Crime News

ಅಕ್ರಮ ಲಾಟರಿ ಮಾರಾಟ

ದಿನಾಂಕ 05/09/2020ರಂದು ಗೋಣಿಕೊಪ್ಪ ನಗರದ ಮಾರುಕಟ್ಟೆ ಬಳಿ ಬಾಳಾಜಿ ಗ್ರಾಮದ ನಿವಾಸಿ ಮಲೆಯಾಳಿ ರಾಜ ಎಂಬವರು ಅಕ್ರಮವಾಗಿ ಕೇರಳ ರಾಜ್ಯದ ಲಾಟರಿಗಳನ್ನು ಮಾರಾಟ ಮಾಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಗೋಣಿಕೊಪ್ಪ ಠಾಣೆಯ ಎಎಸ್‍ಐ ಕೆ.ಸಿ.ನಾಣಯ್ಯನವರು ಸ್ಥಳಕ್ಕೆ ತೆರಳಿ ಅಲ್ಲಿ ಅಕ್ರಮವಾಗಿ ಲಾಟರಿ ಮಾರಾಟ ಮಾಡುತ್ತಿದ್ದ ಕೇರಳ ರಾಜ್ಯದ ಎರಡು ಲಾಟರಿ ಟಿಕೇಟುಗಳು ಮತ್ತು ರೂ. 1,500/- ನಗದು ಹಣವನ್ನು ವಶಪಡಿಸಿಕೊಂಡು ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಸೋಲಾರ್ ಬೀದಿ ದೀಪ ಕಳವು

ಕಣ್ಣಂಗಾಲ ಗ್ರಾಮ ಪಂಚಾಯಿತಿ ವತಿಯಿಂದ ಕಣ್ಣಂಗಾಲ ಗ್ರಾಮದ ನಾರಾಯಣ ಮಾಸ್ಟರ್ ಎಂಬವರ ಮನೆಗೆ ಹೋಗುವ ರಸ್ತೆಯ ಬಳಿ ಹಾಕಿದ್ದ ಸುಮಾರು ರೂ.24,950/- ಬೆಲೆ ಬಾಳುವ ಸೋಲಾರ್ ಬೀದಿ ದೀಪವನ್ನು ದಿನಾಂಕ 01/09/2020 ರಿಂದ 04/09/2020ರ ನಡುವೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವಿಷ ಸೇವಿಸಿ ಆತ್ಮಹತ್ಯೆ

ದಿನಾಂಕ 05/09/2020ರಂದು ವಿರಾಜಪೇಟೆ ಬಳಿಯ ಕುಂಜಿಲಗೇರಿ ಗ್ರಾಮದ ನಿವಾಸಿ ಹೆಚ್‍.ಕೆ.ಶರತ್ ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಶರತ್‍ರವರ ಪತ್ನಿ ಶರತ್‍ನೊಂದಿಗೆ ವೈಮನಸ್ಸಿನಿಂದ ಆತನನ್ನು ತೊರೆದು ಹೋಗಿದ್ದು ಈ ಬಗ್ಗೆ ನೊಂದು ಶರತ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಅನುಮಾನಾಸ್ಪದ ವ್ಯಕ್ತಿಗಳ ಬಂಧನ

