Crime News

ದರೋಡೆ ಪ್ರಕರಣ, ಆರೋಪಿಗಳ ಬಂಧನ:

ಇತ್ತೀಚೆಗೆ ಕೊಡಗು ಜಿಲ್ಲೆಯ ನಾಗರೀಕರಲ್ಲಿ ಭೀತಿ ಮೂಡಿಸಿದ್ದ ವಿರಾಜಪೇಟೆಯಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ಪತ್ತೆ ಮಾಡಿ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ವಿರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ದಿನಾಂಕ 21-05-2020 ರಂದು ರಾತ್ರಿ ವಿರಾಜಪೇಟೆ ನಗರದ ಶಿವಾಸ್ ಜಂಕ್ಷನ್ ಬಳಿಯ ಮನೆಯೊಂದಕ್ಕೆ ನುಗ್ಗಿ ಮನೆಯಲಿದ್ದವರನ್ನು ಕಟ್ಟಿ ಹಾಕಿ ಹಲ್ಲೆ ನಡೆಸಿ ದರೋಡೆ ನಡೆಸಿದ್ದು ಈ ಪ್ರಕರಣ ಜಿಲ್ಲೆಯ ಜನರಲ್ಲಿ ಭಯವನ್ನು ಉಂಟುಮಾಡಿತ್ತು. ಈ ಪ್ರಕರಣದ ಪತ್ತೆಗಾಗಿ ರಚಿಸಲಾಗಿದ್ದ ತನಿಖಾ ತಂಡವು ದಿನಾಂಕ 09-06-2020 ರಂದು ಎಮ್ಮೆಮಾಡು ನಿವಾಸಿಯಾದ ಇಬ್ರಾಹಿಂ @ ಖಲೀಲ್ ಎಂಬ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ಕೃತ್ಯಕ್ಕೆ ಬಳಸಿದ ಒಂದು ಮಾರುತಿ 800 ಕಾರನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿ ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳಾದ ಎಮ್ಮೆಮಾಡು ನಿವಾಸಿಗಳಾದ  ಕಡುವಣಿ ಅಶ್ರಫ್ ಮತ್ತು ಮುಸ್ತಾಫ ರವರುಗಳನ್ನು ದಿನಾಂಕ 14-06-2020 ರಂದು ದಸ್ತಗಿರಿ ಮಾಡಿ ತನಿಖೆಗೆ ಒಳಪಡಿಸಿದಾಗ ಈ ಆರೋಪಿಗಳು ಈ ಹಿಂದೆ ಮೈಸೂರು ಜಿಲ್ಲೆ ಹಾಗೂ ಕೊಡಗು ಜಿಲ್ಲೆಯಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವ ಅಂಶ ಬೆಳಕಿಗೆ ಬಂದಿರುತ್ತದೆ.

ಅಲ್ಲದೆ ಇದೇ ಆರೋಪಿಗಳು ಎರಡು ತಿಂಗಳ ಹಿಂದೆ ವಿರಾಜಪೇಟೆ ನಗರದ ಶ್ರೀನಿವಾಸ ಎಂಬುವವರ ಮನೆಯಲ್ಲಿ ಮನೆ ಕಳ್ಳತನ ಮಾಡಿದ್ದು ಅಲ್ಲಿಂದ ಕದ್ದೊಯ್ದಿದ್ದ 121 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಮಡಿಕೇರಿ ಗ್ರಾಮಾಂತರ ಠಾಣೆ ಹಾಗು ನಾಪೋಕ್ಲು ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ನಡೆದ ಕಾಫಿ ಮತ್ತು ಕರಿಮೆಣಸು ಕಳ್ಳತನದ ಒಂದೊಂದು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಕಂಡುಬಂದಿದ್ದು ಸದರಿ ಪ್ರಕರಣಗಳಲ್ಲಿ 3 ಚೀಲ ಕಾಫಿ ಹಾಗು 400 ಕೆ.ಜಿ ಕರಿಮೆಣಸನ್ನು ವಶಪಡಿಸಿಕೊಳ್ಳಲಾಗಿದೆ.

