Crime News

ಅಕ್ರಮ ಗಾಂಜಾ ಮಾರಾಟ ಪತ್ತೆ

ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿ ಆತನಿಂದ ಸುಮಾರು ಎರಡು ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಕುಶಾಲನಗರ ವೃತ್ತದ ಅಧಿಕಾರಿ ಹಾಗೂ ಸಿಬ್ಬಂದಿಯವರು ಯಶಸ್ವಿಯಾಗಿರುತ್ತಾರೆ.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಜೂರು ಗ್ರಾಮದ ಶಾಲೆಯ ಬಳಿಯ ಬಸ್ ತಂಗುದಾಣದಲ್ಲಿ ಗಾಂಜಾ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ತೊರೆನೂರು ಗ್ರಾಮದ ಮಾಜಿ ಗ್ರಾಮ ಲೆಕ್ಕಿಗ ಲಕ್ಷ್ಮಪ್ಪ ಎಂಬುವನನ್ನು ಖಚಿತ ಮಾಹಿತಿಯ ಆಧಾರದ ಮೇರೆಗೆ ಹಿಡಿದು ಪರಿಶೀಲಿಸಲಾಗಿ ಸದರಿ ವ್ಯಕ್ತಿಯ ಬಳಿ ಸುಮಾರು 2 ಕೆಜಿಯಷ್ಟು ಗಾಂಜಾ ವನ್ನು ವಶಪಡಿಸಿಕೊಂಡಿದ್ದು, ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸದರಿ ಆರೋಪಿಯ ವಿರುದ್ಧ ಈ ಹಿಂದೆ ಗಾಂಜಾ ಮಾರಾಟದ ಬಗ್ಗೆ 6 ಪ್ರಕರಣಗಳು ದಾಖಲಾಗಿರುವುದಾಗಿ ತಿಳಿದು ಬಂದಿರುತ್ತದೆ. ಸದರಿ ವ್ಯಕ್ತಿಯಿಂದ ಗಾಂಜಾವನ್ನು ಖರೀದಿಸುತ್ತಿದ್ದ ವ್ಯಕ್ತಿಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕ್ಷಮಾ ಮಿಶ್ರಾ ಹಾಗೂ ಸೋಮವಾರಪೇಟೆ ಉಪವಿಭಾಗದ ಉಪಾಧೀಕ್ಷಕರಾದ ಹೆಚ್.ಎಂ.ಶೈಲೇಂದ್ರ ರವರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರಾದ ಎಂ. ಮಹೇಶ್ ರವರ ನೇತೃತ್ವದಲ್ಲಿ ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ಪಿಎಸ್ಐ ಗಣೇಶ್ ಹಾಗೂ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ನಂದೀಶ್ ಹಾಗೂ ಸಿಬ್ಬಂದಿಯವರಾದ ಗೋಪಾಲ್ ಎಎಸ್ಐ, ಜಯಪ್ರಕಾಶ್, ರವೀಂದ್ರ,ಸಜಿ, ಪ್ರಕಾಶ್, ದಯಾನಂದ, ಸಂಪತ್, ಸಂದೇಶ್, ಶನಂತ್ ಚಾಲಕರುಗಳಾದ . ಅರುಣ್, ಗಣೇಶ್,ಪ್ರವೀಣ್,ರಾಜು ರವರನ್ನೊಳಗೊಂಡ ತಂಡ ಭೇದಿಸಿದ್ದು, ಇವರ ಕಾರ್ಯವನ್ನು ಪೊಲೀಸ್ ಆಧೀಕ್ಷಕರು ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಿರುವುದಾಗಿ ತಿಳಿಸಿರುತ್ತಾರೆ.

ಕೊಡಗು ಜಿಲ್ಲೆಯಾದ್ಯಂತ ಗಾಂಜಾ ಮಾರಾಟದ ಜಾಲ ಹಬ್ಬಿಕೊಂಡಿದ್ದು, ಯುವಕರು ಮಾದಕವಸ್ತುಗಳ ವ್ಯಸನಿಗಳಾಗುತ್ತಿದ್ದಾರೆ. ಇದನ್ನು ತಡೆಯುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಿ ಯಾವುದೇ ಮಾದಕ ವಸ್ತು ಮಾರಾಟ ಜಾಲದ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ತಮ್ಮ ಗ್ರಾಮದ ಬೀಟ್ ಅಧಿಕಾರಿಗಳಿಗಾಗಲೀ ಅಥವಾ ಸಂಬಂಧಪಟ್ಟ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗಾಗಲೀ ನೀಡುವಂತೆ ಕೋರಲಾಗಿದೆ. ಇದಲ್ಲದೇ ಯಾವುದೇ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ರ್ವಜನಿಕರು ನೀಡಬಹುದಾಗಿರುತ್ತದೆ. ಮಾಹಿತಿ ನೀಡಿದ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿಡಲಾಗುವುದು. ಹಾಗೂ ಸೂಕ್ತ ಬಹುಮಾವನ್ನು ನೀಡಲಾಗುವುದೆಂದು ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆ ರವರು ತಿಳಿಸಿರುತ್ತಾರೆ.

ವ್ಯಕ್ತಿಯ ಕೊಲೆ

ದಿನಾಂಕ 03/09/2020ರಂದು ರಾತ್ರಿ ವೇಳೆ ಶ್ರೀಮಂಗಲ ಬಳಿಯ ಬಲ್ಯಮಂಡೂರು ಗ್ರಾಮದ ನಿವಾಸಿ ಪಣಿ ಎರವರ ಪೊನ್ನ ಎಂಬವರ ತಂದೆ ಮುತ್ತ ಎಂಬವರೊಡನೆ ಮುತ್ತರವರ ಮಗಳ ಗಂಡ ಪಣಿಎರವರ ಅಯ್ಯಪ್ಪ ಎಂಬಾತನು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ದೊಣ್ಣೆಯಿಂದ ಹೊಡೆದ ಪರಿಣಾಮ ತೀವ್ರ ಗಾಯಗೊಂಡ ಪಣಿ ಎರರವರ ಮುತ್ತರವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.