Crime News

ವಿಷ ಸೇವಿಸಿದ ಮಹಿಳೆ ಸಾವು

ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಐಮಂಗಲ ಗ್ರಾಮದ ಡಿ.ಜೆ ಪಲ್ಲವಿ ಎಂಬವರ ತಾಯಿ 70 ವರ್ಷದ ಶ್ರೀಮತಿ ಬೋಜಮ್ಮನವರು ಅನಾರೋಗ್ಯದಿಂದ ಬಳಲುತ್ತಿದ್ದು ಇದರಿಂದ ನೊಂದು ದಿನಾಂಕ 24-8-2020 ರಂದು ವಿಷ ಸೇವಿಸಿ ಅಸ್ವಸ್ಥಗೊಂಡು ಅವರನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸದರಿಯವರು ದಿನಾಂಕ 2-9-2020 ರಂದು ಮೃತಪಟ್ಟಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ತಿತಿಮತಿಯ ನೆಹರು ಕಾಲೋನಿಯಲ್ಲಿ ವಾಸವಾಗಿರುವ ಪಿ.ಬಿ.ಉಮೇಶ ಎಂಬವರ ತಂದೆ ಪಂಜರಿ ಎರವರ ಬೋಜ ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ದಿನಾಂಕ 2-9-2020 ರಂದು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಸಂಬಂಧ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನೀರಿಗೆ ಬಿದ್ದು ವ್ಯಕ್ತಿಯ ಸಾವು

ವಿರಾಜಪೇಟೆ ತಾಲೋಕು ಕೊಟ್ಟಗೇರಿ ಗ್ರಾಮದ ನಿವಾಸಿ ಜೇನುಕುರುಬರ ಲಲಿತ ಎಂಬವರ ತಾಯಿಯವರು ದಿನಾಂಕ 2-9-2020 ರಂದು ತಾವು ವಾಸವಾಗಿದ್ದ ಮನೆಯ ಹತ್ತಿರದ ಕೆರೆಗೆ ಬಟ್ಟೆ ಒಗೆಯಲು ಹೋಗಿ ಆಕಸ್ಮಿಕ ಕಾಲು ಜಾರಿ ನೀರಿಗೆ ಬಿದ್ದು ಸಾವನಪ್ಪಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಡಿಯೋ ಮೂಲಕ ಜಾತಿ ನಿಂದನೆ

ದಿನಾಂಕ 30-8-2020 ರಂದು ಶನಿವಾರಸಂತೆ ಠಾಣಾ ಸರಹದ್ದಿನ ಆಲೂರು ಸಿದ್ದಾಪುರ ಗ್ರಾಮದ ನಿವಾಸಿ ಮನೋಜ್ ಎಂಬವರ ಮೊಬೈಲ್ ಗೆ ರೋಹನ್ ಎಂಬವರು ಜಾತಿ ನಿಂದನೆ ಮಾಡಿದ ಆಡಿಯೋ ಕಳುಹಿಸಿದ್ದು ಈ ಸಂಬಂಧ ಮನೋಜ್ ರವರು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.