ಈ ಆರೋಪಿಗಳ ದಸ್ತಗಿರಿಯಿಂದ ವಿರಾಜಪೇಟೆ ನಗರದ- 2 ಪ್ರಕರಣ, ಮಡಿಕೇರಿ ಗ್ರಾಮಾಂತರ ಠಾಣೆಯ-1 ಹಾಗೂ ನಾಪೋಕ್ಲು ಪೊಲೀಸ್ ಠಾಣೆಯ-1 ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು, ಅಂದಾಜು 12 ಲಕ್ಷ ರೂಪಾಯಿ ಮೌಲ್ಯದ  ಚಿನ್ನಾಭರಣ, ಮೊಬೈಲ್ ಫೋನ್, ಕಾಫಿ ಹಾಗೂ ಕಾಳುಮೆಣಸು ಮತ್ತು 3 ಕಾರು ಒಂದು ಗೂಡ್ಸ್ ಆಟೋಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದೇ ಆರೋಪಿಗಳು ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆ ಹಾಗೂ ಮೈಸೂರು ಜಿಲ್ಲೆಯಲ್ಲಿ ಇರುವ ಇತರ ಭಾಗಗಳಲ್ಲಿ ಶ್ರೀಮಂತರ ಮನೆಗಳನ್ನು ಗುರ್ತಿಸಿ ದರೋಡೆ ಮಾಡುವ ಯೋಜನೆಗಳನ್ನು ಹೊಂದಿದ್ದು ಇವರುಗಳ ದಸ್ತಗಿರಿಯಿಂದ ಮುಂದೆ ನಡೆಯಬಹುದಾಗಿದ್ದ ಹಲವಾರು ಘೋರ ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ಈ ತಂಡ ಯಶಸ್ವಿಯಾಗಿರುತ್ತದೆ.

ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ವಿರಾಜಪೇಟೆ ಡಿ.ವೈ.ಎಸ್.ಪಿ. ಜಯಕುಮಾರ್ ರವರ ನೇತೃತ್ವದಲ್ಲಿ ವಿರಾಜಪೇಟೆ ಸಿ.ಪಿ.ಐ ಕ್ಯಾತೇಗೌಡ, ವಿರಾಜಪೇಟೆ ನಗರ ಠಾಣಾ ಪಿ.ಎಸ್.ಐ ಹೆಚ್.ಎಸ್ ಬೋಜಪ್ಪ, ಪ್ರೋಬೆಷನರಿ ಪಿ.ಎಸ್.ಐ ರವರುಗಳಾದ ವಿನಯ ಕುಮಾರ್ ಸಿ, ಎಸ್.ಅಭಿಜಿತ್, ಮಂಜುನಾಥ.ಎಸ್, ಎ.ಎಸ್.ಐ ರವರುಗಳಾದ ಎಂ.ಸಿ ನಂಜಪ್ಪ, ಎಂ.ಪಿ ನಾಣಿಯಪ್ಪ, ಸಿ.ವಿ ಶ್ರೀಧರ್, ಸಿಬ್ಬಂದಿಯವರುಗಳಾದ ಬಿ.ಎಂ ರಾಮಪ್ಪ, ಹೆಚ್.ಸಿ ಸುರೇಂದ್ರ, ಕೆ.ಡಿ ಮನು, ಕೆ.ಎ ಅಬ್ದುಲ್ ಮಜೀದ್. ಮುಸ್ತಾಫ, ಪಿ.ಯು ಮುನೀರ್, ಸಂತೋಷ್ ದೊಡ್ಡಮನಿ, ಎಂ.ಚಂದ್ರಶೇಖರ, ಬಿ.ಟಿ ಪ್ರಧೀಪ, ಕೆ.ಪಿ ರಮೇಶ್, ಎನ್.ಎಸ್ ಲೊಕೇಶ, ಗಿರೀಶ, ಈರಪ್ಪ ವಠಾರ, ಮಹೇಶ, ಯೋಗೇಶ, ಪ್ರವೀಣ ,ರಾಜೇಶ್ ಹಾಗೂ ಗಿರೀಶ್ ರವರುಗಳು ಪಾಲ್ಗೊಂಡಿರುತ್ತಾರೆ. ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಲಾಗಿದೆ.

ರಸ್ತೆ ಅಪಘಾತ ಪ್ರಕರಣ

ದಿನಾಂಕ: 15-06-2020 ರಂದು ವಿರಾಜಪೇಟೆ ತಾಲ್ಲೂಕು ಜೋಡುಬೀಟಿ ಗ್ರಾಮದ ಬಳಿ ಮುಖ್ಯಯ ರಸ್ತೆಯಲ್ಲಿ ಕೆಎ-12-ಜೆಡ್-8253 ರ ಕಾರಿನ್ನು ಅದರ ಚಾಲಕ ಕಾವೇರಪ್ಪ ಎಂಬುವವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಕೆಎ-12-ಎ-7678 ರ ಆಟೋರಿಕ್ಷಾಕ್ಕೆ ಡಿಕ್ಕಿಪಡಿಸಿದ ಪರಿಣಾಮ ಆಟೋ ಚಾಲಕ ಮತ್ತು ಪ್ರಯಾಣಿಕರೊಬ್ಬರು ಗಾಯಗೊಂಡಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.