Crime News

ವಂಚನೆ ; ವ್ಯಕ್ತಿಯ ಬಂಧನ

ಸರ್ಕಾರಿ ಅಧಿಕಾರಿ ಎಂಬುದಾಗಿ ಸುಳ್ಳು ಹೇಳಿ ಸರ್ಕಾರಿಅಧಿಕಾರಿಗೆ ವಂಚಿಸಿ ಸವಲತ್ತನ್ನು ಪಡೆದುಕೊಂಡಿದ್ದ ಒಡಿಶಾ ಮೂಲದ ವ್ಯಕ್ತಿಯೊಬ್ಬನನ್ನು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ದಿನಾಂಕ 28-03-2018 ರಂದು ಸೌಮ್ಯ ರಂಜನ್ ಮಿಶ್ರ ಎಂಬ ವ್ಯಕ್ತಿಯು ಮೈಸೂರಿನ ಮಹಾನಗರ ಪಾಲಿಕೆಯ ಕಮಿಷನರ್ ರವರಿಗೆ ಕರೆ ಮಾಡಿ ತಾನು ಮುಂಬೈ ರೆವಿನ್ಯೂ ಇಲಾಖೆಯ ರೀಜನಲ್ ಕಮಿಷನರ್ ಎಂದು ಪರಿಚಯಿಸಿಕೊಂಡು ಅವರಿಂದ ಜಿಲ್ಲೆಯ ವಿರಾಜಪೇಟೆಗೆ ಹೋಗಲು ಒಂದು ವಾಹನವನ್ನು ಪಡೆದುಕೊಂಡಿದ್ದು ವಿರಾಜಪೇಟೆಯ ಅಂಬಟ್ಟಿ ಗ್ರೀನ್ಸ್ ರೆಸಾರ್ಟಿಗೆ ಬಂದು ತಂಗಿರುವುದಾಗಿದೆ. ನಂತರ ಈ ವ್ಯಕ್ತಿಯು ಪೊಲೀಸ್ ಇಲಾಖೆಯ ವಿವಿಧ ಅಧಿಕಾರಿಗಳ ದೂರವಾಣಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ಇಂಟರ್ನೆಟ್ ಮೂಲಕ  ಪಡೆದು ವಿರಾಜಪೇಟೆ ಡಿವೈ.ಎಸ್.ಪಿ. ನಾಗಪ್ಪರವರಿಗೆ ಹಾಗು ವಿರಾಜಪೇಟೆ ವೃತ್ತ ನಿರೀಕ್ಷಕರಾದ ಕುಮಾರ ಆರಾಧ್ಯ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಬಸವರಾಜುರವರುಗಳಿಗೆ ತನ್ನ ಮೊಬೈಲ್‌ನಿಂದ ಕರೆ ಮಾಡಿ ಅವರಿಗೂ ಸಹ ತಾನು ಮುಂಬೈ ರೆವಿನ್ಯೂ ಇಲಾಖೆಯ ರೀಜನಲ್ ಕಮಿಷನರ್ ಎಂದು ಪರಿಚಯಿಸಿಕೊಂಡು ತಾನು ವಿರಾಜಪೇಟೆಯ ಅಂಬಟ್ಟಿ ಗ್ರೀನ್ಸ್ ರೆಸಾರ್ಟಿನಲ್ಲಿ ತಂಗಿದ್ದು ತನಗೆ ಕೊಡಗಿನಲ್ಲಿ ತಿರುಗಾಡುವುದಕ್ಕೆ ಒಬ್ಬ ಪೊಲೀಸ್ ಗನ್ ಮ್ಯಾನ್ ಬೇಕೆಂದು ಕೇಳಿದ್ದಾನೆ. ಮಾತ್ರವಲ್ಲದೆ   ಕೊಡಗಿನ ಜಿಲ್ಲಾಧಿಕಾರಿ ಶ್ರೀಮತಿ ಪಿ.ಐ. ಶ್ರೀವಿದ್ಯಾ, ಐ.ಎ.ಎಸ್., ಹಾಗು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಾದ ಪಿ. ರಾಜೇಂದ್ರ ಪ್ರಸಾದ್, ಐ.ಪಿ.ಎಸ್., ರವರಿಗೂ ಸಹಾ ಕರೆ ಮಾಡಿ ಮಾತನಾಡಿ ಸರಕಾರದ ಸವಲತ್ತು ಪಡೆಯಲು ಯತ್ನಿಸಿದ್ದಾನೆ.

