Crime News

ಮನೆ,ವಾಹನಗಳ ಮೇಲೆ ಕಲ್ಲು ತೂರಿ ಅಶಾಂತಿಗೆ ಕಾರಣನಾಗಿದ್ದ ವ್ಯಕ್ತಿಯ ಬಂಧನ:

ದಿನಾಂಕ 25-05-2020 ರಂದು ಸೋಮವಾರಪೇಟೆ ಮಹದೇಶ್ವರ ಬ್ಲಾಕ್ ನಲ್ಲಿ ಮನೆ ಮತ್ತು ವಾಹನಗಳ ಮೇಲೆ ಕಲ್ಲುಗಳನ್ನು ತೂರಿ ಹಾನಿಗೊಳಿಸಿ ನಗರದಲ್ಲಿ ಅಶಾಂತಿಗೆ ಕಾರಣನಾದ ವ್ಯಕ್ತಿಯನ್ನು ಪತ್ತೆಹಚ್ಚುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ದಿನಾಂಕ  25-05-2020 ರಂದು ಮಧ್ಯರಾತ್ರಿ  ಸೋಮವಾರಪೇಟೆ ನಗರದ ಮಹದೇಶ್ವರ ಬಡಾವಣೆಯಲ್ಲಿ ವಾಸವಿರುವ ಶ್ರೀಮತಿ ಪುಷ್ಪ ಎಂಬವರ ಮನೆ ಕಿಟಕಿಗಳಿಗೆ, ಧರ್ಮಪ್ಪ ಎಂಬವರ ಬಾಪ್ತು ಹ್ಯುಂಡೈ ಕಾರಿಗೆ, ಲಿಂಗರಾಜು ಎಂಬವರ ಬಾಪ್ತು ಮಾರುತಿ 800 ಕಾರು, ಅಬಕಾರಿ ಕಚೇರಿಯ ಮುಂದುಗಡೆ ನಿಲ್ಲಿಸಿದ್ದ ಇಲಾಖಾ ಜೀಪು, ಬಿಪಿನ್ ಎಂಬವರ ಮಾರುತಿ ಕಾರು 800 ಮತ್ತು  ವೈ.ಡಿ. ಜಗದೀಶ್ ಎಂಬವರಿಗೆ ಸೇರಿದ ಮಾರುತಿ ಕಾರಿನ ಗಾಜುಗಳನ್ನು ಹೊಡೆದು ಹಾಕಿದ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಕಲ್ಲಿನಿಂದ ಮನೆ ಮತ್ತು ವಾಹನಗಳ ಗಾಜುಗಳನ್ನು ಪುಡಿಗಟ್ಟಿದ ಆಸಾಮಿಯಾದ ಸಂತೋಷ್ ಹೆಚ್.ಡಿ. ತಂದೆ ದೇವೇಗೌಡ, ಪ್ರಾಯ 40 ವರ್ಷ, ಬ್ರೋಕರ್ ವೃತ್ತಿ, ವಾಸ: ಮಹದೇಶ್ವರ ಬ್ಲಾಕ್, ಸೋಮವಾರಪೇಟೆ ಪಟ್ಟಣ ಈತನನ್ನು ಸಿಸಿ ಕ್ಯಾಮರಾ ಮತ್ತು ತಾಂತ್ರಿಕ ಸಹಾಯದಿಂದ ಪತ್ತೆಹಚ್ಚಿ ದಿನಾಂಕ: 03-06-2020 ರಂದು ವಶಕ್ಕೆ ಪಡೆಯುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಪ್ರಕರಣವನ್ನು  ಸೋಮವಾರಪೇಟೆ ಉಪವಿಭಾಗದ ಪೊಲೀಸ್ ಉಪಅಧೀಕ್ಷಕರಾದ ಹೆಚ್.ಎಂ ಶೈಲೇಂದ್ರ ಮತ್ತು ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ನಂಜುಂಡೇಗೌಡ ರವರ ಮಾರ್ಗದರ್ಶನದಲ್ಲಿ  ಸೋಮವಾರಪೇಟೆ ಠಾಣೆಯ ಪಿ.ಎಸ್.ಐ ಶಿವಶಂಕರ್ ಮತ್ತು ಸಿಬ್ಬಂದಿಯವರಾದ  ನವೀನ್, ಮಧು, ಪ್ರವೀಣ್, ಸಜಿ, ಸಂದೇಶ್, ರಮೇಶ್, ಮಂಜು, ರಾಜೇಶ್, ಗಿರೀಶ್ ರವರನ್ನು ಒಳಗೊಂಡ ತಂಡ ಪತ್ತೆ ಮಾಡಿರುತ್ತಾರೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

