Crime News
ಅಕ್ರಮ ಕೋಳಿಅಂಕದ ಮೇಲೆ ಪೊಲೀಸ್ ದಾಳಿ
ಅಕ್ರಮವಾಗಿ ಕೋಳಿ ಅಂಕದ ಜೂಜಾಟವನ್ನು ನಡೆಸುತ್ತಿದ್ದ ಜನರ ಗುಂಪಿನ ಮೇಲೆ ದಾಳಿ ಮಾಡಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಡಿಸಿಐಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ದಿನಾಂಕ 19-08-2020 ರಂದು ದೊರೆತ ಖಚಿತ ವರ್ತಮಾನದ ಮೇರೆಗೆ ಮಡಿಕೇರಿ ತಾಲೋಕು, ಚೆಂಬು ಗ್ರಾಮದ ಉರುಬೈಲ್ ಎಂಬಲ್ಲಿ ದೊಡ್ಡ ಗುಂಪೊಂದು ಕೋಳಿ ಅಂಕ ನಡೆಸುತ್ತಿರುವುದನ್ನು ಪತ್ತೆಹಚ್ಚಿದ ಕೊಡಗು ಜಿಲ್ಲಾ ಡಿ.ಸಿ.ಐ.ಬಿ. ಪೊಲೀಸರು ಗುಂಪಿನ ಮೇಲೆ ದಾಳಿ ನಡೆಸಿ ಕೋಳಿಗಳನ್ನು ಕಟ್ಟಿ ಜೂಜಾಡುತ್ತಿದ್ದ 10 ಜನರನ್ನು ವಶಕ್ಕೆ ಪಡೆದು, ಅವರಿಂದ ಕೋಳಿ ಅಂಕಕ್ಕೆ ಬಳಸಿದ ಅಂದಾಜು 15,000 ರೂ ಬೆಲೆಬಾಳುವ 35 ಕೋಳಿಗಳನ್ನು ಹಾಗೂ ನಗದು ರೂ. 20,300/-ಗಳನ್ನು ವಶಪಡಿಸಿಕೊಂಡಿರುತ್ತಾರೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜೂಜಾಡುತ್ತಿದ್ದ ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಬಗ್ಗೆ ತೀವ್ರ ನಿಗಾ ಇರಿಸುವಂತೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸೂಚಿಸಿದ್ದು, ಅದರಂತೆ ಜಿಲ್ಲಾ ಡಿ.ಸಿ.ಐ.ಬಿ. ಇನ್ಸ್ ಪೆಕ್ಟರ್ ಎನ್.ಕುಮಾರ್ ಆರಾಧ್ಯ, ಮಡಿಕೇರಿ ಗ್ರಾಮಾಂತರ ಉಪ ನಿರೀಕ್ಷಕ ಹೆಚ್.ವಿ ಚಂದ್ರಶೇಖರ್ ಡಿ.ಸಿ.ಐ.ಬಿ ಸಿಬ್ಬಂದಿಗಳಾದ ವಿ.ಜಿ ವೆಂಕಟೇಶ್, ಬಿ.ಎಲ್ ಯೊಗೇಶ್ ಕುಮಾರ್, ಕೆ.ಆರ್ ವಸಂತ, ಎಂ.ಎನ್.ನಿರಂಜನ, ಕೆ.ಎಸ್.ಶಶಿಕುಮಾರ್ ಹಾಗೂ ಸಂಪಾಜೆ ಉಪಠಾಣೆಯ ಎಎಸ್ಐ ಶ್ರೀಧರ್ ರವರು ದಾಳಿಯಲ್ಲಿ ಭಾಗವಹಿಸಿದ್ದು ಇವರ ಕಾರ್ಯವನ್ನು ಪ್ರಶಂಸಿಸಲಾಗಿದೆ.
ವ್ಯಕ್ತಿಯ ಕೊಲೆ, ಪ್ರಕರಣ ದಾಖಲು
ದಿನಾಂಕ 19-8-2020 ರಂದು ಕುಶಾಲನಗರದ ಮಾರ್ಕೆಟ್ ಬಳಿಯಲ್ಲಿ ವಾಸವಾಗಿರುವ ಕೆ.ಶಶಿ ಎಂಬವರಿಗೆ ದಿನಾಂಕ 19-8-2020 ರಂದು ಮಾರ್ಕೆಟ್ ರಸ್ತೆಯ ಪಕ್ಕದಲ್ಲಿರುವ ಕಾವೇರಿ ನದಿಯಲ್ಲಿ ಒಂದು ಅಪರಿಚಿತ ವ್ಯಕ್ತಿಯ ಮೃತದೇಹ ತೇಲುತ್ತಿರುವುದು ಕಂಡು ಬಂದಿದ್ದು, ಕುಶಾಲನಗರ ಪೊಲೀಸರು ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿದಾಗ ಒಬ್ಬ ವ್ಯಕ್ತಿಯನ್ನು ಯಾರೋ ಕೊಲೆ ಮಾಡಿ ಪ್ಲಾಸ್ಟಿಕ್ ನಲ್ಲಿ ಸುತ್ತಿ ಕಟ್ಟಿ ನದಿಗೆ ಹಾಕಿರುವುದು ಕಂಡು ಬಂದಿದ್ದು, ಠಾಣೆಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಅಕ್ರಮ ಜಾನುವರು ಸಾಗಾಟ
ಶನಿವಾರಸಂತೆ ಠಾಣಾ ವ್ಯಾಪ್ತಿಯ ಮೂದರವಳ್ಳಿ ಜಂಕ್ಷನ್ ನಲ್ಲಿ ದಿನಾಂಕ 19-8-2020 ರಂದು ಒಂದು ಪಿಕ್ ಅಪ್ ವಾಹನದಲ್ಲಿ 4 ಜಾನುವಾರುಗಳನ್ನು ತುಂಬಿ ಅಕ್ರಮವಾಗಿ ವ್ಯವಸ್ಥಿತವಾಗಿ ಸಾಗಿಸದೇ ಕ್ರೂರವಾಗಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ ಶನಿವಾರಸಂತೆ ಠಾಣಾಧಿಕಾರಿ ಹೆಚ್.ಇ.ದೇವರಾಜು ಮತ್ತು ಸಿಬ್ಬಂಗಳು ನಾಲ್ಕು ಜಾನುವಾರುಗಳನ್ನು ವಾಹನ ಸಮೇತ ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿ ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.