Crime News

ಹಣ ವಂಚನೆ ಪ್ರಕರಣ

ಮಡಿಕೇರಿ ನಿಗರದ ಕನ್ನಂಡ ಬಾಣೆ ನಿವಾಸಿ ಗಗನ್ ಬಿ.ಎ. ಎಂಬವರು ಅವರ ವಯಲಿನ್‍ ಅನ್ನು ಮಾರಾಟ ಮಾಡಲು ದಿನಾಂಕ 11/08/2020ರಂದು ಓಎಲ್‍ಎಕ್ಸ್ ಜಾಲತಾಣದಲ್ಲಿ ಜಾಹೀರಾತನ್ನು ನೀಡಿದ್ದು ನಂತರ ಸ್ವಲ್ಪ ಹೊತ್ತಿನಲ್ಲಿ ಓರ್ವ ವ್ಯಕ್ತಿಯು ಗಗನ್‍ರವರಿಗೆ ಕರೆಮಾಡಿ ತನ್ನನ್ನು ಸಂತೋಷ್ ಎಂಬುದಾಗಿ ಪರಿಚಯಿಸಿಕೊಂಡು ಗಗನ್‍ರವರ ವಯಲಿನ್‍ಅನ್ನು ತಾನು ಖರೀದಿಸುವುದಾಗಿ ಹೇಳಿ ವಾಟ್ಸ್‍ಆಪ್ ಮೂಲಕ ಒಂದು ಕ್ಯುಆರ್ ಕೋಡನ್ನು ಕಳುಹಿಸಿ ಅದನ್ನು ಸ್ಕ್ಯಾನ್ ಮಾಡುವಂತೆ ತಿಳಿಸಿರುತ್ತಾನೆ. ಆದರೆ ಗಗನ್‍ರವರು ಅವರ ಮೊಬೈಲಿನಲ್ಲಿ ಗೂಗಲ್ ಪೇ ತಂತ್ರಾಂಶವಿಲ್ಲದ ಕಾರಣ ಅವರ ತಾಯಿಯ ಮೊಬೈಲಿನಿಂದ ಸಂತೋಷ್ ಕಳಿಸಿದ ಕ್ಯುಆರ್‍ ಕೋಡನ್ನು ಸ್ಕ್ಯಾನ್‍ ಮಾಡಿದ್ದು ನಂತರ ಸಂತೋಷ್‍ರವರು ಹಲವು ಕ್ಯುಆರ್‍ ಕೋಡನ್ನು ಕಳುಹಿಸಿದ್ದು ಅದನ್ನು ಸ್ಕ್ಯಾನ್‍ ಮಾಡಿದ ನಂತರ ಗಗನ್‍ರವರ ತಾಯಿಯ ಬ್ಯಾಂಕ್‍ ಖಾತೆಯಿಂದ ಸುಮಾರು ರೂ. 82,099/- ಹಣವನ್ನು ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿಯ ಸಿಇಎನ್ ವಿಶೇಷ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವ್ಯಕ್ತಿ ಅಸ್ವಾಭಾವಿಕ ಮರಣ

ಪೊನ್ನಂಪೇಟೆ ಬಳಿಯ ತಿತಿಮತಿ ನಿವಾಸಿ ಮುತ್ತ ಎಂಬವರು ದಿನಾಂಕ 07/08/2020 ರಿಂದ 12/08/2020ರ ನಡುವೆ ಶ್ರೀಮಂಗಲ ಬಳಿಯ ಕಾಕೂರು ಗ್ರಾಮದ ತೋಟವೊಂದರ ಒಳಗೆ ವಿಪರೀತ ಮದ್ಯಪಾನ ಮಾಡಿ ಬಿದ್ದು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಹಲ್ಲೆ ಪ್ರಕರಣ

ದಿನಾಂಕ 12/08/2020 ರಂದು ಪೊನ್ನಂಪೇಟೆ ಬಳಿಯ ಕೊಟ್ಟಗೇರಿ ನಿವಾಸಿ ತಾರ ಎಂಬವರ ಮಗ ಆಟವಾಡಲು ಹೋಗಲಿಲ್ಲವೆನ್ನುವ ಕಾರಣಕ್ಕೆ ಅದೇ ಗ್ರಾಮದ ನಿವಾಸಿಗಳಾದ ಮುನೇಶ್ವರ, ನಿರನ್, ನಾಗೇಶ್ ಮತ್ತು ಸತೀಶ ಎಂಬವರು ತಾರರವರ ಮನೆಯ ಬಳಿ ಬಂದು ಅವರ ಮಗನ ಮೇಲೆ ಹಲ್ಲೆ ಮಾಡಿದ್ದು ತಡೆಯಲು ಬಂದ ತಾರರವರ ಮೇಲೂ ಹೊಡೆದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಖಿರುವುದಾಗಿ ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಮಹಿಳೆ ಅಸ್ವಾಭಾವಿಕ ಸಾವು

ದಿನಾಂಕ 12/08/2020ರಂದು ಕುಶಾಲನಗರ ಬಳಿಯ ಹೆಬ್ಬಾಲೆ ಸಮೀಪದ ಹಳೆಗೋಟೆ ನಿವಾಸಿ ಕಾಳಮ್ಮ ಎಂಬವರು ಸಕ್ಕರೆ ಕಾಯಿಲೆಯ ಮಾತ್ರೆಯ ಬದಲಾಗಿ ಬೇರಾವುದೋ ಮಾತ್ರೆಯನ್ನು ಸೇವಿಸಿ ಅಸ್ವಸ್ಥರಾಗಿದ್ದು ಚಿಕಿತ್ಸೆಗಾಗಿ ಮಡಿಕೇರಿಯ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.