Crime News

ರಸ್ತೆ ದಾಟುತ್ತಿದ್ದ ಬಾಲಕಿಗೆ ಲಾರಿ ಡಿಕ್ಕಿ.

ಬಾಲಕಿಯೊಬ್ಬಳು ರಸ್ತೆದಾಟುತ್ತಿದ್ದ ಸಂದರ್ಭದಲ್ಲಿ ಲಾರಿಯೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ಭಾಗಮಂಡಲ ಠಾಣಾ ಸರಹದ್ದಿನ ತಾವೂರು ಗ್ರಾಮದಲ್ಲಿ ನಡೆದಿದೆ.  ಮಡಿಕೇರಿ ತಾಲೋಕು ಚೆಟ್ಟಿಮಾನಿ ಗ್ರಾಮದ ನಿವಾಸಿ ಶ್ರೀಮತಿ ಜಿನತ್ ಎಂಬವರ ಮಗಳು ಸಫ್ವಾನ ದಿನಾಂಕ 27-9-2020 ರಂದು ತಾವೂರು ಗ್ರಾಮದ ತಮ್ಮ ಮನೆಯ ಕಡೆಗೆ ಹೋಗಲು ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಎದುರುಗಡೆಯಿಂದ ಬಂದ ಲಾರಿ ಡಿಕ್ಕಿಯಾಗಿ ಗಾಯಗೊಂಡಿದ್ದು ಈ ಬಗ್ಗೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ನಾಪೋಕ್ಲು ಠಾಣಾ ಸರಹದ್ದಿನ ಕುಂಜಿಲ ಗ್ರಾಮದ ನಿವಾಸಿ ಪಿ.ಡಿ. ಸೋಮಯ್ಯ ಎಂಬವರ ಸಹೋದರ ಪ್ರಾಯ 26 ವರ್ಷದ ನಂಜಪ್ಪ ಎಂಬವರು ದಿನಾಂಕ 26-9-2020 ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಕ್ರಿಮಿನಾಶದ ಸೇವಿಸಿ ಯುವತಿ ಸಾವು

ಗೋಣಿಕೊಪ್ಪ ಠಾಣಾ ಸರಹದ್ದಿನ ನಗರದ 2ನೇ ವಿಭಾಗದಲ್ಲಿ ವಾಸವಾಗಿರುವ ಅಜುಮಲ್ ಎಂಬವರ ತಂಗಿ ಕು: ರಿಶಾನ ಎಂಬಾಕೆ ಹೊಟ್ಟೆನೋವಿನಿಂದ ಬಳಲುತ್ತಿದ್ದು ದಿನಾಂಕ 23-9-2020 ರಂದು ಹೊಟ್ಟೆನೋವಿಗೆ ಯಾವುದೋ ಕ್ರಿಮಿನಾಶವನ್ನು ಸೇವಿಸಿ ಅಸ್ವಸ್ಥಗೊಂಡು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು  ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 27-9-2020 ರಂದು  ಕು: ರಿಶಾನ ರವರು ಮೃತಪಟ್ಟಿದ್ದು, ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು ಜಖಂ ಪಡಿಸಿ ನಷ್ಟ

ವಿರಾಜಪೇಟೆ ತಾಲೋಕು ಅತ್ತೂರು ಗ್ರಾಮದ ನಿವಾಸಿ ಕಾಯಮಂಡ ಬೋಪಣ್ಣ ಪೂಣಚ್ಚ ರವರ ಮನೆಯ ಅಂಗಳಕ್ಕೆ ದಿನಾಂಕ 26-9-2020 ರಂದು ಅಮ್ಮತ್ತಿ ಗ್ರಾಮದ ಚೋವಂಡ ಅಪ್ಪಣ್ಣ ಹಾಗು ಬಾಚಮಾಡ ಪವನ್ ಎಂಬವರು ಅಕ್ರಮ ಪ್ರವೇಶ ಮಾಡಿ  ಅಂಗಳದಲ್ಲಿ ನಿಲ್ಲಿಸಿದ್ದ  ಕಾರನ್ನು ಜಖಂ ಪಡಿಸಿ, ವೆರಾಂಡದಲ್ಲಿದ್ದ ಟೇಬಲ್ ಮತ್ತು ಪೈಬರ್ ಕುರ್ಚಿಗಳನ್ನು ಒಡೆದುಹಾಕಿ ಸುಮಾರು ಒಂದೂವರೆ ಲಕ್ಷ ರೂಪಾಯಿ ನಷ್ಟಪಡಿಸಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿನಾಕಾರಣ ವ್ಯಕ್ತಿ ಮೇಲೆ ಹಲ್ಲೆ

ವಿರಾಜಪೇಟೆ ತಾಲೂಕು ಬಲ್ಯಮಂಡೂರು ಗ್ರಾಮದ ನಿವಾಸಿ ಎಲ್.ವಿ. ಉಮೇಶ್ ಎಂಬವರು ದಿನಾಂಕ 26-9-2020 ರಂದು ಅಪರಾಹ್ನ ತಮ್ಮ ಮನೆಯ ಕಡೆಗೆ ಹೋಗಲು ಕಾನೂರು ಜಂಕ್ಷನ್ ಬಳಿ ನಿಂತಿದ್ದಾಗ  ಅದೇ ಗ್ರಾಮದ ದೇಯಂಡ ನಿತಿನ್ ಹಾಗು ನೀರನ್ ಉತ್ತಪ್ಪ ಎಂಬವರು ಅಲ್ಲಿಗೆ ಬಂದು ವಿನಾಕಾರಣ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ

ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಬೆಕ್ಕೆಸೊಡ್ಲುರು ಗ್ರಾಮದ ಸುಳ್ಳಿಮಾಡ ಮುದ್ದಪ್ಪರವರು ತಮ್ಮ ಕುಟುಂಬಸ್ಥರೊಂದಿಗೆ ದಿನಾಂಕ 25-9-2020 ರಂದು ಮನೆಗೆ ಬೀಗ ಹಾಕಿ ಧರ್ಮಸ್ಥಳಕ್ಕೆ ಹೋಗಿದ್ದ  ಸಂದರ್ಭದಲ್ಲಿ ಯಾರೋ ಕಳ್ಳರು ಮನೆಯ ಹಿಂಭಾಗದ ಮೇಲ್ಛಾವಣಿಯ ಹೆಂಚುಗಳನ್ನು ತೆಗೆದು ಮನೆಯೊಳಗೆ ಪ್ರವೇಶ ಮಾಡಿ ಮನೆಯಿಂದ 8,000/- ರೂ ಮೌಲ್ಯದ ಚಿನ್ನಾಭರಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.