ದಿನಾಂಕ 05/09/2020ರ ಬೆಳಗಿನ ಜಾವ ವಿರಾಜಪೇಟೆ ಬಳಿಯ ಪೆರುಂಬಾಡಿ ಎಂಬಲ್ಲಿ ಹಲವು ವ್ಯಕ್ತಿಗಳು ರಸ್ತೆ ಬದಿಯಲ್ಲಿ ಕಾರೊಂದನ್ನು ನಿಲ್ಲಿಸಿಕೊಂಡು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಯಾವುದೋ ಅಪರಾಧ ಕೃತ್ಯ ಎಸಗಲು ಹೊಂಚು ಹಾಕುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯ ಪಿಎಸ್‍ಐ ಹೆಚ್‍.ಎಸ್.ಭೋಜಪ್ಪರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ಪೆರುಂಬಾಡಿ ಗ್ರಾಮದ ರಸ್ತೆಯ ಬದಿ ಕೆಎ-26-ಎಂ-38833 ರ ಕಾರನ್ನು ರಸ್ತೆಯ ಬದಿ ನಿಲ್ಲಿಸಿ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಯಾವುದೋ ಅಪರಾಧ ಕೃತ್ಯವೆಸಗಲು ಹೊಂಚು ಹಾಕುತ್ತಿದ್ದ ಮೈಸೂರಿನ ವೃಂದಾವನ ಬಡಾವಣೆಯ ವಾದಿರಾಜ್, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿಯ ವಿ. ನಾರಾಯಣಸ್ವಾಮಿ, ಬೆಂಗಳೂರಿನ ಹೆಣ್ಣೂರು ರಸ್ತೆ ನಿವಾಶಿ ಜಾನ್‍ ಪೌಲ್, ಬೆಂಗಳೂರಿನ ವಿದ್ಯಾರಣ್ಯಪುರಂ ನಿವಾಸಿ ಜ್ಞಾನೇಂದ್ರ ಪ್ರಸಾದ್, ಕೇರಳದ ಚರಕಲ್ ನಿವಾಸಿ ಕೆ.ವಿ.ಅಭಿನವ್, ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೆಬ್ಬೆಹಳ್ಳಿ ನಿವಾಸಿ ಸತೀಶ್, ತಮಿಳುನಾಡಿನ ಹೊಸೂರು ನಿವಾಸಿ ಸುರೇಶ್, ಕೇರಳದ ಕೋಯಿಕ್ಕೋಡ್ ಜಿಲ್ಲೆಯ ವಡಗರ ನಿವಾಸಿ ವೈಷ್ಣವ್ ಮತ್ತು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ನಿವಾಸಿ ಪುರುಷೋತ್ತಮ ಎಂಬವರುಗಳನ್ನು ಬಂಧಿಸಿ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

 

ರಸ್ತೆ ಅಪಘಾತ

ದಿನಾಂಕ 05/09/2020ರಂದು ಶನಿವಾರಸಂತೆ ಬಳಿಯ ದುಂಡಳ್ಳಿ ಗ್ರಾಮದ ಬಳಿ ಗ್ರಾಮದ ನಿವಾಸಿ ರಂಜಿತ್‍ ಎಂಬವರು ಅವರ ಬೈಕಿನಲ್ಲಿ ಹೋಗುತ್ತಿರುವಾಗ ಎದುರಿನಿಂದ ದು ಮಾರುತಿ ಒಮಿನಿ ವ್ಯಾನನ್ನು ಅದರ ಚಾಲಕ ನಾಗರಾಜು ಎಂಬವರು ರಂಜಿತ್‍ರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ರಂಜಿತ್‍ರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ

ದಿನಾಂಕ 05/09/2020ರಂದು ಶನಿವಾರಸಂತೆ ಬಳಿಯ ಗೌಡಳ್ಳಿ ಗ್ರಾಮದ ಬಸ್‍ ತಂಗುದಾಣದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯಪಾನ ಮಾಡುತ್ತಿದ್ದ ಬೀಟಿಕಟ್ಟೆ ನಿವಾಸಿ ಕೃಷ್ಣಪ್ಪ ಎಂಬವರನ್ನು ಬಂಧಿಸಿ ಎರಡು ಟೆಟ್ರಾ ಪ್ಯಾಕುಗಳಷ್ಟು ಮದ್ಯವನ್ನು ವಶಪಡಿಸಿಕೊಂಡು ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

 

ವ್ಯಕ್ತಿ ಆತ್ಮಹತ್ಯೆ

ಮದ್ಯಪಾನ ಮಾಡಲು ಹಣ ನೀಡಲಿಲ್ಲವೆಂಬ ಕಾರಣಕ್ಕೆ ನಾಪೋಕ್ಲು ಬಳಿಯ ಚೆರಿಯಪರಂಬು ನಿವಾಸಿ ಉಮೇಶ ಎಂಬವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.