Crime News

ಕನ್ನ ಕಳವು ಪ್ರಕರಣ; ಆರೋಪಿಗಳ ಬಂಧನ

ಮನೆಯೊಂದರ ಬೀಗ ಮುರಿದು ಸುಮಾರು ಒಂದು ಲಕ್ಷದ ತೊಂಬತ್ತ ನಾಲ್ಕು ಸಾವಿರದ ಇನ್ನೂರು ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ಒಂದು ವಾಚನ್ನು ಕಳವು ಮಾಡಿದ ಪ್ರಕರಣವನ್ನು ಪ್ರಕರಣ ದಾಖಲಾದ ಕೇವಲ ಮೂರು ದಿನಗಳಲ್ಲಿ ಅತ್ಯಂತ ಚುರುಕು ಮತ್ತು ದಕ್ಷತೆಯಿಂದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ನಾಪೋಕ್ಲು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಾಪೋಕ್ಲು ಬಳಿಯ ಯವಕಪಾಡಿ ಗ್ರಾಮದ ನಿವಾಸಿ ಶ್ರೀಮತಿ ಕರ್ತಂಡ ಎಂ ಮಾಚವ್ವ ಎಂಬವರು ದಿನಾಂಕ 19-05-2020 ರಂದು ಮನೆಯ ಬೀಗ ಹಾಕಿಕೊಂಡು ತನ್ನ ಮಗನೊಂದಿಗೆ ಮಗನ ಮನೆ ಗೋಣಿಕೊಪ್ಪಕ್ಕೆ ಹೋಗಿದ್ದು ದಿನಾಂಕ 26-05-2020 ರಂದು ಮಗನೊಂದಿಗೆ ಮರಳಿ ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ಮನೆಯ ಮುಂಭಾಗದ ಬೀಗವನ್ನು ಮುರಿದು ಒಳ ನುಗ್ಗಿ ಮಲಗುವ ಕೋಣೆಯ ವಾರ್ಡ್‌ರೋಬ್‌ನಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಒಂದು ವಾಚನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಸುಮನ್ ಡಿ.ಪೆನ್ನೇಕರ್, ಮಡಿಕೇರಿ ಉಪ ವಿಭಾಗದ ಪೊಲಿಸ್ ಉಪ ಅಧೀಕ್ಷಕರಾದ ಬಿ.ಪಿ.ದಿನೇಶ್ ಕುಮಾರ್ ಹಾಗೂ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸಿ.ಎನ್. ದಿವಾಕರ್‌ರವರ ಮಾರ್ಗದರ್ಶನದಲ್ಲಿ ನಾಪೋಕ್ಲು ಠಾಣಾ ಪಿಎಸ್ಐ ಆರ್. ಕಿರಣ್‌ರವರು ಸಿಬ್ಬಂದಿಯವರಾದ ಫ್ರಾನ್ಸಿಸ್, ಮಧುಸೂದನ್, ನವೀನ್, ಹರ್ಷ, ಕಾಳಿಯಪ್ಪ, ಪ್ರೇಂ ಕುಮಾರ್, ದೇವರಾಜು ಎ.ಎಸ್.ಐ. ಜ್ಯೋತಿಕುಮಾರ್, ಕುಶಾಲಪ್ಪ ಎ.ಎಸ್.ಐ.ರವರ ತಂಡದೊಂದಿಗೆ ಅಪರಾಧ ಪತ್ತೆ ಕಾರ್ಯ ಕೈಗೊಂಡು ಕೇವಲ ಮೂರು ದಿನಗಳೊಳಗಾಗಿ ದಿನಾಂಕ 30-05-2020 ರಂದು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಕಡಂಗ ಗ್ರಾಮದಲ್ಲಿ ಆರೋಪಿಗಳಾದ 1) ಹೆಚ್.ಕೆ ಮಹೇಶ ಅಲಿಯಾಸ್ ನವೀನ ತಂದೆ ಕರಿಯಪ್ಪ ಪ್ರಾಯ 39 ವರ್ಷ, ಕೂಲಿ ಕೆಲಸ, ವಾಸ ಬೊಳ್ಳುಮಾಡು ವಿರಾಜಪೇಟೆ, 2) ಈ.ಎಂ ಭರತ್, ತಂದೆ ಮೋಹನ್ ಈ.ವಿ, ಪ್ರಾಯ 21 ವರ್ಷ, ಕೂಲಿ ಕೆಲಸ ವಾಸ ಬೊಳ್ಳುಮಾಡು ವಿರಾಜಪೇಟೆ ರವರನ್ನು ಬಂಧಿಸಿ ಅವರಿಂದ ಸುಮಾರು ರೂ. 1,94,200/- ಮೌಲ್ಯದ ಚಿನ್ನಾಭರಣ ಮತ್ತು ಒಂದು ವಾಚನ್ನು ವಶಪಡಿಸಿಕೊಂಡಿರುತ್ತಾರೆ