ವಿದ್ಯುತ್ ತಂತಿ ತಗುಲಿ ಬಾಲಕ ಸಾವು:

ದಿನಾಂಕ: 03-06-2020 ರಂದು ಮಡಿಕೇರಿ ತಾಲ್ಲೂಕು ಕೊಳಗದಾಳು ಗ್ರಾಮದ ಬಡ್ಡೀರ ನಂದಾ ಎಂಬುವವರ ಲೈನ್ ಮನೆಯ ನಿವಾಸಿ ಬಸಪ್ಪ ಎಂಬುವವರು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಅವರ  ಮಗ ಕಾಫಿ ತೆಗೆದುಕೊಂಡು ಅಡಿಕೆ ತೋಟದ ಮೂಲಕ ಹೋಗುತ್ತಿದ್ದಾಗ ನೆಲದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಷಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು ಈ ಬಗ್ಗೆ ನೀಡಿದ ದೂರಿನ ಮೇರೆ ಭಾಗಮಂಡಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಬೈಕ್ ಕಳವು ಆರೋಪಿ ಬಂಧನ:

ದಿನಾಂಕ: 03-06-2020 ರಂದು ಸಿದ್ದಾಪುರ ಠಾಣೆ ಪಿಎಸ್ಐ ರವರು ನೆಲ್ಯಹುದಿಕೇರಿ ಗ್ರಾಮದ ಅತ್ತಿಮಂಗಲ ಜಂಕ್ಷನ್ ಬಳಿ ವಾಹನಗಳ ಐ.ಎಂ.ವಿ ತಪಾಸಣೆ ಮಾಡುತ್ತಿದ್ದಾಗ ಅನುಮಾಸ್ಪದವಾಗಿ ಕಂಡುಬಂದ ಕೆಎ-51-ಇಕೆ-3739 ರ ಬೈಕ್ ಸವಾರನನ್ನು ವಿಚಾರಿಸಿದಾಗ ಬೈಕನ್ನು ಮೈಸೂರು ನಗರದ ಮಂಡಿಮೊಹಲ್ಲಾ ದಿಂದ ಕಳವು  ಮಾಡಿಕೊಂಡು ಬಂದಿರುವುದಾಗಿ ತಿಳಿದುಬಂದ ಮೇರೆ ಬೈಕ್ ಹಾಗೂ ಅರೋಪಿ ಹೆಚ್.ಎಂ ಶಮಂತ್ ಎಂಬುವವನನ್ನು ವಶಕ್ಕೆ ತೆಗೆದುಕೊಂಡು ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಹಲ್ಲೆ ಪ್ರಕರಣ

ದಿನಾಂಕ: 03-06-2020 ರಂದು ಸೋಮವಾರಪೇಟೆ ತಾಲ್ಲೂಕು ಅಗಳಿ ಗ್ರಾಮದ ನಿವಾಸಿ ಎ.ಎಸ್ ತೇಜೇಶ್ ಎಂಬುವವರು ಅವರ ಗದ್ದೆಯ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಅದೇ ಗ್ರಾಮದ ನಿವಾಸಿಗಳಾದ ಲಕ್ಷ್ಮಣ, ಪ್ರಣಾಮ್, ಭಾಗ್ಯ, ಗಿರೀಶ್, ಹರೀಶ್,ಹೂವಪ್ಪ ಎಂಬುವವರು ಊರುಡುವೆ ಜಾಗದ ವಿಚಾರದಲ್ಲಿ ವೈಮನಸ್ಸಿನಿಂದ ದಾರಿ ತಡೆದು ದೊಣ್ಣೆ ಮತ್ತು ಕತ್ತಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿ ಕೊಲೆ ಬೆದರಿಕೆ ಹಾಕಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಶನಿವಾರಸಂತೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.