಲೆಯ ಸುಂಟಿಕೊಪ್ಪ ಠಾಣಾ ಸರಹದ್ದಿನ ಹರದೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಸುಲಿಗೆ ಪ್ರಕರಣವನ್ನು ಬೇಧಿಸುವಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರ ತಂಡ ಹಾಗು ಜಿಲ್ಲಾ ಅಪರಾಧ ಪತ್ತೆ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ದಿನಾಂಕ 2-5-2020 ರಂದು ಗುಂಡುಕುಟ್ಟಿ ಎಸ್ಟೇಟಿನ ಕಾರ್ಮಿಕರಿಗೆ ಹಣವನ್ನು ಬಟವಾಡೆ ಮಾಡಲು ಹಣ ತರುತ್ತಿದ್ದ ತೋಟದ ರೈಟರ್ ವಿಜಯ ಕುಮಾರ್‌ರವರು ಎಸ್ಟೇಟ್ ಪ್ರವೇಶಿಸುತ್ತಿದ್ದ ಸಂದರ್ಭದಲ್ಲಿ ಗೇಟಿನ ಬಳಿ ತಡೆದು ಅವರಿಗೆ ಬೆದರಿಕೆ ಹಾಕಿ ಹಲ್ಲೆ ಮಾಡಿ ಅವರ ಬಳಿ ಇದ್ದ 5,18,000/ ನಗದನ್ನು ದೋಚಿದ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಪ್ರಕರಣವನ್ನು ಬೇಧಿಸುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪೆನ್ನೇಕರ್‌ರವರ ನಿರ್ದೇಶನ ಹಾಗೂ ಹಾಗೂ ಸೋಮವಾರಪೇಟೆ ಉಪಾಧೀಕ್ಷಕರಾದ ಹೆಚ್‌.ಎಂ. ಶೈಲೇಂದ್ರರವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರಾದ ಎಂ.ಮಹೇಶ್‌ರವರ ನೇತೃತ್ವದಲ್ಲಿ ರಚಿಸಿದ ತಂಡ ಹಾಗೂ ಜಿಲ್ಲಾ ಅಪರಾಧ ಪತ್ತೆ ದಳದ ಅಧಿಕಾರಿ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ ಸುಲಿಗೆ ಮಾಡಿದ ಮೂವರು ಆರೋಪಿಗಳಾದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕೊಪ್ಪದ ನಿವಾಸಿ ಟಿ.ವಿ.ಹರೀಶ್, ಮೂಲತಃ ಸುಂಟಿಕೊಪ್ಪದ ನಿವಾಸಿ ಹಾಲಿ ಮೈಸೂರಿನ ವಿಜಯನಗರದಲ್ಲಿ ವಾಸವಿರುವ ಕುಮಾರೇಶ್ ಯು.ಬಿ. ಮತ್ತು ಮಾದಾಪುರ ಬಳಿಯ ಇಗ್ಗೋಡ್ಲು ಗ್ರಾಮದ ನಿವಾಸಿ ಜಗ್ಗಾರಂಡ ಕಾವೇರಪ್ಪ ಎಂಬವರನ್ನು ಬಂಧಿಸಿ ಅವರಿಂದ ಸುಲಿಗೆ ಮಾಡಿದ ಹಣದಲ್ಲಿ ರೂ. 5,02,000/- ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳು ಈ ಹಿಂದೆಯೂ, ಕೊಡಗು ಜಿಲ್ಲೆ, ಬೆಂಗಳೂರಿನ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಹಲವು ಕೊಲೆ, ದರೋಡೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸುಮನ್.ಡಿ.ಪಿ., ಐಪಿಎಸ್ ಹಾಗೂ ಹೆಚ್.ಎಂ.ಶೈಲೇಂದ್ರ, ಪೊಲೀಸ್ ಉಪಾಧೀಕ್ಷಕರು, ಸೋಮವಾರಪೇಟೆ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರಾದ ಎಂ. ಮಹೇಶ್ ರವರ ನೇತೃತ್ವದಲ್ಲಿ ಮಡಿಕೇರಿ ಗ್ರಾಮಾಂತರ ಠಾಣೆಯ ಪಿಎಸ್‌ಐ ಚಂದ್ರಶೇಖರ್ ಹೆಚ್‌.ವಿ., ಸುಂಟಿಕೊಪ್ಪ ಠಾಣಾ ಪಿಎಸ್‌ಐ ತಿಮ್ಮಪ್ಪ ಹಾಗೂ ಸಿಬ್ಬಂದಿಯವರಾದ ಕೆ.ಎ. ಹಮೀದ್ ಎಎಸ್ಐ, ವಿ.ಜಿ. ವೆಂಕಟೇಶ್, ಯೋಗೇಶ್ ಕುಮಾರ್ ಬಿ.ಎಲ್., ಎಂ.ಎನ್. ನಿರಂಜನ್, ಕೆ.ಆರ್. ವಸಂತ್, ಶರತ್ ರೈ ಬಿ.ಜೆ.,ಕೆ.ಎಸ್. ಅನಿಲ್ ಕುಮಾರ್, ಟಿ.ಎಸ್. ಸಜಿ, ಬಿ.ಎಸ್. ದಯಾನಂದ,ಎನ್‌.ವಿ. ಪ್ರಕಾಶ್, ಸಂದೇಶ್, ಬಿ.ಪಿ. ಸಂಪತ್ ರೈ, ಲೋಕೇಶ್, ಚಾಲಕರಾದ ಗಣೇಶ, ಶಶಿಕುಮಾರ್ ಹಾಗೂ  ಸಿ.ಡಿ.ಆರ್. ಸೆಲ್ ನ ಸಿಬ್ಬಂದಿಗಳಾದ ರಾಜೇಶ್ ಸಿ.ಕೆ. ಮತ್ತು ಎಂ.ಎ.ಗಿರೀಶ್ ರವರ ಪರಿಶ್ರಮದಿಂದ ಪ್ರಕರಣವನ್ನು ಬೇಧಿಸಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿರುತ್ತಾರೆ.