ಮೇಲ್ಕಂಡ ಪ್ರಕರಣದಲ್ಲಿ ಅತ್ಯಂತ ಕ್ಷಿಪ್ರವಾಗಿ ತನಿಖೆ ಮಾಡಿ ಆರೋಪಿಗಳನ್ನು ಮತ್ತು ಕಳವು ಮಾಲನ್ನು ಪತ್ತೆ ಹಚ್ಚಿ ಪ್ರಕರಣವನ್ನು ಬೇಧಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್‌ ಡಿ ಪೆನ್ನೇಕರ್‌, ಐಪಿಎಸ್‌ರವರು ಶ್ಲಾಘಿಸಿ ನಗದು ಬಹುಮಾನ ಘೋಷಿಸಿರುತ್ತಾರೆ.

ಅಪರಿಚಿತ ವ್ಯಕ್ತಿಯಿಂದ ಮಹಿಳೆ ಮೇಲೆ ಹಲ್ಲೆ

ಸೋಮವಾರಪೇಟೆ ತಾಲೋಕು ನೆಲ್ಲಿಹುದಿಕೇರು ಗ್ರಾಮದ ಶ್ರೀಮತಿ ಯೋಗೇಶ್ವರಿ ಎಂಬವರು ದಿನಾಂಕ 29/05/2020 ರಂದು ಸಮಯ 19.00 ಗಂಟೆಗೆ ಕೆಲಸ ಮುಗಿಸಿ ವೇಲಾಯುದನ್ ಎಂಬವರ ಆಟೋ ರೀಕ್ಷಾದಲ್ಲಿ ಮನೆಗೆ ಹೋಗುತ್ತಿರು ವಾಗ್ಗೆ, ನೆಲ್ಲಿಹುದಿಕೇರಿ ಗ್ರಾಮದ ಮಡಿಕೇರಿ ರಸ್ತೆಯಲ್ಲಿರುವ ಪ್ರೂಟ್ಸ್ ಅಂಗಡಿ ಹತ್ತಿರ ಆಟೋ ರೀಕ್ಷಾ ತಲುಪುವಾಗ್ಗೆ, ಯಾರೋ ಅಪರಿಚಿತ ವ್ಯಕ್ತಿಯೋರ್ವ ಆಟೋ ರೀಕ್ಷಾ ವನ್ನು ತಡೆದು ಅಡ್ಡಗಟ್ಟಿ ಶ್ರೀಮತಿ ಯೋಗೇಶ್ವರಿಯವರನ್ನು ಕೆಳಗೆ ಇಳಿಸಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಲ್ಲೆನಡೆಸಿ ಅಲ್ಲಿಂದ ಹೊರಟು ಹೋಗಿದ್ದು, ಈ ವಿಚಾರವಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ತಡೆದು ಹಲ್ಲೆ

