Crime News

ಅಕ್ರಮ ಗಾಂಜಾ ಪ್ರಕರಣ:  

ಕಾಫಿ ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ಪ್ರಕರಣವನ್ನು ಕುಶಾಲನಗರ ವೃತ್ತ ನಿರೀಕ್ಷಕರ  ತಂಡ ಪತ್ತೆ ಮಾಡಿ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಹೇರೂರು ಗ್ರಾಮದ ಸುಬ್ರಮಣಿ ಎಂಬುವವರು ಅವರ ಕಾಫಿ ತೋಟದಲ್ಲಿ ಅಕ್ರಮವಾಗಿ ಗಾಂಜಾ ಗಿಡವನ್ನು  ಬೆಳೆಸಿದ್ದ ಪ್ರಕರಣವನ್ನು ಕುಶಾಲನಗರ ವೃತ್ತ ನಿರೀಕ್ಷಕರು ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ  ಆರೋಪಿಯನ್ನು ದಸ್ತಗಿರಿ ಮಾಡಿ ಗಾಂಜಾ ಗಿಡ ವಶಪಡಿಸಿಕೊಂಡಿದ್ದು, ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸೋಮವಾರಪೇಟೆ ಉಪ ವಿಭಾಗದ ಉಪ ಅಧೀಕ್ಷಕರಾದ ಹೆಚ್ಎಂ ಶೈಲೇಂದ್ರ  ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕರಾದ ಎಂ. ಮಹೇಶ್ ಅವರ ನೇತೃತ್ವದಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣಾ ಉಪನಿರೀಕ್ಷಕ ರಾದ ವೆಂಕಟರಮಣ,  ಸಿಬ್ಬಂದಿಗಳಾದ ಗಣಪತಿ, ಸಜಿ, ದಯಾನಂದ, ಪ್ರಕಾಶ, ಸಂದೇಶ, ಖಾದರ್, ಪುನೀತ್, ಅರುಣ,  ಜೈಶಂಕರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಕೊಡಗು ಜಿಲ್ಲೆಯಲ್ಲಿ ಅ ಕ್ರಮವಾಗಿ ಗಾಂಜಾ ಬೆಳೆಯುವಿಕೆ ಮತ್ತು ಮಾರಾಟ,  ಮಾದಕ ವಸ್ತುಗಳ ಸಾಗಣಿಕೆ ಮತ್ತು ಮಾರಾಟದ  ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಈ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಸಮೀಪದ ಪೊಲೀಸ್ ಠಾಣೆಗೆ ಅಥವಾ ಪೊಲೀಸ್‍ ಕಂಟ್ರೋಲ್‍ ರೂಂ ನಂಬರ್‍ 100 ಕ್ಕೆ ದೂರವಾಣಿ ಕರೆ ಮಾಡಿ ಗುಪ್ತವಾಗಿ ಮಾಹಿತಿಯನ್ನು ನೀಡಿ ಮಾದಕ ವಸ್ತುಗಳ ಬಳಕೆ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು ಸಹಕರಿಸುವಂತೆ ಕೋರಲಾಗಿದೆ.

ಹಲ್ಲೆ ಪ್ರಕರಣ

ದಿನಾಂಕ: 27-09-2020 ರಂದು ಸೋಮವಾರಪೇಟೆ ಪಟ್ಟಣದ ರೇಂಜರ್‍ ಬ್ಲಾಕ್‍ ನಿವಾಸಿ ಅಲೆಕ್ಸ್ ಎಂಬುವರಿಗೆ ಜನತಾ ಕಾಲೋನಿ ನಿವಾಸಿ ಅಜೀಂ ಬೇಗ್‍ @ ಅಡ್ಡು ಎಂಬುವವರು ಕ್ಷುಲ್ಲಕ ಕಾರಣಕ್ಕೆ ಅವಾಚ್ಯ ಪದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿ ಗಾಯಗೊಳಿಸಿದ್ದು ಈ ಬಗ್ಗೆ ನೀಡಿದ ಪುಕಾರಿನ ಮೇರೆ ಸೋಮವಾರಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜಾಟ ಪ್ರಕರಣ

ದಿನಾಂಕ: 28-09-2020 ರಂದು ಸೋಮವಾರಪೇಟೆ ತಾಲ್ಲೂಕು ಕಿಬ್ಬೆಟ್ಟ ಗ್ರಾಮದ  ಬಸವನಕುರುವು ರಸ್ತೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್‍ ಜೂಜಾಟವಾಡುತ್ತಿದ್ದ ಪ್ರಕರಣವನ್ನು ಸೋಮವಾರಪೇಟೆ ಠಾಣೆ ಪಿಎಸ್‍ಐ ಮತ್ತು ಸಿಬ್ಬಂದಿಯವರು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.