ವ್ಯಕ್ತಿ ಆತ್ಮಹತ್ಯೆ

ದಿನಾಂಕ 11/05/2020ರ ರಾತ್ರಿ ವೇಳೆ ಮಡಿಕೇರಿ ಬಳಿಯ ಬೆಟ್ಟಗೇರಿ ನಿವಾಸಿ ಟಿ.ಕೆ.ಬೆಳ್ಳಿಯಪ್ಪ ಎಂಬವರು ಮನೆಯಲ್ಲಿ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೆಂಕಿ ಹಚ್ಚಿಕೊಂಡು ವ್ಯಕ್ತಿ ಆತ್ಮಹತ್ಯೆ

ದಿನಾಂಕ 11/05/2020ರಂದು ಸೋಮವಾರಪೇಟೆ ಬಳಿಯ ಬಜೆಗುಂಡಿ ನಿವಾಸಿ ಸುಬ್ರಮಣಿ ಎಂಬವರು ಮನೆಯಲ್ಲಿ ಸೀಮೆಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಸುಬ್ರಮಣಿಯವರು ಮದ್ಯಪಾನ ಮಾಡಿ ಪತ್ನಿಯೊಂದಿಗೆ ಜಗಳ ಮಾಡಿದ್ದು ಈ ಸಂಬಂಧ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಕೊಲೆ ಪ್ರಕರಣ

ಶ್ರೀಮಂಗಲ ಬಳಿಯ ಕುಮಟೂರು ನಿವಾಸಿ ಕೆ.ಟಿ.ಪೂವಯ್ಯ ಎಂಬವರು ಕುಶಾಲನಗರದ ಕುವೆಂಪು ಬಡಾವಣೆಯ ಮನೆಯೊಂದರಲ್ಲಿ ಬಾಡಿಗೆಗೆ ಇದ್ದು ದಿನಾಂಕ 11/05/2020ರಂದು ಕೆ.ಟಿ.ಪೂವಯ್ಯನವರನ್ನುಯಾರೋ ಅಪರಿಚಿತರು ಅವರು ಬಾಡಿಗೆಗೆ ಇದ್ದ ಮನೆಯಲ್ಲಿ ಕೊಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಫಘಾತ

ದಿನಾಂಕ 12/05/2020ರಂದು ಕುಶಾಲನಗರದ ಗುಮ್ಮನಕೊಲ್ಲಿ ನಿವಾಸಿ ಪ್ರವೀಣ್‌ ಕುಮಾರ್ ಎಂಬವರು ಅವರ ಲಾರಿಯಲ್ಲಿ ಕಾಫಿ ತುಂಬಿಸಿಕೊಂಡು ಪಾಲಿಬೆಟ್ಟದಿಂದ ಕುಶಾಲನಗರಕ್ಕೆ ಬರುತ್ತಿರುವಾಗ ಗುಡ್ಡೆಹೊಸೂರು ಕಡೆಯಿಂದ ಒಂದು ಮೋಟಾರು ಬೈಕನ್ನು ಅದರ ಸವಾರ ನಾಗರಾಜ ಎಂಬವರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಪ್ರವೀಣ್‌ರವರು ಚಾಲಿಸುತ್ತಿದ್ದ ಲಾರಿಗೆ ಡಿಕ್ಕಿಪಡಿಸಿದ ಪರಿಣಾಮ ನಾಗರಾಜರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಪ್ರವೇಶ, ಕೆಲಸಕ್ಕೆ ಅಡ್ಡಿ

ದಿನಾಂಕ 12/05/2020ರಂದು ವಿರಾಜಪೇಟೆ ಪಟ್ಟಣ ಪಂಚಾಯಿತಿಯ ದಿನಗೂಲಿ ನೌಕರರಾದ ಸನ್ನು ಕುಮಾರ್ ಮತ್ತು ಆರ್ಮುಗಂ ಎಂಬವರು ವಿವೇಕ್‌ ರೈ, ರಾಜಪ್ಪ, ಪುರುಷೋತ್ತಮ ಎಂಬವರೊಡನೆ ಪಟ್ಟಣ ಪಂಚಾಯಿತಿ ಕಚೇರಿಯೊಳಗೆ ಅತಿ ಕ್ರಮ ಪ್ರವೇಶ ಮಾಡಿ ಕಚೇರಿಯಲ್ಲಿ ಅನುಚಿತವಾಗಿ ವರ್ತಿಸಿ ಅಲ್ಲಿದ್ದ ಸಿಬ್ಬಂದಿಗಳನ್ನು ಬೆದರಿಸಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಪಟ್ಟಣ ಪಂಚಾಯಿತಿ ಇಂಜಿನಿಯರ್ ಹೇಮ ಕುಮಾರ್‌ರವರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.