ದಿನಾಂಕ 29-05-2020 ರಂದು ವಿರಾಜಪೇಟೆ ತಾಲೋಕಿನ ಪಾಲಿಬೆಟ್ಟದ ನಿವಾಸಿ ಶ್ರೀಮತಿ ಹೆಚ್.ಎ. ಕವಿತಾ ಎಂಬವರು ತನ್ನ ಗಂಡನ ಮನೆಯಿಂದ ತನ್ನ ತಾಯಿ ಮನೆಗೆ ಬರುತ್ತಿರುವಾಗ ಪಾಲಿಬೆಟ್ಟದ ಜ್ಯೋತಿರವರ ಮನೆಯ ಮುಂದೆ ರಸ್ತೆಯಲ್ಲಿ ಜ್ಯೋತಿ, ಅವಳ ಗಂಡ ಲವ ಹಾಗೂ ಅವರ ಮಗ ತಿಲನ್ ರವರು ತಡೆದು ನಿಲ್ಲಿಸಿ ಹಲ್ಲೆ ನಡೆಸಿ ನೋವನ್ನುಂಟು ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ವಿನಾಕಾರಣ ಮಹಿಳೆ ಮೇಲೆ ಹಲ್ಲೆ,

ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ತೊರನೂರು ಗ್ರಾಮದ ನಿವಾಸಿ ಶ್ರೀಮತಿ ಸುಶೀಲ ಎಂಬವರು ತೊರೆನೂರು ಗ್ರಾಮದ ಮಹದೇವಮ್ಮ ರವರ ಟೀ ಅಂಗಡಿಯಲ್ಲಿ ಟೀ ಕುಡಿಯುತ್ತಿರುವಾಗ ಆರೋಪಿ ಅರುಣ ಎಂಬವರು ವಿನಾಃ ಕಾರಣ ಜಗಳ ತೆಗೆದು ಕೈಯಿಂದ ಮುಖಕ್ಕೆ ಹಲ್ಲೆ ಮಾಡಿ ಮಣೆಯಿಂದ ತಲೆಗೆ ಹೊಡೆದು ರಕ್ತ ಗಾಯಪಡಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಗುಂಡು ಹಾರಿಸಿ ಕೊಲೆಗೆ ಯತ್ನ

ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮುಕ್ಕೋಡ್ಲು ಗ್ರಾಮದ ನಿವಾಸಿ ಟಿ.ಕೆ. ವೇಣುಗೋಪಾಲ್ ಎಂಬವರು ದಿನಾಂಕ 29-5-2020 ರಂದು ಮನೆಯಲ್ಲಿರುವಾಗೆ ಅವರ ಚಿಕ್ಕಪ್ಪ ಮುತ್ತಣ್ಣ, ಮುತ್ತಣ್ಣನವರ ಪತ್ನಿ ಮುತ್ತಮ್ಮ ಮತ್ತು ಮುತ್ತಣ್ಣ ನವರ ಮಗ ಪ್ರದೀಪಕುಮಾರ್ ರವರುಗಳು ಅಲ್ಲಿಗೆ ಬಂದು ವೇಣುಗೋಪಾಲ್ರವರ ತಾಯಿಯವರ ಮೇಲೆ ಹಲ್ಲೆ ನಡೆಸಿದ್ದು ಇದೇ ವಿಚಾರದಲ್ಲಿ ಜಗಳವಾಗಿ ಮಾತಿಗೆ ಮಾತು ಬೆಳೆದು ಪ್ರದೀಪ ಕುಮಾರನು ವೇಣುಗೋಪಾಲ ಮತ್ತು ಮನೆಯವರನ್ನು ಕೊಲೆ ಮಾಡುವ ಉದ್ದೇಶದಿಂದ ಮನೆಯೊಳಗಿನಿಂದ ಕೋವಿಯಿಂದ ಗುಂಡು ಹಾರಿಸಿದ್ದು ಅದು ವೇಣುಗೋಪಾಲ್ ರವರ ಕಾಲಿಗೆ ತಾಗಿ ಗಂಭೀರ ಗಾಯ ಗೊಂಡಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.