News

ಕೊಡಗು ಜಿಲ್ಲೆಯ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯೊಬ್ಬರಿಗೆ ಕೋವಿಡ್-19 ಪರೀಕ್ಷೆಯಲ್ಲಿ ಕೊರೋನಾ ದೃಢಪಟ್ಟಿರುವುದರಿಂದ, ಸದರಿ ಸಿಬ್ಬಂದಿಯನ್ನು ನಿಯಮದ ಪ್ರಕಾರ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದರಿ ಸಿಬ್ಬಂದಿಯವರು ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಛೇರಿಯನ್ನು ನಿಯಮದ ಪ್ರಕಾರ  ಸ್ಯಾನಿಟೈಸ್ ಮಾಡಿ ಸೀಲ್ಡೌನ್ ಮಾಡಲಾಗಿದೆ. ಸದರಿ ಸಿಬ್ಬಂದಿಯವರು ವಾಸವಿದ್ದ  ವಸತಿ ಗೃಹದ ಸುತ್ತಲಿನ 08 ವಸತಿಗೃಹಗಳ ವ್ಯಾಪ್ತಿಯನ್ನು ಕಂಟೇನ್ಮೆಂಟ್ ವಲಯ ಎಂದು ಘೋಷಿಸಲಾಗಿದೆ.

ಸದರಿ ವಸತಿ ಗೃಹಗಳಲ್ಲಿ ವಾಸವಿದ್ದ ಸಿಬ್ಬಂದಿ ಹಾಗೂ ಅವರ ಪರಿವಾರದವರನ್ನು ಹೋಂ ಕ್ವಾರಂಟೇನ್ ನಲ್ಲಿ ಇರುವಂತೆ ಸೂಚಿಸಲಾಗಿದೆ. ಸದರಿ ಸಿಬ್ಬಂದಿಯ ಪ್ರಾಥಮಿಕ ಸಂಪರ್ಕ ಹೊಂದಿದ ಸುಮಾರು 15 ವ್ಯಕ್ತಿಗಳನ್ನು  ಕೋವಿಡ್-19 ಪರೀಕ್ಷೆಗೆ ಮಾದರಿಯನ್ನು ನೀಡುವಂತೆ ಹಾಗೂ ಹೋಂ ಕ್ವಾರಂಟೇನ್ ನಲ್ಲಿ ಇರಲು ಸೂಚಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರ ಆರೋಗ್ಯದ ಬಗ್ಗೆ ತೀವ್ರ  ಕಾಳಜಿಯನ್ನು ತೋರಿದ್ದು ಪ್ರಥಮ ಹಂತದಲ್ಲಿ ಈಗಾಗಲೇ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರ ಕೋವಿಡ್-19 ಪರೀಕ್ಷೆಯನ್ನು ನಡೆಸಲಾಗಿದ್ದು, ಈವರೆಗೆ ಸಿಬ್ಬಂದಿಯವರಲ್ಲಿ ಕೋವಿಡ್-19 ಪಾಸಿಟಿವ್ ವರಧಿಯು ಇದು ಪ್ರಥಮವಾಗಿರುತ್ತದೆ.

ಕೊಡಗು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂಯವರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೇ, ಸಾರ್ವಜನಿಕರನ್ನು ಭೇಟಿ ಮಾಡುವ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಂಡು ಪೊಲೀಸ್ ಇಲಾಖೆಯ ವತಿಯಿಂದ ವಿತರಿಸಲಾಗಿರುವ ಸುರಕ್ಷಾ ಸಾಮಾಗ್ರಿಗಳನ್ನು ಉಪಯೋಗಿಸಿಕೊಂಡು ತಮ್ಮ ಆರೋಗ್ಯದ ಕಡೆಗೆ ಒತ್ತು ನೀಡುವ ಬಗ್ಗೆ ತಿಳಿಸಲಾಗಿದೆ.

Crime News

ಹಳೇ ದ್ವೇಷದಿಂದ ವ್ಯಕ್ತಿ ಮೇಲೆ ಹಲ್ಲೆ

ದಿನಾಂಕ 11-7-2020 ರಂದು ಮಡಿಕೇರಿ ಗ್ರಾಮಾಂತರ ಠಾಣೆ ಸರಹದ್ದಿನ ಬೆಟ್ಟಗೇರಿ ಗ್ರಾಮದ ನಿವಾಸಿ ಲಂಕೇಶ್ ಎಂಬವರ ಮೇಲೆ ಅದೇ ಗ್ರಾಮದ ನಿವಾಸಿ ಚಳಿಯಂಡ ಸತೀಶ್ ಎಂಬವರು ಹಳೇ ದ್ವೇಷವನ್ನಿಟ್ಟುಕೊಂಡು ಹಲ್ಲೆ ನಡೆಸಿದ ಪರಿಣಾಮ ಲಂಕೇಶ್ ರವರ ಹಲ್ಲು ಮುರಿದಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದು ಮಹಿಳೆ ಆತ್ಮಹತ್ಯೆ