ಈತನ ನಡವಳಿಕೆಯಿಂದ ಅನುಮಾನಗೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್‌ರವರು ಈತನ ಕೂಲಂಕುಶವಾಗಿ ವಿಚಾರಿಸುವಂತೆ ವಿರಾಜಪೇಟೆ ಉಪ ವಿಭಾಗದ ಡಿಎಸ್ಪಿ ನಾಗಪ್ಪರವರಿಗೆ ನಿರ್ದೇಶನಗಳನ್ನು ನೀಡಿದ್ದು ಅದರಂತೆ ದಿನಾಂಕ 29-03-2018 ರಂದು ಸಂಜೆ 4-00 ಗಂಟೆಗೆ ವಿರಾಜಪೇಟೆ ಉಪವಿಭಾಗದ ಡಿಎಸ್‌ಪಿನಾಗಪ್ಪರವರ ನೇತೃತ್ವದಲ್ಲಿ ಸಿ.ಪಿ.ಐ. ಕುಮಾರ ಆರಾಧ್ಯ, ಪಿ.ಎಸ್.ಐ. ಬಸವರಾಜುರವರು ಅಂಬಟ್ಟಿ ಗ್ರೀನ್ಸ್ ರೆಸಾರ್ಟಿಗೆ ಹೋಗಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ತಾನು ಸೌಮ್ಯ ರಂಜನ್ ಮಿಶ್ರ ತಂದೆ ರಾಧಾಕಾಂತ್ ಮಿಶ್ರ, 32 ವರ್ಷ, ಬ್ರಾಹ್ಮಣರು, ಸ್ವಂತ ಊರು ಸುಕಿಗೋಪಾಲ್ ತಾಲೂಕು, ಬೀರಾರಾಂ ಚಂದ್ರಪುರ್ ಗ್ರಾಮ, 1ನೇ ಖಂಡಿ, ಪುರಿ ಜಿಲ್ಲೆ, ಓಡಿಶಾ ರಾಜ್ಯ ಎಂದು ತಿಳಿದು ಬಂದಿರುತ್ತದೆ.

ಸೌಮ್ಯ ರಂಜನ್ ಮಿಶ್ರಾನು ಎಂ.ಸಿ.ಎ. ಪದವೀಧರನಾಗಿದ್ದು ಈ ಹಿಂದೆ ಎಂಪ್ಲಾಯಿಮೆಂಟ್ ಪ್ರಾವಿಡೆಂಟ್ ಫಂಡ್ ಕಚೇರಿಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಗುತ್ತಿಗೆ ಆಧಾರದಲ್ಲಿ ಆಗಿ ಕೆಲಸ ಮಾಡುತ್ತಿದ್ದು ತನಗೆ ಇಲಾಖಾ ಅಧಿಕಾರಿಯಂತೆ ನಟಿಸಿ ಸವಲತ್ತುಗಳನ್ನು ಕೇಳಿದರೆ ತಕ್ಷಣ ಸಿಗುವುದೆಂದು ಈ ರೀತಿ ರೀಜನಲ್ ಕಮಿಷನರ್ ಎಂದು ಸುಳ್ಳು ಹೇಳಿರುವುದಾಗಿ ತಿಳಿಸಿರುತ್ತಾನೆ.

ಸರ್ಕಾರಿ ಅಧಿಕಾರಿ ಎಂದು ಸುಳ್ಳು ಹೇಳಿ ಸರ್ಕಾರಿ ವಾಹನವನ್ನು ಕಾನೂನು ಬಾಹಿರವಾಗಿ ಉಪಯೋಗಿಸಿಕೊಂಡು ವಂಚನೆ ಮಾಡಿರುವ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನ ವಿರುದ್ದ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ಸಂ.76/2018 ಕಲಂ.170, 419, 420 ಐ.ಪಿ.ಸಿ. ರೀತ್ಯ ಪ್ರಕರಣ ದಾಖಲಿಸಿಕೊಂಡು ಆರೋಪಿ ಸೌಮ್ಯ ರಂಜನ್ ಮಿಶ್ರಾನನ್ನು ದಸ್ತಗಿರಿ ಮಾಡಲಾಗಿದೆ.