ವಿರಾಜಪೇಟೆ ತಾಲೋಕು ಒಂಟಿಯಂಗಡಿ ಗ್ರಾಮದ ನಿವಾಸಿ ಟಿ.ಎಂ. ಅನಿಲ್ ಎಂಬವರ ಪತ್ನಿ ಸುಮಿತ್ರ ಎಂಬವರು ದಿನಾಂಕ 11-7-2020 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಬಂಧ ಟಿ.ಎಸ್. ಸುಗು ಮೃತರ ತಂದೆ ಇವರು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಸದ ಮನೆಯ ವಿಚಾರದಲ್ಲಿ ಜಗಳ:

ಪೊನ್ನಂಪೇಟೆ ಪೊಲೀಸ್ ಠಾಣಾ ಸರಹದ್ದಿನ ನಿಟ್ಟೂರು ಗ್ರಾಮದ ಬೆಂದೆಕುತ್ತಿ ಪೈಸಾರಿಯಲ್ಲಿ ವಾಸವಾಗಿರುವ ಕರಿಯ ಎಂಬವರ ಮೇಲೆ ಅದೇ ಗ್ರಾಮದ ನಿವಾಸಿಗಳಾದ ರಾಜ ಹಾಗು ಮುತ್ತ ಎಂಬವರು ಕರಿಯ ರವರ ವಾಸದ ಮನೆಯ ವಿಚಾರದಲ್ಲಿ ಜಗಳ ಮಾಡಿ ಕತ್ತಿಯಿಂದ ತಲೆಯ ಭಾಗಕ್ಕೆ ಕಡಿದು ಗಾಯಪಡಿಸಿದ್ದು ಅಲ್ಲದೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಸಂಬಂಧ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ನೇಣುಬಿಗಿದು ಮಹಿಳೆ ಆತ್ಮಹತ್ಯೆ

ವಿರಾಜಪೇಟೆ ತಾಲೋಕು ಕಾನೂರು ಗ್ರಾಮದ ನಿವಾಸಿ ಕಾಳೇಂಗಡ ತಿಮ್ಮಯ್ಯ ಎಂಬವರ ಪತ್ನಿ ಶ್ರೀಮತಿ ಶೈಲಾ @ ಜಯಲಕ್ಷ್ಮಿ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು ಇದೇ ವಿಚಾರದಲ್ಲಿ ಮನನೊಂದು ದಿನಾಂಕ 11-7-2020 ರಂದು ತಮ್ಮ ವಾಸದ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾರಿ ತಡೆದು ವ್ಯಕ್ತಿ ಮೇಲೆ ಹಲ್ಲೆ

ಸೋಮವಾರಪೇಟೆ ತಾಲೋಕು ಬಾಣಾವಾರ ಗ್ರಾಮದ ನಿವಾಸಿ ಎ.ಮೋಹನ ಎಂಬವರು ದಿನಾಂಕ 11-7-2020 ರಂದು ಮನೆಯ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಮಸಗೋಡು ಗ್ರಾಮದ ನಿವಾಸಿ ಮಧು ಎಂಬವರು ಎ.ಮೋಹನ್ ರವರರನ್ನು ದಾರಿಯಲ್ಲಿ ತಡೆದು ನಿಲ್ಲಿಸಿ ಕೆಲಸ ವಿಚಾರದಲ್ಲಿ ಜಗಳ ಮಾಡಿ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ,.

ಬೈಕ್ ನಿಲ್ಲಿಸಿದ ವಿಚಾರದಲ್ಲಿ ಜಗಳ:

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಹೆಬ್ಬಾಲೆ ಗ್ರಾಮದಲ್ಲಿ ವಾಸವಾಗಿರುವ ಹೆಚ್.ಎನ್. ಮಂಜುನಾಥರವರು ತಮ್ಮ ಬಾಪ್ತು ಮೋಟಾರ್ ಸೈಕಲನ್ನು ತಮ್ಮ ಪಕ್ಕದ ಮನೆಯ ನಿವಾಸಿ ಪ್ರಕಾಶ್ ಎಂಬವರ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದು ಇದೇ ವಿಚಾರದಲ್ಲಿ ಪಕ್ಕದ ಮನೆಯವರಾದ ಚೇತನ್, ಶೇಖರಾಚಾರಿ ಮತ್ತು ಹೆಚ್,ಎನ್. ಮಂಜುನಾಥ ರವರುಗಳು ಪರಸ್ಪರ ಜಗಳವಾಡಿಕೊಂಡು ಪರಸ್ಪರ ಹಲ್ಲೆ ಮಾಡಿಕೊಂಡಿದ್ದು ಈ ಸಂಬಂಧ ಮಂಜುನಾಥರವರು ಹಾಗು ಶೇಖರಾಚಾರಿಯವರ ಪತ್ನಿ ಶ್ರೀಮತಿ ಚಂದ್ರಿಕಾರವರುಗಳು ಆಸ್ಪತ್ರೆಗೆ ದಾಖಲಾಗಿ ನೀಡಿದ ಪ್ರತ್ಯೇಕ ದೂರುಗಳ ಮೇರೆಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪತ್ಯೇಕ 2 ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.