ಈ ರೀತಿ ಸುಳ್ಳು ಹೇಳಿ ಸರಕಾರಿ ನೌಕರರಿಗೆ ಹಾಗು ಇತರೆ ಸಾರ್ವಜನಿಕರಿಗೆ ಮೋಸ ಮಾಡುವ ಜನರ ಬಗ್ಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರು ವಿಶೇಷ ಎಚ್ಚರಿಕೆಯನ್ನು ವಹಿಸಬೇಕೆಂದು ಕೊಡಗು ಜಿಲ್ಲಾಧಿಕಾರಿಗಳು ಹಾಗು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.

ವಾಹನ ಅಪಘಾತ

ದಿನಾಂಕ 28/03/2018ರಂದು ಮಂಗಳೂರು ನಿವಾಸಿ ಶಾಂತಾ ಎಂಬವರು ಅವರ ಪತಿ ಮೋಹನ್ ಮತ್ತು ಮಗ ಧ್ಯಾನ್ ತಮ್ಮಯ್ಯ ಎಂಬವರೊಂದಿಗೆ ಕೆಎ-51-ಜೆಡ್-2579ರ ಬೊಲೆರೋ ವಾಹನದಲ್ಲಿ ಮಂಗಳೂರಿನಿಂದ ಗೋಣಿಕೊಪ್ಪಲಿನ ಕಡೆಗೆ ಹೋಗುತ್ತಿರುವಾಗ ನಗರದ ಉಮಾ ಮಹೇಶ್ವರಿ ದೇವಸ್ಥಾನದ ಬಳಿ ಎದುರಿನಿಂದ ಕೆಎ-01-ಎಎಫ್-8217ರ ಬಸ್ಸನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಶಾಂತಾರವರು ಪ್ರಯಾಣಿಸುತ್ತಿದ್ದ ಬೊಲೆರೋ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ ಶಾಂತಾರವರ  ಕುಟುಂಬ ಮತ್ತು ಬಸ್ಸಿನಲ್ಲಿದ್ದ ಅಜಿತ್ ಮತ್ತು ವಿಜಯ್ ಎಂಬವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಮದ್ಯಪಾನ, ಮೂವರ ಬಂಧನ

ದಿನಾಂಕ 29/03/2018ರಂದು ಕುಶಾಲನಗರದ ಜಾತ್ರಾ ಮೈದಾನದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪಿರಿಯಾಪಟ್ನದ ಅಜಯ್, ಸತಿಶ್ ಮತ್ತು ಕುಶಾಲನಗರದ ಲಕ್ಷ್ಮಣ್ ಎಂಬವರು ಕಾನೂನು ಬಾಹಿರವಾಗಿ ಅಕ್ರಮವಾಗಿ ಮದ್ಯಪಾನ ಮಾಡುತ್ತಿದ್ದ  ಪ್ರಕರಣವನ್ನು ಪತ್ತೆ ಹಚ್ಚಿದ ಕುಶಾಲನಗರ ಪಟ್ಟಣ ಠಾಣೆಯ ಪಿಎಸ್‌ಐ ಪಿ.ಜಗದೀಶ್‌ರವರು ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಹಿಳೆ ಆತ್ಮಹತ್ಯೆ 

ದಿನಾಂಕ 29/03/2018ರಂದು ನಾಪೋಕ್ಲು ಬಳಿಯ ನೆಲಜಿ ನಿವಾಸಿ ಶೈಲಾ ಎಂಬ ಮಹಿಳೆಯು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ವಿಪರೀತ ಮದ್ಯಪಾನ ಮಾಡಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ರಸ್ತೆ ಅಪಘಾತ

ದಿನಾಂಕ 28/03/2018ರಂದು ಮಡಿಕೇರಿ ನಗರದ ಸುಬ್ರಮಣ್ಯ ರಸ್ತೆ ನಿವಾಸಿ ಸುಬ್ರಮಣಿ ಎಂಬವರು ಸುಬ್ರಮಣ್ಯ ನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೆಎ-12-ಪಿ-8520ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸುಬ್ರಮಣಿರವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published.